Advertisement

ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ: ಹೂಲಗೇರಿ

12:43 PM Apr 29, 2020 | Naveen |

ಲಿಂಗಸುಗೂರು: ಸಾಂಕ್ರಾಮಿಕ ರೋಗಗಳು ಹರಡದಂತೆ ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಡಿ.ಎಸ್‌. ಹೂಲಗೇರಿ ಪಿಡಿಒಗಳಿಗೆ ಸೂಚಿಸಿದರು. ತಾಪಂ ಸಭಾಂಗಣದಲ್ಲಿ ಕೋವಿಡ್ ‌-19 ಮುಂಜಾಗ್ರತಾ ಕ್ರಮಗಳು, ನರೇಗಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್  -19 ಹರಡದಂತೆ ಆರೋಗ್ಯ, ಪೊಲೀಸ್‌, ಪುರಸಭೆ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದರಿಂದ ತಾಲೂಕಿನಲ್ಲಿ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿಲ್ಲ. ಹಾಗೆಂದ ಮಾತ್ರ ಮೈಮರೆತು ಕೂರಂಗಿಲ್ಲ. ಗಡಿ ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಎಲ್ಲಾ ಪಿಡಿಒಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದರು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರ ಸ್ಥಳಗಳಲ್ಲಿ ಸ್ವತ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಚರಂಡಿ ತ್ಯಾಜ್ಯ ವಿಲೇವಾರಿ ಮಾಡಬೇಕು. ಇದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗುತ್ತಿದೆ. ಈ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬೇಡಿ ಎಂದು ಸೂಚಿಸಿದರು. ನೀಲೋಗಲ್‌ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಒಂದು ವರ್ಷ ಬೇಕಾ?. ಸರ್ಕಾರದ ದುಡ್ಡು ಸುಮ್ಮನೆ ವ್ಯಯ ಮಾಡ್ತೀರಿ. ನೀರಿನ ಸಮಸ್ಯೆ ನಿಮಗೆ ಸಮಸ್ಯೆಯಾಗಿ ಕಾಣೋದಿಲ್ವಾ ಹೇಗೆ? ಎಂದು ಗೆಜ್ಜಲಗಟ್ಟಾ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಬೇಸಿಗೆ ಸಮಯವಾಗಿದ್ದರಿಂದ ಸಬೂಬು ಹೇಳದೇ ಕುಡಿವ ನೀರಿನ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು ಎಂದು ಸೂಚಿಸಿದರು. ಗ್ರಾಪಂ ಮಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪ್ರತಿಯೊಬ್ಬ ಪಿಡಿಒ ಗಮನ ಹರಿಸಬೇಕು. ಕಾಮಗಾರಿ ಗುಣಮಟ್ಟದಿಂದ ನಡೆಯುವಂತೆ ನೋಡಿಕೊಳ್ಳುವುದು ಪಿಡಿಒಗಳ ಜವಾಬ್ದಾರಿ. ಇದು ನಮಗೆ ಸಂಬಂಧವೇ ಇಲ್ಲವೆಂದು ಸುಮ್ಮನೆ ಇರುವುದು ಸರಿಯಲ್ಲ ಎಂದು ಎಚ್ಚರಿಸಿದರು. ತಾಪಂ ಅಧ್ಯಕ್ಷೆ ಶ್ವೇತಾ ಪಾಟೀಲ, ತಾಪಂ ಇಒ ಪಂಪಾಪತಿ ಹಿರೇಮಠ ಹಾಗೂ ಇನ್ನಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next