Advertisement

ಆರು ತಿಂಗಳ ಸೇವೆಯೇ ಲೈಫ್ಟೈಮ್‌ ವ್ಯಾಲಿಡಿಟಿಯಾ?

06:00 AM Dec 10, 2018 | |

ಈ ಲೈಫ್ ಟೈಮ್‌ ವ್ಯಾಲಿಡಿಟಿ ಪ್ಲಾನ್‌ ಪ್ರಕಾರ, ಗ್ರಾಹಕ ಯಾವುದೇ ಮಾದರಿಯ ದೂರವಾಣಿ ವ್ಯವಹಾರ ನಡೆಸದಿದ್ದರೂ ಆತನ ಸಿಮ್‌ ವ್ಯಾಲಿಡಿಟಿ ಕೊನೇಪಕ್ಷ ಆ ಸೇವಾ ಕಂಪನಿಯ ಪರವಾನಗಿಯ ಅವಧಿಯವರೆಗೆ ಚಾಲನೆಯಲ್ಲಿರುತ್ತದೆ. ಇದನ್ನು ಟಾರಿಫ್ ಆರ್ಡರ್‌ನ 48ನೇ ತಿದ್ದುಪಡಿಯಲ್ಲಿ ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ. ಏರ್‌ಟೆಲ್‌ನಂಥ ಕಂಪನಿ ತನ್ನ ಲೈಫ್ಟೈಮ್‌ ಗ್ರಾಹಕರಿಗೆ 2029ರವರೆಗೆ ವ್ಯಾಲಿಡಿಟಿ ಎಂದು ಘೋಷಿಸಿತ್ತು. ಈಗ ಅದಕ್ಕೆ ದಿಢೀರ್‌ ಆಗಿ ಕೊಕ್‌ ನೀಡಿದೆ.

Advertisement

ಇತ್ತೀಚಿನ 15 ದಿನಗಳ ಬೆಳವಣಿಗೆಯಲ್ಲಿ ಮೊಬೈಲ್‌ ಸೇವಾದಾತರ ಜಾಣ್ಮೆಯನ್ನು ಕಂಡು ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಆಶ್ವರ್ಯ ಚಕಿತವಾಗಿರುವಂತಿದೆ. ಕೆಲದಿನಗಳಿಂದ ಏರ್‌ಟೆಲ್‌, ವೊಡಾಫೋನ್‌, ಐಡಿಯಾ ಮೊದಲಾದ ಕಂಪನಿಗಳು ಪ್ರೀ ಪೇಯ್ಡ ಸಿಮ್‌ಗಳನ್ನು ಸಂಪೂರ್ಣವಾಗಿ ಚಾಲನೆಯಲ್ಲಿಡಲು ಪ್ರತಿ ತಿಂಗಳು ಕನಿಷ್ಠ 35 ರೂ.ಗಳ ವ್ಯಾಲಿಡಿಟಿ ರೀಚಾರ್ಜ್‌ ಮಾಡಬೇಕಾಗುತ್ತದೆ ಎಂಬ ನೂತನ ನಿಯಮವನ್ನು ಜಾರಿಗೊಳಿಸಿವೆ. ದುರಂತವೆಂದರೆ, ಅವುಗಳು ಈ ಯೋಜನೆಯನ್ನು ರೂಪಿಸಿರುವಾಗ ತನ್ನದೇ ಆದ ಮೂರು ನಿರ್ದೇಶನಗಳನ್ನು ಸಂಪೂರ್ಣವಾಗಿ ತಟಸ್ಥಗೊಳಿಸಿವೆ ಎಂಬುದರ ಅರಿವೂ ಇಲ್ಲದೆ ಟ್ರಾಯ್‌, ಗ್ರಾಹಕನಿಗೆ ಮೂರು ದಿನಗಳ ಮುನ್ನ ಮಾಹಿತಿ ನೀಡಬೇಕು, ಪಾರದರ್ಶಕವಾಗಿರಬೇಕು ಎಂಬ ಅಬ್ಬೇಪಾರಿ ಷರತ್ತುಗಳನ್ನು ಹಾಕಿ ತಾನು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ಪ್ರತಿಪಾದಿಸಲು ಹೊರಟಿದೆ.

