ಹೊಸದಿಲ್ಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಿಂದ ತನ್ನ ಕಸ್ಟಡಿಗೆ ಪಡೆದಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ನಿಗದಿಪಡಿಸುವ ಒಂದು ದಿನದ ಮೊದಲು ಈ ಘಟನೆ ನಡೆದಿದೆ.
ಸೋಮವಾರ, ಕೇಂದ್ರ ತನಿಖಾ ಸಂಸ್ಥೆಯು ತಿಹಾರ್ ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಪರೀಕ್ಷಿಸಿತ್ತು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆಯನ್ನು ದಾಖಲಿಸಿತ್ತು. ಬುಧವಾರ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.
ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಎಎಪಿಯ ರಾಜ್ಯಸಭಾ ಸಂಸದ ಸಂಜಯ್ ಸಿಂಗ್, “ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆಯುವ ಸಾಧ್ಯತೆ ಇರುವ ಸಮಯದಲ್ಲಿ, ಕೇಂದ್ರವು ನಕಲಿ ಮೊಕದ್ದಮೆ ದಾಖಲಿಸಲು ಪಿತೂರಿ ನಡೆಸುತ್ತಿದೆ ಎಂದು ನನಗೆ ಮೂಲಗಳು ತಿಳಿಸಿವೆ. ಇದನ್ನು ಇಡೀ ರಾಷ್ಟ್ರವೇ ನೋಡುತ್ತಿದೆ” ಎಂದಿದೆ.
ಇಂದು ಬೆಳಗ್ಗೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಗೆ ಜಾಮೀನು ಮಂಜೂರು ಮಾಡಿದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.