Advertisement

ಆಸೆ ಇರಬೇಕು ನಿಜ, ಅದು ಅತಿಯಾಗಬಾರದು…

08:14 PM Sep 21, 2020 | Suhan S |

ಒಂದು ಊರು. ಅಲ್ಲಿ ಒಬ್ಬ ಯುವಕನಿದ್ದ. ಅವನು ಚಿಕ್ಕವನಿದ್ದಾಗಲೇ, ಅವನ ಹೆತ್ತವರು ತೀರಿಕೊಂಡಿದ್ದರು. ಈ ಯುವಕನಿಗೆ ಪಿತ್ರಾರ್ಜಿತವಾಗಿ ಬಂದಿದ್ದ ಭೂಮಿ ಇತ್ತು. ಆದರೆ, ವ್ಯವಸಾಯ ಮಾಡಲು ಅಗತ್ಯವಿದ್ದ ಕೃಷಿ ಸಲಕರಣೆಗಳಾಗಲಿ, ಹಸುಗಳಾಗಲಿ ಅಥವಾಕೃಷಿ ಕೆಲಸದ ತಿಳಿವಳಿಕೆಯಾಗಲಿ ಅವನಿಗೆ ಇರಲಿಲ್ಲ. ಹಾಗಿದ್ದರೂ, ಮುಂದೆ ಒಂದು ದಿನ ತಾನು ದೊಡ್ಡ ಶ್ರೀಮಂತ ಆಗಬೇಕು ಎಂಬ ಆಸೆ ಆ ಯುವಕನಿಗೆ ಇತ್ತು. ಅವರಿವರ ಜಮೀನಿನಲ್ಲಿ ಯಾವುದಾದರೂ ಕೆಲಸ ಮಾಡುತ್ತಾ, ಅದರಿಂದ ಸಿಗುವ ಹಣದಲ್ಲಿ ಖರ್ಚುಗಳನ್ನು ನಿಭಾಯಿಸುತ್ತಾ ಅವನು ದಿನಕಳೆಯುತ್ತಿದ್ದ.

Advertisement

ಹೀಗಿದ್ದಾಗಲೇ, ಆಊರಿನ ಹಲವು ಹೊಲ- ಗದ್ದೆ ಗಳಲ್ಲಿ ಅದಿರು ಸಿಗುತ್ತಿದೆ ಎಂದು ಸುದ್ದಿ ಹಬ್ಬಿತು. ಜನ, ತಮ್ಮ ತಮ್ಮ ಜಮೀನಿನಲ್ಲಿ ರಾತ್ರಿಯ ವೇಳೆ ಅಗೆದು ನೋಡತೊಡಗಿದರು. ಕೆಲವರಿಗೆಕೇಜಿಗಟ್ಟಲೆ ಅದಿರು ಸಿಕ್ಕಿತು. ಇದನ್ನು ಗಮನಿಸಿದ ಯುವಕ, ತಾನೂ ಅದೃಷ್ಟ ಪರೀಕ್ಷೆಗೆ ಮುಂದಾದ. ಏನಾಶ್ಚರ್ಯ! ಅವನ ಜಮೀನಿನಲ್ಲಿ ಏಳು ಕೊಪ್ಪರಿಗೆ ಹೊನ್ನು ಸಿಕ್ಕಿತು. ಈ ಹುಡುಗ, ಊರಿನ ಯಾರಿಗೂ ಸಣ್ಣದೊಂದು ಸುಳಿವನ್ನೂಕೊಡದೆ, ಅದನ್ನೆಲ್ಲಾ ಮನೆಗೆ ಸಾಗಿಸಿದ. ರಾತ್ರಿ, ಬಾಗಿಲು ಭದ್ರ ಮಾಡಿ, ಕೊಪ್ಪರಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ. ಆರುಕೊಪ್ಪರಿಗೆಗಳ ತುಂಬಾ ಚಿನ್ನ ಇತ್ತು. ಏಳನೇಕೊಪ್ಪರಿಗೆಯಲ್ಲಿ ಚಿನ್ನದ ಪ್ರಮಾಣ ಸ್ವಲ್ಪಕಡಿಮೆ ಇತ್ತು. ಎಲ್ಲಾಕೊಪ್ಪರಿಗೆಯಲ್ಲೂ ಸಮಪ್ರಮಾಣದಲ್ಲಿ ಇರುವಷ್ಟು ಚಿನ್ನವನ್ನು ಹೊಂದಿಸಬೇಕೆಂದು ಈ ಹುಡುಗ ನಿರ್ಧರಿಸಿದ.