ಲೈಫ್ಟೈಮ್‌ ವ್ಯಾಖ್ಯಾನಕ್ಕೆ ಕಡ್ಲೆಪುರಿ?
ಹಲವು ವರ್ಷಗಳ ಹಿಂದೆ ಮೊಬೈಲ್‌ ಸೇವಾದಾತರು ಲೈಫ್ಟೈಮ್‌ ಎಂಬ ಘೋಷವಾಕ್ಯಗಳ ಜೊತೆ ಸಿಮ್‌ ವಿತರಿಸಲಾರಂಭಿಸಿದಾಗ ಮಧ್ಯಪ್ರವೇಶಿಸಿದ ಟ್ರಾಯ್‌, ಲೈಫ್ಟೈಮ್‌ ಎಂದರೆ ಜೀವನಪರ್ಯಂತ ಎಂಬ ಅರ್ಥವಲ್ಲ. ಎಲ್ಲಿಯವರೆಗೆ ಮೊಬೈಲ್‌ ಸೇವಾದಾತರ ಲೈಸೆನ್ಸ್‌ ಅವಧಿ ಇರುತ್ತದೋ ಅಲ್ಲಿಯವರೆಗೆ ಮಾತ್ರ ವ್ಯಾಲಿಡಿಟಿ ಅನ್ವಯ ಎಂದು ಘೋಷಿಸಿತ್ತು. 2006ರ 43ನೇ ಟ್ರಾಯ್‌ ಟಾರೀಫ್ ತಿದ್ದುಪಡಿಯ ಪ್ರಕಾರ ಜೀವನಪರ್ಯಂತ ಗ್ರಾಹಕ ಯೋಜನೆ ಜಾರಿಗೆ ಬಂದಿತ್ತು. ಈ ಲೈಫ್ ಟೈಮ್‌ ವ್ಯಾಲಿಡಿಟಿ ಪ್ಲಾನ್‌ ಪ್ರಕಾರ, ಗ್ರಾಹಕ ಯಾವುದೇ ಮಾದರಿಯ ದೂರವಾಣಿ ವ್ಯವಹಾರ ನಡೆಸದಿದ್ದರೂ ಆತನ ಸಿಮ್‌ ವ್ಯಾಲಿಡಿಟಿ ಕೊನೇಪಕ್ಷ ಆ ಸೇವಾ ಕಂಪನಿಯ ಪರವಾನಗಿಯ ಅವಧಿಯವರೆಗೆ ಚಾಲನೆಯಲ್ಲಿರುತ್ತದೆ. ಇದನ್ನು ಟಾರಿಫ್ ಆರ್ಡರ್‌ನ 48ನೇ ತಿದ್ದುಪಡಿಯಲ್ಲಿ ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ. ಏರ್‌ಟೆಲ್‌ನಂಥ ಕಂಪನಿ ತನ್ನ ಲೈಫ್ಟೈಮ್‌ ಗ್ರಾಹಕರಿಗೆ 2029ರವರೆಗೆ ವ್ಯಾಲಿಡಿಟಿ ಎಂದು ಘೋಷಿಸಿತ್ತು. ಈಗ ಅದಕ್ಕೆ ದಿಢೀರ್‌ ಆಗಿ ಕೊಕ್‌ ನೀಡಿದೆ.

