Advertisement

ಲಿಂಗಾಯತ ಧರ್ಮ ಸಚಿವರಲ್ಲೇ ಒಡಕು

06:00 AM Sep 11, 2017 | |

ಲಿಂಗಾಯಿತ ಧರ್ಮ ವಿಚಾರ ಮಹತ್ವದ ಘಟ್ಟ ತಲುಪಿದ್ದು ಸಿದ್ಧಗಂಗಾ ಶ್ರೀಗಳೇ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಿದ್ದಾರೆ ಎಂದು ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ವಿರಕ್ತ, ಪಂಚಪೀಠ ಮತ್ತು ತಮ್ಮದೇ ಪಕ್ಷದ ಕೆಲ ನಾಯಕರ ವಿರುದ್ಧ ಕಿಡಿ ಕಾರಿರುವ ರಾಯರಡ್ಡಿ ಪ್ರತ್ಯೇಕ ಧರ್ಮ ಬೇಕು ಎಂದಿದ್ದಾರೆ. ಆದರೆ ಈಶ್ವರ ಖಂಡ್ರೆ ಒಡಕಿನ ಮಾತು ಬೇಡ ಎಂದಿದ್ದಾರೆ.

Advertisement

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಬೆಂಬಲ ಸಿಕ್ಕಿದ್ದು, ನಮ್ಮ ಹೋರಾಟಕ್ಕೆ ಬಲ ಬಂದಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಅವರು, ಮಾತನಾಡಿ ತಮ್ಮೊಳಗಿನವರನ್ನೇ ನಮ್ಮವರು ಅಪ್ಪಿಕೊಳ್ಳುತ್ತಿಲ್ಲ. ಇಂಥವರು ಬಸವಣ್ಣ ಸ್ಥಾಪಿಸಿದ ಸಮಾಜದ ವಾರಸುದಾರರಾಗುತ್ತಾರೆಯೇ ಎಂದು ಪ್ರಶ್ನಿಸಿ, ಪ್ರತ್ಯೇಕ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಖಾಸಗಿ ಹೋಟೆಲ್‌ವೊಂದರಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಎಂ.ಬಿ. ಪಾಟೀಲ್‌, “ಬರೀ ಲಿಂಗಾಯತ ಧರ್ಮ ಆಗಬೇಕು. ವೀರ ಶೈವರು ಇತ್ತೀಚೆಗೆ ಸೇರಿಕೊಂಡವರು. ಹೀಗಾಗಿ ನೀವು ಹೋರಾಟ ಮುಂದುವರಿಸಿಕೊಂಡು ಹೋಗಿ’ ಎಂದು ಸಿದ್ದಗಂಗಾ ಶ್ರೀಗಳೇ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರಮಾಣವಾಗಿ ಹೇಳುತ್ತೇನೆ, ಶ್ರೀಗಳು ಏನು ಹೇಳಿದ್ದಾರೋ ಅದನ್ನಷ್ಟೇ ಹೇಳಿದ್ದೇನೆ. ಇದರಲ್ಲಿ ಒಂದಕ್ಷರವೂ ಸುಳ್ಳಿಲ್ಲ ಎಂದಿದ್ದಾರೆ.
ಲಿಂಗಾಯತ ಸಮುದಾಯಕ್ಕೆ ಸಿದ್ದಗಂಗಾ ಶ್ರೀಗಳೇ ಸುಪ್ರೀಂ. ಆಧುನಿಕ ಬಸವಣ್ಣ ಎನಿಸಿಕೊಂಡಿರುವ ಅವರು ಹೇಳಿದ್ದೇ ಅಂತಿಮ. ಹೀಗಾಗಿ ಇನ್ನು ಮುಂದೆ ನಮ್ಮ ಹೋರಾಟಕ್ಕೆ ಯಾವ ಬುದ್ಧಿಜೀವಿಗಳ ಮಾರ್ಗದರ್ಶನ ಅಥವಾ ಇನ್ಯಾರಧ್ದೋ ಸ್ಪಷ್ಟೀಕರಣ ಬೇಕಾಗಿಲ್ಲ ಎಂದು ಹೇಳಿದ್ದಾರೆ.

