Advertisement

ಮಾನಸಿಕ ರೋಗಿಗಳ ಸಂಖ್ಯೆ ಕನಿಷ್ಠ ಮಟ್ಟಕ್ಕಿಳಿಸಿ

01:00 AM Sep 17, 2019 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ 2022ರ ವೇಳೆಗೆ ಮಾನಸಿಕ ರೋಗಿಗಳ ಸಂಖ್ಯೆ ಕನಿಷ್ಠ ಮಟ್ಟಕ್ಕೆ ಇಳಿಸಿ, ಮಾನಸಿಕ ಆರೋಗ್ಯಕ್ಕೆ ನೀಡುವ ಚಿಕಿತ್ಸೆಯಲ್ಲಿ ಅಂತರ ಕಡಿಮೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ರಾಜ್ಯ ಸರ್ಕಾರಕ್ಕೆ ಹೊಸ ಸವಾಲು ನೀಡಿದರು.

Advertisement

ನಿಮ್ಹಾನ್ಸ್‌ನ 24ನೇ ಘಟಿಕೋತ್ಸವದಲ್ಲಿ ಸೋಮವಾರ ಪದವಿ ಪ್ರದಾನ ಮಾಡಿ ಮಾತನಾಡಿ, 2014ನಲ್ಲಿ ಮಾನಸಿಕ ಆರೋಗ್ಯ ಕಾಯ್ದೆಯನ್ನು ಸಿದ್ಧಪಡಿಸಿದೆವು. 2017ರಿಂದ ಈ ಕಾಯ್ದೆ ಅನುಷ್ಠಾನಕ್ಕೆ ಬಂದಿದೆ. ಕೇಂದ್ರ ಸರ್ಕಾರವು ಮಾನಸಿಕ ಆರೋಗ್ಯದ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.

2022ಕ್ಕೆ ಪ್ರಧಾನಿ ಮೋದಿ ನವಭಾರತದ ಬಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ರಾಜ್ಯದಲ್ಲಿ ಯಾರೊಬ್ಬರೂ ಮಾನಸಿಕ ಆರೋಗ್ಯದ ಚಿಕಿತ್ಸೆ ಪಡೆಯಲು ಇರಬಾರದು. ಮಾನಸಿಕ ರೋಗಿಗಳ ಸಂಖ್ಯೆ ಶೂನ್ಯಕ್ಕೆ ಇಳಿಸಬೇಕು ಮತ್ತು ಮಾನಸಿಕ ಆರೋಗ್ಯಕ್ಕೆ ನೀಡುವ ಚಿಕಿತ್ಸೆಯ ಅಂತರವನ್ನು ಕಡಿಮೆ ಮಾಡುವ ಸವಾಲನ್ನು ಕರ್ನಾಟಕ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.

ಈ ಸವಾಲನ್ನು ಸ್ವೀಕರಿಸಲು ಕರ್ನಾಟಕವು ಶಕ್ತವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನವಾಗಿದೆ. ಜತೆಗೆ ದೇಶಕ್ಕೆ ಮಾದರಿಯಾಗಿರುವ ನಿಮ್ಹಾನ್ಸ್‌ ಇಲ್ಲಿದೆ. ಕರ್ನಾಟಕ ಇದರಲ್ಲಿ ಯಶಸ್ವಿಯಾದರೆ, ಈ ಮಾದರಿಯನ್ನು ಇಡೀ ದೇಶದಲ್ಲಿ ಅನುಷ್ಠಾನ ಮಾಡಲು ಸಾಧ್ಯ ಎಂದರು.

50 ಎಕರೆ ಜಮೀನಿಗೆ ಬೇಡಿಕೆ: ನಿಮ್ಹಾನ್ಸ್‌ ಸಂಸ್ಥೆ ಈಗಾಗಲೇ ಬೇಡಿಕೆ ಇಟ್ಟಿರುವ 40 ಎಕರೆ ಜಮೀನಿನಲ್ಲಿ 31 ಎಕರೆಯನ್ನು ಸರ್ಕಾರ ನೀಡಿದೆ. ಇನ್ನು 10 ಎಕರೆಯನ್ನು ಆದಷ್ಟು ಬೇಗ ನೀಡಿದರೆ ಕಾರ್ಯವೈಖರಿ ವಿಸ್ತರಣೆ ಸುಲಭವಾಗುತ್ತದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್‌ ಅವರು ವೇದಿಕೆಯಲ್ಲಿ ಕುಳಿತಿದ್ದ ಸಿಎಂ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು. ಆದಷ್ಟು ಬೇಗ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ತುಂಬುತ್ತದೆ. ಈ ಹಿನ್ನೆಲೆಯಲ್ಲಿ ಮಾನಸಿಕ ಆರೋಗ್ಯದ ಚಿಕಿತ್ಸಾ ಅಂತರವನ್ನು ಶೂನ್ಯಕ್ಕೆ ಇಳಿಸಬೇಕು. ಇದಕ್ಕಾಗಿ ನಿಮ್ಹಾನ್ಸ್‌ ಅಧ್ಯಕ್ಷರಾದ ಡಾ.ಗಂಗಾಧರ್‌ ಅವರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್‌ ರಚಿಸಿ, ಸಮಗ್ರ ಕ್ರಿಯಾ ಯೋಜನೆಯನ್ನು ನೀಡಬೇಕು ಎಂದರು. ನಿಮ್ಹಾನ್ಸ್‌ ನಿರ್ದೇಶಕ ಡಾ.ಗಂಗಾಧರ್‌ ಇದ್ದರು.