ಏರ್‌ಟೆಲ್‌ ತನ್ನ ಲಾಭ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿದೆ. ಅದರ ಗ್ರಾಹಕರ ಸಂಖ್ಯೆ 330 ಮಿಲಿಯನ್‌ ಇದ್ದರೂ ಅದರಲ್ಲಿ ಹತ್ತಿರಹತ್ತಿರ 100 ಮಿಲಿಯನ್‌ ಸಿಮ್‌ಗಳಿಂದ ಅತ್ಯಂತ ಕಡಿಮೆ ಕಂದಾಯ ಸಂಗ್ರಹವಾಗುತ್ತಿರುವುದು ಬೆಳಕಿಗೆ ಬಂದಿದೆ. ಈ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿಗೆ ಅದು ಚಾಣಾಕ್ಷ ತಂತ್ರವನ್ನೇ ಹೆಣೆದಿದೆ. ಮೊತ್ತಮೊದಲಾಗಿ ತನ್ನ ಲೈಫ್ಟೈಮ್‌ ವ್ಯಾಲಿಡಿಟಿಯ ಭರವಸೆಯನ್ನು ಹಿಂತೆಗೆದುಕೊಂಡಿದೆ. ಇದು ಕಾನೂನು ಉಲ್ಲಂಘನೆ. ಇದನ್ನು ಸುಮೋಟೋ ಆಗಿ ಟ್ರಾಯ್‌ ಪ್ರಶ್ನಿಸಬೇಕಿತ್ತು. ಟ್ರಾಯ್‌ನ ನಿಯಮಗಳ ಪ್ರಕಾರವೇ ಒಂದು ಪ್ಲಾನ್‌ ಘೋಷಣೆಯಾದ ನಂತರ ಅದಕ್ಕೆ ಕನಿಷ್ಠ ಆರು ತಿಂಗಳ ವ್ಯಾಲಿಡಿಟಿ ಇರುತ್ತದೆ. ಈ ವೇಳೆಯೊಳಗೆ ಗ್ರಾಹಕ ತನ್ನ ಪ್ಲಾನ್‌ ಬದಲಿಸಬಹುದೇ ವಿನಃ ಕಂಪನಿ ಪ್ಲಾನ್‌ಅನ್ನು ಗ್ರಾಹಕನಿಂದ ಕಿತ್ತುಕೊಳ್ಳುವಂತಿಲ್ಲ. ಅಲ್ಲದೆ ಈಗಾಗಲೇ 2029ರವರೆಗೆ ಲೈಫ್ಟೈಮ್‌ ವ್ಯಾಲಿಡಿಟಿ ಎಂದವರಿಂದ ವ್ಯಾಲಿಡಿಟಿಯನ್ನು ಕಸಿದುಕೊಳ್ಳುವುದು ಕೂಡ ಕಾನೂನು ಸಮ್ಮತವಲ್ಲ. ಹೊಸದಾಗಿ ಬರುವವರಿಗೆ ಲೈಫ್ಟೈಮ್‌ ಎಂದರೆ ಆರು ತಿಂಗಳು ಮಾತ್ರ ಎಂದು ಅದು ಅನ್ನಬಹುದು!

ಟ್ರಾಯ್‌ ಮೌನಸಮ್ಮತಿ? 
ಈಗ ಪ್ರತಿ ಕಡಿಮೆ ಬಳಕೆ ಸಿಮ್‌ಗೆ ಮಾಸಿಕ 35 ರೂ.ಗಳ ರೀಚಾರ್ಜ್‌ ಮಾಡಿದರೆ ಮಾತ್ರ ಕರೆ ಮಾಡುವ, ಎಸ್‌ಎಂಎಸ್‌ ಕಳುಹಿಸುವ ತರಹದ ಹೊರಹೋಗುವ ಸೇವೆಗಳನ್ನು ನೀಡುತ್ತೇವೆ ಎಂದು ಏರ್‌ಟೆಲ್‌ ಘೋಷಿಸಿದೆ. ಉಳಿದ ಟಿಎಸ್‌ಪಿ ಕಂಪನಿಗಳದ್ದು ಬಹುಪಾಲು ಈ ತರಹದ್ದೇ ಧ್ವನಿ. ಮತ್ತೆ ಟ್ರಾಯ್‌ ನಿರ್ದೇಶನಗಳನ್ನು ಗಮನಿಸಬೇಕಾಗುತ್ತದೆ. ಟ್ರಾಯ್‌ ಪ್ರಕಾರ, ಮೂರು ರೀತಿಯ ರೀಚಾರ್ಜ್‌ಗಳಿಗೆ ಅವಕಾಶವಿದೆ. ಪ್ಲಾನ್‌ ರೀಚಾರ್ಜ್‌ ಅಲಿಯಾಸ್‌ ವ್ಯಾಲಿಡಿಟಿ ರೀಚಾರ್ಜ್‌, ಟಾಪ್‌ಅಪ್‌ ಹಾಗೂ ಮೌಲ್ಯವರ್ಧಿತ ಸೇವಾ ರೀಚಾರ್ಜ್‌ ಅಲಿಯಾಸ್‌ ವ್ಯಾಸ್‌. ಪ್ಲಾನ್‌ ರೀಚಾರ್ಜ್‌ ಸೇವೆಯು ದರಪಟ್ಟಿಯನ್ನು ಹಾಗೂ ಆರು ತಿಂಗಳ ವ್ಯಾಲಿಡಿಟಿಯನ್ನು ಹೊಂದಿರಲೇಬೇಕು. ಟಾಕ್‌ಟೈಮ್‌ ಕೊಡುವುದು ಬಿಡುವುದು ಆಯಾ ಕಂಪನಿಗಳ ತೀರ್ಮಾನ. ಏರ್‌ಟೆಲ್‌ 23 ದಿನಗಳ ಪ್ಲಾನ್‌ ರೀಚಾರ್ಜ್‌ ಆಫ‌ರ್‌ ತಂದಿದೆ. ಇದರಲ್ಲಿ ಆರು ತಿಂಗಳ ವ್ಯಾಲಿಡಿಟಿ ಇಲ್ಲ. ಕೇವಲ 28 ದಿನಗಳ ವ್ಯಾಲಿಡಿಟಿ. ಪ್ಲಾನ್‌ ವೋಚರ್‌ 23 ಎಂದು ಕರೆಸಿಕೊಳ್ಳುವ ಈ ರೀಚಾರ್ಜ್‌ನಲ್ಲಿ ಟಾಕ್‌ಟೈಮ್‌ ಇಲ್ಲ. ಆರು ತಿಂಗಳ ವ್ಯಾಲಿಡಿಟಿ ಕೊಡದ ಪ್ಲಾನ್‌ ವೋಚರ್‌ಗಳ ವಿಚಾರದಲ್ಲಿ ಟ್ರಾಯ್‌ ಮಧ್ಯಪ್ರವೇಶಿಸಿ ಗ್ರಾಹಕರ ಪರ ನಿಲ್ಲಬೇಕಿತ್ತು.

