ಶಿವರಾಜ ಕೆಂಭಾವಿ
ಲಿಂಗಸುಗೂರು: ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಣನೀಯವಾಗಿ ಕುಸಿದ ಪರಿಣಾಮ ಫಲಿತಾಂಶ ಹೆಚ್ಚಳಕ್ಕೆ ಪಣ ತೊಟ್ಟಿರುವ ಶಿಕ್ಷಣ ಇಲಾಖೆ ಈ ಬಾರಿ ಅನೇಕ ಕಲಿಕಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.
ತಾಲೂಕಿನಲ್ಲಿ 43 ಸರ್ಕಾರಿ ಪ್ರೌಢಶಾಲೆಗಳಿವೆ. 2018ರ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.67, 2019ರಲ್ಲಿ ಶೇ.69.12 ಆಗಿತ್ತು. ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ ರಾಜ್ಯದ ಫಲಿತಾಂಶ ಸರಾಸರಿಗೆ ಹೋಲಿಸಿದರೆ ತಾಲೂಕಿನ ಫಲಿತಾಂಶ ತೀವ್ರ ಕಡಿಮೆಯಾಗಿದೆ. ಶಿಕ್ಷಣ ಇಲಾಖೆ ಪ್ರಸಕ್ತ ಸಾಲಿನಿಂದ ನಮ್ಮ ಚಿತ್ತ ನೂರರತ್ತ ಎಂಬ ಘೋಷವಾಕ್ಯದೊಂದಿಗೆ ಫಲಿತಾಂಶ ಹೆಚ್ಚಳಕ್ಕೆ ಅನೇಕ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಿದೆ.
ಕಳೆದ ನವೆಂಬರ್ 25ರಿಂದ 2020ರ ಫೆಬ್ರವರಿ 15ರವರೆಗೆ 12 ವಾರಗಳ ಕಾಲ ಸೋಮುವಾರ, ಮಂಗಳವಾರ, ಬುಧವಾರ, ಗುರುವಾರ ಗಣಿತ, ಇಂಗ್ಲಿಷ್, ವಿಜ್ಞಾನ, ಸಮಾಜ ವಿಷಯಗಳಿಗೆ ಬೆಳಗ್ಗೆ 8:45 ರಿಂದ 9:45ರವರೆಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮಕ್ಕಳ ಹಾಜರಿ, ಗೈರು ಹಾಜರಿ ಮಾಹಿತಿಯನ್ನು ನೋಡೆಲ್ ಅಧಿಕಾರಿಗಳಿಗೆ ನೀಡಬೇಕು. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬರೆದ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಹಿತಿಯನ್ನು ಸ್ಪ್ರೆಡ್ ಶೀಟ್‌ನಲ್ಲಿ ಭರ್ತಿ ಮಾಡಬೇಕು. ಪರೀಕ್ಷೆ ನಡೆಸಿದ ಭಾವಚಿತ್ರಗಳು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮಾಹಿತಿ ಜೊತೆಗೆ ಪರೀಕ್ಷೆ ಹಮ್ಮಿಕೊಂಡ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ಶಾಲೆಯ ಹೆಸರಿನೊಂದಿಗೆ ವ್ಯಾಟ್ಸ್ಯಾಪ್ ಗ್ರೂಪ್‌ಗೆ ಹಾಕಲು ಸೂಚನೆ ನೀಡಲಾಗಿದೆ.
ಘಟಕ ಪರೀಕ್ಷೆಯ ಮೌಲ್ಯಮಾಪನ ಅಂದೇ ನಡೆಸಿ ಫಲಿತಾಂಶವನ್ನು ಗೂಗಲ್ ಸ್ಪ್ರೆಡ್‌ಶೀಟ್‌ನಲ್ಲಿ ಹಾಕಬೇಕು. ಹೀಗೆ ತಾಲೂಕು, ಜಿಲ್ಲಾ ಹಂತದಲ್ಲಿ ಕ್ರೂಢೀಕರಣವಾದ ಫಲಿತಾಂಶ ಆಧರಿಸಿ ಡಯಟ್ ಮೇಲ್ವಿಚಾರಣ ಅಧಿಕಾರಿಗಳು ಕಲಿಕೆಯಲ್ಲಿ ಹಿಂದುಳಿದ ಶಾಲೆಗಳಿಗೆ ಭೇಟಿ ನೀಡಿ ಸಲಹೆ, ಸೂಚನೆಗಳನ್ನು ನೀಡುತ್ತಾರೆ.
