ಹುಬ್ಬಳ್ಳಿ: ರಾಜ್ಯದಲ್ಲಿ ಸುಮಾರು 1.18 ಕೋಟಿಯಷ್ಟು ಲಿಂಗಾಯತ ಜನಸಂಖ್ಯೆ ಇದ್ದು, ಸಮಾಜಕ್ಕೆ ಸೌಲಭ್ಯ ನಿಟ್ಟಿನಲ್ಲಿ ಶೇಕಡಾ16-18ರಷ್ಟು ಮೀಸಲಾತಿ ನೀಡಬೇಕು, ಸಮಾಜವನ್ನು ಇತರೆ ಹಿಂದುಳಿದ ವರ್ಗ ಕ್ಕೆ ಸೇರಿಸಬೇಕೆಂದು ವಿಧಾನ ಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮದಿಂದ ಸಮಾಜಕ್ಕೆ ಏನು ಪ್ರಯೋಜನ ಆಗದು.
ನಿಗಮಕ್ಕೆ ವರ್ಷಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳು ನೀಡಿದರು, ಸಮಾಜದ ಶೇ.25 ರಷ್ಟು ಜನರಿಗೆ ತಲಾ 3575 ರೂ.ಬರುತ್ತದೆ ಇದರಿಂದ ಏನು ಅಭಿವೃದ್ಧಿ ಸಾಧ್ಯ. ಶೇ.16-18ರಷ್ಟು ಮೀಸಲಾತಿ ನೀಡಿ ಹಿಂದುಳಿದ ವರ್ಗಕ್ಕೆ ಸೇರಿಸಿದರೆ ಸಮಾಜದ ಯುವಕರಿಗೆ ಅನುಕೂಲವಾಗಲಿದೆ ಎಂದರು.
ಈ ಹಿಂದೆ ನಾವು ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನದ ಹೋರಾಟ ಕೈಗೊಂಡಾಗ ಧರ್ಮ ಒಡೆಯುವ, ರಾಜಕೀಯ ಪ್ರೇರಿತ ಪಟ್ಟ ಕಟ್ಟಲಾಯಿತು. ಸೌಲಭ್ಯ ದೊರೆತಿದ್ದರೆ ಸಮಾಜದ ಎಲ್ಲರಿಗೂ ಲಾಭವಾಗುತ್ತಿತ್ತು.
ಈಗಲಾದರೂ ಸಮಾಜ ಎಲ್ಲರೂ ಸೇರಿ ಶೇ.16-18ರಷ್ಟು ಮೀಸಲಾತಿ, ಹಿಂದುಳಿದ ವರ್ಗಕ್ಕೆ ಸೇರಿಸಲು ಸಂಘಟಿತ ಧ್ವನಿ ಮೊಳಗಿಸುವ ಅನಿವಾರ್ಯತೆ ಇದೆ ಎಂದರು.
ರಾಜ್ಯ ಸರ್ಕಾರದ ಸಾವಯವ ಕೃಷಿ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ . 69 ಲಕ್ಷ ರೈತರಿಗೆ ಲಾಭ ವಾಗಿದೆ ಎಂದು ದಾಖಲೆಗಳು ಹೇಳುತ್ತಿವೆ.ಆದರೆ ವಾಸ್ತವ ಬೇರೆಯದ್ದೇ ಆಗಿದೆ.ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕೆಂದು ಹೊರಟ್ಟಿ ಒತ್ತಾಯಿಸಿದರು.