ಬಂಟ್ವಾಳ: ನರಿಕೊಂಬು ಗ್ರಾ.ಪಂ. ಮೊಗರ್ನಾಡ್‌ನಲ್ಲಿ ಜು.15ರಂದು ಪಂಚಾಯತ್ ಪೂರ್ವಾನುಮತಿ ಇಲ್ಲದೆ ಆರಂಭಿಸಿರುವ ಮದ್ಯಮಾರಾಟ ಕೇಂದ್ರವನ್ನು ಮುಂದಿನ ಏಳು ದಿನದೊಳಗೆ ನಿಲುಗಡೆಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಗ್ರಾ.ಪಂ. ಆಡಳಿತವು ಸದ್ರಿ ಕಟ್ಟಡದ ಕದ ನಂಬ್ರವನ್ನು ರದ್ದು ಮಾಡುವುದಲ್ಲದೆ ಮುಂದಿನ ಕ್ರಮವನ್ನು ಕೈಗೊಳ್ಳುವ ಬಗ್ಗೆ ಗ್ರಾ.ಪಂ. ಸಭೆಯಲ್ಲಿ ನಿರ್ಣಯಿಸಲಾಗಿದೆ. ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಅಧ್ಯಕ್ಷೆಯಲ್ಲಿ ಜು. 26ರಂದು ಗ್ರಾಮಸಭೆ ನಡೆದಿತ್ತು. ಸಭೆಯಲ್ಲಿ ಸಾರ್ವಜನಿಕರು ಗ್ರಾ.ಪಂ. ಗ್ರಾಮಸ್ಥರು ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಮದ್ಯ ಮಾರಾಟ ಕೇಂದ್ರಕ್ಕೆ ಆಡಳಿತವು ಅನುಮತಿ ನೀಡಿದೆಯೇ ಎಂದು ಪ್ರಶ್ನಿಸಿದರು.
ಅನುಮತಿ ಅಗತ್ಯವಿಲ್ಲ
ಯಾವುದೇ ಎನ್‌ಒಸಿ ನೀಡಿಲ್ಲ ಎಂದು ಗ್ರಾ.ಪಂ. ಅಧ್ಯಕ್ಷರು ಸ್ಪಷ್ಟಪಡಿಸಿದಾಗ ಸಭೆಯಲ್ಲಿ ಉಪಸ್ಥಿತರಿದ್ದ ಅಬಕಾರಿ ವೃತ್ತ ನಿರೀಕ್ಷಕಿ ಸೌಮ್ಯಾ ಮಾತನಾಡಿ ಮದ್ಯ ಮಾರಾಟದ ಮಳಿಗೆ ತೆರೆಯಲು ಗ್ರಾಮ ಪಂಚಾಯತ್‌ನಿಂದ ಯಾವುದೇ ಅನುಮತಿ ಇಲಾಖೆಗೆ ಅಗತ್ಯವಿಲ್ಲ ಎಂದು ವಿವರ ನೀಡಿದರು. ಈ ಬಗ್ಗೆ ವಿವರಣೆ ಕೇಳಿದಾಗ ಸದ್ರಿ ಮದ್ಯ ಮಾರಾಟ ಕೇಂದ್ರವು ಶಾಲೆಯಿಂದ ನೂರು ಮೀಟರ್‌ಗಿಂತ ಹೆಚ್ಚು ದೂರವಿದೆ. ಇಲ್ಲಿ ಇರುವ ದೈವಸ್ಥಾನವು ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೋಂದಾಯಿತವಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು. ಗ್ರಾಮ ಪಂಚಾಯತ್ ಕಚೇರಿ ಕೂಡ ನೂರು ಮೀಟರ್ ಮೀರಿ ದೂರದಲ್ಲಿದೆ. ಅಂಗನವಾಡಿಯೂ ಅದರಿಂದ ಸಾಕಷ್ಟು ದೂರದಲ್ಲಿದೆ ಎಂಬುದಾಗಿ ಹೇಳಿ ಇದರಿಂದ ಅನುಮತಿ ಪಡೆಯುವುದು ಅಗತ್ಯವಿಲ್ಲ ಎಂಬ ಅಭಿಪ್ರಾಯ ನೀಡಿದರು. ಸಭೆಯಲ್ಲಿ ಉಪೇಕ್ಷೆ ರೀತಿಯಲ್ಲಿ ಮಾತನಾಡಿದಾಗ ಗರಂ ಆದ ಅಧ್ಯಕ್ಷರು ಕಾನೂನು ಮೂಲಕವೇ ಮುಂದಿನ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.
