Advertisement
ಮೈಸೂರು40 ವರ್ಷ ಬಳಿಕ ತುಂಬಿದ ಲಿಂಗಾಂಬುದಿ ಕೆರೆ
ಮೈಸೂರಿನ ಪ್ರಮುಖ ಕೆರೆಯಾಗಿರುವ ಲಿಂಗಾಂಬುದಿ ಕೆರೆ 40 ವರ್ಷಗಳ ಬಳಿಕ ಭರ್ತಿಯಾಗಿ ಕೋಡಿ ಮೂಲಕ ನೀರು ಹರಿಯುತ್ತಿದೆ. ಹಾಗೆಯೇ ನಗರದ ಕುಕ್ಕರಹಳ್ಳಿ ಕೆರೆ, ಮರಿಯ ಪ್ಪನ ಕೆರೆ, ಕಾರಂಜಿ ಕೆರೆ, ಹಿನಕಲ್ ಕೆರೆ, ಹೆಬ್ಟಾಳ್ ಕೆರೆ, ಬೊಮ್ಮನಹಳ್ಳಿ ಕೆರೆ, ತಿಪ್ಪಯ್ಯನ ಕೆರೆ ಭರ್ತಿಯಾಗಿವೆ. ಇಷ್ಟು ವರ್ಷ ಅರ್ಧದಷ್ಟೇ ತುಂಬಿರುತ್ತಿದ್ದ ಈ ಕೆರೆಗಳು, ಕಳೆದೊಂದು ತಿಂಗಳಿನಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ಸಂಪೂರ್ಣವಾಗಿ ತುಂಬಿವೆ. ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ 3,100ಕ್ಕೂ ಹೆಚ್ಚು ಕೆರೆ-ಕಟ್ಟೆಗಳಿದ್ದು, ಇವುಗಳಲ್ಲಿ ಶೇ.80 ಕೆರೆಗಳು ತುಂಬಿ ಹರಿಯುತ್ತಿವೆ.
15 ವರ್ಷದ ಬಳಿಕ ತುಂಬಿದ ಕೆರೆಗಳು
ಹದಿನೈದು ವರ್ಷಗಳ ಅನಂತರ ಕೋಲಾರ ಜಿಲ್ಲೆಯ ಎಲ್ಲ ಕೆರೆಗಳು ತುಂಬಿ ಕೋಡಿ ಹರಿಯುತ್ತಿದ್ದು, ಜಿಲ್ಲೆಯಾದ್ಯಂತ ಮಲೆನಾಡಿನ ವಾತಾವರಣ ನಿರ್ಮಾಣವಾಗಿದೆ. ಹದಿನೇಳು ವರ್ಷಗಳ ಹಿಂದೆ ತುಂಬಿ ಹರಿದಿದ್ದ ಜಿಲ್ಲೆಯ ಏಕೈಕ ಮಾರ್ಕಂಡೇಯ ಜಲಾಶಯ ಈ ಬಾರಿ ತುಂಬಿ ಕೋಡಿ ಹರಿ ಯುವ ಮೂಲಕ ರೈತಾಪಿ ವರ್ಗ ವನ್ನು ಸಂತಸದಲ್ಲಿ ಮುಳುಗಿಸಿದೆ. ಈ ಬಾರಿ ಭರ್ಜರಿ ಮಳೆಗೆ 124 ಅಡಿಗಳ ಯರಗೋಳು ಜಲಾಶಯದಲ್ಲಿ 100 ಅಡಿಗಳಷ್ಟು ನೀರು ನಿಂತಿದೆ. ಕೋಲಾರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ 138 ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಸೇರುವ 2,328 ಕೆರೆಗಳಿದ್ದು, ಒಟ್ಟು 2,466 ಕೆರೆಗಳಲ್ಲಿ ಎಲ್ಲ ಕೆರೆಗಳು ತುಂಬಿ ತುಳುಕುತ್ತಿವೆ. ಮಂಡ್ಯ
