Advertisement

ಉಸಿರು ನೀಡಲು ಆಮ್ಲಜನಕ ಸ್ಥಾವರ ಸಜ್ಜು

06:11 PM Oct 13, 2020 | Suhan S |

ದಾವಣಗೆರೆ: ಉಸಿರಾಟಕ್ಕೆ ಆಮ್ಲಜನಕ ಇಲ್ಲದೇ ಪರದಾಡುತ್ತಿದ್ದ ಜೀವಗಳಿಗೆ ಉಸಿರು ನೀಡಲು ಇಲ್ಲಿಯ ಚಿಗಟೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೂತನ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಪ್ಲಾಂಟ್‌ (ದ್ರವ ಆಮ್ಲಜನಕ ಸ್ಥಾವರ) ನಿರ್ಮಾಣ ಮಾಡಲಾಗಿದ್ದು, ಉಸಿರಿಗಾಗಿ ಹಾತೊರೆಯುವ ಜೀವಗಳಿಗೆ ಬದುಕುವ ಹೊಸ ನಿರೀಕ್ಷೆ ಹುಟ್ಟಿಸಿದೆ.

Advertisement

ಕೋವಿಡ್ ಮಹಾಮಾರಿಯ ಕಾರಣದಿಂದ ಉಸಿರಾಟ ಸಮಸ್ಯೆಗೆ ಸಿಲುಕಿದ ಅದೆಷ್ಟೋ ಜನಪ್ರಾಣಪಕ್ಷಿಗಳು ಸಕಾಲಕ್ಕೆ ಪ್ರಾಣವಾಯು ಸಿಗದೆ ಹಾರಿಹೋಗುತ್ತಿವೆ. ಅದೆಷ್ಟೋ ಜೀವಗಳು ಕೃತಕ ಆಮ್ಲಜನಕ ವ್ಯವಸ್ಥೆ ಇಲ್ಲದೇ ಒದ್ದಾಡುತ್ತಿವೆ. ಆಕ್ಸಿಜನ್‌ ಸಿಲಿಂಡರ್‌ ವ್ಯವಸ್ಥೆ ಮಾಡಲೆಂದೇ ನೂರಾರು ಜನರುನಿತ್ಯ ಪರದಾಡಿ ಅಲೆದಾಡಿ ಹೈರಾಣಾಗಿದ್ದಾರೆ. ಕೆಲವರಂತೂ ಜೀವ ಉಳಿಸಲೇಬೇಕೆಂದು ಆಕ್ಸಿಜನ್‌ ಗಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ.

ಆಕ್ಸಿಜನ್‌ ಕೊರತೆಯ ಇಂಥ ಸಂದಿಗ್ಧ ಸ್ಥಿತಿಯನ್ನು ತಿಳಿಗೊಳಿಸುವಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌ ಸಹಕಾರಿಯಾಗುವ ಭರವಸೆ ಮೂಡಿಸಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ಎಲ್ಲರಿಗೂ ಸಿಗುತ್ತಿಲ್ಲ. ಇರುವಷ್ಟು ಆಕ್ಸಿಜನ್‌ ತುರ್ತು ಆಗತ್ಯವಿರುವ ರೋಗಿಗಳಿಗೆ ಮಾತ್ರ ಕೊಡಲಾಗುತ್ತಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಒಂದು ದಿನಕ್ಕೆ ಒಂದು ಆಕ್ಸಿಜನ್‌ ಸಿಲಿಂಡರ್‌ಗೆ 25 ರಿಂದ 30 ಸಾವಿರ ರೂ.ವರೆಗೂ ಶುಲ್ಕ ವಿಧಿಸುವ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದೆ. ಆಕ್ಸಿಜನ್‌ ಸಿಗದೇ ಬಡವರಂತೂ ಸಾಯುತ್ತಲೇ ಇರುವುದು ಮಾಮೂಲಿ ಎಂಬಂತಾಗಿದೆ. ಆಕ್ಸಿಜನ್‌ ಇಲ್ಲದೇ ಆಗುವ ಮರಣ ತಪ್ಪಿಸಲು ಸರ್ಕಾರ ಈ ನೂತನ ವ್ಯವಸ್ಥೆ ಮಾಡಿದ್ದು ಹಲವು ಜೀವಗಳಿಗೆ ಜೀವದಾನ ನೀಡುವ ಆಶಾಭಾವ ಮೂಡಿದೆ.

