Advertisement

ಮೊಬೈಲ್‌ ಬಳಸಿಲ್ಲ, ಸಿನಿಮಾಗೆ ಹೋಗಲ್ಲ; ಖೇಲ್‌ ರತ್ನ ಭಜರಂಗಿಯ ಹಿಂದಿದೆ ಕಠಿಣ ಪರಿಶ್ರಮ

04:48 PM Oct 23, 2020 | keerthan |

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕುಸ್ತಿಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು ಭಜರಂಗ್ ಪೂನಿಯಾ. ಆಟದ ಮೇಲಿನ ಅತೀವ ಪ್ರೀತಿ, ಕಠಿಣ ಪರಿಶ್ರಮ, ದೃಢ ನಿರ್ಧಾರಗಳೇ ಇಂದು ಪೂನಿಯಾರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರನ್ನಾಗಿ ಮಾಡಿದೆ. ಏಶ್ಯನ್‌ ಗೇಮ್ಸ್‌ ಮತ್ತು ಕಾಮನ್‌ ವೆಲ್ತ್‌ ಗೇಮ್ಸ್‌ ನಲ್ಲಿ ಬಂಗಾರದ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಭಜರಂಗ್‌ ಕುಸ್ತಿ ಪಯಣ ಬಲು ರೋಚಕ.

Advertisement

25ರ ಹರೆಯದ ಭಜರಂಗ್‌ ಜನಿಸಿದ್ದು ಹರಿಯಾಣದ ಝಾಜ್ಜರ್‌ ಜಿಲ್ಲೆಯ ಖುರ್ದನ್‌ ಗ್ರಾಮದಲ್ಲಿ. ತಂದೆಯ ಪ್ರೋತ್ಸಾಹದಿಂದ ತನ್ನ ಏಳನೆ ಹರೆಯದಲ್ಲೇ ಕುಸ್ತಿ ಗರಡಿ ಸೇರಿದ ಭಜರಂಗ್‌ ಇಂದು ಮಣ್ಣಿನ ಆಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಜರಂಗಿಯಂತೆ ಮೆರೆಯುತ್ತಿದ್ದಾರೆ.

2013ರಲ್ಲಿ ಮೊದಲ ಬಾರಿಗೆ ದೊಡ್ಡ ಕ್ರೀಡಾ ಕೂಟಗಲಳಲ್ಲಿ ಕಾಣಿಸಿಕೊಂಡ ಭಜರಂಗ್‌ ಏಶ್ಯನ್‌ ಮತ್ತು ವಿಶ್ವ ಕುಸ್ತಿ ಚಾಂಪಿಯನದ ಶಿಪ್‌ ನಲ್ಲಿ ಕಂಚಿನ ಪದಕ ಗೆದ್ದರು. 61 ಕೆಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಸ್ಪರ್ಧೆ ಮಾಡುವ ಭಜರಂಗ್‌ 2014ರ ಕಾಮನ್‌ ವೆಲ್ತ್‌, ಏಶ್ಯನ್‌ ಗೇಮ್ಸ್‌ ಮತ್ತು ಏಶ್ಯನ್‌ ಕುಸ್ತಿ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಪದಕ ಗೆದ್ದ ಪೂನಿಯಾಗೆ ಬಂಗಾರವಂತು ಇನ್ನೂ ಕನಸಾಗಿಯೇ ಇತ್ತು. 2015ರ ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ ನಲ್ಲಿ ಮಂಗೋಲಿಯಾದ ಆಟಗಾರನ ಎದುರು 10-0 ಅಂತರದಿಂದ ಸೋತ ಭಜರಂಗ್‌ 5ನೇ ಸ್ಥಾನಿಯಾಗಿ ಕೂಟ ಮುಗಿಸಿದರು.

2017ರ ಏಶ್ಯನ್‌ ಕುಸ್ತಿ ಚಾಂಪಿಯನ್‌ ಶಿಪ್‌ ನಲ್ಲಿ ಮೊದಲ ಬಾರಿಗೆ ಬಂಗಾರಕ್ಕೆ ಮುತ್ತಿಕ್ಕಿದ ಭಜರಂಗ್‌ ಪೂನಿಯಾ ಬಂಗಾರದ ಬೇಟೆಯಲ್ಲಿ ನಂತರ ಹಿಂದೆ ನೋಡಲೇ ಇಲ್ಲ. 2018ರ ಕಾಮನ್‌ ವೆಲ್ತ್‌, ಏಶ್ಯನ್‌ ಗೇಮ್ಸ್‌ 65 ಕೆಜಿ ಫ್ರೀ ಸ್ಟೈಲ್‌ ವಿಭಾಗದ ಬಂಗಾರ ಗೆದ್ದ ಭಜರಂಗ್‌ ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ರಾರಾಜಿಸಿದರು.

