Advertisement

ಲಿಂಗಾಯತ ಧರ್ಮಕ್ಕೆ ಕೇಂದ್ರ ಸರ್ಕಾರ ನಕಾರ

06:00 AM Dec 11, 2018 | Team Udayavani |

ಬೆಂಗಳೂರು: ಲಿಂಗಾಯತರು ಹಾಗೂ ಬಸವ ತತ್ವದ ಅನುಯಾಯಿ ವೀರಶೈವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತ ರಾಜ್ಯ ಸರ್ಕಾರದ ಪ್ರಸ್ತಾವನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ ಅವರು ಸೋಮವಾರ ಹೈಕೋರ್ಟ್‌ಗೆ ಕೇಂದ್ರ ಸರ್ಕಾರದ ನಿಲುವು ತಿಳಿಸಿದರು.

Advertisement

ಲಿಂಗಾಯತ ಧರ್ಮ ಸ್ಥಾನಮಾನ ಸಂಬಂಧ ತಜ್ಞರ ಸಮಿತಿ ರಚಿಸಿದ್ದ ರಾಜ್ಯ ಅಲ್ಪಸಂಖ್ಯಾತ ಆಯೋಗದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಇನ್ನಿತರೆ ಅರ್ಜಿಗಳ ಬಗ್ಗೆ ಮುಖ್ಯ ನ್ಯಾ. ದಿನೇಶ ಮಹೇಶ್ವರಿ ಹಾಗೂ ನ್ಯಾ. ಎಸ್‌. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ  ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ಬೇಡಿಕೆ ಕುರಿತ ರಾಜ್ಯ ಸರ್ಕಾರದ ಪ್ರಸ್ತಾವನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ಕೇಂದ್ರ ಸರ್ಕಾರವು 2018ರ ನ.13ರಂದು ರಾಜ್ಯ ಸರ್ಕಾರಕ್ಕೆ ರವಾನಿಸಿರುವ ಪತ್ರವನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ನಾವದಗಿಯವರು ಜ್ಞಾಪನಾ ಪತ್ರದ (ಮೆಮೊ) ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು. 

ಭಾರತದಲ್ಲಿ 1871ರಲ್ಲಿ ನಡೆದ ಮೊಟ್ಟ ಮೊದಲ ಅಧಿಕೃತ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂಗಳೆಂದು ವರ್ಗೀಕರಿಸಲಾಗಿದೆ. ಅದೇ ರೀತಿ ಲಿಂಗಾಯತ ಎಂಬುದು ಹಿಂದೂಗಳ ಒಂದು ಧಾರ್ಮಿಕ ಪಂಗಡ ಎಂದು ಪರಿಗಣಿಸಲಾಗಿದೆ. ಹಾಗೆಯೇ, ರಾಜ್ಯ ಸರ್ಕಾರದ ಪ್ರಸ್ತಾವನೆ ಒಪ್ಪಿಕೊಂಡರೆ, ಈಗಾಗಲೇ ಎಸ್ಸಿ ಸೌಲಭ್ಯ ಪಡೆದುಕೊಳ್ಳುತ್ತಿರುವ ಲಿಂಗಾಯತ-ವೀರಶೈವರು ಅದರಿಂದ ವಂಚಿತರಾಗಲಿದ್ದಾರೆ. ಹಾಗಾಗಿ, ಈ ಪ್ರಸ್ತಾವನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಕೇಂದ್ರ ಸರ್ಕಾರ ಬರೆದ ಪತ್ರದಲ್ಲಿ ಹೇಳಲಾಗಿದೆ. ಕೇಂದ್ರ ಸರ್ಕಾರದ ಹೇಳಿಕೆ ಮಾನ್ಯ ಮಾಡಿದ ನ್ಯಾಯಪೀಠ, ಈಗ ಅರ್ಜಿಗಳ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಗಳನ್ನು ವಿಲೇವಾರಿ ಮಾಡಿತು.

ನಾಲ್ಕು ಅರ್ಜಿಗಳು
ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನ ಕುರಿತು ಸರ್ಕಾರದ ಪ್ರಸ್ತಾವನೆಯನ್ನು ಆಕ್ಷೇಪಿಸಿ ಪ್ರತ್ಯೇಕವಾಗಿ ನಾಲ್ಕು ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ನಿವೃತ್ತ ನ್ಯಾ. ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ತಜ್ಞರ ಸಮಿತಿ ರಚನೆ ಪ್ರಶ್ನಿಸಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಲಘಟ್ಟಪುರದ ಶಶಿಧರ ಶಾನುಭೋಗ; ವೀರಶೈವರು ಕೊಟ್ಟ 2 ಸಾವಿರ ಪುಟಗಳ ದಾಖಲೆಗಳನ್ನು ತಜ್ಞರ ಸಮಿತಿ ಪರಿಶೀಲಿಸಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಬಿ.ಎಸ್‌. ನಟರಾಜ್‌; ತಜ್ಞರ ಸಮಿತಿ ನೇಮಕ ಸಂವಿಧಾನ ಬಾಹಿರವೆಂದು ವಕೀಲ ಎನ್‌.ಪಿ. ಅಮೃತೇಶ್‌ ಹಾಗೂ ಹಿಂದೂ ಧರ್ಮ ವಿಭಜಿಸಲು ಸರ್ಕಾರ ಪ್ರಯತ್ನಿಸುತ್ತದೆ ಎಂದು ಆರೋಪಿಸಿ ಎಂ. ಸತೀಶ್‌ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. 

Advertisement

ಕೇಂದ್ರ ಸರ್ಕಾರ ಹೇಳಿದ್ದೇನು?
1. 1871ರಲ್ಲಿ ನಡೆದ ದೇಶದ ಮೊದಲ ಅಧಿಕೃತ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂಗಳೆಂದು ವರ್ಗೀಕರಿಸಲಾಗಿದೆ. ಅದರಂತೆ, ಲಿಂಗಾಯತ ಅನ್ನುವುದು ಹಿಂದೂಗಳ ಧಾರ್ಮಿಕ ಪಂಗಡ ಎಂದು ಆಗಿನಂದಲೂ ಪರಿಗಣಿಸಲಾಗಿದೆ.
2. ಒಂದೊಮ್ಮೆ ಲಿಂಗಾಯತ-ವೀರಶೈವರನ್ನು ಪ್ರತ್ಯೇಕ ಧರ್ಮ ಎಂದು ಪರಿಗಣಿಸಿ, ಹಿಂದೂ ಧರ್ಮಕ್ಕೆ ಹೊರತಾದ ಪ್ರತ್ಯೇಕ ಕೋಡ್‌ ಕೊಟ್ಟರೆ, ಈಗಾಗಲೇ ಎಸ್ಸಿ ಮೀಸಲಾತಿ ಪಡೆಯುತ್ತಿರುವ ಲಿಂಗಾಯತ-ವೀರಶೈವರು ವಂಚಿತರಾಗುತ್ತಾರೆ. ಮೀಸಲಾತಿ ಕುರಿತ ವಿಚಾರವನ್ನು ಕೇಂದ್ರ ಗೃಹ ಸಚಿವಾಲಯದ ಅಭಿಪ್ರಾಯವನ್ನು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲ.
 

Advertisement

Udayavani is now on Telegram. Click here to join our channel and stay updated with the latest news.

Next