ನಂತರದ ಏಳೆಂಟು ರಾತ್ರಿ, ಜಮೀನಿಗೆ ಹೋಗಿ ಎಲ್ಲೆಡೆ ಅಗೆದು ನೋಡಿದ. ಆದರೆ, ಅಲ್ಲೆಲ್ಲೂ ಮತ್ತಷ್ಟು ಚಿನ್ನ ಸಿಕ್ಕಲಿಲ್ಲ. ಈ ಹುಡುಗನಿಗೆ ಅದರಿಂದ ಸಮಾಧಾನ ಆಗಲಿಲ್ಲ. ತಾನು ಈ ಊರಿನ ಬಹುದೊಡ್ಡ ಶ್ರೀಮಂತ ಆಗಬೇಕು ಎಂಬ ಆಸೆ ಇತ್ತಲ್ಲ; ಅದೇಕಾರಣಕ್ಕೆ ಮತ್ತೆ ದುಡಿಮೆಗೆ ನಿಂತ. ಜಾಸ್ತಿ ದುಡಿದು, ಆಗ ಸಿಗುವ ಸಂಪಾದನೆಯಿಂದ ಮತ್ತಷ್ಟು ಚಿನ್ನ ಖರೀದಿಸಿ, ಏಳನೇ ಕೊಪ್ಪರಿಗೆಯನ್ನೂ ತುಂಬಿಸಬೇಕು. ಆನಂತರ ಇಡೀಊರಿನ ಸಾಹುಕಾರನಾಗಿ ಮೆರೆಯಬೇಕು ಎಂಬ ಆಸೆ ಅವನ ಮನಸ್ಸು ಹೊಕ್ಕಿತು. ಗಂಟೆಗಳ ಲೆಕ್ಕವಿಲ್ಲದೆ ದಿನವೂ ಉತ್ಸಾಹದಿಂದಲೇ ದುಡಿದ. ಆದರೆ ಆ ದಣಿವನ್ನು ತಡೆದುಕೊಳ್ಳಲು ಅವನ ದೇಹ ನಿರಾಕರಿಸಿತು. ವಿಪರೀತ ದುಡಿದಿದ್ದರಿಂದ, ಒಂದು ದಿನ ತಲೆಸುತ್ತಿ ಬಂದು ಬಿದ್ದವನು, ಮತ್ತೆ ಮೇಲೇಳಲಿಲ್ಲ. ಅತಿಯಾದ ಆಯಾಸದಿಂದಾಗಿ ಹೃದಯಾಘಾತ ಆಗಿದೆ. ಈ ಹುಡುಗ ನಮ್ಮೆಲ್ಲರ ಪಾಲಿಗೆ ಇನ್ನುಮುಂದೆ ಬರೀ ನೆನಪಷ್ಟೇ ಎಂದು, ಅವನನ್ನು ಪರೀಕ್ಷಿಸಿದ ಹಿರಿಯರು ಹೇಳಿದರು. ಆಸೆ ಎಂಬುದು ಅತಿಯಾದರೆ, ಅನಾಹುತ ಗ್ಯಾರಂಟಿ.­

Advertisement

Udayavani is now on Telegram. Click here to join our channel and stay updated with the latest news.

Next