ಸುಮಾರು ಐವತ್ತರ ಆಸುಪಾಸಿನ ಮನುಷ್ಯ. ಗಡ್ಡ ಬಿಟ್ಟಿದ. ನೋಡಲು ಗಲೀಜು ಗಲೀಜಾಗಿದ್ದ. ಬಿಳಿ ಧೋತಿ, ಬಿಳಿ ಷರಟು ಧರಿಸಿದ್ದಾನೆಂದು ನಂಬುವುದೇ ಕಷ್ಟವಾಗಿತ್ತು. ಬಸೊಳಗೆ ಕಿಟಕಿಗೆ ತಲೆಯಾನಿಸಿ, ಕುಳಿತಿದ್ದ ನನ್ನೆಡೆಗೆ ಬಂದು, ಆತ ಗೋಗರೆಯತೊಡಗಿದ. “ನಾನು ಕಿತ್ತೂರಿನವನು. ಮನೆಯಲ್ಲಿ ನನ್ನನ್ನು ಧಾರವಾಡದ ಸಂತೆಗೆ ಕಳಿಸಿದ್ರು. ನಿನ್ನೇನೆ ಬಂದಿನಿ. ನನ್ನ ಹತ್ರ ಇರೋ ರೊಕ್ಕವನ್ನೆಲ್ಲ ಕಳಕೊಂಡಿದ್ದೀನಿ. ಮನೆಗೆ ತಿಳಿಸಲು, ನನ್ನ ಬಳಿ ಫೋನೂ ಇಲ್ಲ. 50 ರೂ. ಕೊಡಪ್ಪಾ. ಹೊಟ್ಟೆ ಹಸೀತಿದೆ’ ಎಂದ.
ಅವನ ವೇಷಭೂಷಣ ನೋಡಿ, ಅವನು ಭಿಕ್ಷುಕನೇ ಇದ್ದಿರಬೇಕು ಅಂತನ್ನಿಸಿತು. ಆದರೆ, ಸುಳ್ಳು ಹೇಳುತ್ತಿದ್ದಾನಲ್ಲ ಅಂತ ಒಳಮನಸ್ಸು ತೀರ್ಪು ನೀಡಿತು. ಅವನ ಮೇಲೊಂದು ಸಣ್ಣ ಕೋಪ, ನನ್ನೊಳಗೇ ಮೈಮುರಿಯಿತು. ಆದರೂ, ಅದನ್ನು ತಡಕೊಂಡು ಕೇಳಿದೆ; “ಸರಿ, ನಾನು ನಿನಗೆ ಊಟ ಮಾಡಿಸ್ತೀನಿ. ಸತ್ಯ ಹೇಳು, ನೀನು ಕಿತ್ತೂರಿನವನೇನಾ? ನೀನು ಇದುವರೆಗೆ ಹೇಳಿದ್ದು ಸತ್ಯನಾ?’.
ಅದಕ್ಕೆ ಅವನು ದೇವರಾಣೆ ಹಾಕಿದ. “ಖರೆ… ನಾನು ಕಿತ್ತೂರಿನವ. ಬನ್ನಿ, ನಮ್ಮ ಮನೆ ತೋರಿಸ್ತೀನಿ. ನನಗೂ ಹೊಲ- ಮನೆ, ಎಲ್ಲ ಇದೆ. ಹೊಲದಲ್ಲಿ ಕಡಲೆ ಇವೆ, ತಗೊಂಡು ಹೋಗುವಂತ್ರಿ, ಬನ್ನಿ…’ ಎಂದ. ಆಗಲೂ ಅವನ ಮಾತಿನ ಮೇಲೆ ನನಗೆ ನಂಬಿಕೆ ಹುಟ್ಟಲಿಲ್ಲ. ನನ್ನ ಉದ್ದೇಶ ಇಷ್ಟೇ; ಈತ ಸತ್ಯ ಹೇಳಬೇಕು. ಸತ್ಯವೇ ಆಗಿದ್ರೆ, ಇವನನ್ನು ಕಿತ್ತೂರಿಗೆ ಹೋಗಿಯೇ ಬಿಡಬೇಕು ಎನ್ನುವುದು.
