Advertisement

ಮತದಾನ ನೋಂದಣಿಗೆ ಲಿಂಗತ್ವ ಅಲ್ಪಸಂಖ್ಯಾಕರ ಹಿಂದೇಟು

02:43 AM Apr 12, 2019 | sudhir |

ಮಂಗಳೂರು/ ಉಡುಪಿ: ಲಿಂಗತ್ವ ಅಲ್ಪಸಂಖ್ಯಾಕರಿಗೆ ಮತ ದಾನದ ಅವಕಾಶ ಸಿಕ್ಕಿದರೂ ಮತ ದಾನದ ಗುರುತಿನ ಚೀಟಿಗೆ ನೋಂದಣಿ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ ಅರ್ಹತೆ ಹೊಂದಿರುವ 250ಕ್ಕೂ ಹೆಚ್ಚು ಮಂದಿ ಲಿಂಗತ್ವ ಅಲ್ಪಸಂಖ್ಯಾಕರನ್ನು ಗುರುತಿಸಲಾಗಿದ್ದು, ಆ ಪೈಕಿ ಕೇವಲ 99 ಮಂದಿಯ ಹೆಸರು ಮತದಾರರ ಪಟ್ಟಿಯಲ್ಲಿ ನಮೂದಾಗಿದೆ.

Advertisement

ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಸ್ವಯಂ ಸೇವಾ ಸಂಸ್ಥೆಗಳ ಮುಖಾಂತರ ಸ್ವೀಪ್‌ ಸಮಿತಿಯು 250 ಲಿಂಗತ್ವ ಅಲ್ಪಸಂಖ್ಯಾಕರನ್ನು ಗುರುತಿಸಿ ಅವರನ್ನು ಮತದಾನಕ್ಕೆ ಪ್ರೇರೇಪಿಸಲಾಗಿದೆ. ಆದರೆ ಕೇವಲ 99 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ಕಳೆದ ಬಾರಿ 42 ಮಂದಿ ಲಿಂಗತ್ವ ಅಲ್ಪಸಂಖ್ಯಾಕರಿಗೆ ಮತ ದಾನದ ಅವಕಾಶ ಕಲ್ಪಿಸಿಕೊಡಬೇಕೆಂಬ ನಿಟ್ಟಿನಲ್ಲಿ ಸತತ ಪ್ರಯತ್ನಗಳು ನಡೆದಿದೆ ಬಳಿಕ, ಅವರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅಧಿಕಾರಿಗಳು ವೈದ್ಯಕೀಯ ದಾಖಲೆ ಕೇಳುವುದು ಮುಂತಾದ ಕಾರಣಗಳಿಂದಾಗಿ ರಾಜ್ಯದಲ್ಲಿಯೂ ಮತದಾನಕ್ಕೆ ಹಿಂದೇಟು ಹಾಕುತ್ತಿದ್ದರು. ದ.ಕ. ಜಿಲ್ಲೆಯಲ್ಲಿಯೂ ಲಿಂಗತ್ವ ಅಲ್ಪಸಂಖ್ಯಾಕರು ಮತದಾನಕ್ಕೆ ಮುಂದಾಗುತ್ತಿರಲಿಲ್ಲ. ಕೊನೆಗೂ ಜಿಲ್ಲೆಯಲ್ಲಿ ಸ್ವೀಪ್‌ ಸಮಿತಿ ಮತ್ತು ಲಿಂಗತ್ವ ಅಲ್ಪ ಸಂಖ್ಯಾಕರಿಗೆ ಸಂಬಂಧಿಸಿದ ಸಂಘ ಟನೆಗಳ ಶ್ರಮವಾಗಿ ಕಳೆದ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರಿನಲ್ಲಿ 42 ಮಂದಿ ಲಿಂಗತ್ವ ಅಲ್ಪಸಂಖ್ಯಾಕರು ಮತದಾನ ಮಾಡಿದ್ದರು. ಆದರೆ ಆ ಸಂದರ್ಭದಲ್ಲಿ ಯಾವುದೇ ಸೂಕ್ತ ದಾಖಲೆ ಇಲ್ಲದೆ, ನೋಂದಣಿ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಮೊದಲು ನಿರಾಕರಣೆ ಮಾಡಿದ್ದರು ಎನ್ನುತ್ತಾರೆ ಸಂಘಟನೆಯ ಪ್ರತಿನಿಧಿಗಳು.

ಉಡುಪಿಯಲ್ಲೇನು?
ಉಡುಪಿ ಜಿಲ್ಲೆಯಲ್ಲೂ ತೃತೀಯ ಲಿಂಗಿಗಳು ನೂರಾರು ಸಂಖ್ಯೆಯಲ್ಲಿದ್ದಾರೆ. ಆದರೆ ಮತದಾರರಾಗಿ ಇವರ ಸಂಖ್ಯೆ ಬಹಳ ಕಡಿಮೆ ಇದೆ.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 287 ತೃತೀಯ ಲಿಂಗಿಗಳು ಇದ್ದಾರೆ. ಇವರಿಗೆ ಸರಕಾರದ ವಿವಿಧ ಸವಲತ್ತುಗಳನ್ನು ನೀಡುವವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು. ಇವರಿಗೆ ಸೌಲಭ್ಯಗಳನ್ನು ನೀಡುವಾಗ ತೆಗೆದ ಅಂಕಿ ಸಂಖ್ಯೆಗಳಂತೆ 287.

