Advertisement
ನೆಲ, ನೀರು ಓದಿ ಅರ್ಥಮಾಡಿಕೊಳ್ಳುವುದಕ್ಕೆ ತಾಂತ್ರಿಕ ತಜ್ಞತೆ ಮಾತ್ರ ಸಾಲುವುದಿಲ್ಲ, ನಿರಂತರವಾಗಿ ನೆಲ ನೋಡುವ ಅನುಭವವೂ ಬಲಿಯಬೇಕಾಗುತ್ತದೆ. ಕಳೆದ 2002ರಿಂದ ಕೆರೆ ನಿರ್ಮಾಣಕ್ಕೆ ನಿಂತು ಕೆಲಸವನ್ನು ಹತ್ತಿರದಿಂದ ನೋಡಲು ಶುರುಮಾಡಿದೆ. ಹೊಸ ಕೆರೆ ನಿರ್ಮಿಸಿದಾಗ ಮಳೆ ಬಂದ ತಕ್ಷಣ ಕೆರೆಗೆ ಓಡುವುದು ಅಭ್ಯಾಸವಾಯ್ತು. ಕೆರೆಯಲ್ಲಿ ಎಷ್ಟು ನೀರು ತುಂಬಿತೆಂದು ನೋಡುವ ತವಕವಿರುತ್ತಿತ್ತು. ಎಕರೆ ವಿಸ್ತೀರ್ಣದ ಒಂದು ಕೆರೆಯಲ್ಲಿ ಕೋಟ್ಯಂತರ ಲೀಟರ್ ಮಳೆ ನೀರು ಶೇಖರಣೆಯಾಗಿತ್ತು. ಹರಿದು ಹೋಗುವ ಮಳೆ ನೀರು ಕಣಿವೆಯ ಹೊಸಕೆರೆಯಲ್ಲಿ ನಿಲ್ಲಿಸಿದ ಖುಷಿಯಲ್ಲಿ ಈಜು ಸ್ಪರ್ಧೆ ಏರ್ಪಡಿಸಿದ್ದೆವು. ನೀರು ನಿಂತ ಹೊಸ ಕೆರೆ ವೀಕ್ಷಣೆಗೆ ಜನ ಬರಲು ಆರಂಭಿಸಿದರು. ವಿಶೇಷವೆಂದರೆ ಕೇವಲ 8-10 ದಿನಗಳಲ್ಲಿ ಕೆರೆಯ ನೀರೆಲ್ಲ ಇಂಗಿ ತಳಮುಟ್ಟಿತು. ಭೂಮಿಯ ಜಲದಾಹ ಭಯ ಹುಟ್ಟಿಸಿತು. ಪ್ರತಿ ವರ್ಷ ಮಳೆಗಾಲದಲ್ಲಿ ಒಮ್ಮೆ ಕೆರೆತುಂಬಿ ಇಂಗಿದರೆ 300 ಮೀಟರ್ ದೂರದ ಅಡಿಕೆ ತೋಟಕ್ಕೆ ಬೇಸಿಗೆಯಲ್ಲೂ ಹನಿ ನೀರು ಅಗತ್ಯವಿರಲಿಲ್ಲ. ನೀರಾವರಿ ಇಲ್ಲದೇ ಮಲೆನಾಡಿನ ತೋಟ ಬದುಕಿತು. ನಾಲ್ಕೈದು ವರ್ಷಗಳಲ್ಲಿ ಒಂದು ಸತ್ಯ ಸಾಬೀತಾಯಿತು. ಕೆರೆಯಲ್ಲಿ ಬೇಸಿಗೆಯಲ್ಲಿ ನೀರಿರದಿದ್ದರೂ ಮಳೆಯಲ್ಲಿ ಒಮ್ಮೆ ಭರ್ತಿಯಾಗಿ ಇಂಗಿದರೆ ತೋಟ ಹಸಿರಾಗಿರುತ್ತದೆಂದು ಅರ್ಥವಾಯ್ತು. ಕೆರೆ ತುಂಬಿದ ವರ್ಷ ತೋಟದ ಕಾಲುವೆಗಳಲ್ಲಿ ಮಾರ್ಚ್ ತಿಂಗಳಿನಲ್ಲೂ ನೀರಿರುತ್ತಿತ್ತು.
