Advertisement

ಒಂಬತ್ತು ಶಾಲೆಗಳಲ್ಲಿ ಮಾಹಿತಿ ಸಂಪನ್ನ “ಜೀವನ ಕಥನ’

11:42 PM Nov 13, 2019 | mahesh |

ಮಣಿಪಾಲ: ಸುವರ್ಣ ಸಂಭ್ರಮದಲ್ಲಿರುವ “ಉದಯವಾಣಿ’ ದಿನಪತ್ರಿಕೆಯು ಮಕ್ಕಳ ದಿನದ ಆಚರಣೆಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸುವ ನೆಲೆಯಲ್ಲಿ ಆಯೋಜಿಸಿದ “ಜೀವನ ಕಥನ’ ಸಂವಾದ ಕಾರ್ಯಕ್ರಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಒಂಬತ್ತು ಶಾಲೆಗಳಲ್ಲಿ ನ.13ರಂದು ನಡೆಯಿತು. ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿವಿಧ ವೃತ್ತಿಗಳ ಕಾರ್ಯನಿರ್ವಹಣೆಯ ಕೌಶಲಗಳು, ವೃತ್ತಿಪರ ಅನುಭವಗಳು ಮತ್ತು ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಜ್ಞಾನಸಂಪನ್ನಗೊಳಿಸುವ ಉದ್ದೇಶದಿಂದ ಈ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಉಡುಪಿಯ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿ ಕಾರಿ ಜಿ. ಜಗದೀಶ್‌ ಭಾಗವಹಿಸಿ ತನ್ನ ಜೀವನ ಕಥನವನ್ನು ವಿವರಿಸಿದರು, ಸೇರಿದ್ದ ಕುತೂಹಲಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮಾಹಿತಿಪೂರ್ಣವಾದ ಉತ್ತರ ನೀಡಿದರು. ಕಾರ್ಕಳ ಜೇಸೀಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸಂವಾದದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪ್ರತಿಭೆ ಸ್ವಾತಿ ಯು.ಕೆ. ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಕುಂದಾಪುರದ ಸರಕಾರಿ ಜೂನಿಯರ್‌ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಬೋರ್ಡ್‌ ಹೈಸ್ಕೂಲ್‌ ಸಹಯೋಗದಲ್ಲಿ ನಡೆದ ಸಂವಾದ ಕಾರ್ಯಕ್ರಮವು ಮೀನುಗಾರ ರಾಮಪ್ಪ ಖಾರ್ವಿ ಅವರ ಬದುಕಿನ ಪಥವನ್ನು ತೆರೆದಿರಿಸಿತು, ಸಮುದ್ರದ ನಡುವೆ ಸಾಗುವ ಬೆಸ್ತರ ಹೋರಾಟದ ಹಾದಿಯ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಟ್ಟಿತು.

ಬೈಂದೂರಿನಲ್ಲಿ ಮಾಜಿ ಸೈನಿಕ ಜಾನ್‌ ಸಿ. ಥಾಮಸ್‌ ಸಂವಾದದಲ್ಲಿ ಭಾಗವಹಿಸಿದ್ದರು. ಜಾನ್‌ ಅವರು ತನ್ನ ಸೇನಾನಿ ತಂದೆಯ ಪ್ರೇರಣೆಯಿಂದ ಸೇನೆ ಸೇರಿದ್ದರೆ, ಪ್ರಸ್ತುತ ಅವರ ಪುತ್ರ ವಾಯುಪಡೆಯಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಆಗಿದ್ದಾರೆ. “ಉದಯವಾಣಿ’ ಯಂತೆಯೇ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿರುವ ರತ್ತುಬಾೖ ಜನತಾ ಪ್ರೌಢಶಾಲೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

