Advertisement

ಪ್ರಾರ್ಥನೆಯ ದೀಪ ಹಚ್ಚುವೆ, ಆರಿಸದಿರು ದೇವರೇ…

02:49 AM May 23, 2021 | Team Udayavani |

ಅದು ನರ್ಸಿಂಗ್‌ ಕಾಲೇಜು. ಅಲ್ಲಿದ್ದವರೆಲ್ಲ ಹೆಣ್ಣುಮಕ್ಕಳೇ. ಕಡೆಯ ವರ್ಷದ ವಿದ್ಯಾರ್ಥಿಗಳ ಎದುರು ನಿಂತು ಪ್ರೊಫೆಸರ್‌ ಅಪ್ಪಾಜಿ ಗೌಡರು ಹೇಳುತ್ತಿದ್ದರು: ದಾದಿಯರು ಮಾರುವೇಷದಲ್ಲಿರುವ ದೇವರು ಎಂಬ ಮಾತಿದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಆಸ್ಪತ್ರೆಗಳಲ್ಲಿ ವೈದ್ಯರಿಗೆ ಇದೆಯಲ್ಲ, ಅಷ್ಟೇ ಜವಾಬ್ದಾರಿ ನರ್ಸ್‌ ಗಳಿಗೂ ಇರುತ್ತದೆ. ನರ್ಸ್‌ಗಳು ಇಲ್ಲದ ಆಸ್ಪತ್ರೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.

Advertisement

ಕೋರ್ಸ್‌ ಮುಗಿಸಿಕೊಂಡು ಹೊರ ಹೋಗುವ ಮುನ್ನ, ನೀವೆಲ್ಲ ಕಾಯಿಲೆಯ ಬಗ್ಗೆ, ಚಿಕಿತ್ಸೆಯ ಬಗ್ಗೆ, ರೋಗಿಗಳ ಮನಃಸ್ಥಿತಿಯ ಬಗ್ಗೆ ಪ್ರತ್ಯಕ್ಷವಾಗಿ ತಿಳಿಯುವ ಅಗತ್ಯವಿದೆ. ಎಷ್ಟೋ ಬಾರಿ, ಪೇಶೆಂಟ್ಸ್‌ ತಮಗೇ ಗೊತ್ತಿಲ್ಲದಂತೆ ತಮ್ಮ ಕಾಯಿಲೆಯ ಕುರಿತು ಹಲವು ವಿಚಾರಗಳನ್ನು ಹೇಳುತ್ತಾರೆ. ಇದೆಲ್ಲ ನಿಮಗೆ ಅರ್ಥವಾಗಲಿ ಎಂಬ ಉದ್ದೇಶದಿಂದಲೇ, ರೋಗಿಗಳೊಂದಿಗೆ ಚರ್ಚಿಸಿ ಒಂದು ಟಿಪ್ಪಣಿ ಸಿದ್ಧಪಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ನಾಳೆಯಿಂದಲೇ ಎಲ್ರೂ ಆ ಕೆಲಸ ಆರಂಭಿಸಿ. ವಿಶಿಷ್ಟ, ವಿಭಿನ್ನ ಅನುಭವಗಳು ನಿಮಗೆ ದಕ್ಕಲಿ…

ವಿದ್ಯಾರ್ಥಿಗಳ ಅರಿವಿನ ಮಟ್ಟ ಹೆಚ್ಚಲಿ ಎಂಬ ಸದಾಶಯದಿಂದಲೇ ಪ್ರೊಫೆಸರ್‌ ಈ ಮಾತು ಹೇಳಿದ್ದರು. ಆದರೆ, ಅವರ ಮಾತು ಹೆಚ್ಚಿನ ವಿದ್ಯಾರ್ಥಿನಿಯರಿಗೆ ಇಷ್ಟವಾಗಿರಲಿಲ್ಲ. ಆಸ್ಪತ್ರೆ, ಅಲ್ಲಿ ತುಂಬಿಕೊಂಡ ಫಿನಾಯಿಲ್‌ನ ವಾಸನೆ ಎಂದೂ ಮುಗಿಯದಂಥ ಗದ್ದಲ, ರೋಗಿಗಳ ಸಂಕಟ, ಅವರ ಬಂಧುಗಳ ಗೋಳಾಟ, ವೈದ್ಯರ ನಿರ್ಭಾವುಕತೆ.. ಇದನ್ನೆಲ್ಲÉ ನೋಡುವ ಬದಲು ಆ ಕ್ಲಾಸ್‌ ಅನ್ನೇ ಬಂಕ್‌ ಮಾಡಿ ಹಾಸ್ಟೆಲ್‌ ರೂಮಿನಲ್ಲಿ ಆರಾಮಾಗಿ ಇದ್ದುಬಿಡಲು ಹೆಚ್ಚಿನವರು ನಿರ್ಧರಿಸಿದರು. ಪ್ರೊಫೆಸರ್‌ ಕೇಳಿದರೆ ಅನಾರೋಗ್ಯದ ನೆಪ ಹೇಳಿ ಜಾರಿಕೊಳ್ಳಬೇಕೆಂದೂ ಪ್ಲಾನ್‌ ಮಾಡಿದರು.