Advertisement

ನಿರ್ಜೀವ ಸಿಮ್‌ಗಳ ವಿಚಾರದಲ್ಲಿ ಕೂಡ ಟ್ರಾಯ್‌ ಈ ಹಿಂದೆ ತಲೆಕೆಡಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಟ್ರಾಯ್‌ 2013ರಲ್ಲಿ ಗ್ರಾಹಕ ಹಿತರಕ್ಷಣಾ ನಿಯಮ 2013ಕ್ಕೆ 6ನೇ ತಿದ್ದುಪಡಿಯನ್ನು ಜಾರಿಗೊಳಿಸಿ ಬಳಕೆಯಲ್ಲಿಲ್ಲದ ಸಿಮ್‌ಗಳನ್ನು ಕಂಪನಿ ಮರಳಿ ಪಡೆಯುವ ವಿಶೇಷ ಅವಕಾಶವನ್ನು ಒದಗಿಸಿಕೊಟ್ಟಿತು. ಇದೇ ವೇಳೆ ಟಿಎಸ್‌ಪಿಗಳು ರಂಗೋಲಿ ಕೆಳಗೆ ನುಸುಳದಂತೆ ಹತ್ತಾರು ಪ್ರತಿಬಂಧಕಗಳನ್ನೂ ಸೂಚಿಸಿತು.

ನಿರ್ಜೀವ ಸಿಮ್‌ ವ್ಯಾಖ್ಯಾನ 
ಹೊಸ ಸಿಮ್‌ ಚಾಲ್ತಿಗೆ ಬಂದ ಮೊದಲ ಆರು ತಿಂಗಳು ಸೇವಾದಾತರು ಪ್ಲಾನ್‌ ಬದಲಿಸುವ ಹಕ್ಕನ್ನೇ ಪಡೆದಿಲ್ಲ. ಇನ್ನು ಅನೂರ್ಜಿತಗೊಳಿಸುವುದಂತೂ ಸಾಧ್ಯವೇ ಇಲ್ಲ. ಇದರ ನಂತರ, ಒಂದು ಸಿಮ್‌ ಬಳಕೆಯಲ್ಲಿಲ್ಲ ಎಂಬುದು 90 ದಿನಗಳ ಅವಧಿಯ “ನೋ ಯೂಸ್‌’ ಅವಧಿಯನ್ನು ದಾಟಿರಬೇಕು. ಇದರ ಒಟ್ಟು ಅರ್ಥ ಇಷ್ಟೇ, ಒಬ್ಬ ಗ್ರಾಹಕ ಸಿಮ್‌ನ್ನು ಸರಿಸುಮಾರು ಒಂಬತ್ತು ತಿಂಗಳವರೆಗೆ ಯಾವುದೇ ರೀತಿಯಲ್ಲಿ ಬಳಸದಿದ್ದರೂ ಅದು ಊರ್ಜಿತ ಅವಸ್ಥೆಯಲ್ಲಿರಬೇಕು.