ತುಮಕೂರು ಸಿದ್ದಗಂಗಾ ಮಠದ ವತಿಯಿಂದ ಆರಂಭಿಸಿರುವ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾ ರಂಭದ ಬಳಿಕ ಶ್ರೀಗಳನ್ನು ಭೇಟಿ ಯಾಗಿದ್ದೆ. ಈ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ವಿವರಿಸಿ ಅಭಿಪ್ರಾಯ ಕೇಳಿದೆ. ಈ ಸಂದರ್ಭದಲ್ಲಿ ಶ್ರೀಗಳು, ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂದು ಅಭಿಪ್ರಾಯಿಸಿದರು ಎಂದು ಸಚಿವರು ಹೇಳಿದರು.

ಅಷ್ಟರಲ್ಲಿ ಸ್ವಾಮೀಜಿಯವರ ಜತೆಗಿದ್ದವರೊಬ್ಬರು ಲಿಂಗಾಯತ ಮತ್ತು ವೀರಶೈವ ಎಂಬುದು ಒಂದೇನಾ ಅಥವಾ ಪ್ರತ್ಯೇಕವೇ ಎಂದು ಪ್ರಶ್ನಿಸಿದಾಗ ಶ್ರೀಗಳು, ಬರೀ ಲಿಂಗಾಯತ ಧರ್ಮ ಆಗಬೇಕು. ವೀರಶೈವ ಎಂಬುದು ಇತ್ತೀಚೆಗೆ ಸೇರಿಕೊಂಡಿದ್ದು ಎಂದು ಸ್ಪಷ್ಟಪಡಿಸಿದರಲ್ಲದೆ, ಆ ನಿಟ್ಟಿನಲ್ಲಿ ಹೋರಾಟ ಮುಂದುವರಿಸಿ ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನನ್ನೊಂದಿಗೆ ಡಾ.ಜಯಣ್ಣ, ಸಿದ್ದಗಂಗಾ ಟ್ರಸ್ಟ್‌ನ ಶಿವಕುಮಾರ್‌, ಕಣ್ಣೂರು ಮಠದ ಸ್ವಾಮೀಜಿಗಳು ಮತ್ತು ಸಿದ್ದಗಂಗಾ ಶ್ರೀಗಳ ಇಬ್ಬರು ಸೇವಕರಿದ್ದರು ಎಂದು ಎಂ.ಬಿ.ಪಾಟೀಲ್‌ ತಿಳಿಸಿದರು.

Advertisement

ಇನ್ಯಾರ ಮಾರ್ಗದರ್ಶನವೂ ಬೇಕಾಗಿಲ್ಲ
ಸಚಿವರಾದ ಈಶ್ವರ ಖಂಡ್ರೆ, ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಪ್ರತ್ಯೇಕ ಧರ್ಮ, ವೀರಶೈವ-ಲಿಂಗಾಯತ ವಿಭಜನೆ ಮಾಡುವ ಪ್ರಯತ್ನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಈ ವಿಚಾರದಲ್ಲಿ ನಮ್ಮನ್ನು ನಿಂದಿಸುತ್ತಿರುವವರೆಲ್ಲರೂ ನಮ್ಮ ಬಂಧುಗಳು. ಯಾರೇನೇ ಹೇಳಿದರೂ ಅದಕ್ಕೆ ಉತ್ತರ ಕೊಡುವ ಅಗತ್ಯ ಇಲ್ಲ. ಸಿದ್ದಗಂಗಾ ಶ್ರೀಗಳು ನಮ್ಮೊಂದಿಗೆ ಆಡಿರುವ ಮಾತುಗಳೇ ಎಲ್ಲದಕ್ಕೂ ಉತ್ತರ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next