ಮೊದಲ ಎರಡು ದಿನ ಎಲ್ಲವೂ ವಿದ್ಯಾರ್ಥಿನಿಯರ ಪ್ಲಾನ್‌ನಂತೆಯೇ ನಡೆಯಿತು. ಆದರೆ ನಾಲ್ಕನೇ ದಿನ ಅವರೆಲ್ಲ ಆಸ್ಪತ್ರೆಗಳಿಗೆ ಹೋಗಲೇಬೇಕಾದ ಸಂದರ್ಭ ಎದುರಾಯಿತು. ಕೆಲವೊಂದು ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟು ಹಿಡಿದ ವೈದ್ಯರು, ಅದೇ ನೆಪದಲ್ಲಿ ಸಾಮೂಹಿಕ ರಜೆ ಹಾಕಿಬಿಟ್ಟರು. ಅವರನ್ನು ಬೆಂಬಲಿಸಿ ಕೆಲವು ನರ್ಸ್‌ಗಳೂ ಗೈರು ಹಾಜರಾದರು. ಈ ವಿಷಯದಲ್ಲಿ ರಾಜಿಯಾಗಲು ಸರಕಾರ ಒಪ್ಪದಿದ್ದರಿಂದ ಒಂದು ವಾರವಾದರೂ ಸರಕಾರಿ ವೈದ್ಯರು ಕೆಲಸಕ್ಕೆ ಹಾಜರಾಗಲಿಲ್ಲ. ಪರಿಣಾಮ, ವೈದ್ಯರು ಮತ್ತು ನರ್ಸ್‌ಗಳ ಕೊರತೆಯಿಂದ ಆಸ್ಪತ್ರೆಗಳಲ್ಲಿ ಹಾಹಾಕಾರವೆದ್ದಿತು. ಮಾನವೀಯ ದೃಷ್ಟಿಯಿಂದ ಕೆಲವೇ ವೈದ್ಯರು, ನರ್ಸ್‌ಗಳು ನೌಕರಿಗೆ ಹಾಜರಾದರು. ಇಂಥ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರ ಸೇವೆಯನ್ನೇ ಬಳಸಿಕೊಳ್ಳಲು ಸರಕಾರ ಮುಂದಾಯಿತು.

“”ಹೆಚ್ಚೇನೂ ಬೇಡ, ರೋಗಿಗಳ ಜತೆಗೆ ಪ್ರೀತಿಯಿಂದ ಮಾತಾಡಿ. ಅವರ ಕಷ್ಟ, ಕಾಯಿಲೆ, ಈಗಿನ ಸ್ಥಿತಿಯ ಬಗ್ಗೆ ಕೇಳಿ. ಅವರಿಗೆ ಧೈರ್ಯ ಹೇಳಿ. ಅಗತ್ಯವಿರುವ ಸಹಾಯ ಮಾಡಿ” ಎಂದು ಪ್ರೊಫೆಸರ್‌ ಸೂಚನೆ ನೀಡಿದ್ದರು. ಅವರ ಮಾತುಗಳನ್ನೇ ನೆನಪಿಸಿಕೊಳ್ಳುತ್ತಾ ಜನರಲ್‌ ವಾರ್ಡ್‌ಗೆ ಬಂದಳು ಸರಸ್ವತಿ. ಆಕೆಯ ಸಹಪಾಠಿಗಳು ಆಗಲೇ ಹಲವು ರೋಗಿಗಳ ಜತೆ ಮಾತಿಗೆ ತೊಡಗಿದ್ದರು. ಕಡೆಯ ಬೆಡ್‌ನ‌ಲ್ಲಿದ್ದ ಮುದುಕಿ ಸರಸ್ವತಿಯ ಕಣ್ಣಿಗೆ ಬಿದ್ದದ್ದೇ ಆಗ. ನಿಸ್ತೇಜಳಾಗಿ ಮಲಗಿದ್ದ ಆಕೆಯೊಂದಿಗೆ ಯಾರೊಬ್ಬರೂ ಇರಲಿಲ್ಲ. ಆಕೆಯನ್ನು ಮಾತಾಡಿಸಿ, ರೂಮಿಗೆ ಹೋಗಿಬಿಡುವುದು ಎಂದು ನಿರ್ಧರಿಸಿಯೇ ಅತ್ತನಡೆದಳು ಸರಸ್ವತಿ. ಬೆಡ್‌ಗೆ ಅಂಟಿಕೊಂಡಂತೆಯೇ ಇದ್ದ ಚಾರ್ಟ್‌ ನೋಡಿದಾಕ್ಷಣ ಆಕೆಯ ನಿರ್ಧಾರ ಬದಲಾಯಿತು. ಆ ಮುದುಕಿಯನ್ನು ಮೆಲ್ಲಗೆ ತಟ್ಟಿ ಎಬ್ಬಿಸಿ ಕೇಳಿದಳು: “ಅಲ್ಲಮ್ಮಾ, ನೀವು ಹಾರ್ಟ್‌ ಪೇಷೆಂಟ್‌. ಆಪರೇಷನ್‌ ಆಗಬೇಕಿದೆ. ಆದ್ರೂ ಒಬ್ಬರೇ ಇದ್ದೀರಾ. ಅಗತ್ಯವಿರುವ ಮೆಡಿಸಿನ್‌ ತಂದುಕೊಡಲಿಕ್ಕಾದ್ರೂ ಒಬ್ರು ಜತೆಗೆ ಇಬೇìಕು. ನಿಮ್‌ ಜತೆ ಯಾರೂ ಬಂದಿಲ್ವಾ?’ ಅಷ್ಟೆ: ಆ ಹೆಂಗಸಿನ ಕಂಗಳು ತುಂಬಿಕೊಂಡವು.