ಕಳೆದ ಬಾರಿ ನಡೆದ ಒಂದನೇ ವಾರ್ಡ್ ಸಭೆಯಲ್ಲಿ ರಸ್ತೆಗೆ ಕೆಂಪು ತುಂಡು ಕಲ್ಲು ಹಾಕಿ ದುರಸ್ತಿ ಮಾಡುವುದರಿಂದ ಹಣ ದುಂದುವೆಚ್ಚ ಆಗುವುದಾಗಿ ನಿರ್ಣಯ ಮಾಡಿದ್ದು ಇದೀಗ ಅದೇ ವಾರ್ಡಿನ ಸದಸ್ಯೆ ಹಾಗೂ ಉಪಾಧ್ಯಕ್ಷೆ ಅವರು ರಸ್ತೆಗೆ ತುಂಡುಕಲ್ಲು ಹಾಕಿಸಿದ್ದಾಗಿ ಹೇಳಿಕೊಂಡು, ಬಿಲ್ ಮಾಡಿ ಪಂಚಾಯತ್‌ಗೆ ನೀಡಿದ್ದನ್ನು ಸಭೆಯಲ್ಲಿ ಆಕ್ಷೇಪಿಸಲಾಯಿತು. ಬಿಲ್ ಬಗ್ಗೆ ಗ್ರಾಮ ಸಭೆಯ ಪ್ರಸ್ತಾವನೆಯ ವರದಿಯಲ್ಲಿ ನೀಡಿದ್ದು ಈ ಹಿಂದಿನ ನಿರ್ಣಯಕ್ಕೆ ವಿರೋಧವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸಭೆಯಲ್ಲಿ ಉಪಾಧ್ಯಕ್ಷರ ಅನುಪಸ್ಥಿತಿ ಕಾರಣಕ್ಕೆ ಸದ್ರಿ ಬಿಲ್ ವಿಲೇ ಇಡುವ ಬಗ್ಗೆ ನೋಡಲ್ ಅಧಿಕಾರಿ ಸೂಚನೆಯಂತೆ ಕ್ರಮ ಕೈಗೊಳ್ಳಲಾಯಿತು. ನರಿಕೊಂಬು ಗ್ರಾ.ಪಂ. ಕಾರ್ಯದರ್ಶಿ ಮತ್ತು ಪಿಡಿಒ ಅವರನ್ನು ಶಾಶ್ವತ ನೆಲೆಯಲ್ಲಿ ಒದಗಿಸಬೇಕು ಎಂದು ಸಭೆಯಲ್ಲಿ ಸಾರ್ವಜನಿಕರು ಆಗ್ರಹ ಮಾಡಿದ್ದು ಸಿ.ಎಸ್. ಅವರಿಗೆ ಮನವಿ ಮಾಡಲು ನಿರ್ಣಯಿಸಲಾಯಿತು.
94 ಸಿಸಿ ಹಕ್ಕುಪತ್ರಕ್ಕೆ ಆಗ್ರಹ
94 ಸಿಸಿ ಹಕ್ಕುಪತ್ರವನ್ನು ಶೀಘ್ರ ನೀಡುವಂತೆ ಯತೀಶ್ ಶೆಟ್ಟಿ ಹೊಸಲಚ್ಚಿಲು ಪ್ರಸ್ತಾವಿಸಿದ್ದು ಗ್ರಾಮಕರಣಿಕ ನಾಗರಾಜ ಉತ್ತರಿಸಿ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು ಮುಂದಿನ ಹಂತದಲ್ಲಿ ಕ್ರಮ ಆಗಲಿದೆ ಎಂದರು. ಅರಣ್ಯಾಧಿಕಾರಿಗಳು, ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾದ ಬಗ್ಗೆ ಪ್ರಸ್ತಾವಿಸಿದ್ದು ಅವರು ಮುಂದಿನ ಸಭೆಗೂ ಗೈರಾದರೆ ಸೂಕ್ತ ಆಕ್ಷೇಪ ಸಲ್ಲಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ ತಮ್ಮ ನಿಧಿಗಳಿಂದ ಬರುವ ಅನುದಾನದ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷರು ಗ್ರಾಮ ಪಂಚಾಯತ್ ಕೈಗೊಂಡ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯಲ್ಲಿ ವಿವರಣೆ ನೀಡಿದರು. ಸದಸ್ಯರಾದ ಮಾಧವ ಕರ್ಬೆಟ್ಟು, ಜುಬೈದ ನೆಹರೂನಗರ, ಚಂದ್ರಾವತಿ ನಾಯಿಲ, ರವೀಂದ್ರ ಸಪಲ್ಯ, ಮೋಹಿನಿ, ಗೀತಾ ಮನೋಹರ, ವಿಶಾಲಾಕ್ಷಿ, ಹೇಮಲತಾ, ದಿವಾಕರ ಶಂಭೂರು, ಕಿಶೋರ್ ಶೆಟ್ಟಿ, ವಿಶ್ವನಾಥ ಪೂಜಾರಿ ಕೊಡಂಗೆಕೋಡಿ, ರಂಜಿತ್ ಕೆದ್ದೇಲು, ವಸಂತ ಭೀಮಗದ್ದೆ, ಉದಯ ಕುಮಾರ್ ಶಾಂತಿಲ, ಜಯರಾಜ್ ಕೊಪ್ಪಲ, ನವೀನ್ ಕುರ್ಚಿಪಲ್ಲ, ದೇವದಾಸ ನಾಯಿಲ, ತ್ರಿವೇಣಿ ಕೇದಿಗೆ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಶ್ರೀಕಾಂತ್ ಎಂ. ನೋಡಲ್ ಅಧಿಕಾರಿ ಸಭೆಯನ್ನು ನಿರ್ವಹಿಸಿದರು. ಪಿಡಿಒ ಶಿವಾನಂದ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ಅಧ್ಯಕ್ಷರು ವಂದಿಸಿದರು.
ಸಮವಸ್ತ್ರ ಸಮಸ್ಯೆ
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ಸಮವಸ್ತ್ರ ಅಳತೆ ಸರಿಹೋಗದೆ ಕೆಲವು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದೆ ಎಂದು ನರಿಕೊಂಬು ಹಿ.ಪ್ರಾ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ಅಭೆರೊಟ್ಟು ಸಭೆಯಲ್ಲಿ ಪ್ರಸ್ತಾವಿಸಿದರು. ಸಮವಸ್ತ್ರ ಹೊಲಿಸುವವರಿಗೆ ಈ ವಿಚಾರವನ್ನು ತಿಳಿಸಿ ಮುಂದಿನ ಸಲ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಸಂಯೋಜಕರು ತಿಳಿಸಿದರು.