580 ಕೆರೆಗಳು ಭರ್ತಿ
ಜಿಲ್ಲೆಯ ಜಿ.ಪಂ. ವ್ಯಾಪ್ತಿಗೆ ಬರುವ 580 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಮಂಡ್ಯ ಹಾಗೂ ಪಾಂಡವಪುರ ವಿಭಾಗದ 40 ಕೆರೆಗಳು ಭರ್ತಿಯಾಗುತ್ತಿವೆ. ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಗೆ 209 ಕೆರೆಗಳು ಬರಲಿದ್ದು, ಎಲ್ಲವೂ ಶೇ.100ರಷ್ಟು ತುಂಬಿವೆ. ಮಳವಳ್ಳಿಯಲ್ಲಿಯೇ 78 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಸುಮಾರು 15-20 ವರ್ಷಗಳಿಂದ ತುಂಬದ ಕೆರೆಗಳು ಈ ಬಾರಿ ಭರ್ತಿಯಾಗಿ ಕೋಡಿ ಬೀಳುವ ಮೂಲಕ ದಾಖಲೆ ನಿರ್ಮಿಸಿವೆ. ಮಂಡ್ಯ ತಾಲೂಕಿನ ಕಸಲಗೆರೆ, ರಾಗಿಮುದ್ದನಹಳ್ಳಿ, ಯಲಿಯೂರು, ಎಲೆಚಾಕನಹಳ್ಳಿ, ದುದ್ದ, ಗೋಪಾಲಪುರ, ಮಳವಳ್ಳಿಯ ದೊಡ್ಡಕೆರೆ, ಬೆಳಕವಾಡಿ, ಮಾರೇಹಳ್ಳಿ ಸೇರಿದಂತೆ ಕೆ.ಆರ್.ಪೇಟೆ, ಪಾಂಡವಪುರ, ಮದ್ದೂರಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಕೋಡಿ ಬಿದ್ದಿವೆ. ಅಲ್ಲದೆ, ಕಳೆದ 15-20 ವರ್ಷಗಳಿಂದ ತುಂಬದ ಮಂಡ್ಯ ತಾಲೂಕಿನ ಯಲಿಯೂರು, ದುದ್ದ ಕೆರೆಗಳು ಸೇರಿದಂತೆ ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿವೆ. ಹೇಮಾವತಿ ಜಲಾಶಯ ವ್ಯಾಪ್ತಿಗೆ ಜಿಲ್ಲೆಯ 94 ಕೆರೆಗಳು ಬರಲಿದ್ದು, ಎಲ್ಲ ಕೆರೆಗಳು ಭರ್ತಿಯಾಗಿದ್ದು, ಕೋಡಿ ಬಿದ್ದಿವೆ.
Related Articles
Advertisement
ಚಿಕ್ಕಮಗಳೂರುಕಡೂರಿನಲ್ಲೂ ತುಂಬಿದ ಕೆರೆಗಳು