Advertisement

ಆಕೆ ಒಂದೊಂದೇ ಮಾತು ಜೋಡಿಸಿ ಕೊಂಡು ಹೇಳಿದಳು: “”ನನ್ನ ಗಂಡ ಎರಡು ವರ್ಷಗಳ ಹಿಂದೆ ಆಕ್ಸಿಡೆಂಟ್‌ನಲ್ಲಿ ಸತ್ತುಹೋದ ಮೇಡಂ. ಮನೆಯಲ್ಲಿ ಮೂವರು ಮಕ್ಕಳಿವೆ. 12 ವರ್ಷದವನೇ ದೊಡ್ಡ ಮಗ. ಅವನು ಮನೇಲಿದ್ದುಕೊಂಡು ಚಿಕ್ಕವರನ್ನು ನೋಡಿಕೊಳ್ತಾನೆ. ಕೂಲಿ ಮಾಡಿ ಬದುಕುವ ಹೆಂಗಸು ನಾನು. ಆಪರೇಷನ್‌ ಮಾಡಿಸಿಕೊಳ್ಳಲು ಆಗು ವಷ್ಟು ದುಡ್ಡಿಲ್ಲ. ಪರಿಚಯದ ಜನರಿಗೆಲ್ಲ ಬೇಡಿಕೊಂಡಿದ್ದೇನೆ. ಅವರು ದುಡ್ಡು ಹೊಂದಿಸೋಣ ಅಂದಿ¨ªಾರೆ ಮೇಡಂ. ಇಲ್ಲಿ, ದುಡ್ಡು ಕಟ್ಟಿದ ಅನಂತರ ಆಪರೇಷನ್‌ ಅಂದಿ¨ªಾರೆ. ನಾನು ಬೇಗ ಸತ್ತು ಹೋದ್ರೆ ನನ್ನ ಮಕ್ಕಳಿಗೆ ಯಾರು ದಿಕ್ಕು ಮೇಡಂ? ನಿಂಗೇನೂ ಆಗಲ್ಲಮ್ಮಾ. ನೀನು ಬದುಕ್ತೀಯ, ಹೆದರಿಕೋಬೇಡ ಅಂತ ಒಂದ್ಸಲ ಹೇಳಿಬಿಡಿ. ಡಾಕ್ಟರ್‌ ಮಾತು ನಿಜವಾಗುತ್ತೆ… ಅಂದು ಬಿಟ್ಟಳು.

ಇಂಥದೊಂದು ಸಂದರ್ಭ ಎದುರಾಗಬಹುದೆಂಬ ಕಲ್ಪನೆ ಕೂಡ ಸರಸ್ವತಿಗೆ ಇರಲಿಲ್ಲ. ರೋಗಿಯ ಬಂಧುಗಳ ಪ್ರಶ್ನೆಗಳಿಂದ ಪಾರಾಗಲೆಂದೇ ಆಕೆ ಈ ಒಂಟಿ ಮುದುಕಿಯ ಬಳಿಗೆ ಬಂದಿದ್ದಳು. 10 ನಿಮಿಷ ಮಾತಾಡಿ ಹೋಗಿ ಬಿಡಬೇಕು ಎಂದು ನಿರ್ಧರಿಸಿದ್ದಳು. ಆದರೆ, ಎಲ್ಲ ಲೆಕ್ಕಾಚಾರವೂ ಉಲ್ಟಾ ಆಗಿಬಿಟ್ಟಿತ್ತು. ತತ್‌ಕ್ಷಣವೇ ಸಾವರಿಸಿಕೊಂಡು- “ನಾನು ಡಾಕ್ಟರ್‌ ಅಲ್ಲಮ್ಮಾ, ನರ್ಸಿಂಗ್‌ ಸ್ಟೂಡೆಂಟ್‌. ನಿಮಗೇನೂ ಆಗಲ್ಲ, ಬೇಗ ಹುಷಾರಾಗ್ತಿàರಿ. ಇಷ್ಟರಲ್ಲೇ ಆಪರೇಷನ್‌ ಆಗುತ್ತೆ, ಧೈರ್ಯವಾಗಿರಿ’ ಅಂದಳು. ಆಗಲೇ, ಬೈ ಛಾನ್ಸ್ ಆಪರೇಷನ್‌ಗೆ ದುಡ್ಡು ಹೊಂದಿಸಲಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ತಡವಾದರೆ, ಅದೇ ಕಾರಣಕ್ಕೆ ಆಕೆ ಸತ್ತು ಹೋದರೆ ಎಂಬ ಆತಂಕವೂ ಸುಳಿದು ಹೋಯಿತು. ಏನನ್ನೋ ನಿರ್ಧರಿಸಿದ ಸರಸ್ವತಿ, ಆ ರೋಗಿಯ ಕೇಸ್‌ ಶೀಟ್‌ನ ಫೋಟೋ ತೆಗೆದುಕೊಂಡಳು. ಅವತ್ತೇ ರಾತ್ರಿ, ಈ ರೋಗಿಯ ಚಿಕಿತ್ಸೆಗೆ ನೆರವಾಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದಳು. ಅದಾಗಿ ಕೆಲವೇ ಗಂಟೆಗಳಲ್ಲಿ, ವೈದ್ಯರು ಮತ್ತು ದಾದಿಯರ ಬೇಡಿಕೆ ಈಡೇರಿ ಸಲು ಸರಕಾರ ಒಪ್ಪಿದ್ದರಿಂದ ಅವರೆಲ್ಲ ಮರುದಿನದಿಂದಲೇ ಕೆಲಸಕ್ಕೆ ಬರುವರೆಂದೂ ಸುದ್ದಿಯಾಯಿತು. ಪರಿಣಾಮ; ನರ್ಸಿಂಗ್‌ ವಿದ್ಯಾರ್ಥಿನಿಯರು ಆಸ್ಪತ್ರೆಗಳಿಗೆ ಹೋಗುವ “ಡ್ನೂಟಿ’ ಕೂಡ ರದ್ದಾಯಿತು.
***
ಹೀಗೇ ಎರಡು ತಿಂಗಳು ಕಳೆದುಹೋದವು. ಅದೊಂದು ಬೆಳಗ್ಗೆ ಅಂತಿಮ ವರ್ಷದ ತರಗತಿಗೇ ಬಂದ ಪ್ರೊಫೆಸರ್‌ ಅಪ್ಪಾಜಿ ಗೌಡರನ್ನು ಕಂಡು ಅಧ್ಯಾಪಕರು ಪಾಠ ನಿಲ್ಲಿಸಿದರು. ಗೌಡರು ಗಂಭೀರ ಧ್ವನಿಯಲ್ಲಿ- “ಸರಸ್ವತೀ, ಬಾ ಇಲ್ಲಿ. ಎಂಥಾ ಕೆಲಸ ಮಾಡಿದೆಯಮ್ಮಾ ನೀನು’ ಅಂದರು. ಏನೋ ಅನಾಹುತ ಆಗಿರಬೇಕು ಎಂದು ಉಳಿದವರು ಅಂದುಕೊಳ್ಳುತ್ತಿ¨ªಾಗಲೇ, ನನ್ನಿಂದ ಎಲ್ಲಿ, ಯಾವಾಗ, ಏನು ತಪ್ಪಾಯಿತು ಎಂದು ಯೋಚಿಸುತ್ತಲೇ ಡಯಾಸ್‌ನ ಕಡೆಗೆ ಗಾಬರಿಯಿಂದಲೇ ನಡೆದುಬಂದಳು ಸರಸ್ವತಿ. ಆಗಲೇ, ಬಾಗಿಲಿನ ಕಡೆಯಿಂದ ಆ ಹೆಂಗಸು ಬಂದೇ ಬಿಟ್ಟಳು.