ಸುಳ್ಯದ ಶ್ರೀ ಶಾರದಾ ಹೆಣ್ಮಕ್ಕಳ ಪ್ರೌಢಶಾಲೆಯಲ್ಲಿ ನಡೆದ ಸಂವಾದ ದಲ್ಲಿ ಅಗ್ನಿಶಾಮಕ ದಳದ ಅಗ್ನಿಶಾಮಕ ಸಿಬಂದಿ ಕಲ್ಲಪ್ಪ ಚಂದ್ರಪ್ಪ ಮಾದರ್‌ ಭಾಗವಹಿಸಿದ್ದರು. ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಹತಿ ಕನ್ನಡ ಸಂಘದ ಸಹಯೋಗದಲ್ಲಿ ಸಂವಾದ ನಡೆದು, ರಿಕ್ಷಾ ಚಾಲಕ ದಿಲೀಪ್‌ ವೃತ್ತಿಬದುಕಿನ ಅನುಭವಗಳನ್ನು ಹಂಚಿಕೊಂಡರು.

ಬೆಳ್ತಂಗಡಿಯ ದ.ಕ.ಜಿ.ಪಂ. ಮಾದರಿ ಹಿ.ಪ್ರಾ. ಶಾಲೆಯ ಸಹ ಯೋಗದಲ್ಲಿ ಕಾರ್ಯಕ್ರಮ ನಡೆದು ಅಂಗವಿಕಲ ಸಾಧಕಿ ಸಬಿತಾ ಮೋನಿಸ್‌ ಸಂವಾದದಲ್ಲಿ ಪಾಲುಗೊಂಡರು. ಬಂಟ್ವಾಳದ ಶ್ರೀರಾಮ ವಿದ್ಯಾ ಸಂಸ್ಥೆ ಯಲ್ಲಿ ಆಯೋಜಿಸಲಾದ ಕಾರ್ಯಕ್ರಮ ದಲ್ಲಿ ಬಂಟ್ವಾಳ ಅಗ್ನಿಶಾಮಕ ಠಾಣೆಯ ಲೀಡಿಂಗ್‌ ಫ‌ಯರ್‌ ಆಫೀಸರ್‌ ಮೀರ್‌ ಮೊಹಮ್ಮದ್‌ ಗೌಸ್‌ ಭಾಗವಹಿಸಿ ವೃತ್ತಿಯ ಒಳಹೊರಗುಗಳನ್ನು ತೆರೆದಿರಿಸಿದರು.

Advertisement

ಮೂಲ್ಕಿಯಲ್ಲಿ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಲ್ಕಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಶೀತಲ್‌ ಅಲಗೂರು ವಿವಿಧ ಶಾಲೆಗಳ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.

ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಪ್ರವಾಹ
ಎಲ್ಲ ಕಡೆಯೂ ಅತಿಥೇಯ ಶಾಲೆ ಮತ್ತು ಆಗಮಿಸಿದ್ದ ಆಸುಪಾಸಿನ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹ ದಿಂದ ಸಂವಾದದಲ್ಲಿ ಪಾಲ್ಗೊಂಡರು. ಆತಿಥ್ಯ ವಹಿಸಿದ್ದ ವಿವಿಧ ಶಾಲೆಗಳ ಆಡಳಿತ ಮಂಡಳಿಗಳ ಗಣ್ಯರು, ಮುಖ್ಯ ಅಧ್ಯಾಪಕರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬಂದಿ, “ಉದಯವಾಣಿ’ಯ ಸಂಪಾದಕೀಯ, ಪ್ರಸರಣ ಮತ್ತು ಜಾಹೀರಾತು ವಿಭಾಗಗಳ ಸಿಬಂದಿ ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದರು.

ಸಾರ್ವಜನಿಕ ಸೇವೆಯಲ್ಲಿರುವ ಸಾಮಾನ್ಯ ವ್ಯಕ್ತಿಗಳನ್ನು ಗೌರವಿಸುವ, ಪ್ರತಿನಿಧಿಸುವ ಪಡಿಸುವ ವಿಶೇಷ ಕಾರ್ಯಕ್ರಮವಿದು ಎಂದಾಗ ಎಲ್ಲ ರಿಕ್ಷಾ ಚಾಲಕರ ಪರವಾಗಿ ಭಾಗವಹಿಸಲು ಒಪ್ಪಿದೆ. ಅತ್ಯಂತ ಖುಷಿಯಾಗಿದೆ.
-ದಿಲೀಪ್‌ ಮೊಟ್ಟೆತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next