Advertisement

ಪ್ಲಾಸ್ಟಿಕ್ ನಿಷೇಧ ಪ್ರಚಾರಕ್ಕೆ ಸೀಮಿತ ಆದೇಶ?

03:33 PM Sep 05, 2022 | Team Udayavani |

ಹಾವೇರಿ: ಕೇಂದ್ರ ಪರಿಸರ ಸಚಿವಾಲಯ ಕಳೆದ ಜುಲೈ 1ರಿಂದ ದೇಶದಲ್ಲಿ ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧಿಸಿ ಆದೇಶ ಹೊರಡಿಸಿದರೂ, ಅದು ಜಿಲ್ಲೆಯಲ್ಲಿ ಬರೀ ಪ್ರಚಾರಕ್ಕೆ ಮಾತ್ರ ಸೀಮಿತವಾಗಿ ಅನುಷ್ಠಾನದಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ನಿರ್ಲಕ್ಷ್ಯ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ನಿರ್ಧಿಷ್ಟಪಡಿಸಿದ ಪ್ಲಾಸ್ಟಿಕ್‌ನ್ನು ಬಳಸದಂತೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದರೂ ಅದು ಜಿಲ್ಲೆಯ ಪಾಲಿಗೆ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿದೆ. ಜಿಲ್ಲೆಯ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್‌ ಬಳಕೆ ಮುಂದುವರೆದಿದೆ. ಇದರಿಂದಾಗಿ ನಿತ್ಯ ಟನ್‌ಗಟ್ಟಲೇ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಪ್ಲಾಸ್ಟಿಕ್‌ ತ್ಯಾಜ್ಯ ನಿರ್ವಹಣೆ ನಗರ ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಜಿಲ್ಲೆಯಲ್ಲಿನ ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲಿಕರು, ಇ-ಕಾಮರ್ಸ್‌ ಕಂಪನಿಗಳು, ಬೀದಿ ವ್ಯಾಪಾರಿಗಳು ವಾಣಿಜ್ಯ ಸಂಸ್ಥೆಗಳು, ಸಿನಿಮಾ ಮಂದಿರಗಳು, ಶಾಪಿಂಗ್‌ ಕೇಂದ್ರಗಳು, ಪ್ರವಾಸೋದ್ಯಮ ಸ್ಥಳಗಳ ಆದಿಯಾಗಿ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿ ಸಂಕೀರ್ಣಗಳು, ಆಸ್ಪತ್ರೆಗಳು ಮತ್ತು ಇತರೆ ಸಂಸ್ಥೆಗಳು ಸಾಮಾನ್ಯ ಸಾರ್ವಜನಿಕರಿಗೆ ಏಕ ಬಳಕೆಯ ಪ್ಲಾಸ್ಟಿಕ್‌ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆ ನಿಲ್ಲಿಸುವಂತೆ ಕೇಂದ್ರ ಪರಿಸರ ಸಚಿವಾಲಯ ಆದೇಶಿಸಿ ಎರಡು ತಿಂಗಳಾಗಿದೆ. ಆದರೂ, ಇನ್ನೂ ಕೂಡ ಆ ಬಗ್ಗೆ ಜಿಲ್ಲೆಯಲ್ಲಿ ಸಮರ್ಪಕ ಆದೇಶ ಜಾರಿಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕಡೆಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೇ ಸಾಗಿದ್ದು, ಪ್ಲಾಸ್ಟಿಕ್‌ ಬಳಕೆ ನಿಯಂತ್ರಣಕ್ಕೆ ಕಡಿವಾಣ ಇಲ್ಲದಂತಾಗಿದೆ.