ಬರಪೀಡಿತ ತಾಲೂಕು ಎಂಬ ಹಣೆಪಟ್ಟಿ ಹೊತ್ತಿರುವ ಕಡೂರು ತಾಲೂಕಿನ ಬಹುತೇಕ ಕೆರೆಗಳು ತುಂಬಿದ್ದು, ಅನೇಕ ವರ್ಷಗಳಿಂದ ಕೆರೆ ತುಂಬದೆ ಇದ್ದ ಕೆರೆಗಳು ಈ ಬಾರಿ ತುಂಬಿ ಕೋಡಿ ಬಿದ್ದಿವೆ. ಕಡೂರು ತಾಲೂಕು ಯಳ್ಳಂಬಳಸೆ ಕೆರೆ ಕೋಡಿ ಬಿದ್ದಿದೆ. ತಾಲೂಕಿನ ಸಿಂಗಟಗೆರೆ ಕೆರೆ ಕಳೆದ ಅನೇಕ ವರ್ಷಗಳ ಅನಂತರ ಈ ವರ್ಷ ಕೋಡಿ ಬಿದ್ದಿದೆ. ಹಾಗೆಯೇ ಚಿಕ್ಕಪಟ್ಟಣ ಕೆರೆ ಮತ್ತು ಬಿಸಲೆಹಳ್ಳಿ ಕೆರೆಗಳು ಅನೇಕ ವರ್ಷಗಳಿಂದ ತುಂಬಿರಲೇ ಇಲ್ಲ. ಈ ವರ್ಷ ಈ ಕೆರೆಗಳು ಕೋಡಿ ಬಿದ್ದಿವೆ. ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ಗ್ರಾಮದಲ್ಲಿರುವ ಬುಕ್ಕರಾಯನಕೆರೆ ಕಳೆದ 8-10 ವರ್ಷಗಳಿಂದ ತುಂಬಿ ಕೋಡಿ ಬಿದ್ದಿರಲಿಲ್ಲ, ಈ ವರ್ಷ ಸುರಿದ ಮಳೆಗೆ ಕೆರೆಕೋಡಿ ಬಿದ್ದಿದೆ. ರಾಮನಗರ
ದಶಕದ ಬಳಿಕ ಕೋಡಿ ಹರಿದ ಕೆರೆ
ಜಿಲ್ಲೆಯಲ್ಲಿ ಅನೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ನರೇಗಾ ಯೋಜನೆಯಡಿ ನಿರ್ಮಾಣವಾಗಿರುವ 2,000ಕ್ಕೂ ಹೆಚ್ಚು ಚೆಕ್ ಡ್ಯಾಂಗಳು ಸಹ ತುಂಬಿವೆ. ಜಿಲ್ಲೆಯ ಎಲ್ಲ ಜಲಾಶಯಗಳು ತುಂಬಿವೆ. ರಾಮನಗರ ತಾಲೂಕಿನ ನಲ್ಲಿಗುಡ್ಡೆ ಕೆರೆ, ಕೆರೆಮೇಗಲದೊಡ್ಡಿ ಕೆರೆ, ರಂಗರಾಯರದೊಡ್ಡಿ ಕೆರೆ, ಅವ್ವೆರಹಳ್ಳಿ ಹೊಸಕೆರೆ, ಹುಣಸನಹಳ್ಳಿ ಕೆರೆ, ತಮ್ಮನಾಯ್ಕನಹಳ್ಳಿ ಕೆರೆಗಳು ತುಂಬಿವೆ. ಕನಕಪುರ ತಾಲೂಕಿನಲ್ಲಿ ಮಾವತ್ತೂರು ಕೆರೆ, ಕೊಟ್ಟಗಾಳು ಕೆರೆ, ಕಚುವನಹಳ್ಳಿ ಕೆರೆ, ಸಾತನೂರು ಕೆರೆ, ಹೊಸ ಕಬ್ಟಾಳು ಕೆರೆಗಳು ಕೋಡಿ ಹರಿದಿವೆ. ಚನ್ನಪಟ್ಟಣ ತಾಲೂಕಿನಲ್ಲಿ ಕೆರೆ, ಮತ್ತಿಕೆರೆ ಕೆರೆ, ವಡಕೆಹೊಸಳ್ಳಿ ಕೆರೆ, ಅಕ್ಕೂರು ಕೆರೆ, ಸೋಗಾಲ ಕೆರೆ, ಗರಕಳ್ಳಿ ಕೆರೆ, ಬೇವೂರು ಕೆರೆ, ಚಕ್ಕಲೂರು ಕೆರೆ, ಗೋವಿಂದಹಳ್ಳಿ ಕೆರೆ, ಮೆಣಸಿಗನ ಹಳ್ಳಿ ಕೆರೆ, ಬಿ.ವಿ.ಹಳ್ಳಿ ಕೆರೆಗಳು ತುಂಬಿವೆ. ಮಾಗಡಿ ತಾಲೂಕಿನಲ್ಲಿ ಶ್ರೀಗಿರಿ ಕೆರೆ, ಮಲ್ಲಪ್ಪನಹಳ್ಳಿ ಕೆರೆ, ಕೆಂಚನಪುರ ಕೆರೆ, ನಾರಸಂದ್ರ ಕೆರೆಗಳು ತುಂಬಿ ಕೋಡಿ ಹರಿದಿವೆ. ಚಾಮರಾಜನಗರ