ಒಂದು ನಂಬರ್‌ನಿಂದ ಒಳಬರುವ ಕರೆಗಳನ್ನು ಸ್ವೀಕರಿಸಿರುವುದು ಅಥವಾ ಕರೆ ಮಾಡಿರುವುದು ಸಿಮ್‌ ಚಾಲ್ತಿಯ ಸಂಕೇತ. ಬೇರೆಯವರಿಗೆ ಎಸ್‌ಎಂಎಸ್‌ ಕಳುಹಿಸಿದ್ದನ್ನೂ ಸಜೀವ ಲಕ್ಷಣದಲ್ಲಿ ಸೇರಿಸಲಾಗಿದೆ. ಡಾಟಾ ಬಳಕೆ ಮಾಡುತ್ತಿದ್ದರೆ, ಮೌಲ್ಯ ವರ್ಧಿತ ಸೇವೆ ವ್ಯಾಸ್‌ ಚಾಲನೆಯಲ್ಲಿದ್ದರೆ ಸಿಮ್‌ಅನ್ನು ಅನೂರ್ಜಿತಗೊಳಿಸುವಂತಿಲ್ಲ. ಪೋಸ್ಟ್‌ಪೇಯ್ಡನಲ್ಲಿ ಓರ್ವ ಗ್ರಾಹಕ ಈ ಮೇಲಿನ ಯಾವೊಂದು ಕ್ರಮವನ್ನು ತೆಗೆದುಕೊಂಡಿಲ್ಲದಿದ್ದರೂ ಬಾಡಿಗೆಯನ್ನು ನಿಯುತವಾಗಿ ಪಾವತಿಸುತ್ತಿದ್ದರೆ ಆತನ ನಂಬರ್‌ಅನ್ನು ನಿಷ್ಕ್ರಿಯಗೊಳಿಸುವಂತಿಲ್ಲ. ಟ್ರಾಯ್‌ ಇನ್ನೂ ಮುಂದುವರೆದು, ಈ ನಿಯಮಗಳ ಹೊರತಾಗಿ ಸಿಮ್‌ ಊರ್ಜಿತದ ಹೊಸ ಮಾನದಂಡಗಳನ್ನು ಕೂಡ ಕೊಡಲು ಸೇವಾದಾತರು ಸ್ವತಂತ್ರರಿದ್ದಾರೆ ಎಂದು ಘೋಸಿದೆ. ಈ ಅವಕಾಶವನ್ನೇ ಮೊಬೈಲ್‌ ಕಂಪನಿಗಳು ದುರುಪಯೋಗಪಡಿಸಿಕೊಂಡು ಈಗ ಹೊಸ ಸೂತ್ರಗಳನ್ನು ರೂಪಿಸುತ್ತಿವೆ. ಆದರೆ ಈ ಹೊಸ ಮಾರ್ಪಾಡು ಮೂಲ ನಿಯಮಗಳನ್ನು ಉಲ್ಲಂ ಸಬಾರದು ಎಂಬುದು ಮೊದಲು ಟ್ರಾಯ್‌ಗೆ ಅರ್ಥವಾಗಬೇಕಾಗಿದೆ.

ಬಡ್ಡಿ ರಹಿತ ಠೇವಣಿ!
ಒಂದೊಮ್ಮೆ ಸಿಮ್‌ನಲ್ಲಿ ಟಾಕ್‌ಟೈಮ್‌ 20 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಇದ್ದಲ್ಲಿ ವ್ಯಾಲಿಡಿಟಿ ಅವಧಿ ಮುಗಿಯುವುದಕ್ಕೆ ಮುನ್ನ ಸಿಮ್‌ನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ ಎಂದು ಅವತ್ತು ಟ್ರಾಯ್‌ ಹೇಳಿತ್ತು. ಈಗ ಮೊಬೈಲ್‌ ಕಂಪನಿಗಳು ಚಾಲ್ತಿಯಲ್ಲಿಲ್ಲದ ಸಿಮ್‌ನಿಂದ ನಿರ್ದಿಷ್ಟ ಮಾಸಿಕ ರೀಚಾರ್ಜ್‌ ನಡೆಯದಿದ್ದರೆ ಟಾಕ್‌ಟೈಮ್‌ನಿಂದ ಮೂರು ತಿಂಗಳಿಗೆ 20 ರೂ. ಕನ್ನ ಹಾಕುವ ನಿಯಮವನ್ನು ಚಾಲ್ತಿಗೆ ತಂದಿವೆ. ಒಂದೊಮ್ಮೆ ಡಿಯಾಕ್ಟೀವ್‌ ಆದ ಸಿಮ್‌ನ್ನು ಕೂಡ 35 ರೂ. ರೀಚಾರ್ಜ್‌ ಮೂಲಕ ಮೂರು ತಿಂಗಳಲ್ಲಿ ಮರುಚಾಲನೆಗೊಳಿಸಿಕೊಳ್ಳಬಹುದು ಎಂದು ಹೇಳಲಾಗಿದೆ. 

