Advertisement

ಶಾ ಮನವಿ ತಿರಸ್ಕಾರಕ್ಕೆ ಐಟಿ ದಾಳಿ

06:00 AM Jun 01, 2018 | Team Udayavani |

ರಾಮನಗರ: ಗುಜರಾತ್‌ ರಾಜ್ಯಸಭಾ ಚುನಾವಣೆ ಸಮಯದಲ್ಲಿ ಇಲ್ಲಿನ ಬಿಡದಿ ಬಳಿಯ ಈಗಲ್ಟನ್‌ ರೆಸಾರ್ಟ್‌ನಲ್ಲಿ ಅಲ್ಲಿನ ಕಾಂಗ್ರೆಸ್‌ ಶಾಸಕರು ತಂಗಿದ್ದ ವೇಳೆ ನಾಲ್ವರು ಶಾಸಕರನ್ನು ಬಿಟ್ಟು ಕೊಡುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಕಾಂಗ್ರೆಸ್‌ ನಾಯಕ ಡಿ.ಕೆ.ಶಿವಕುಮಾರ್‌ ಅವರಿಗೆ ಫೋನ್‌ ಮೂಲಕ ಮನವಿ ಮಾಡಿದ್ದರು. ಆದರೆ ಡಿ.ಕೆ. ಶಿವಕುಮಾರ್‌ ಅವರು ಮನವಿಯನ್ನು ನಯವಾಗಿ ತಿರಸ್ಕರಿಸಿದ್ದರು. ಹೀಗಾಗಿ ಮಾರನೇ ದಿನವೇ ಡಿಕೆಶಿ ಮನೆ ಮೇಲೆ ಐಟಿ ರೇಡ್‌ ಆಗಿತ್ತು ಎಂದು ಎಂಎಲ್‌ಸಿ ಸಿ.ಎಂ.ಲಿಂಗಪ್ಪ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿದೆ ಎಂದು ದೂರಿದರು. ಗುಜರಾತ್‌ನಲ್ಲಿ ರಾಜ್ಯ ಸಭಾ ಚುನಾವಣೆಯ ವೇಳೆ ಅಲ್ಲಿನ 42 ಕಾಂಗ್ರೆಸ್‌ ಶಾಸಕರು ಸ್ವಯಂ ರಕ್ಷಣೆಗೆ ಈಗಲ್ಟನ್‌ ರೆಸಾರ್ಟ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದರು. 

ಡಿ.ಕೆ.ಶಿವಕುಮಾರ್‌ ಗುಜರಾತ್‌ ಶಾಸಕರ ರಕ್ಷಣೆಗೆ ನಿಂತಿದ್ದರು. ಈ ವೇಳೆ ಒಂದು ದಿನ ರಾತ್ರಿ ಅಮಿತ್‌ ಶಾ ಫೋನ್‌ ಮೂಲಕ ಡಿಕೆಶಿ ಅವರನ್ನು ಸಂಪರ್ಕಿಸಿ 38 ಶಾಸಕರನ್ನು ನೀವೇ ಇಟ್ಕೊಳ್ಳಿ, ನಾಲ್ವರು ಶಾಸಕರನ್ನು ಮಾತ್ರ ನಮಗೆ ಕೊಡಿ, ಇದಕ್ಕೆ ನಿಮಗೆ ನಮ್ಮ ಕಡೆಯಿಂದ ದೊಡ್ಡ ರೀತಿಯಲ್ಲಿ ಸಹಕಾರ ಸಿಗಲಿದೆ ಎಂದಿದ್ದರು. ಆದರೆ ಡಿ.ಕೆ. ಶಿವಕುಮಾರ್‌ ತಾವು ಹುಟ್ಟು ಕಾಂಗ್ರೆಸ್ಸಿಗರಾಗಿದ್ದು, ದ್ರೋಹ ಬಗೆಯುವುದಿಲ್ಲ ಎಂದು ಶಾ ಮನವಿಯನ್ನು ನಯವಾಗಿ ತಿರಸ್ಕರಿಸಿದ್ದರು ಎಂದು ತಿಳಿಸಿದರು.

ಅಮಿತ್‌ ಶಾ ನಡೆಸಿದ ಸಂಭಾಷಣೆ ವೇಳೆ ತಾವು ಡಿಕೆಶಿ ಅವರೊಂದಿಗೆ ಇದ್ದೆ. ಯಾವುದೇ ಕಾರಣಕ್ಕೂ ಈ ವಿಚಾರದ ಬಗ್ಗೆ ಬಾಯಿಬಿಡುವುದು ಬೇಡ ಎಂದು ಡಿಕೆಶಿ ಹೇಳಿದ್ದರು. ಹೀಗಾಗಿ ತಾವು ಸುಮ್ಮನಿದ್ದೆ. ಆದರೆ ಮತ್ತೆ ದ್ವೇಷ ರಾಜಕಾರಣದ ಘಟನೆಗಳು ನಡೆಯುತ್ತಿರುವುದರಿಂದ ಶಾ ಅವರ ಸಂಭಾಷಣೆಯ ವಿಷಯ ಹೊರಗೆಡುವುತ್ತಿರುವುದಾಗಿ ಹೇಳಿದರು.

ಕೇಂದ್ರ ಸರ್ಕಾರ ಸಾಂಸ್ಥಿಕ
ಸಂಸ್ಥೆಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಿದೆ. ಸಿಬಿಐ, ಐಟಿ, ಇಡಿ ಸಂಸ್ಥೆಗಳನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್‌ ಡಿಕೆ ಸಹೋದರರ ಬೆನ್ನಿಗೆ ನಿಲ್ಲುತ್ತದೆ. 
● ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

Advertisement

ಕೇಂದ್ರ ಸರ್ಕಾರ ಕಾಂಗ್ರೆಸ್‌ ನಾಯಕರ ಮನೆಗಳ ಮೇಲೆ ಉದ್ದೇಶಪೂರಕವಾಗಿ ಐಟಿ, ಸಿಬಿಐ ದಾಳಿ ಮಾಡಿಸುತ್ತಿದೆ. ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದು ಸಂವಿಧಾನ ವಿರೋಧಿ ನೀತಿ.
● ಕೆ.ಸಿ. ವೇಣುಗೋಪಾಲ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ 

ಕೇಂದ್ರ ಸರ್ಕಾರಿ ಏಜೆನ್ಸಿಗಳನ್ನು ದುರ್ಬಳಕೆ ಮಾಡಲಾಗುತ್ತಿದೆ. ಶಿವಕುಮಾರ್‌ ಅವರನ್ನು ಬಿಜೆಪಿಗೆ ಸೆಳೆಯಲು ಪ್ರಯತ್ನ ನಡೆಸಿದರು. ಆದರೆ, ಅವರು ಕಾಂಗ್ರೆಸ್‌ ಪರ ಗಟ್ಟಿಯಾಗಿ ನಿಂತಿದ್ದರಿಂದ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ. 
● ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

ಕೇಂದ್ರ ಸರ್ಕಾರ ಸಿಬಿಐ, ಐಟಿ, ಇಡಿ ಇಲಾಖೆಗಳನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್‌ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಪ್ರತಿಪಕ್ಷಗಳ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಕೇಂದ್ರದ ಈ ನೀತಿಯನ್ನು ಖಂಡಿಸುತ್ತೇವೆ.
● ಯು.ಟಿ. ಖಾದರ್‌, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next