Advertisement

ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಲ್ಲಿ ಈ ಬಾರಿ ಮತದಾರ ರಾಗಿ ನೋಂದಾಯಿಸಿಕೊಂಡ ವರು ಕೇವಲ 47. ಅದರಲ್ಲೂ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ಗಳಲ್ಲಿ ಇವರ ಸಂಖ್ಯೆ ಕೇವಲ 14. ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 33. ಉಡುಪಿ ನಗರದಲ್ಲಿ ತೃತೀಯ ಲಿಂಗಿಗಳು ಆಗಾಗ್ಗೆ ಕಂಡು ಬರುತ್ತಾರಾದರೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ನೋಂದಾಯಿಸಿಲ್ಲ. 2014ರ ಚುನಾವಣೆಯಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 11 ಮಂದಿ ಇದ್ದರು. ಇದೇ ರೀತಿ ಕಾರ್ಕಳದಲ್ಲಿಯೂ ತೃತೀಯ ಲಿಂಗಿಗಳ ಹೆಸರು ಇಲ್ಲ. 2014ರಲ್ಲಿ ಇಲ್ಲಿ ಇವರ ಸಂಖ್ಯೆ ಎರಡಾದರೂ ಇತ್ತು. ಕಾಪು ವಿಧಾನಸಭಾ ಕ್ಷೇತ್ರದಲ್ಲಿ 11 ಮಂದಿ ಹೆಸರು ನೋಂದಾಯಿಸಿಕೊಂಡಿದ್ದರೆ ಕುಂದಾಪುರದಲ್ಲಿ ಮೂವರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಾಪುವಿ ನಲ್ಲಿ 2014ರಲ್ಲಿ ಮೂವರು, ಕುಂದಾಪುರ ದಲ್ಲಿ ಆರು ಮಂದಿ ಇದ್ದರು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಹೆಚ್ಚು ತೃತೀಯ ಲಿಂಗಿಗಳು ಇದ್ದಾರೆ. ಇಲ್ಲಿ ಇವರ ಸಂಖ್ಯೆ 23. ತರಿಕೆರೆ ಕ್ಷೇತ್ರದಲ್ಲಿಯೂ ಯಾವುದೇ ತೃತೀಯ ಲಿಂಗಿಗಳು ಹೆಸರು ನೋಂದಾಯಿಸಿಕೊಂಡಿಲ್ಲ.

ನೋಂದಣಿಗೆ ಹಿಂದೇಟು
ಜಿಲ್ಲೆಯಲ್ಲಿ ಸ್ವೀಪ್‌ ಸಮಿತಿ ಗುರುತಿಸಿದ ಲಿಂಗತ್ವ ಅಲ್ಪಸಂಖ್ಯಾಕರ ಪೈಕಿ ಕೆಲವರು ವಿವಿಧ ಕಾರಣಗಳಿಂದಾಗಿ ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಹೆಚ್ಚಿನವರು ಅವರ ವಾಸಸ್ಥಾನವನ್ನೂ ಆಗಾಗ ಬದಲಾಯಿಸುವುದರಿಂದ ಸಮಸ್ಯೆಯಾಗುತ್ತಿದೆ. ಆದಾಗ್ಯೂ ಅವರನ್ನು ಮತದಾನಕ್ಕೆ ಪ್ರೇರೇಪಿಸುವ ನಿಟ್ಟಿನಲ್ಲಿ ಕಾರ್ಯಾಗಾರ, ಸ್ಫೂರ್ತಿ ತುಂಬುವ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸ್ವೀಪ್‌ ಸಮಿತಿಯ ಪ್ರಮುಖರು ಹೇಳುತ್ತಾರೆ.

ಎಲ್ಲರೂ ಪಾಲ್ಗೊಳ್ಳಬೇಕು
ಲಿಂಗತ್ವ ಅಲ್ಪಸಂಖ್ಯಾಕರು ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬ ನಿಟ್ಟಿನಲ್ಲಿ ಜಿಲ್ಲಾಡಳಿತ, ಸ್ವೀಪ್‌ ಸಮಿತಿ ಮತ್ತು ಅವರಿಗೆ ಸಂಬಂಧಿಸಿದ ಸಂಘಟನೆ ಪ್ರಯತ್ನ ನಡೆಸಿವೆ. ಆದಾಗ್ಯೂ 99 ಮಂದಿಯಷ್ಟೇ ನೋಂದಣಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಅವರ ನೋಂದಣಿ ಸಮಯದಲ್ಲಿ ಸೂಕ್ತವಾಗಿ ಸ್ಪಂದಿಸಿದ್ದಾರೆ. ಯಾವುದೇ ಸಮಸ್ಯೆ ಉಂಟಾಗಿಲ್ಲ.
– ಶಶಿಕಾಂತ್‌ ಸೆಂಥಿಲ್‌ ದ.ಕ. ಜಿಲ್ಲಾ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next