Related Articles
Advertisement
ಬಿದ್ದ ಹನಿಯನ್ನು ಬಿದ್ದಲ್ಲೇ ಇಂಗಿಸಬೇಕೆನ್ನುತ್ತೇವೆ. ಹನಿ ಹನಿ ಕೂಡಿ ಹಳ್ಳವಾದರೆ ಅಪಾರ ಪ್ರಮಾಣದ ಸಂಗ್ರಹಿಸಿ, ಇಂಗಿಸುವುದಕ್ಕೆ ದೊಡ್ಡ ದೊಡ್ಡ ಕೆರೆ ಜಲಾಶಯಗಳು ಬೇಕಾಗುತ್ತದೆ. ನಿಸರ್ಗ ನಮ್ಮ ಬೆಟ್ಟಗಳನ್ನು ನೀರಿಂಗುವ ಒಂದು ಅದ್ಭುತ ವ್ಯವಸ್ಥೆಯಾಗಿ ರೂಪಿಸಿದೆ. ಅದು ಭೂಮಿಗೆ ನೀರುಣಿಸುವ ವಿಧಾನ ತಾಯಿ ಎಳೆ ಶಿಶುವಿಗೆ ಹಾಲುಣಿಸುವ ರೀತಿಯಲ್ಲಿರುತ್ತದೆ. ಅರಣ್ಯದ ಗಿಡ ಮರಗಳ ಸಣ್ಣ ಸಣ್ಣ ಬೇರುಗಳು ಎದೆ ಹಾಲು ಕುಡಿಸಿದಂತೆ ನಿಧಾನಕ್ಕೆ ಇಂಗಿಸುತ್ತವೆ. ಮಳೆಯ ಪ್ರಮಾಣ, ಮಳೆ ದಿನಗಳು ಜಾಸ್ತಿ ಇದ್ದು, ಅರಣ್ಯವೂ ದಟ್ಟವಾಗಿದ್ದರೆ ನೀರಿಂಗಿಸಲು ಇಷ್ಟು ಸಾಕೇ ಸಾಕು. ಈಗ ಕಣಿವೆಗಳು ಜಲ ಬಳಕೆಯ ನೆಲೆಗಳಾಗಿವೆ. ಅಲ್ಲಿ ತೋಟ, ಮನೆ ನಿರ್ಮಿಸಿ ಕೃಷಿ ವಿಸ್ತರಣೆಯಾಗಿದೆ. ಆದರೆ ಗುಡ್ಡದಲ್ಲಿ ಕಾಡುಗಳಿಲ್ಲ. ಇದ್ದರೂ ಏಕಜಾತಿಯ ನೆಡುತೋಪುಗಳಿವೆ. ನಾವು ನೀರುಳಿಸುವುದು ಮರೆತು ಕಣಿವೆಯಲ್ಲಿ ಬಳಕೆ ಹೆಚ್ಚಿಸಿದ ಪರಿಣಾಮವನ್ನು “ûಾಮ ಫಲ’ ದಲ್ಲಿ ಅನುಭವಿಸುತ್ತಿದ್ದೇವೆ. ಮುಳ್ಳಿನ ಗಿಡಗಳು, ಹುಲ್ಲು ಬೆಳೆಯುವ ಅವಕಾಶ ನೀಡಿದರೆ ನಿಸರ್ಗ ಬಹುದೊಡ್ಡ ಬದಲಾವಣೆಯನ್ನು ಮೂರು ನಾಲ್ಕು ವರ್ಷಗಳಲ್ಲಿ ತೋರಿಸುತ್ತದೆ. ಆದರೆ ಮಾನವ ಮನಸ್ಸು ಕೃಷಿ ಬಳಕೆ ತಗ್ಗಿಸಿ ಅರಣ್ಯವನ್ನು ನೀರಿನ ನೆಲೆಯಾಗಿ ನೋಡಲು ಮನಸ್ಸು ಮಾಡುತ್ತಿಲ್ಲ. ಒಂದು ಮಳೆಗಾಲದಲ್ಲಿ ಎಕರೆಯಲ್ಲಿ ಕೋಟ್ಯಂತರ ಲೀಟರ್ ಮಳೆ ನೀರು ಸುರಿದು ಹೋಗುತ್ತಿದ್ದರೂ ಸಾವಿರಾರು ಎಕರೆ ಅರಣ್ಯದ ನಡುನ ಹಳ್ಳಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಅಳುತ್ತದೆಂದರೆ ನಮ್ಮ ಸಂರಕ್ಷಣೆಯ ಪ್ರಜ್ಞೆ ಇನ್ನೂ ಜಾಗೃತವಾಗಿಲ್ಲವೆಂದು ಅರ್ಥೈಸಬಹುದು. ನಮ್ಮ ಕೃಷಿಯ ದಾಖಲೆ ತೆಗೆದರೆ ನೂರಾರು ವರ್ಷಗಳಿಂದ ಗದ್ದೆ, ತೋಟ ನಿರ್ಮಿಸಿಕೊಂಡು ಬದುಕಿದ್ದು ತಿಳಿಯುತ್ತದೆ. ಕೃಷಿ ಭೂಮಿಯ ಒಡೆತನದ ಚರಿತ್ರೆಗೆ ಶತಮಾನಗಳ ಇತಿಹಾಸದ್ದರೂ ನೀರು ನಿರ್ವಹಣೆಯ ವಿಚಾರದಲ್ಲಿ ನಾವು ನಮ್ಮ ಭೂಮಿಯನ್ನು, ಕಾಡನ್ನು ಎಷ್ಟು ಅರ್ಥಮಾಡಿಕೊಂಡಿದ್ದೇವೆ? ನಮ್ಮ ಶಿಕ್ಷಣ ಪರಿಸರ ಸಂರಕ್ಷಣೆಯ ಕಲಿಕೆಯಾಗಿಲ್ಲವೇಕೆ? ಪ್ರಶ್ನೆ ಕಾಡುತ್ತದೆ. ಕಾಡು, ಮಳೆ, ಕೃಷಿ, ನೀರು ಓದುವುದನ್ನು ಈಗಲಾದರೂ ಕಲಿಯಬೇಕಿದೆ. ಇಷ್ಟು ವರ್ಷಗಳಿಂದ ಮಳೆ, ಪರಿಸರ ಅನುಭಸಿ ಬದುಕು ಕಟ್ಟಿದ ನಮಗೆ ಭೂಮಿ ಅರ್ಥವಾಗಿಲ್ಲವೆಂದರೆ ಅದು ನಮ್ಮ ದಡ್ಡತನ ತೋರಿಸುತ್ತದೆ. ನೀರಿನ ಬಣ್ಣ ತಿಳಿಯಲು ನಾವು ಕಾಡು ಶಾಲೆಯ ಮಕ್ಕಳಾಗೋಣ. ಶಿವಾನಂದ ಕಳವೆ