ಹೊಸ ಕೋರ್ಸ್‌ ಆರಂಭ: ಸೆಂಟರ್‌ ಫಾರ್‌ ಇಂಟೆಗ್ರೇಟಿವ್‌ ಮೆಡಿಸಿನ್‌, ಸೆಂಟರ್‌ ಫಾರ್‌ ಸೈಕೋಸೋಸಿಯಲ್‌ ಕೇರ್‌ ಇನ್‌ ಡಿಸಾಸ್ಟರ್‌ ಮ್ಯಾನೇಜ್‌ಮೆಂಟ್‌, ಸೆಂಟರ್‌ ಫಾರ್‌ ಕಾನ್ಷಿಯಸ್‌ನೆಸ್‌ ಸ್ಟಡೀಸ್‌ ಆಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಆಫ್ ನಿಮ್ಹಾನ್ಸ್‌ ಡಿಜಿಟಲ್‌ ಅಕಾಡೆಮಿ ಮತ್ತು ಎಂಆರ್‌ಐ ಮತ್ತು ಸಿಟಿ ಸೌಲಭ್ಯಕ್ಕೆ ಕೇಂದ್ರ ಸಚಿವ ಡಾ.ಹರ್ಷವರ್ಧನ್‌ ಚಾಲನೆ ನೀಡಿದರು. ಹಾಗೆಯೇ ಯೋಗಕ್ಕೆ ಸಂಬಂಧಿಸಿದ ಪುಸ್ತಕ ಲೋಕಾರ್ಪಣೆ ಮಾಡಿದರು.

ಬಿಎಸ್‌ವೈ ಹೊಗಳಿದ ಕೇಂದ್ರ ಸಚಿವ: ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರ ಶ್ರಮ ಹೆಚ್ಚಿದೆ. ಅಲ್ಲದೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರದ ಮೊದಲ ಮುಖ್ಯಮಂತ್ರಿಯೂ ಇವರೇ. ಬಿಎಸ್‌ವೈ ಮುಖ್ಯಮಂತ್ರಿ ಆದ ಬಳಿಕ ದೆಹಲಿಗೆ ಆಗಮಿಸಿದ್ದರು. ಆಗ ದೆಹಲಿ ವಿಮಾನ ನಿಲ್ದಾಣದಲ್ಲಿ ಅವರ ಸ್ವಾಗತಕ್ಕೆ 10 ಸಾವಿರ ಜನ ಸೇರಿದ್ದರು. ಅದರ ಮುಂದಾಳತ್ವವನ್ನು ನಾನೇ ವಹಿಸಿಕೊಂಡಿದ್ದೆ ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್‌ ಸ್ಮರಿಸಿದರು.

ಪದವಿ ಪ್ರದಾನ: ನ್ಯೂರೋ ಸೈಕಾಲಜಿ, ಕ್ಲಿನಿಕಲ್‌ ಸೈಕಾಲಜಿ, ನ್ಯೂರೋ ಫಿಜಿಯಾಲಜಿ, ನ್ಯೂರಾಲಜಿ ರಿಹಾಬಿಟೇಷನ್‌, ಸೋಯಿಷಲ್‌ ಸೇರಿದಂತೆ ವಿವಿಧ ವಿಭಾಗಳ 175 ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಪದವಿ ಪ್ರಧಾನ ಮಾಡಲಾಯಿತು. ಡಾ.ಕೆ.ನೀರಜಾ, ಡಾ.ಸಫಾನ್‌ ಅಹ್ಮದ್‌, ಡಾ.ಕಾರ್ತಿಕ್‌, ಡಾ.ಸಂಗೀತಾ, ಡಾ.ಸಿದ್ದೇಶ್ವರ ಸೇರಿದಂತೆ 14 ಮಂದಿಗೆ ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಯೋಗದ ಮಹತ್ವನ್ನು ದಶಕಗಳ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಆದರೆ. ಭಾರತ ಆಗ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇಂದು ಯೋಗದಲ್ಲಿ ವೈಜ್ಞಾನಿಕ ಸಂಶೋಧನೆಗಳು ನಡೆದಿವೆ ಮತ್ತು ವಿಶ್ವವೇ ಅದನ್ನು ಒಪ್ಪಿಕೊಳ್ಳುತ್ತಿದೆ.
-ಡಾ.ಹರ್ಷವರ್ಧನ್‌, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next