ಕೋಲ್ಕತ್ತಾ: ವ್ಯಕ್ತಿಯೊಬ್ಬ ರಕ್ಷಣಾ ಬೇಲಿಯನ್ನು ದಾಟಿ ಸಿಂಹದ ಬೋನಿನ ಒಳಗೆ ಹೋದ ಪರಿಣಾಮ ಸಿಂಹದಿಂದ ದಾಳಿಗೊಳಗಾದ ಘಟನೆ ಕೋಲ್ಕತ್ತಾದ ಪ್ರಾಣಿ ಸಂಗ್ರಹಾಲಯದಲ್ಲಿ ನಡೆದಿದೆ.
ಸಿಂಹವಿದ್ದ ಬೋನಿನ ಸುತ್ತಲೂ ನಿರ್ಮಿಸಿದ್ದ ತಂತಿಯ ಬೇಲಿಯನ್ನು ದಾಟಿ ಸಿಂಹದ ಬಳಿ ಹೋದ ಪರಿಣಾಮ ಸಿಂಹ ಆತನ ಮೇಲೆ ದಾಳಿ ನಡೆಸಿದೆ. ಘಟನೆ ನಡೆದ ತಕ್ಷಣ ಗಾಯಗೊಂಡಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಪ್ರಾಣಿ ಸಂಗ್ರಹಾಲಯದ ಸಿಬಂದಿಗಳು SSKM ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿ ಇಳಿಸಿದೆ.
ಸಿಂಹದಿಂದ ದಾಳಿಗೊಳಗಾದ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಮಾಧ್ಯಮದ ಜೊತೆಗೆ ಮಾಹಿತಿ ಹಂಚಿಕೊಂಡಿದ್ದು, ನಾನು ಸಿಂಹವನ್ನು ರಕ್ಷಿಸಲು ಬಂದಿದ್ದು, ಸಿಂಹ ಕಾಡಿನಲ್ಲಿ ಇರಬೇಕಾದ ಪ್ರಾಣಿ. ಆದರೆ ಅದನ್ನು ಬೋನಿನೊಳಗೆ ಬಂಧಿಸಿ ಹಿಂಸೆ ನೀಡಿಲಾಗುತ್ತಿದೆ. ಈ ಹಿಂಸೆಯಿಂದ ಸಿಂಹವನ್ನು ಪಾರು ಮಾಡಲು ನಾನು ಬೋನಿನ ಒಳಗೆ ತೆರಳಿದ್ದೆ. ಆದರೆ ಅದು ನನ್ನ ಮೇಲೆ ದಾಳಿ ಮಾಡಿತು ಎಂದಿದ್ದಾನೆ.
ಇದನ್ನೂ ಓದಿ:ಗ್ರಾಮ ವಾಸ್ತವ್ಯ ವರದಿಗೆ ತೆರಳಿದ ಪತ್ರಕರ್ತರಿಗೆ ಭಿಕ್ಷುಕರ ವಾಹನದಲ್ಲಿ ಪ್ರಯಾಣ!
ಈ ಕುರಿತು ಮಾಹಿತಿ ನೀಡಿರುವ ವನ್ಯಜೀವಿ ಅಧಿಕಾರಿ ವಿ. ಕೆ ಯಾದವ್ ಈ ವ್ಯಕ್ತಿಯು ಮಾನಸಿಕವಾಗಿ ಅಸ್ವಸ್ಥನಾಗಿದ್ದು, ಪ್ರಾಣಿ ಸಂಗ್ರಹಾಲಯದಲ್ಲಿ ನಿರ್ಮಿಸಲಾಗಿದ್ದ ರಕ್ಷಣಾ ಬೇಲಿಗಳನ್ನು ದಾಟಿ ಸಿಂಹದ ಬೋನಿನೊಳಗೆ ಪ್ರವೇಶ ಮಾಡಿದ್ದಾನೆ. ಪರಿಣಾಮ ವ್ಯಕ್ತಿಯ ಮೇಲೆ ಸಿಂಹ ದಾಳಿ ಮಾಡಿದ್ದು, ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದೆ. ಸದ್ಯ ಈ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತಾಗಿ ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: ಮಧ್ಯಾಹ್ನವಾದರೂ ಸ್ಥಳಕ್ಕೆ ಆಗಮಿಸದ ದಕ್ಷಿಣ ಕನ್ನಡ ಡಿಸಿ