ಕ್ರಿಯಾಯೋಜನೆ: ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಗುರಿ ಸಾಧಿಸುವ ಬೆನ್ನಟ್ಟಿರುವ ಶಿಕ್ಷಣ ಇಲಾಖೆ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಕ್ರಿಯಾಯೋಜನೆ ರೂಪಿಸುವುದು, ವಿಷಯವಾರು ವೇದಿಕೆ ಪದಾಧಿಕಾರಿಗಳ ಸಭೆ ಕರೆದು ವಿಷಯವಾರು ಫಲಿತಾಂಶ ಕುರಿತು ಚರ್ಚಿಸಿ ಕ್ಲಿಷ್ಟ ವಿಷಯಗಳನ್ನು ಚರ್ಚಿಸುವುದು. ದತ್ತಾಂಶ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು. ಘಟಕ ಪರೀಕ್ಷೆಗಳ ಮೌಲ್ಯಮಾಪನ ಮಾಡಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು. ಅಂತಹ ಮಕ್ಕಳ ಗುಂಪು ರಚಿಸಿ ವಿಶೇಷ ಭೋದನೆ ಮಾಡುವುದು. ತಾಲೂಕು ಮಟ್ಟದ ವಿಷಯವಾರು ಕ್ಲಿಷ್ಟ ವಿಷಯಗಳ ಕುರಿತು ಸಂವಾದ ನಡೆಸಲು ಫೋನ್-ಇನ್ ಕಾರ್ಯಕ್ರಮ ಆಯೋಜಿಸಿ ಸಂಪನ್ಮೂಲ ತಂಡದಿಂದ ಉತ್ತರಿಸುವುದು. ಸರಣಿ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಿ ವಿಶ್ಲೇಷಣೆ ನಡೆಸುವುದು. ಮುಖ್ಯಗುರುಗಳು ಸಭೆ ನಡೆಸಿ ಗೈರಾಗುವ ವಿದ್ಯಾರ್ಥಿಗಳ ಪೋಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸುವುದು. ಪರೀಕ್ಷಾ ಭಯವನ್ನು ಹೋಗಲಾಡಿಸಲು ಕಾರ್ಯಕ್ರಮ ಆಯೋಜಿಸುವ ಕ್ರಿಯಾ ಯೋಜನೆಗಳನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ.
ಇದಲ್ಲದೆ ವಿದ್ಯಾರ್ಥಿಗಳಲ್ಲಿ ಭಾಷಾ ಕೌಶಲ್ಯದ ಬೆಳವಣಿಗೆಗೆ ಹಾಗೂ ಪಠ್ಯಪುಸ್ತಕಗಳ ಓದಿಗೆ ಒತ್ತು ಕೊಡುವುದು. ಕಲಿಕಾ ಪೂರಕ ಚಟುವಟಿಕೆಗಳಿಗೆ ಆದ್ಯತೆ, ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವುದು ಸೇರಿದಂತೆ 30 ಅಂಶಗಳನ್ನು ಕ್ರಿಯಾ ಯೋಜನೆಗಳಲ್ಲಿ ಸೇರಿಸಲಾಗಿದೆ.
ನಮ್ಮ ಚಿತ್ತ ನೂರರತ್ತ ಎಂಬ ಘೋಷಣೆಯೊಂದಿಗೆ ಈ ಬಾರಿ ಎಸ್ ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಒತ್ತಡವಿಲ್ಲದೆ ಬೋಧನೆ ಮಾಡಿ ಫಲಿತಾಂಶ ಹೆಚ್ಚಳಕ್ಕೆ ಮುಂದಾಗಿದ್ದೇವೆ.
.
ಅಶೋಕಕುಮಾರ ಸಿಂದಗಿ,
ಕ್ಷೇತ್ರ ಶಿಕ್ಷಣಾಧಿಕಾರಿ