Advertisement

ಭಜರಂಗಿಯ ಹಠ, ಸಾಧನೆ

ಒಬ್ಬ ಸಾಮಾನ್ಯ ಹುಡುಗ ಇಂದು ಅಂತಾರಾಷ್ಟ್ರೀಯ ಕುಸ್ತಿ ಪಟುವಾಗಲು ಆತನ ಹಠ, ಕಠಿಣ ಅಭ್ಯಾಸ, ಸತತ ಪ್ರಯತ್ನವೇ ಕಾರಣ. ಒಲಿಂಪಿಕ್‌ ಪ್ರಶಸ್ತಿ ವಿಜೇತ ಯೋಗಿಶ್ವರ್‌ ದತ್‌ ಮಾರ್ಗದರ್ಶನ ಮತ್ತು ಎಂಜಾರಿಯೋಸ್‌ ಬೆಂಟಿನಿಡಿಸ್‌ ತರಬೇತಿಯ ಗರಡಿಯಲ್ಲಿ ಬೆಳೆದ ಪೂನಿಯಾ ಮುಟ್ಟಿದ್ದೆಲ್ಲಾ ಚಿನ್ನವಾಗಲಿಲ್ಲ. ಗೆಲುವಿನ ನಗುವಿನ ಹಿಂದೆ ಕಠಿಣ ಮನಸ್ಥಿತಿಯ ಏಳು ವರ್ಷದ ಪಯಣವಿದೆ.

ಮೊಬೈಲ್‌ ಬಳಸಲ್ಲ: ಸಿನಿಮಾ ಥಿಯೇಟರ್‌ ಹೇಗಿದೆ ಎಂತಾನೆ ಗೊತ್ತಿಲ್ಲ!

ಆಧುನಿಕ ಜನಜೀವನದಲ್ಲಿ ಮೊಬೈಲ್‌ ಬಳಕೆ ಜೀವನ ಅಗತ್ಯಗಳಲ್ಲಿ ಒಂದಾಗಿದೆ. ಇಂದಿನ ಕಾಲದಲ್ಲಿ ಯಾರಾದರೂ ಮೊಬೈಲ್‌ ಬಳಸಲ್ಲ ಎಂದರೆ ನಂಬುವುದೇ ಕಷ್ಟ. ಅದರಲ್ಲೂ ಏಳು ವರ್ಷಗಳ ಕಾಲ! ಹೌದು, 2010ರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಆರಂಭಿಸಿದ ಭಜರಂಗ್‌ ಅಂದೇ ಮೊಬೈಲ್‌ ಫೋನ್‌ ನಿಂದ ದೂರವಾದರು. ಮೊಬೈಲ್‌ ಇದ್ದರೆ ಆಟದ ಮೇಲೆ ಏಕಾಗ್ರತೆ ವಹಿಸಲು ಸಾಧ್ಯವಿಲ್ಲವೆಂಬ ಯೋಗಿಶ್ವರ್‌ ದತ್‌ ಅವರ ಮಾರ್ಗದರ್ಶನದಂತೆ ಭಜರಂಗ್‌ ಫೋನ್‌ ಬಳಸಲೇ ಇಲ್ಲ. ವಿದೇಶಿ ಕೂಟಗಳಿಗೆ ಹೋದಾಗ ಅಲ್ಲಿ ಎಲ್ಲೂ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿಲ್ಲ. ವಿಶೇಷವೆಂದರೆ ಭಜರಂಗ್‌ ಪೂನಿಯಾಗೆ ಇದುವರೆಗೆ ಸಿನಿಮಾ ಮಂದಿರ ಹೇಗೆ ಇರುತ್ತದೆ ಎಂದೇ ಗೊತ್ತಿಲ್ಲ. ಅಷ್ಟರಮಟ್ಟಿಗೆ ಪೂನಿಯಾ ತನ್ನ ಆಟದಲ್ಲಿ ತಲ್ಲೀನರಾಗಿದ್ದರು. ಈ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಪೂನಿಯಾ ಪಡೆದರು.

ಸುಶೀಲ್‌ ಕುಮಾರ್‌, ಯೋಗೀಶ್ವರ್‌ ದತ್‌ ನಂತರ ವಿಶ್ವ ಕುಸ್ತಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸುತ್ತಿರುವ ಭಜರಂಗ್‌ ಪೂನಿಯಾ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಸದ್ಯ ಪೂನಿಯಾ 2021ರ ಟೋಕಿಯೋ ಒಲಿಂಪಿಕ್ಸ್‌ ಚಿನ್ನಕ್ಕೆ ಕಣ್ಣಿಟ್ಟಿದ್ದಾರೆ. ಒಲಿಂಪಿಕ್ಸ್‌ ಕುಸ್ತಿ ಅಖಾಡದಲ್ಲಿ ಭಜರಂಗ್‌ ಭಾರತದ ತ್ರಿವರ್ಣವನ್ನು ಹಾರಿಸಲಿ ಎಂಬುದು ಭಾರತೀಯರ ಆಶಯ.

ಕೀರ್ತನ್ ಶೆಟ್ಟಿ ಬೋಳ

Advertisement

Udayavani is now on Telegram. Click here to join our channel and stay updated with the latest news.

Next