ವಿಶೇಷವಾಗಿ 100 ಮೈಕ್ರಾನ್‌ಗಿಂತ ಕಡಿಮೆ ಇರುವ ಪರಿಸರಕ್ಕೆ ಅಪಾಯಕಾರಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪ್ಲಾಸ್ಟಿಕ್‌ ಬಂಟಿಂಗ್ಸ್‌, ಪ್ಲಾಸ್ಟಿಕ್‌ ಫ್ಲೆಕ್ಸ್‌, ಪ್ಲಾಸ್ಟಿಕ್‌ ಧ್ವಜಗಳು, ಪ್ಲಾಸ್ಟಿಕ್‌ ಕಪ್‌, ಪ್ಲಾಸ್ಟಿಕ್‌ ಸ್ಪೂನ್‌, ಪ್ಲಾಸ್ಟಿಕ್‌ ಸ್ಟ್ರಾ, ಟೇಬಲ್‌ ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್‌ ಹಾಳೆಗಳು, ಥರ್ಮೋಕೋಲ್‌ ಮತ್ತು ಪ್ಲಾಸ್ಟಿಕ್‌ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳ ಮಾರಾಟವನ್ನು ಸಂಪೂರ್ಣ ನಿಷೇ ಧಿಸಿದರೂ ಅದರ ಬಳಕೆ ಮಾತ್ರ ಜಿಲ್ಲೆಯಲ್ಲಿ ಮುಂದುವರೆದಿದೆ. ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದು ಪರಿಸರವಾದಿಗಳ ಆಗ್ರಹವಾಗಿದೆ.

ವಿಪರ್ಯಾಸದ ಸಂಗತಿಯಂದರೆ, ನಗರದ ಸ್ಥಳೀಯ ಸಂಸ್ಥೆಗಳಿಗೆ ಪ್ಲಾಸ್ಟಿಕ್‌ ನಿಷೇಧ ಆದೇಶವನ್ನು ಅನುಷ್ಠಾನಗೊಳಿಸಲು ಕಾಯ್ದೆಯ ಬಲವಿದೆ. ಪರಿಸರ(ಸಂರಕ್ಷಣೆ) ಕಾಯ್ದೆ-1986ರ ಅಡಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಮತ್ತು ಅಂತಹ ಘಟಕವನ್ನು ಮುಚ್ಚುವ ಆದೇಶ ನೀಡುವ ಅಧಿಕಾರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಇದೆ. ಆದರೂ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಲು ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಏಕ ಬಳಕೆ ಪ್ಲಾಸ್ಟಿಕ್‌ ನಿಷೇಧದ ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರದ ವ್ಯಾಪಾರಸ್ಥರಿಗೆ ತಿಳಿಸಲಾಗಿದ್ದು, ನಗರಸಭೆ ವತಿಯಿಂದ ಪ್ಲಾಸ್ಟಿಕ್‌ ನಿಷೇಧ ಕುರಿತು ಜಾಗೃತಿ ಮೂಡಿಸಲಾಗಿದೆ. ಪ್ಲಾಸ್ಟಿಕ್‌ ಬಾಟಲಿ ಕ್ರಷಿಂಗ್‌ ಮಷಿನ್‌ ಖರೀದಿಗೆ 10 ಲಕ್ಷ ರೂ. ಮೀಸಲಿಟ್ಟಿದ್ದು, ಹಾವೇರಿಯ ಎಂ.ಜಿ. ರಸ್ತೆಯಲ್ಲಿ ಯಂತ್ರವನ್ನು ಶೀಘ್ರ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. –ಸಂಜೀವ ಕುಮಾರ ನೀರಲಗಿ ನಗರಸಭೆ ಅಧ್ಯಕ್ಷರು

ಚರಂಡಿ, ರಸ್ತೆ, ಕಾಲುವೆ, ಕೆರೆ, ಕಟ್ಟೆಗಳಲ್ಲಿ ಬಿಸಾಡುವ ಪ್ಲಾಸ್ಟಿಕ್‌ನಿಂದ ಭೂ ಮಾಲಿನ್ಯ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಬಿಡಾಡಿ ದನಗಳು ಪ್ಲಾಸ್ಟಿಕ್‌ ತ್ಯಾಜ್ಯ ತಿಂದು ಅಸುನೀಗಿದ ಉದಾರಣೆಗಳೂ ಇವೆ. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಪ್ಲಾಸ್ಟಿಕ್‌ ಮರುಬಳಕೆ ಹಾಗೂ ಪ್ಲಾಸ್ಟಿಕ್‌ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದೇ ಇದಕ್ಕೆ ಪರಿಹಾರ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. –ಪ್ರಭು ಹಿಟ್ನಳ್ಳಿ, ಸ್ಥಳೀಯ ನಿವಾಸಿ

-ವಿಶೇಷ ವರದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next