ಸರಿ, ಬಸ್ಸು ಹತ್ತಿಸುವಾಗ ಸತ್ಯ ಒಪ್ಪಿಕೊಳ್ಳುತ್ತಾನೆಂದು, ಹೋಟೆಲ್ಲಿನಲ್ಲಿ ಅವನಿಗೆ ಊಟ ಕೊಡಿಸಿದೆ. ಅವನ ಹಸಿವು ಅಲ್ಲಿಗೆ ತಣ್ಣಗಾಗಿತ್ತು. ತೇಗಿದ. “ಒಬ್ಬನ ಹಸಿವನ್ನು ನೀಗಿಸಿದೆನಲ್ಲ’ ಎಂಬ ಸಮಾಧಾನವಾಯಿತು. ಕಿತ್ತೂರಿಗೆ ಹೋಗಲು ಬಸ್ಸೇರಿದೆವು. ಎರಡು ಟಿಕೆಟ್ ಪಡೆದೆ. ಬಸ್ಸು ಸ್ವಲ್ಪ ರಶ್ ಇದ್ದಿದ್ದರಿಂದ, ನಾನು ಡ್ರೈವರ್ ಸಮೀಪದ ಸೀಟಿನಲ್ಲಿ ಕುಳಿತೆ. ಆತ ಸ್ವಲ್ಪ ಹಿಂಬದಿ ಕುಳಿತ. ಬಸ್ಸು ಮುಮ್ಮಿಗಟ್ಟಿ ದಾಟುವಷ್ಟರಲ್ಲಿ ನಾನು ನಿದ್ದೆಗೆ ಜಾರಿದೆ.
ನಂತರ ನನಗೆ ಎಚ್ಚರವಾಗಿದ್ದು ಕಿತ್ತೂರಿಗೆ ಇನ್ನೇನು 1 ಕಿ.ಮೀ. ಇದೆ ಎನ್ನುವಾಗ! ಆಗ ಕಣ್ಣುಜ್ಜಿಕೊಂಡು ನೋಡಿದರೆ, ಹಿಂಬದಿಯ ಸೀಟಿನಲ್ಲಿ ಅವನು ಕಾಣಲೇ ಇಲ್ಲ. ಆತ ಎಲ್ಲಿ ಇಳಿದುಬಿಟ್ಟಿದ್ದನೋ ಗೊತ್ತೇ ಆಗಲಿಲ್ಲ. ಯಾರೋ ಪ್ರಯಾಣಿಕರು ಹೇಳಿದರು, ಧಾರವಾಡದ ಸಮೀಪವೇ ಆತ ಇಳಿದಿದ್ದ ಅಂತ. ಅಯ್ಯೋ, ಸುಮ್ಮನೆ 300 ರೂ. ವ್ಯರ್ಥ ಆಯ್ತಲ್ಲ ಅಂತ ಬೇಸರಪಟ್ಟೆ. ಪುನಃ ಧಾರವಾಡಕ್ಕೆ ಬಂದೆ. ಅಷ್ಟರಲ್ಲಾಗಲೇ ಬಸ್‌ಸ್ಟಾಂಡಿನಲ್ಲಿ ಆ ಭಿಕ್ಷುಕನ ಬಗ್ಗೆ ಗುಸುಗುಸು ಶುರುವಾಗಿತ್ತು. ಆ ಭಿಕ್ಷುಕ ಬಹುದೊಡ್ಡ ಮೋಸಗಾರನಂತೆ.
* ಪ್ರವೀಣ ಜ. ಪಾಟೀಲ, ಹುಬ್ಬಳ್ಳಿ