10 ವರ್ಷದ ಬಳಿಕ ಭರ್ತಿ
ಜಲಾನಯನ ಪ್ರದೇಶದಲ್ಲಿ ಸತತ ಮಳೆ ಬಿದ್ದ ಕಾರಣ, ತಾಲೂಕಿನ ಸುವರ್ಣಾವತಿ ಹಾಗೂ ಚಿಕ್ಕಹೊಳೆ ಅವಳಿ ಜಲಾಶಯ 10 ವರ್ಷಗಳ ಅನಂತರ ಭರ್ತಿಯಾಗಿವೆ. ಸುವರ್ಣಾವತಿ ಜಲಾಶಯ ದಿಂದ ಅನತಿ ದೂರದಲ್ಲಿರುವ ತಾಲೂಕಿನ ಚಿಕ್ಕಹೊಳೆ ಜಲಾಶಯವೂ ರವಿವಾರ ಭರ್ತಿಯಾಗಿದೆ. ಇದಲ್ಲದೇ ತಾಲೂಕಿನ ಹೊಂಗನೂರು ಹಿರಿಕೆರೆ, ಹೊಮ್ಮ ಕೆರೆ, ನಾಗವಳ್ಳಿ ಕೆರೆ, ಹೊಂಡರಬಾಳು ಕೆರೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಹಿರಿಕೆರೆಗಳು ಅನೇಕ ವರ್ಷಗಳ ಅನಂತರ ಭರ್ತಿಯಾಗಿವೆ. ಚಿಕ್ಕಬಳ್ಳಾಪುರ
ಬರ ನೀಗಿಸಿದ ಮಳೆ
ಪ್ರಸ್ತುತ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಬರುವ ಬಹುತೇಕ ಕೆರೆ-ಕುಂಟೆಗಳು ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಅದರಲ್ಲೂ ವಿಶೇಷವಾಗಿ ಜಿಲ್ಲಾಡಳಿತ ಭವನದ ಎದುರಿನಲ್ಲಿರುವ ಪಟ್ರೇನಹಳ್ಳಿಯ ಅಮಾನಿ ಗೋಪಾಲಕೃಷ್ಣ ಕೆರೆ ಸುಮಾರು 40 ವರ್ಷಗಳ ಅನಂತರ ಕೋಡಿ ಹರಿಯುತ್ತಿದೆ. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ, ಮುಷ್ಟೂರು, ದೊಡ್ಡ ಮರಳಿ, ಶಿಡ್ಲಘಟ್ಟ ತಾಲೂಕಿನ ಶ್ರೀನಿವಾಸ ಸಾಗರ, ಬೆಳ್ಳೂಟಿ ಕೆರೆ, ತಲಕಾಯಲಬೆಟ್ಟದ ವೆಂಕಟೇಶ್ವರ ಸಾಗರ, ತಿಮ್ಮನಾಯಕನ ಹಳ್ಳಿಯ ಗ್ರಾ.ಪಂ.ನ ಅಗ್ರಹಾರ ಕೆರೆ ಕೋಡಿ ಹರಿದು(ಕಟ್ಟೆ ಕಿತ್ತುಹೋಗಿದೆ), ಗುಡಿಬಂಡೆ ತಾಲೂಕಿನಲ್ಲಿ ಅಮಾನಿಬೈರಸಾಗರ, ಬಾಗೇಪಲ್ಲಿ ತಾಲೂಕಿನ ಗೂಳೂರು ಕೆರೆ 22 ವರ್ಷ, ಬಿಳ್ಳೂರು ಕೆರೆ 10 ವರ್ಷ ಅನಂತರ ಹಾಗೂ ಇನ್ನಿತರೆ ಕೆರೆಗಳು ಸುಮಾರು ವರ್ಷಗಳ ಅನಂತರ ಕೋಡಿ ಹರಿದಿದೆ. ಚಿಂತಾಮಣಿ ತಾಲೂಕಿನಲ್ಲಿ 20 ವರ್ಷ ಅನಂತರ ಊಲವಾಡಿ, ನಾಗದೇನಹಳ್ಳಿ ಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಚಿತ್ರದುರ್ಗ
