Advertisement

ಜೀವನದ ನಿತ್ಯ  ಹುಡುಕಾಟದ  ಸಂಗತಿಗಳು…

04:37 PM Jul 20, 2021 | Team Udayavani |

ಆಗಾಗ ಅಡಿಗರ ಕೆಲವು ಸಾಲುಗಳು ನೆನಪಾಗುತ್ತಿರುತ್ತವೆ. “ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿಯುವುದೇ ಜೀವನ’.. ಒಂದೇ ಸಾಲಿನಲ್ಲಿ ಬದುಕೆಂಬುದು ನಿತ್ಯ ಹುಡುಕಾಟ ಮತ್ತು ಕೊರತೆಯೇ ಜೀವನ ಎಂಬ ಬಹು ದೊಡ್ಡ ಮರ್ಮವನ್ನು ಈ ಸಾಲುಗಳು ಸಾರುತ್ತವೆ. ಹಾಗಾದರೆ ನಾವು ಯಾವುದರ ಹುಡುಕಾಟ ಮಾಡುತ್ತಿದ್ದೇವೆ ಎಂಬುದನ್ನು ಅವಲೋಕಿಸಿದರೆ ಅದರ ವ್ಯಾಪ್ತಿಯು ಶೀಘ್ರ ಹಣ ಸಂಪಾದನೆಯ ಮಾರ್ಗದ ಹುಡುಕಾಟ, ಉತ್ತಮ ಒಡನಾಡಿ ಗಳ ಹುಡುಕಾಟ ಸಹಿತ ಇತ್ಯಾದಿ ಅಂಶಗಳನ್ನು ಒಳಗೊಂಡಿದೆ.

Advertisement

ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿಯ ಹುಡುಕಾಟವೆಂಬುದು ದೈನಂದಿನ ಬದುಕಿನ ನಿರಂತರ ದೀಕ್ಷೆಯಾಗಿದೆ. ಪ್ರೀತಿಯೆಂಬುದು ವ್ಯಾಪ್ತಿ ರಹಿತವಾದುದು. ಹಾಗಾಗಿ ಕೇವಲ ವಿಸ್ತರಿಸಬಹುದಷ್ಟೇ. ಅಳೆಯಲಾಗದು. ಎಲ್ಲ ವಯೋಮಾನದವರಿಗೂ ಪ್ರೀತಿಯೆಂಬುದೊಂದು ಸೆಲೆ; ಒಂದು ಬಗೆಯ ಆಕ್ಸಿಜನ್‌. ಮಗುವಿಗೆ ತಂದೆ-ತಾಯಿ ಯರ ಮಮತೆಯಾಗಿ, ತಾರುಣ್ಯಕ್ಕೆ ಗೆಳೆಯ-ಗೆಳತಿಯರ ಆಕರ್ಷಣೆಯಾಗಿ, ಮಧ್ಯ ವಯಸ್ಕರ ಅಗತ್ಯವಾಗಿ, ಅಷ್ಟೇ ಯಾಕೆ; ವಯೋವೃದ್ಧರ ಬೌದ್ಧಿಕ ಒಂಟಿತನ ಕಳೆಯುವ ಮದ್ದು, ಹೀಗೆ ಬೇರೆ ಬೇರೆ ಪಾತ್ರೆಗಳಲ್ಲಿ ಸುರಿದ ನೀರಿನಂತೆ ಒಂದೊಂದು ಹಂತದಲ್ಲೂ ಪ್ರೀತಿಯು ತನ್ನದೇ ಆದ ಮಹತ್ವ ಹೊಂದಿರುವ ಅಗಾಧ ಶಕ್ತಿಯಾಗಿದೆ.

ವಿಸ್ತಾರ ವ್ಯಾಪ್ತಿಗಳಿಗನುಗುಣವಾಗಿ ಒಲವು, ಅನುರಾಗ, ಮಮತೆ ಎಂಬ ವಿವಿಧ ನಾಮಗಳನ್ನು ಪ್ರೀತಿಯು ಪಡೆದುಕೊಳ್ಳುತ್ತದೆ. ಆದರೆ ಇಂತಹ ಅದ್ಭುತ ಶಕ್ತಿಗೂ ವೈಫಲ್ಯವೆಂಬ ಕಳಂಕವಿದೆ.

ಅನುರಾಗವೆಂಬ ಅನಂತ ಭಾವಕ್ಕೂ, ವೈಫಲ್ಯವಿದೆಯೆಂಬುದು ಒಂದು ಹಂತಕ್ಕೆ ಸತ್ಯ.ಅನುರಾಗವೆಂಬುದು ಸಮಾನವಾಗಿ ಹಂಚಿ, ಎಲ್ಲರೂ ಸಂತೋಷದಿಂದ ಅನುಭವಿಸಬೇಕಾದ ಒಂದು ಅದ್ಭುತ, ಅಗೋಚರ ಭಾವ ಎಂಬುದರ ಅರಿವೇ ನಮಗಾರಿಗೂ ಇದ್ದಂತಿಲ್ಲ.  ಪ್ರತಿಯೊಬ್ಬರ ಜತೆಗೂ ಪ್ರೀತಿ ವಿಶ್ವಾಸದಿಂದ ಇದ್ದು, ಅದರ ಪರಿಮಳವನ್ನು ಪಸರಿಸುವಂತೆ ಮಾಡುವುದು. ಇದು ಸಂಪೂರ್ಣ ಕಾರ್ಯಗತಗೊಂಡರೆ, ಈ ಸಮಾಜದಲ್ಲಿ ಸಾಮರಸ್ಯದ ಕೊರತೆ ಎದುರಾಗಲಾರದು. ಅಗತ್ಯಕ್ಕಿಂತ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತಿವೆ.ಅದರಲ್ಲೂ ಪ್ರಮುಖವಾಗಿ ಅವಧಾನದ ಕೊರತೆಯನ್ನು ಹೆಚ್ಚಿಸುತ್ತಿದೆ. ಈ ನಿಟ್ಟಿನಲ್ಲಿ “ಬೇಂದ್ರೆಯವರ ಈ ಸಾಲುಗಳು ಸೂಕ್ತ ಅರ್ಥವನ್ನು ಒದಗಿಸುತ್ತದೆ.”ನಾನು ಬಡವಿ,ಆತ ಬಡವ ಒಲವೆ ನಮ್ಮ ಬದುಕು”..ಇದರಾರ್ಥ ಪ್ರೇಮವೆಂದರೆ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮುನ್ನಡೆಯುವುದೇ ಬದುಕು. ಇಲ್ಲಿ ಶ್ರೀಮಂತಿಕೆಯಿಲ್ಲ, ಕೇವಲ ಅನುರಾಗವಿದೆ.ಪ್ರೀತಿಯಲ್ಲಿ ನಿರ್ಮಿತಿಯಿರಲಿ; ಪ್ರೇಮವೆಂಬುದು ಹಿಡಿದು ಕೊಡುವುದಲ್ಲ, ಮನಸ್ಸೆಂಬ ಬಯಲಲ್ಲಿ ವಿಶಾಲವಾಗಿ ಹರಡಿ ಹಂಚುವುದು.

Advertisement

Udayavani is now on Telegram. Click here to join our channel and stay updated with the latest news.

Next