Advertisement

ಪುನಃಶ್ಚೇತನಗೊಂಡ ಐತಿಹಾಸಿಕ ಬಾವಿಗಳಲ್ಲೀಗ ಜೀವಸೆಲೆ

03:37 PM Mar 08, 2018 | |

ವಿಜಯಪುರ: ಸ್ಥಳೀಯರ ನಿರ್ಲಕ್ಷ್ಯದಿಂದ ತ್ಯಾಜ್ಯದ ಗುಂಡಿಗಳಾಗಿದ್ದ ನಗರದ ಐತಿಹಾಸಿಕ ಕುಡಿಯುವ ನೀರಿನ
ಬಾವಿಗಳು, ಪುನಶ್ಚೇತನಗೊಂಡು ಜೀವಸೆಲೆ ಉಕ್ಕಿಸುತ್ತಿವೆ. ಪರಿಣಾಮ ಇದೀಗ ನಗರದ ವಿವಿಧ ಬಡಾವಣೆ ಜನರಿಗೆ ಪರಿಶುದ್ಧ ನೀರು ಒದಗಿಸುವ ಜೀವಜಲ ಕೇಂದ್ರಗಳಾಗಿ ರೂಪುಗೊಂಡಿದೆ.

Advertisement

ವಿಜಯಪುರ ನಗರವನ್ನು ರಾಜಧಾನಿ ಮಾಡಿಕೊಂಡು ರಾಜನ್ನಾಳಿದ ಆದಿಲ್‌ ಶಾಹಿ ಅರಸರು ಭೀಕರ ಬರಕ್ಕೆ ಹೆಸರಾದ ವಿಜಯಪುರ ರಾಜ್ಯದಲ್ಲಿ ಜಲ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿದ್ದರು. ಪರಿಣಾಮ ವಿಜಯಪುರ ನಗರ ಮಾತ್ರವಲ್ಲ ಜಿಲ್ಲೆಯ ಹಲವು ಕಡೆಗಳಲ್ಲಿ ಕುಡಿಯುವ ನೀರಿಗಾಗಿ ವಿಶೇಷ ತಾಂತ್ರಿಕ ನೈಪುಣ್ಯತೆಯ ಬಾವಡಿ-ಬಾವಿ, ತಾಲಾಬ-ಕೆರೆಗಳನ್ನು ನಿರ್ಮಿಸಿದ್ದರು. ವಿಜಯಪುರ ನಗರದಲ್ಲಿಯೂ ಹಲವು ಬಾವಿಗಳನ್ನು ತೆರೆದಿದ್ದು, ಸ್ಥಳೀಯರ ನಿರ್ಲಕ್ಷ್ಯದ ಬಳಿಕ 19 ಬಾವಡಿಗಳು ಮಾತ್ರ ಅಷ್ಟಿಷ್ಟು ಜೀವ ಉಳಿಸಿಕೊಂಡಿದ್ದವು.

ಈ ಬಾವಡಿಗಳು ಅಂದು ರಾಜಧಾನಿ ಕೇಂದ್ರವಾಗಿದ್ದ ವಿಜಯಪುರದ 9 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರು ಒದಗಿಸುತ್ತಿದ್ದವು. ಆದರೆ ಜೀವಜಲಕ್ಕೆ ಆಧಾರವಾಗಿದ್ದ ಬಾವಿಗಳು ನಿರ್ಲಕ್ಷ್ಯದ ಪರಿಣಾಮ ಸ್ಥಳೀಯರ ತ್ಯಾಜ್ಯ ಸಂಗ್ರಹ ಕೇಂದ್ರಗಳಾಗಿ, ನಿರ್ಜೀವವಾಗಿದ್ದವು.

ಈ ದುಸ್ಥಿತಿ ಕಂಡ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ನಗರದ ನಿಸ್ತೇಜ ಬಾವಡಿಗಳಿಗೆ ಪುನರ್ಜನ್ಮ
ನೀಡಲು ಮುಂದಾಗಿ, ಕಸದಿಂದ ಹೂಳು ತುಂಬಿದ್ದ ಬಾವಿಗಳನ್ನು ತಮ್ಮ ಇಲಾಖೆಯ ಗುತ್ತಿಗೆದಾರರು ಹಾಗೂ
ಅಧಿಕಾರಿಗಳ ಸಹಭಾಗಿತ್ವದಲ್ಲಿ ಪುನಶ್ಚೇತನ ಮಾಡಿಸಿದರು. ಪರಿಣಾಮ ನಗರದಲ್ಲಿರುವ ಸುಮಾರು 19 ಬಾವಡಿಗಳಲ್ಲಿ ಮತ್ತೆ ಜಲಸೆಲೆ ಸೃಷ್ಟಿಯಾಗಿ, ಇದೀಗ ಕುಡಿಯುವ ನೀರು ಒದಗಿಸುವ ಜೀವಜಲ ಕೇಂದ್ರಗಳಾಗಿವೆ.

ನಗರದಲ್ಲಿ ಐತಿಹಾಸಿಕ ಬಾವಿಗಳ ಪುನಶ್ಚೇತನ ಕಾರ್ಯವನ್ನು ಕಂಡು ಜಲಸಾಕ್ಷರ ತಜ್ಞ ಡಾ| ರಾಜೇಂದ್ರಸಿಂಗ್‌ ನಗರಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ತಮ್ಮ ನೇತೃತ್ವದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಜಲ ಜಾಗೃತಿ ಅಭಿಯಾನದ ಸಮಾರೋಪ ಸಮಾವೇಶವನ್ನು ನವದೆಹಲಿ ಬದಲಾಗಿ ವಿಜಯಪುರ ನಗರದಲ್ಲೇ ನಡೆಸಿದ್ದರು.

Advertisement

ಇದೀಗ ಪುನಶ್ಚೇತನಗೊಂಡಿರುವ ಐತಿಹಾಸಿಕ ಎಲ್ಲ ಬಾವಡಿ-ಬಾವಿಗಳ ಆವರಣದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ. ಪ್ರಾಯೋಗಿಕವಾಗಿ ನಗರದ ತಾಜಬಾವಡಿ, ಮಾಸಾಬಾವಡಿ ಮತ್ತು ಇಬ್ರಾಹಿಂಪುರ ಬಾವಡಿಗಳಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಘಟಕ, ತಲಾ 2.5 ಲಕ್ಷ ರೂ.ವೆಚ್ಚದಲ್ಲಿ ಸಾದಾ ನೀರು ಪೂರೈಕೆ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ. 

ಸದರಿ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಪ್ರಾಯೋಗಿಕ ಯೋಜನೆಗೆ ಇಬ್ರಾಹಿಂಪುರ ಬಾವಡಿಯಲ್ಲಿ ಮಾ. 11ರಂದು ಸಚಿವ ಡಾ| ಎಂ.ಬಿ. ಪಾಟೀಲ ಚಾಲನೆ ನೀಡಲಿದ್ದಾರೆ. ಹಂತ-ಹಂತವಾಗಿ ಎಲ್ಲ ಬಾವಡಿಗಳಲ್ಲೂ ಈ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ವಿವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next