ವಿವಿ ಸಾಗರದಲ್ಲಿ ದಾಖಲೆ ಪ್ರಮಾಣದ ನೀರು ಸಂಗ್ರಹ
ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯ ಜೀವನಾಡಿ, ಬಯಲುಸೀಮೆಯ ಏಕೈಕ ಜಲಾಶಯ ವಾಣಿವಿಲಾಸ ಸಾಗರದಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಬರೋಬ್ಬರಿ 21 ವರ್ಷಗಳ ಬಳಿಕ 122 ಅಡಿ ದಾಟಿರುವುದು ವಿಶೇಷ. ಇದಲ್ಲದೆ ಚಿತ್ರದುರ್ಗದ ಚಂದ್ರವಳ್ಳಿ ಕೆರೆ ಸೇರಿದಂತೆ ಜಿಲ್ಲೆಯ ಹಲವು ಕೆರೆಗಳು ಈ ಬಾರಿ ತುಂಬಿವೆ. 2000ನೇ ಸಾಲಿನಲ್ಲಿ 122 ಅಡಿ ತಲುಪಿದ್ದ ವಿವಿ ಸಾಗರ ಸರಿಯಾಗಿ 21 ವರ್ಷಕ್ಕೆ ಮತ್ತೆ 122 ಅಡಿ ದಾಟಿದೆ. ಮೂರು ವರ್ಷಗಳ ಹಿಂದಷ್ಟೇ 60 ಅಡಿ ಡೆಡ್ ಸ್ಟೋರೇಜ್ ಹಂತ ತಲುಪಿದ್ದ ವಿವಿ ಸಾಗರಕ್ಕೆ ಭದ್ರಾ ಜಲಾಶಯದಿಂದ ವೇದಾವತಿ ನದಿ ಮೂಲಕ ನೀರು ಹರಿಸಲು ಪ್ರಾರಂಭಿಸಲಾಯಿತು. ಪರಿಣಾಮ ಕ್ರಮೇಣ ನೀರು ಹೆಚ್ಚಾಗುತ್ತಲೇ ಬಂದಿದೆ. ದಾವಣಗೆರೆ
38ಕ್ಕೂ ಹೆಚ್ಚು ಕೆರೆ ಭರ್ತಿ
ಕಳೆದ 60 ವರ್ಷಗಳಲ್ಲೇ ಸುರಿದ ದಾಖಲೆ ಮಳೆಯಿಂದ 38ಕ್ಕೂ ಹೆಚ್ಚು ಕೆರೆಗಳು ತುಂಬಿ ಕೋಡಿ ಬಿದ್ದಿವೆ. ವಿಶೇಷವೆಂದರೆ ದಕ್ಷಿಣ ಭಾರತದ 2ನೇ ಅತೀ ದೊಡ್ಡ, ಐತಿಹಾಸಿಕ ಹಿನ್ನೆಲೆಯ ಸೂಳೆಕೆರೆ ಕಳೆದ 10 ವರ್ಷದಲ್ಲಿ ಈ ಬಾರಿ ಕೆಲವೇ ದಿನಗಳ ಅಂತರದಲ್ಲಿ ಎರಡು ಬಾರಿ ಕೋಡಿ ಬಿದ್ದಿದೆ. ಚನ್ನಗಿರಿ ತಾಲೂಕಿನ ವಡ್ನಾಳ್ ಕೆರೆ ಸಹ 10 ವರ್ಷದ ಅನಂತರ ಭರ್ತಿಯಾಗಿದೆ. ಬೆಂಕಿಕೆರೆ ಮತ್ತು ಹೊಸಕೆರೆ ಗ್ರಾಮಗಳ ಕೆರೆಗಳು ಸಹ ತುಂಬಿವೆ. ದಾವಣಗೆರೆ ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾದ ಕೊಡನೂರು ಕೆರೆ 10 ವರ್ಷದ ಬಳಿಕ ತುಂಬಿದೆ. ಮಾಯಕೊಂಡ, ಆನಗೋಡು, ಹುಚ್ಚವ್ವನಹಳ್ಳಿ, ಸುಲ್ತಾನಿಪುರ ಕೆರೆಗಳು ತುಂಬಿವೆ. ಹೊನ್ನಾಳಿ ತಾಲೂಕಿನ ಮಾದನಬಾವಿ, ಹೊಸಕೆರೆ, ಕತ್ತಿಗೆ, ಹರಿಹರ ತಾಲೂಕಿನ ಹೊಳೆಸಿರಿಗೆರೆ, ಕೊಂಡಜ್ಜಿ, ಪುರಾಣ ಪ್ರಸಿದ್ಧ ಕೊಮಾರನಹಳ್ಳಿ ಕೆರೆ ಒಳಗೊಂಡಂತೆ 15 ಕೆರೆಗಳು ತುಂಬಿವೆ. ತುಮಕೂರು
ಎರಡು ದಶಕಗಳ ಬಳಿಕ ಅಮಾನಿಕೆರೆ ಕೋಡಿ
ಶೈಕ್ಷಣಿಕ ನಗರದ ದೊಡ್ಡ ಕೆರೆಯಾಗಿರುವ ಅಮಾನಿಕೆರೆ ಇಪ್ಪತ್ತು ವರ್ಷಗಳ ಅನಂತರ ತುಂಬಿ ಕೋಡಿ ಬಿದ್ದಿದೆ. ಅಮಾನಿಕೆರೆ ಹೋಗುವ ರಾಜಕಾಲುವೆಗಳು ಉಕ್ಕಿ ಹರಿದ ಪರಿಣಾಮ ನಗರದ ಆರ್.ಟಿ. ನಗರ ಬಡಾವಣೆ ಜಲಾವೃತಗೊಂಡಿವೆ. ತುಮಕೂರು ಅಮಾನಿಕೆರೆ ಗಂಗರಸರಿಂದ ಕ್ರಿ.ಶ.900ರ ಸುಮಾರಿನಲ್ಲಿ ಊರಿನ ಕೃಷಿಗೆ ಮತ್ತು ಕುಡಿಯುವ ನೀರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ಅಮಾನಿಕೆರೆ ಎರಡು ದಶಕಗಳ ಅನಂತರ ತುಂಬಿರುವುದರಿಂದ ಜನರು ಸಂತಸಗೊಂಡು ಕೆರೆಯಲ್ಲಿ ಗಂಗಾ ಪೂಜೆ ಮಾಡಿ ಬಾಗಿನ ಅರ್ಪಿಸುತ್ತಿದ್ದಾರೆ. ಕೊಪ್ಪಳ
ಲಕ್ಷ್ಮೀ ದೇವಿ ಕೆರೆ ಭರ್ತಿ
ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕನಕಗಿರಿಯಿಂದ ಸುಮಾರು 3 ಕಿ.ಮೀ. ದೂರದಲ್ಲಿರುವ ಹಿರೇಹಳ್ಳದ ಬಸವೇಶ್ವರ ದೇವಸ್ಥಾನ ಪಕ್ಕದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಲಕ್ಷ್ಮೀ ದೇವಿ ಕೆರೆ ತುಂಬಿ ಹರಿಯುತ್ತಿದೆ. ಈ ಕೆರೆ ಭರ್ತಿಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿದೆ. ಇಲ್ಲಿನ ಈಜು ಪ್ರಿಯರಿಗೆ, ಮೀನುಗಾರರಿಗೆ ಮತ್ತು ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೆರೆ ತುಂಬಿದ್ದು ಹರ್ಷ ಮೂಡಿಸಿದೆ. ಕೆರೆಯ ಹಿಂದಿನ ಪ್ರದೇಶಗಳಾದ ನಾಗಲಾಪುರ, ಮುಸಲಾಪುರ, ರಾಂಪುರ ಗ್ರಾಮಗಳ ಕೆರೆಗಳು ಸಹ ಭರ್ತಿಯಾಗಿದ್ದು, ಶ್ರೀ ಲಕ್ಷ್ಮೀ ದೇವಿ ಕೆರೆಗೆ ನೀರು ಹರಿದು ಬರುತ್ತಿದೆ. ಬಳ್ಳಾರಿ
