ಬೆಂಗಳೂರು: ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ಕುರಿತು ಪರಿಶೀಲನೆ ಮಾಡಲು ರಾಜ್ಯ ಸರ್ಕಾರ ನೇಮಿಸಿರುವ ತಜ್ಞರ ಸಮಿತಿ ಆಯೋಗಕ್ಕೆ ವರದಿ ಸಲ್ಲಿಸಿದೆ. ಪ್ರಮುಖವಾಗಿ ಲಿಂಗಾಯತ ಹಿಂದೂ ಧರ್ಮ ಅಲ್ಲ, ವೀರ ಶೈವ ಧರ್ಮದ ಭಾಗವೂ ಅಲ್ಲ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮದ ಅಂಗವೂ ಅಲ್ಲ ಎಂದು ಶಿಫಾರಸು ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಕಳೆದ ಒಂದು ವಾರದಿಂದ ನಿರಂತರ ಸಭೆಗಳನ್ನು ನಡೆಸಿ ಶನಿವಾರ ಸಂಜೆ ಅಲ್ಪಸಂಖ್ಯಾತ ಆಯೋಗಕ್ಕೆ ತನ್ನ ವರದಿ ನೀಡಿದೆ. ತಜ್ಞರ ಸಮಿತಿ ರಚನೆ ವಿವಾದ ಹೈಕೋರ್ಟ್‌ನಲ್ಲಿ ಇರುವುದರಿಂದ ವರದಿಯನ್ನು ಬಹಿರಂಗ ಪಡಿಸದೇ ಇರಲು ಸರ್ಕಾರ ತೀರ್ಮಾನಿಸಿದೆ ಎನ್ನಲಾಗಿದೆ.
ತಜ್ಞರ ಸಮಿತಿ ಲಿಂಗಾಯತ ಪ್ರತ್ಯೇಕ ಧರ್ಮ, ವೀರಶೈವ ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ಇರುವ ದಾಖಲೆಗಳ ಅಧ್ಯಯನ ನಡೆಸಿದ್ದು, ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ಕುರಿತು ಕಾನೂನಿನಲ್ಲಿ ಇರುವ ಅವಕಾಶಗಳು, ಜೈನ, ಸಿಖ್ ಹಾಗೂ ಬೌದ್ಧ ಧರ್ಮಕ್ಕೆ ಮಾನ್ಯತೆ ನೀಡಲು ರಚನೆಯಾಗಿದ್ದ ಸಮಿತಿಗಳು ನೀಡಿದ ವರದಿಗಳು ಹಾಗೂ ಧರ್ಮ ಮಾನ್ಯತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇರುವ ಕಾನೂನುಗಳ ಬಗ್ಗೆಯೂ ಸಮಿತಿ ಕೂಲಂಕಷವಾಗಿ ಅಧ್ಯಯನ ನಡೆಸಿದ್ದು, ಅಂತಿಮ ವರದಿ ಸಿದ್ದಪಡಿಸುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.
ಲಿಂಗಾಯತಕ್ಕೆ ಒಲವು? ತಜ್ಞರ ಸಮಿತಿಯು ಲಿಂಗಾಯತ ಸಮುದಾಯಕ್ಕೆ ಅಲ್ಪ ಸಂಖ್ಯಾತ ಮಾನ್ಯತೆ ನೀಡುವ ಕುರಿತು ಶಿಫಾರಸು ಮಾಡಿದೆ ಎಂದು ಹೇಳಲಾಗುತ್ತಿದೆ. ವೀರಶೈವ ಪಂಗಡವನ್ನು ಪ್ರತ್ಯೇಕ ಧರ್ಮ ಮಾನ್ಯತೆ ನೀಡುವಷ್ಟು ಪೂರಕ ಐತಿಹಾಸಿಕ ದಾಖಲೆಗಳು ಸಮಿತಿಗೆ ದೊರೆತಿಲ್ಲ ಎನ್ನಲಾಗಿದೆ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಸಮಿತಿ ಆರು ತಿಂಗಳು ಅವಧಿ ಕೇಳಿದ್ದರೂ ಸರ್ಕಾರದ ಆಶಯದಂತೆ ಎರಡೇ ತಿಂಗಳಲ್ಲಿ ವರದಿ ಸಿದ್ದಪಡಿಸಿ ಆಯೋ ಗಕ್ಕೆ ಸಲ್ಲಿಸಿದೆ. ಹಿನ್ನೆಲೆ: ಕಳೆದ ವರ್ಷ ವೀರಶೈವ ಮಹಾಸಭೆ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆಂದು ಮನವಿ ಸಲ್ಲಿಸಲಾಗಿತ್ತು. ಆ ನಂತರ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂಬ ವಾದ ಶುರುವಾಗಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮೂಂಚೂಣಿಗೆ ಬಂದಿತು.
ಅಲ್ಲದೇ ರಾಜ್ಯ ಸರ್ಕಾರ ವೀರಶೈವ ಬಿಟ್ಟು ಲಿಂಗಾಯತವನ್ನು ಪ್ರತ್ಯೇಕ ಧರ್ಮವೆಂದು ಶಿಫಾರಸ್ಸು ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಅಲ್ಪ ಸಂಖ್ಯಾತ ಆಯೋಗದ ಮೂಲಕ ತಜ್ಞರ ಸಮಿತಿ ರಚನೆ ಮಾಡಿ, ವೀರಶೈವ ಮತ್ತು ಲಿಂಗಾಯತ ನಡುವಿನ ಸಾಮ್ಯತೆ ಮತ್ತು ವ್ಯತ್ಯಾಸ ಹಾಗೂ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದ ತಜ್ಞರ ಸಮಿತಿಗೆ ಸೂಚಿಸಿದ್ದರು.
ಪ್ರಮುಖ ಶಿಫಾರಸುಗಳು
– ಲಿಂಗಾಯತ ಹಿಂದೂ ಧರ್ಮ ಅಲ್ಲ
– ವೀರಶೈವ ಧರ್ಮದ ಭಾಗವೂ ಅಲ್ಲ
– ಲಿಂಗಾಯತ ಪ್ರತ್ಯೇಕ ಧರ್ಮ