ಅವಳೇ…ಆಸ್ಪತ್ರೆಯಲ್ಲಿ ಕಂಡಿದ್ದ ಮುದುಕಿ! ಜತೆಯಲ್ಲಿ ಆಕೆಯ ಮಕ್ಕಳಿ ದ್ದವು. ಸರಸ್ವತಿಯನ್ನು ಕಂಡು ಆಕೆಯ ಕಂಗಳು ತುಂಬಿ ಕೊಂಡವು. ಆಕೆ ಸರಸ್ವತಿಯ ಕೈಗಳನ್ನು ಹಿಡಿದು ಕಣ್ಣಿಗೊತ್ತಿಕೊಂಡು ಹೇಳಿದಳು: ನಿಮ್ಮ ಹಾರೈಕೆ ನಿಜ ಆಗೋಯ್ತು ಅಮ್ಮಾವರೇ, ದೇವರು ನಿಮ್ಮ ರೂಪದಲ್ಲಿ ನನ್ನ ಸಹಾಯಕ್ಕೆ ಬಂದ. ನನ್ನನ್ನು ಬದುಕಿಸಿಬಿಟ್ಟ. ನೀವು ಮಾತಾಡಿ ಹೋದಮೇಲೆ, ಗುರುತು- ಪರಿಚಯ ಇಲ್ಲದ ವರೆಲ್ಲ ನನ್ನ ಆಪರೇಷನ್‌ಗೆ ದುಡ್ಡು ಕೊಟ್ರಂತೆ. ನಿಮ್ಮ ಋಣವನ್ನ ನಾನು ಹೇಗೆ ತೀರಿಸೋದು ಅಮ್ಮಾವರೇ?- ಹೀಗೆ ಹೇಳುತ್ತಲೇ ಆಕೆ ಬಿಕ್ಕಳಿಸ ತೊಡಗಿದಳು. ಎರಡು ನಿಮಿಷ ಮೌನ. ಅನಂತರ ಪ್ರೊಫೆಸರ್‌ ಹೇಳಿದರು: “”ಸಾಮಾಜಿಕ ಜಾಲತಾಣದಲ್ಲಿ ಸರಸ್ವತಿ ಹಾಕಿದ ಪೋಸ್ಟ್ ನೋಡಿ ಯಾರ್ಯಾರೋ ಸಹಾಯ ಮಾಡಿದ್ದಾರೆ.

ಹಾಗಾಗಿ ಬೇಗ ಆಪರೇಷನ್‌ ಆಗಿದೆ. ಪಾಪ, ಈ ಹೆಂಗಸಿನ ಮುಗ್ಧತೆ ನೋಡಿ: ತನಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಹೇಳಲು ಮತ್ತೆ ಆಸ್ಪತ್ರೆಗೆ ಹೋಗಿದ್ದಾಳೆ. ಅಲ್ಲಿ ಎರಡು ದಿನ ಅಲೆದಾಡಿ ಎಲ್ಲ ವಿವರ ಪಡೆದು ಇಲ್ಲಿಗೆ ಬಂದಿದ್ದಾಳೆ. ಸರಸ್ವತಿಯ ಥರಾನೇ ನೀವೂ ದೇವರ ಮುಂದೆ ಪ್ರಾರ್ಥನೆಯ ದೀಪಗಳನ್ನು ಹಚ್ಚಿ ಇಡಬೇಕು. ಯಾವ ದೀಪವೂ ಆರಿ ಹೋಗದಂತೆ ನೋಡಿಕೋ ಎಂದು ದೇವರನ್ನು ಕೇಳಿಕೊಳ್ಳಬೇಕು” ಎಂದರು. ಅನಂತರ- ಸರಸ್ವತೀ, ನಿನ್ನ ಬಗ್ಗೆ ಹೆಮ್ಮೆ ಅನ್ನಿಸ್ತಿದೆ, ಅಂದರು. ಏನು ಹೇಳಲೂ ತೋಚದೆ ಆ ಮುದುಕಿಯನ್ನೂ, ಅವಳ ಮಕ್ಕಳನ್ನೂ ತಬ್ಬಿಕೊಂಡಳು ಸರಸ್ವತಿ. ಅವಳ ಕಂಗಳಲ್ಲಿ ಸಂಭ್ರಮದ ಹೊಳಪಿತ್ತು…

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next