ಏನಿದರ ವಿಶೇಷತೆ?: ಜಿಲ್ಲಾಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಿರುವ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಸ್ಥಾವರಆರು ಕಿಲೋ ಲೀಟರ್‌ ಸಾಮರ್ಥ್ಯ ಅಂದರೆ ಅಂದಾಜು 6 ಸಾವಿರ ಲೀಟರ್‌ನಷ್ಟು ಆಕ್ಸಿಜನ್‌ಸಂಗ್ರಹಿಸಿಡುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ಕೋವಿಡ್‌ ಪ್ರಕರಣಗಳಿರುವ ಈ ಸಮಯದಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಸ್ಥಾವರದಲ್ಲಿ ಎರಡ್ಮೂರು ದಿನಗಳವರೆಗೆ

ಹಾಗೂ ಕೋವಿಡ್‌ ಇಲ್ಲದ ಸಮಯಗಳಲ್ಲಿ ಎರಡು ತಿಂಗಳವರೆಗೂ ಆಕ್ಸಿಜನ್‌ ಸಂಗ್ರಹಿಸಿಟ್ಟು ಕೊಳ್ಳಬಹುದಾಗಿದೆ. ಒಂದು ಬಾರಿ ಸಂಗ್ರಹವಾದ ಲಿಕ್ವಿಡ್‌ ಆಕ್ಸಿಜನ್‌ 300 ಆಕ್ಸಿಜನ್‌ ಹಾಸಿಗೆಗಳಿಗೆ ನಿರಂತರವಾಗಿ ಪೂರೈಕೆ ಮಾಡಬಹುದಾಗಿದೆ. ಆಸ್ಪತ್ರೆಯಲ್ಲಿನ ಬಳಕೆಗೆ ಅನುಗುಣವಾಗಿ ಮತ್ತು ಅಗತ್ಯವಿದ್ದಾಗ ಅದನ್ನು ಪುನಃ ತುಂಬಿಸಲಾಗುತ್ತದೆ.ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ದಿನ 240 ಆಕ್ಸಿಜನ್‌ ಅಗತ್ಯವಿರುವ ರೋಗಿಗಳು ಆಸ್ಪತ್ರೆಯಲ್ಲಿದಾಖಲಾಗುತ್ತಿದ್ದು, ಈ ಸ್ಥಾವರ ನಿರ್ಮಾಣದಿಂದ ಪ್ರತಿ ನಿತ್ಯ ಹರಿಹರದಿಂದ ಆಮ್ಲಜನಕ ಸಾಗಾಣಿಕೆಮಾಡುವುದನ್ನು ತಪ್ಪಿಸಬಹುದಾಗಿದೆ. ಆಸ್ಪತ್ರೆಯಲ್ಲಿಯೇ ಆಕ್ಸಿಜನ್‌ ಸಂಗ್ರಹವಿರುವುದರಿಂದ ಅವಶ್ಯವಿರುವಷ್ಟು ಆಕ್ಸಿಜನ್‌ ಅಗತ್ಯ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.

Advertisement

ಜಿಲ್ಲಾಸ್ಪತ್ರೆ ಆವರಣದಲ್ಲಿ ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣ ಮಾಡಲಾಗಿದ್ದು ಆರು ಸಾವಿರ ಲೀಟರ್‌ನಷ್ಟು ಆಕ್ಸಿಜನ್‌ ದಾಸ್ತಾನು ಮಾಡಿಟ್ಟುಕೊಂಡು ಅಗತ್ಯವಿದ್ದಷ್ಟುಆಕ್ಸಿಜನ್‌ ರೋಗಿಗಳಿಗೆ ಬಳಕೆ ಮಾಡಲು ಅನುಕೂಲವಾಗಲಿದೆ. ಆಸ್ಪತ್ರೆಯಲ್ಲಿಯೇ ಸದಾ ಆಕ್ಸಿಜನ್‌ ಸಿಗುವುದರಿಂದ ಅಗತ್ಯವಿರುವ ರೋಗಿಗಳಿಗೆ ಸಕಾಲಕ್ಕೆ ಆಕ್ಸಿಜನ್‌ ವ್ಯವಸ್ಥೆ ಮಾಡಬಹುದಾಗಿದೆ. ಸ್ಥಾವರದ ಮೂಲಕಈಗಾಗಲೇ ಪ್ರಾಯೋಗಿಕವಾಗಿ ಆಕ್ಸಿಜನ್‌ ಬಳಕೆ ಕಾರ್ಯಾರಂಭ ಮಾಡಲಾಗಿದೆ. – ಡಾ| ಎನ್‌. ಜಯಪ್ರಕಾಶ್‌, ಜಿಲ್ಲಾ ಶಸ್ತ್ರಚಿಕಿತ್ಸಕರು, ಚಿಗಟೇರಿ ಜಿಲ್ಲಾಸ್ಪತ್ರೆ

 

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next