Advertisement
ದಕ್ಷಿಣ ಆಫ್ರಿಕಾದಲ್ಲಿ ಟ್ರೋಫಿ ಹಂಟರ್‌ಗಳು!ಮನುಷ್ಯನಿಂದ ಜೀವ ವೈವಿಧ್ಯ ಮತ್ತು ಪ್ರಕೃತಿ ಎಂಥೆಂಥ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತಿದೆ ಎಂಬುದರ ಕುರಿತು ಹೆಚ್ಚೇನೂ ಹೇಳಬೇಕಿಲ್ಲ. ಇಲ್ಲಿ ಹೇಳಲು ಹೊರಟಿರುವ ಸುದ್ದಿ ತಿಳಿದು ಅಚ್ಚರಿ, ಕೋಪ ಎಲ್ಲವೂ ಏಕಕಾಲಕ್ಕೆ ಉಂಟಾದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. ದಕ್ಷಿಣ ಆಪ್ರಿಕಾದಲ್ಲಿ ಸಿಂಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿದೆ. ಇದರಲ್ಲಿ ಕೃತ್ರಿಮ ಯೋಚನೆ ಏನೂ ಕಾಣುವುದಿಲ್ಲ. ಆದರೆ ಈ ಸಿಂಹಗಳನ್ನು ಬೆಳೆಸುತ್ತಿರುವುದು ಬೇಟೆಯಾಡಲು ಎನ್ನುವ ಸಂಗತಿ ಆತಂಕಕಾರಿಯಾದುದು. ಮೋಜಿಗಾಗಿ, ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಬೇಟೆಯಾಡುವವರನ್ನು “ಟ್ರೋಫಿ ಹಂಟರ್’ ಎಂದು ಕರೆಯುತ್ತಾರೆ. ದಕ್ಷಿಣ ಆಪ್ರಿಕಾದಲ್ಲಿ ಸಿಂಹಗಳನ್ನು ಬೇಟೆಗಾಗಿ ಸಾಕುತ್ತಿರುವುದರಿಂದ ಜಗತ್ತಿನ ಅನೇಕ ಮಂದಿ ಟ್ರೋಫಿ ಹಂಟರ್‌ಗಳು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಶಾಟ್ ಗನ್, ಹ್ಯಾಂಡ್ ಗನ್, ಸಿಂಹ ಬೇಟೆಗಾಗಿ ಬಳಕೆಯಾಗುತ್ತಿರುವ ಆಯುಧಗಳು. ಇದಲ್ಲದೆ ಕೆಲ ಮಂದಿ ಕ್ರಾಸ್ ಬೋ(ಬಿಲ್ಲು ಬಾಣ) ಬಳಸಿಯೂ ಸಿಂಹಗಳನ್ನು ಬೇಟೆಯಾಡುತ್ತಾರಂತೆ. ಆದಿಮಾನವನಿಂದ ಬಹಳ ದೂರ ಸಾಗಿ ಬಂದಿರುವ ನಾವು ಇಂದಿಗೂ ಮೃಗೀಯ ಪ್ರವೃತ್ತಿಯನ್ನು ಬಿಟ್ಟಿಲ್ಲ ಎನ್ನುವುದು ಇಂಥ ಘಟನೆಗಳಿಂದ ಸಾಬೀತಾಗುತ್ತದೆ.