ಕಡೂರು: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಕಲಬುರ್ಗಿಯಲ್ಲಿ ನಡೆಯಲಿರುವ ಲಿಂಗಾಯತ ರ್ಯಾಲಿ ಪೂರ್ವಭಾವಿಯಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಬಸವದಳ ಒಕ್ಕೂಟದ ಪದಾಧಿಕಾರಿಗಳು ಬೈಕ್ ರ್ಯಾಲಿ ನಡೆಸಿದರು.
ಲಿಂಗಾಯತ ಧರ್ಮ ಮಹಾಸಭಾ ಮತ್ತು ರಾಷ್ಟ್ರೀಯ ಬಸವದಳ ಒಕ್ಕೂಟದ ಮುಖಂಡರಾದ ಎ.ಸಿ.ಲೋಕೇಶಪ್ಪ ಲಿಂಗಾಯತ ಮತ್ತು ಬಾಣೂರು ಚನ್ನಬಸಪ್ಪ ನೇತೃತ್ವದಲ್ಲಿ ಜನಜಾಗೃತಿ ಜಾಥಾ ನಡೆಯಿತು. ತಾಲೂಕಿನ ಎಸ್. ಕೊಪ್ಪಲು, ದೇವನೂರು, ಕಬ್ಬಳಿ, ಆರ್.ಜಿ.ಕೊಪ್ಪಲು, ಬಳ್ಳೇಕೆರೆ, ಗೆದೆಹಳ್ಳಿ ಮಾರ್ಗವಾಗಿ ಕಡೂರು ಪಟ್ಟಣಕ್ಕೆ ಬಂದ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಷ್ಟ್ರೀಯ ಹೆದ್ದಾರಿ 206ರ ಮೂಲಕ ಹಿರೇನಲ್ಲೂರು, ಗಿರಿಯಾಪುರ, ಬಾಸೂರು, ಬಿಸಲೆರೆ ಮಾರ್ಗವಾಗಿ ಸಾಗಿ ಆಡಿಗೆರೆ ಗ್ರಾಮದಲ್ಲಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಬಸವದಳ ಒಕ್ಕೂಟದ ಮುಖಂಡ ಎ.ಸಿ.ಲೋಕೇಶಪ್ಪ ಲಿಂಗಾಯತ್, ಈ ಹೋರಾಟ ಸ್ವತಂತ್ರ ಧರ್ಮಕ್ಕಾಗಿ. ವೀರಶೈವ ಧರ್ಮವು ವೈದಿಕ ಧರ್ಮದ ಅವಿಭಾಜ್ಯ ಅಂಗವಾಗಿದೆ. ಲಿಂಗಾಯತವು ಅಹಿಂದ ಹಾಗೂ ಸ್ವತಂತ್ರ ಧರ್ಮವಾಗಿದೆ ಎಂದರು. ರಾಜ್ಯ ಸರ್ಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಿ ಸೆ.10ರಂದು ಕಲಬುರ್ಗಿಯಲ್ಲಿ ನಡೆಲಿರುವ ಲಿಂಗಾಯತ ಮಹಾ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಜಿಲ್ಲೆಯ ಮಠಾಧೀಶರು ಬೆಂಬಲಿಸದಿರುವುದು ಬೇಸರದ ಸಂಗತಿ. ಉತ್ತರ ಕರ್ನಾಟಕದ ಎಲ್ಲ ಮಠಾಧಿಧೀಶರು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ನಮ್ಮ ಹೋರಾಟಕ್ಕೆ ಸಿದ್ದಗಂಗಾ ಶ್ರೀಗಳು ಮತ್ತು ಸುತ್ತೂರು ಶ್ರೀಗಳು
ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮಾಹಿತಿ ನೀಡಿದರು. ಕಡೂರು ತಾಲೂಕಿನಲ್ಲಿ 10 ರಾಷ್ಟ್ರೀಯ ಬಸವದಳ ಹಾಗೂ ಎರಡು ಬಸವ ಮಂಟಪ ಕಾರ್ಯ ನಿರ್ವಹಿಸುತ್ತಿದೆ. ತಾಲೂಕಿನಾದ್ಯಂತ ಬಸವದಳ ಸಂಘಟನೆ ಉತ್ತಮವಾಗಿದೆ ಎಂದು ತಿಳಿಸಿದರು.
ಜಯಚನ್ನೇಗೌಡ, ಎಸ್.ಕೊಪ್ಪಲು ರಘು, ಉಮೇಶ್, ಮಂಜುಳಾ, ಶಿವಮೂರ್ತಿ, ರತ್ನಮ್ಮ, ಜಮುನಾ ಚಂದ್ರಪ್ಪ, ಸುಧಾ, ಓಂಕಾರಪ್ಪ, ಎಲ್. ಪಾಟೇಲ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.