ಈ ಬಗ್ಗೆ ಟ್ರಾಯ್‌ ಮರುಚಿಂತನೆ ನಡೆಸಬೇಕಾಗಿದೆ. ಒಬ್ಬ ಗ್ರಾಹಕ ಟಾಕ್‌ಟೈಮ್‌ ಖರೀದಿಸಿದ್ದಾನೆ ಎಂತಾದರೆ ಆತ ತನ್ನ ಹಣವನ್ನು ಸೇವಾದಾತರಲ್ಲಿ ಠೇವಣಿ ಇರಿಸಿದಂತೆ. ಅದನ್ನು ಆತ ಬಳಸಿಕೊಳ್ಳದಿರುವವರೆಗೆ ಮೊಬೈಲ್‌ ಕಂಪನಿ ಆ ಹಣವನ್ನು ಮುಫ‌ತ್ತಾಗಿ ಬಳಸಿಕೊಳ್ಳುತ್ತಿದೆ ಎಂತಲೇ ಅರ್ಥ. ಈ ರೀತಿ ಟಾಕ್‌ಟೈಮ್‌ನಲ್ಲಿ ಇರಿಸಿದ ಮೊತ್ತಕ್ಕೆ ಯಾವುದೇ ಮೊಬೈಲ್‌ ಸೇವಾ ಕಂಪನಿ ಬಡ್ಡಿಯನ್ನು ಕೊಡುವುದಿಲ್ಲ. ಈ ಪರಿಸ್ಥಿತಿಯಲ್ಲಿ 20 ರೂ.ಗಿಂತ ಹೆಚ್ಚಿನ ಮೊತ್ತ ಇರಿಸಿದ ಪರಿಸ್ಥಿತಿಯಲ್ಲಿ ವ್ಯಾಲಿಡಿಟಿ ಮುಗಿಯದ ನಿರ್ಜೀವ ಸಿಮ್‌ಗಳ ಒಳ ಹೊರ ಕರೆ ಇನ್ನಿತರ ಸೇವೆಗಳನ್ನು ರದ್ದುಗೊಳಿಸುವುದನ್ನು ಇನ್ನೊಮ್ಮೆ ಪ್ರಶ್ನಿಸಬೇಕಾಗುತ್ತದೆ. ಈ ಮಿನಿಮಮ್‌ ಬ್ಯಾಲೆನ್ಸ್‌ ನಿರ್ವಹಣಾ ಮೊತ್ತವನ್ನು 20ರಿಂದ ಕಾಲಕಾಲಕ್ಕೆ ಬದಲಿಸುವ ಜವಾಬ್ದಾರಿಯನ್ನು ಟ್ರಾಯ್‌ ವಹಿಸಿಕೊಳ್ಳಬಹುದು. ನೆನಪಿರಲಿ, ಈ ರೀತಿ ಚಾಲನೆಯಲ್ಲಿಲ್ಲದ ಸಿಮ್‌ನಲ್ಲಿ 2012ರ ಲೆಕ್ಕದಲ್ಲಿಯೇ 1289 ಮಿಲಿಯನ್‌ ರೂ.ಗಳ ಟಾಕ್‌ಟೈಮ್‌ ಇದ್ದಿತ್ತು. ಈಗ ಅದು ಇನ್ನಷ್ಟು ಹೆಚ್ಚಿರುವುದು ನಿಶ್ಚಿತ. ಇದರ ಜೊತೆ ನಾಲ್ಕಾರು ಡಿಜಿಟ್‌ನ ಬಿಲಿಯನ್‌ಗಟ್ಟಲೆ ಹಣ ಚಾಲ್ತಿಯ ಸಿಮ್‌ಗಳ ಟಾಕ್‌ಟೈಮ್‌ನಲ್ಲಿದೆ. ಎಲ್ಲಿಯವರೆಗೆ ಟಾಕ್‌ಟೈಮ್‌ನಲ್ಲಿರುವ ಹಣಕ್ಕೆ ಬಡ್ಡಿ ಕೊಡದೆ, ಮೊತ್ತವನ್ನು “ಎಂಜಾಯ್‌’ ಮಾಡುವ ಸೇವಾ ಕಂಪನಿಗಳು ಸಿಮ್‌ ಡಿಯಾಕ್ಟೀವ್‌ ಮುಂದಾಗುವುದು ಸಮ್ಮತವಲ್ಲ.

