ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಫಾರಿ ಆವರಣದಲ್ಲಿ ಸಿಂಹ, ಹಾಗೂ ಕರಡಿಗಳು ಸಫಾರಿ ವಾಹನದ ಮೇಲೆ ದಾಳಿ ಮಾಡಿ, ಪ್ರವಾಸಿಗರಲ್ಲಿ ಆತಂಕ ಮೂಡಿಸಿವೆ. ಮಂಗಳವಾರ ಗ್ರ್ಯಾಂಡ್ ಸಫಾರಿಯಲ್ಲಿನ ಸಿಂಹಗಳು ಸಫಾರಿ ಆವರಣದೊಳಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಇನ್ನೊವಾ ವಾಹನದ ಮೇಲೆ ದಾಳಿ ಮಾಡಿವೆ.
ಇದರಿಂದ ಕಾರಿನ ಒಳಗಿದ್ದ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದರು. ನಂತರ ಚಾಲಕ ಮೆಲ್ಲನೆ ಕಾರನ್ನು ದೂರ ಚಲಾಯಿಸಿಕೊಂಡು ಹೋದ ನಂತರ ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ಗಂಡು ಸಿಂಹ, ಮೊತ್ತೂಂದು ಹೆಣ್ಣು ಸಿಂಹ ಇನ್ನೋವಾ ವಾಹನವನ್ನು ಅಡ್ಡಗಟ್ಟಿ ಅದರ ಮೇಲೆ ಹತ್ತಲು ಹವಣಿಸಿವೆ.
ಚಾಲಕ ಮುಂದೆ ಸಾಗುತ್ತಿದ್ದಂತೆ ಕಾರಿನ ಹಿಂದೆ ಓಡಿದ ಸಿಂಹಗಳ ಪೈಕಿ, ಒಂದು ಗಂಡು ಸಿಂಹ ಇನ್ನೋವಾದ ಹಿಂಬದಿಯಿಂದ ಎರಡು ಕಾಲುಗಳನ್ನು ಮೇಲಿಟ್ಟು ಹತ್ತಲು ಅವಣಿಸುತ್ತಿತ್ತು. ಇನ್ನೋವಾ ವಾಹನದಲ್ಲಿ 7 ಮಂದಿ ಪ್ರವಾಸಿಗರಿದ್ದರು. ಸಿಂಹಗಳ ವರ್ತನೆಯಿಂದ ಅವರೆಲ್ಲರೂ ಆತಂಕಗೊಂಡಿದ್ದರು. ಸಿಂಹವೇನಾದರೂ ಕಾರಿನ ಗ್ಲಾಸ್ ಒಡೆದಿದ್ದರೆ ದೊಡ್ಡ ಅನಾಹುತವೇ ಅಲ್ಲಿ ಸಂಭವಿಸುತ್ತಿತ್ತು.
ಇದೇ ಸಿಂಹ ಹಲವು ದಿನಗಳಿಂದಲೂ ಸಫಾರಿಗೆ ಬರುವ ಜೀಪು, ಬಸ್ , ವಾಹನಗಳ ಹಿಂದೆ ಓಡಿ ಬರುವ ಪ್ರವೃತ್ತಿ ಬೆಳೆಸಿಕೊಂಡಿದೆ. ಇದರಿಂದಲೇ ಇಂದು ಇನ್ನೋವಾ ಮೇಲೆ ಹತ್ತಲು ಪ್ರಯತ್ನಿಸಿವೆ. ಅಲ್ಲದೆ ಇದೇ ಸಿಂಹಗಳ ತಂಡವೇ ಕಳೆದ ಒಂದೂವರೆ ವರ್ಷದ ಹಿಂದೆ ಕೃಷ್ಣ ಎಂಬ ಅನಿಮಲ್ ಕೀಪರ್ ಮೇಲೆ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿತ್ತು.
“ಇಂತಹ ಸಣ್ಣ ಪುಟ್ಟ ಅವಘಡಗಳು ಸಂಭವಿಸಿದಾಗಲೆ ಅಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದರೆ ಮುಂದೊಂದು ದಿನ ಸಂಭವಿಸುವ ದೊಡ್ಡ ಅನಾಹುತಕ್ಕೆ ಅಕಾರಿಗಳೇ ಹೊಣೆಯಾಗಬೇಕಾಗುತ್ತದೆ,” ಎಂದು ಪ್ರವಾಸಿಗರು ಹೇಳಿದ್ದಾರೆ.
ಕರಡಿಗಳಿಂದಲೂ ಉಪಟಳ: ಇನ್ನು ಕರಡಿ ಸಫಾರಿಯಲ್ಲೂ ಇಂಥದ್ದೇ ಪ್ರಸಂಗ ನಡೆದಿದೆ. ಇಷ್ಟು ದಿನ ಕರಡಿಗಳು ವಾಹನಗಳ ಕಿಟಕಿ ಬಳಿ ಬಂದು ನಿಲ್ಲುವುದು ಸಾಮಾನ್ಯವಾಗಿತ್ತು. ಆದರೆ ಇತ್ತೀಚೆಗೆ ಬಸ್ ಮೇಲೆ ಹತ್ತುವ ಪರಿಪಾಟವನ್ನು ಕೆಲ ಕರಡಿಗಳು ರೂಢಿಸಿಕೊಂಡಿವೆ. ಅದರಂತೆ ಭಾನುವಾರ ಕರಡಿಯೊಂದು ಬಸ್ ಮೇಲೆ ಹತ್ತಿ ಕೂತಿತ್ತು. ಬಸ್ ಇನ್ನೇನು ಗೇಟ್ ನಿಂದ ಹೊರ ಹೋಗುವ ಸಮಯದಲ್ಲಿ ಕರಡಿ ಬಸ್ ಮೇಲೆ ಇರುವುದು ಪತ್ತೆ ಮಾಡಿದ ಸಿಬ್ಬಂದಿ, ಕೋಲಿನಲ್ಲಿ ಹೊಡೆದು ಕೆಳಗಿಳಿಸಿ ದೂರ ಅಟ್ಟಿದ್ದಾರೆ.