ಕೋಡಿ ಬಿದ್ದ ರಾಯಾಪುರ ಕೆರೆ
ಬಿರುಬಿಸಿಲು, ಬರದ ನಾಡಿನ ಖ್ಯಾತಿಯ ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು, ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಯಾಪುರ ಕೆರೆ ತುಂಬಿ ಕೋಡಿ ಹರಿಯುತ್ತಿರುವುದು ಜನರು, ರೈತರಲ್ಲಿ ಸಂತಸ ಮೂಡಿಸಿದೆ. ಪ್ರತಿವರ್ಷ ಮಳೆಯಿಂದ ಹರಿದು ಬರುವ ನೀರಿನಿಂದ ನಿರೀಕ್ಷಿಸಿದಷ್ಟು ಭರ್ತಿಯಾಗದ ರಾಯಾಪುರ ಕೆರೆ ಈ ಬಾರಿ ನವೆಂಬರ್ ತಿಂಗಳಲ್ಲೂ ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಕೋಡಿ ಹರಿಯುತ್ತಿದೆ. ಇದು ಸ್ಥಳೀಯ ಜನರಿಗೂ ಕಣ್ಮನ ಸೆಳೆಯುತ್ತಿದೆ. ಕೆರೆ ತುಂಬಿ ಕೋಡಿ ಹರಿಯುತ್ತಿರುವು ದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಕಲಬುರಗಿ
14 ವರ್ಷದ ಬಳಿಕ ತುಂಬಿದ ಕುಂಬಾರಹಳ್ಳಿ ಕೆರೆ
ವಾಡಿಯ ನಾಲವಾರ ಹೋಬಳಿ ವಲಯದ ವಿವಿಧೆಡೆ ಕಳೆದ ಮೂರ್‍ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಈ ಭಾಗದ ಹಲವು ಕೆರೆಗಳು ಭರ್ತಿಯಾಗಿವೆ. ಅಲ್ಪ ಪ್ರಮಾಣದ ನೀರಿಗೆ ಸಾಕ್ಷಿಯಾಗುತ್ತಿದ್ದ ಲಾಡ್ಲಾಪುರ ಗ್ರಾಮದ ಕೋಗಿಲಕೆರೆ ತುಂಬಿದೆ. ಯಾಗಾಪುರ, ರಾಂಪೂರಹಳ್ಳಿ, ನಾಲವಾರ ಕೆರೆಯಂಗಳಕ್ಕೂ ಮಳೆ ನೀರು ಸೇರಿಕೊಂಡಿದೆ. ಕಳೆದ 14 ವರ್ಷಗಳಿಂದ ನೀರಿಲ್ಲದೇ ಬೀಳುಬಿದ್ದಿದ್ದ ಕುಂಬಾರಹಳ್ಳಿ ಕೆರೆಯಂಗಳದಲ್ಲೂ ನೀರು ಬಂದಿದ್ದು, 98 ಎಕರೆ ವಿಸ್ತೀರ್ಣದಲ್ಲಿ ನೀರು ತುಂಬಿಕೊಂಡಿದೆ.