ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಸೋದರ ಸಂಬಂಧಿ ರೇಣುಕಾದೇವಿ ಅವರ ಮನೆಗೆ ನುಗ್ಗಿದ ಮಹಿಳೆ ಸೇರಿ ಮೂವರು ದುಷ್ಕರ್ಮಿಗಳು ಜೀವ ಬೆದರಿಕೆ ಹಾಕಿರುವ ಘಟನೆ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಜೆ.ಪಿ.ನಗರ ನಿವಾಸಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಬ್ಯಾಂಕ್ ಉದ್ಯೋಗಿ ವಿಶಾಲಾಕ್ಷಿ ಭಟ್ ಹಾಗೂ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿರುವ ವಿಶಾಲಾಕ್ಷಿ ಭಟ್, ಕಳೆದ 5 ವರ್ಷಗಳ ಹಿಂದೆ ಜೀವ ವಿಮೆ ವಿಚಾರದ ಬಗ್ಗೆ ಚರ್ಚಿಸುವಾಗ ರೇಣುಕಾದೇವಿ ಅವರಿಗೆ ಪರಿಚಯ ವಾಗಿದ್ದರು.
ಇದನ್ನೂ ಓದಿ:- ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ
ನಮ್ಮ ಬಳಿ ಅಲ್ಪಾವಧಿ ವಿಮೆ ಮಾಡಿಸಿದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಮೊತ್ತ ಬರುವುದಾಗಿ ಹೇಳಿ 60 ಲಕ್ಷ ರೂ. ಪಡೆದು ಮೋಸ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ 2015ರಲ್ಲಿ ವಿಶಾಲಾಕ್ಷಿ ಭಟ್ ವಿರುದ್ಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸದ್ಯ ಈ ಪ್ರಕರಣ ಕೋರ್ಟ್ ವಿಚಾರಣಾ ಹಂತದಲ್ಲಿದೆ.
ನ.30ರಂದು ಸಂಜೆ ರೇಣುಕಾದೇವಿ ಮನೆಗೆ ಇಬ್ಬರು ಪುರುಷರೊಂದಿಗೆ ಬಂದ ವಿಶಾಲಾಕ್ಷಿ ಭಟ್ ಉದ್ದೇಶಪೂರ್ವಕವಾಗಿ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದರು. ತನ್ನ ಜತೆ ಬಂದಿದ್ದ ಇಬ್ಬರು ಪುರುಷರನ್ನು ಕೋರ್ಟ್‌ನ ಅಮೀನರೆಂದು ಪರಿಚಯಿಸಿದ್ದರು. ಕೇಸ್ ಕುರಿತು 2 ಹಾಳೆಗಳ ಮೇಲೆ ಸಹಿಗೆ ಸೂಚಿಸಿದ್ದು, ಅನುಮಾನಗೊಂಡು ಗುರುತಿನ ಚೀಟಿ ಕೇಳಿದಾಗ ವಿಶಾಲಾಕ್ಷಿ ಜೀವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.