ಬೆಂಗಳೂರು: ರಾಜ್ಯ ಅಬಕಾರಿ ನಿಯಮಕ್ಕೆ ತಿದ್ದುಪಡಿ ತಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮದ್ಯ ಮಾರಾಟ ಪರವಾನಗಿ ಹಂಚಿಕೆಯಲ್ಲಿನ ನಿಯಮದ ಸಡಿಲಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ರದ್ದುಪಡಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠ ಎತ್ತಿಹಿಡಿದಿದೆ.|
ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಕೆಲ ಮದ್ಯದಂಗಡಿ ಮಾಲೀಕರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಜಯಂತ್ ಪಟೇಲ್ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠ ಮೇಲ್ಮನವಿಯನ್ನು ಗುರುವಾರ ವಜಾಗೊಳಿಸಿತು. ಆ ಮೂಲಕ ಏಕಸದಸ್ಯ ಪೀಠದ ಆದೇಶ ಮಾನ್ಯ ಮಾಡಿದೆ.
ಈ ಮಧ್ಯೆ ರಾಜ್ಯ ಸರ್ಕಾರದ ಅಧಿಸೂಚನೆಗೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡುವ ಮುನ್ನ (2016ರ ಮಾರ್ಚ್ 11) ಮುನ್ನ ತಿದ್ದುಪಡಿ ನಿಯಮಗಳನ್ವಯ ಮದ್ಯ ಮಾರಾಟ ಪರವಾನಗಿ ಪಡೆದು ಮದ್ಯದಂಗಡಿ ತೆರದು ವ್ಯಾಪಾರ ನಡೆಸುತ್ತಿವವರ ಪರವಾನಗಿ ಮುಂದುವರಿಯಲಿದೆ. ಆದರೆ, ಪರವಾನಗಿ ಅವಧಿ ಮುಗಿದ ಬಳಿಕ ನವೀಕರಣ ಮಾಡಬಾರದು ಎಂದು ಸರ್ಕಾರಕ್ಕೆ ವಿಭಾಗೀಯ ಪೀಠ ಆದೇಶದಲ್ಲಿ ನಿರ್ದೇಶಿಸಿದೆ.
ಪ್ರಕರಣವೇನು?: ರಾಜ್ಯ ಸರ್ಕಾರ, ಪರಿಶಿಷ್ಟ ವರ್ಗಗಳಿಗೆ ಸಿಎಲ್-7ಡಿ ಮದ್ಯಮಾರಾಟ ಪರವಾನಗಿ ಪಡೆಯಲು ಇದ್ದ ಷರತ್ತು ಸಡಿಲಿಸಿ 2014ರ ಜೂನ್ 9ರಂದು ಅಧಿಸೂಚನೆ ಹೊರಡಿಸಿತ್ತು. ನಗರ ಪ್ರದೇಶದ ವ್ಯಾಪ್ತಿಯ ವಸತಿ ಸಹಿತ ಪ್ರದೇಶದಲ್ಲಿ ಮದ್ಯ ಮಾರಾಟ ಪರವಾನಗಿ ಪಡೆಯಬೇಕಾದರೆ ಸಾಮಾನ್ಯ ವರ್ಗಕ್ಕೆ ಕನಿಷ್ಠ 30 ಹಾಸಿಗೆಗಳುಳ್ಳ ಹೋಟೆಲ್‌ಹೊಂದಿರಬೇಕು ಮತ್ತು ಇತರೆ ಭಾಗಗಳಲ್ಲಿ 20 ಹಾಸಿಗೆಗಳುಳ್ಳ ಹೋಟೆಲ್ ಹೊಂದಿರುವುದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ಸರ್ಕಾರ ಷರತ್ತು ವಿಧಿಸಿತ್ತು.
ಆದರೆ, ಪರಿಶಿಷ್ಟರಿಗೆ ನಗರ ಪ್ರದೇಶಗಳಲ್ಲಿ 15 ಮತ್ತು ಇತರೆ ಭಾಗಗಳಲ್ಲಿ 10 ಹಾಸಿಗೆಗಳುಳ್ಳ ಹೋಟೆಲ್ ಹೊಂದಿದ್ದರೆ ಸಾಕು ಎಂದು ರಿಯಾಯ್ತಿ ನೀಡಿತ್ತು. ಸರ್ಕಾರದ ಈ ಕ್ರಮ ತಾರತಮ್ಯ ನೀತಿಯಿಂದ ಕೂಡಿದೆ ಎಂದು ಆರೋಪಿಸಿ ಬಿ.ಗೋವಿಂದರಾಜ ಹೆಡೆY ಎಂಬುವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಆ ಅರ್ಜಿ ಪುರಸ್ಕರಿಸಿದ್ದ ನ್ಯಾಯಮೂರ್ತಿ ಡಾ.ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ಪೀಠ ರಾಜ್ಯ ಸರ್ಕಾìದ ಆಧಿಸೂಚನೆ ರದ್ದುಪಡಿಸಿ 2016ರ ಜುಲೈ 22ರಂದು ಆದೇಶಿಸಿತ್ತು. ಮದ್ಯ ಮಾರಾಟ ಒಂದು ಅಪಾಯಕಾರಿ ವ್ಯಾಪಾರ. ಇಂಥ ವ್ಯಾಪಾರಕ್ಕೆ ಪರವಾನಗಿ ನೀಡುವ ವೇಳೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಡಗಡದವರಿಗೆ ರಿಯಾಯ್ತಿ ನೀಡುವ ಕ್ರಮ ಸೂಕ್ತವಲ್ಲ.
ಅಲ್ಲದೆ, ಪರಿಶಿಷ್ಟ ಸಮುದಾಯದವರಿಗೆ ಮದ್ಯ ಮಾರಾಟ ಪರವಾನಗಿ ಹಂಚಿಕೆಯಲ್ಲಿ ರಿಯಾಯ್ತಿ ನೀಡುವುದರಿಂದ ಸಮಾಜದಲ್ಲಿನ ಇತರೆ ಸಮುದಾಯಗಳ ನಡುವೆ ತಾರತಮ್ಯ ನೀತಿ ಅನುಸರಿಸಿದಂತಾಗುತ್ತದೆ. ಹೀಗಾಗಿ, ಸರ್ಕಾರದ ಅಧಿಸೂಚನೆ ಕಾನೂನು ಬಾಹಿರವಾಗಿದೆ ಎಂದು ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಮದ್ಯದಂಗಡಿ ಪರವಾನಗಿ ಪಡೆದಿದ್ದ ಪರಿಶಿಷ್ಠ ಜಾತಿ ಹಾಗೂ ಪಂಗಡ ವರ್ಗದವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಮೇಲ್ಮನವಿ ವಜಾಗೊಳಿಸಿ ಏಕಸದಸ್ಯ ಪೀಠದ ಆದೇಶ ಮಾನ್ಯ ಮಾಡಿದೆ.