Advertisement
ಪ್ರಪಂಚದಲ್ಲೇ ಅತಿ ಎತ್ತರ ಪ್ರದೇಶದಲ್ಲಿರುವ ರಸ್ತೆ ಮೇಲೆ ಒಬ್ಬಂಟಿಯಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಸಮುದ್ರಮಟ್ಟದಿಂದ ಸುಮಾರು 17 ಸಾವಿರ ಅಡಿಗಳಷ್ಟು ಎತ್ತರದ ಲಡಾಖ್‌ನ ಕಾರ್ದುಂಗ್ಲಾ ಪಾಸ್ ರಸ್ತೆ ಅದು. ಬೆಂಗಳೂರಿನಿಂದ ಹೊರಟು ವಾರಗಳೇ ಕಳೆದಿದ್ದವು. ಹಗಲು ರಾತ್ರಿ ಬೈಕ್‌ನಲ್ಲಿ ಪ್ರಯಾಣಿಸಿ ಮೈಕೈಯೆಲ್ಲಾ ಸೋತಿದ್ದವು. ನಿರ್ಜನ ಪ್ರದೇಶ ಬೇರೆ. ಸುತ್ತಮುತ್ತ ಯಾವ ವಾಹನಗಳೂ ಕಾಣಿಸುತ್ತಿಲ್ಲ, ಜನರೂ ಇಲ್ಲ. ಮೈಕೈ ನಡುಗುತ್ತಿದೆ. ಜರ್ಕಿನ್, ಸ್ವೆಟರ್, ಶರ್ಟುಗಳಷ್ಟನ್ನೂ ಒಂದರ ಮೇಲೊಂದು ಹಾಕಿಯೂ ವಿಪರೀತ ಚಳಿ!
Related Articles
Advertisement
ಪ್ರಯಾಣವೆಂದರೆ ಬರೀ ಪ್ರಯಾಣವಲ್ಲ. ಹೋಗುವ ಜಾಗದ ಕುರಿತ ಮಾಹಿತಿ, ಅಲ್ಲಿನ ಜನರೊಂದಿಗಿನ ಒಡನಾಟ, ಅವರ ಆಚಾರ, ಕಲೆ, ಸಂಸ್ಕೃತಿ ಮುಂತಾದ ವಿಚಾರಗಳನ್ನು ತಿಳಿದುಕೊಳ್ಳುವುದೂ ತುಂಬಾ ಮುಖ್ಯ ಎನ್ನುವುದು ಸಚಿನ್ ಅಭಿಪ್ರಾಯ. ಹೀಗಾಗಿ ಹೋಗುತ್ತಿದ್ದ ಜಾಗಗಳಲ್ಲೆಲ್ಲ ಸ್ಥಳೀಯರೊಂದಿಗೆ ಸಚಿನ್ ಬೆರೆತಿದ್ದಾರೆ. ಅವರ ಜೊತೆಯಿದ್ದಿದ್ದು ಸ್ವಲ್ಪವೇ ಸಮಯವಾದರೂ ಅವರ ಜೀವನಶೈಲಿಯನ್ನು ಸೆರೆಹಿಡಿಯುವ, ಕಲಿಯುವ ಪ್ರಯತ್ನವನ್ನವರು ಮಾಡಿದ್ದಾರೆ. ಸಚಿನ್‌ರವರು 16 ರಾಜ್ಯಗಳನ್ನು ಸುತ್ತಿದ್ದು ತಮ್ಮ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ. ಪ್ರಯಾಣಕ್ಕೆಂದೇ ಗಾಡಿಯನ್ನು ವಿಶೇಷವಾಗಿ ಮಾರ್ಪಡಿಸಿಕೊಂಡಿದ್ದಾರೆ.