ಸಿಮ್‌ ಲಕ್ಷುರಿಯಲ್ಲ!
ದೇಶದ ಮೊಬೈಲ್‌ ಬಳಕೆದಾರ, ಅನಿವಾರ್ಯ ಸಂದರ್ಭಗಳ ಕಾರಣದಿಂದ ಎರಡನೇ ಸಿಮ್‌ ಹೊಂದಿರುವುದು ಸಾಮಾನ್ಯ. ಸಾಮಾಜಿಕ ಹಿನ್ನೆಲೆಯಲ್ಲಿ ಇದನ್ನು ನೋಡಬೇಕಾಗುತ್ತದೆ. ಈ ಸೌಲಭ್ಯಕ್ಕೆ ದುಬಾರಿ ಬೆಲೆಯನ್ನು ಗ್ರಾಹಕ ತೆರದಂತೆ ನೋಡಿಕೊಳ್ಳುವುದು ಕೂಡ ಟ್ರಾಯ್‌ ಜವಾಬ್ದಾರಿ. ನಿಜ, ಟಿಎಸ್‌ಪಿಗಳು ಎರಡು ಮಾದರಿಯ ದಾಖಲೆಗಳನ್ನು ನಿರ್ವಹಿಸಬೇಕಾಗುತ್ತದೆ. ಹೋಮ್‌ ಲೊಕೇಷನ್‌ ರಿಜಿಸ್ಟರ್‌ ಅಂದರೆ ಹೆಚ್‌ಎಲ್‌ಆರ್‌. ಇದರಲ್ಲಿ ಸಿಮ್‌ನಿಂದ ಹೊರಹೋದ ಕರೆ, ಎಸ್‌ಎಂಎಸ್‌ ದಾಖಲೆಗಳು ನಮೂದಾಗುತ್ತದೆ. ಇನ್ನೊಂದು ಸಿಟರ್‌ ಲೊಕೇಷನ್‌ ರಿಜಿಸ್ಟರ್‌(ಎಲ್‌ಆರ್‌), ಇದು ಹೊರಗಿನಿಂದ ಬಂದ ದೂರವಾಣಿ ಮಾಹಿತಿಯನ್ನು ಸಂಗ್ರಹಿಸುತ್ತದೆ. ಮೊಬೈಲ್‌ ಸೇವಾದಾತ ಸಿಮ್‌ ಚಾಲನೆಯಲ್ಲಿಲ್ಲದಿದ್ದರೂ ಒಮ್ಮೆ ಮಾರಾಟ ಮಾಡಿದ ಮೊಬೈಲ್‌ ಸಂಖ್ಯೆಗಳು ಡಿ ಆ್ಯಕ್ಟೀವ್‌ ಆಗುವವರೆಗೆ ಈ ಸಿಮ್‌ ಮಾಹಿತಿಗಾಗಿ ಜಾಗ ಮೀಸಲಿಡಲೇಬೇಕು. ಸಿಮ್‌ ಶುಲ್ಕ, ಆ ಸಮಯದಲ್ಲಿ ಆಕ್ಟಿವೇಶನ್‌ ಶುಲ್ಕಗಳನ್ನು ಪಡೆದಿರುವ ಟಿಎಸ್‌ಪಿ ಸೇವೆಯನ್ನೂ ನೀಡಲೇಬೇಕು. ಟ್ರಾಯ್‌ ಇಡೀ ದೇಶದ ಎಲ್ಲ ದೂರವಾಣಿ ಗ್ರಾಹಕರನ್ನು ಕಾಡುತ್ತಿರುವ ಈ ಸಮಸ್ಯೆ ಬಗ್ಗೆ ತಕ್ಷಣ ಪುನರ್ವಿಮರ್ಶೆಗೆ ಮುಂದಾಗಬೇಕಿದೆ. 

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ 

Advertisement

Udayavani is now on Telegram. Click here to join our channel and stay updated with the latest news.

Next