ಇವರು ಬೆಂಗಳೂರಿನಿಂದ ಹೊರಡುವಾಗ ಸಣ್ಣ ಆ್ಯಕ್ಸಿಡೆಂಟಿಗೆ ಒಳಗಾಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರಂತೆ. ಆದರೆ, ಪ್ರವಾಸದ ದಿನಾಂಕವನ್ನು ಮುಂದೂಡಲಿಲ್ಲ. ಕಾಲುನೋವಿನಲ್ಲೇ ಪ್ರಯಾಣ ಹೊರಟಿದ್ದರು. ಬೆಳಗ್ಗೆ 8ರಿಂದ ರಾತ್ರಿ 11ರ ವರೆಗೆ ಬೈಕ್ ರೈಡ್ ಮಾಡುವುದೆಂದರೆ ಸುಮ್ಮನೆಯೇ? ಅದೂ ವಿಭಿನ್ನ ಭೂ ಪ್ರದೇಶಗಳಲ್ಲಿ, ವಿಭಿನ್ನ ವಾತಾವರಣಗಳಲ್ಲಿ! ಸಚಿನ್, ರಾಜಸ್ಥಾನವನ್ನು ಹಾದು ಹೋಗುವಾಗ ಇದ್ದ ಉಷ್ಣಾಂಶ ಎಷ್ಟು ಗೊತ್ತಾ? 51 ಡಿಗ್ರಿ ಸೆಲಿÒಯಸ್! ಆ ಧಗೆಯಲ್ಲೂ ಜಾಕೆಟ್ ಕಳಚುವ ಹಾಗಿರಲಿಲ್ಲ. ಅದನ್ನು ತೊಟ್ಟುಕೊಂಡೇ ರೈಡ್ ಮಾಡಿದ್ದಾರೆ. ಸಚಿನ್, ಜಮ್ಮು ತಲುಪಿದಾಗ ಇದ್ದ ಉಷ್ಣಾಂಶ -2 ಡಿಗ್ರೀ ಸೆಲಿÒಯಸ್. 51 ಮತ್ತು -2, ಎಂಥ ವೈರುಧ್ಯ ಅಲ್ಲವೇ? ಜಮ್ಮು ತಲುಪಿದಾಗ ಉಸಿರಾಡುವುದೇ ತುಸು ಕಷ್ಟವಾಯಿಯಂತೆ. ಆ ಶೀತಲ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತಂತೆ.
ಅಂದಹಾಗೆ, ತಮ್ಮ ಅನುಭವಗಳಷ್ಟನ್ನೂ ಸಚಿನ್ ಸಾಕ್ಷ್ಯಚಿತ್ರದ ಮೂಲಕ ಕಟ್ಟಿಕೊಡಲಿದ್ದಾರೆ. ಸಾಕ್ಷ್ಯಚಿತ್ರದ ಹೆಸರು “ಲೈಟ್ಸ್ ಕ್ಯಾಮೆರಾ ಲಡಾಖ್’!
ಜಮ್ಮುವಿನಲ್ಲಿ ಕಂಡ ಕನ್ನಡಿಗರು!ಸಚಿನ್ ಜಮ್ಮುವಿನಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದಾಗ, ಕೆಲವರು ಇವರನ್ನು ಮಾತನಾಡಿಸಿದರಂತೆ. ಅದೂ ಕನ್ನಡದಲ್ಲಿ! ಕರ್ನಾಟಕದಲ್ಲಿ ನಿಮ್ಮೂರು ಯಾವುದು? ಊಟ ಆಯ್ತಾ? ಅಂತೆಲ್ಲ ಕೇಳಿದ್ದಾರೆ. ಹಾಗೆ ಕನ್ನಡದಲ್ಲಿ ಮಾತನಾಡಿದವರೆಲ್ಲ ಇಲ್ಲಿನವರೇ! ಸಚಿನ್ ಅವರ ಬೈಕ್‌ನ ನಂಬರ್ ಪ್ಲೇಟ್ ನೋಡಿ, ಇವರು ಕನ್ನಡದವರೆಂದು ಮಾತಾಡಿಸಿದ್ದಾರೆ. ಆಗ ಸಚಿನ್‌ರ ಮೊಗದಲ್ಲಿದ್ದ ದೂರದ ಪ್ರಯಾಣದ ಆಯಾಸವೆಲ್ಲ ಮರೆಯಾಯಿತಂತೆ. ರಶ್ಮಿ ಟಿ.