Advertisement

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

06:44 PM Nov 02, 2024 | ಸುಹಾನ್ ಶೇಕ್ |

ಎಲ್ಲರ ಜೀವನದಲ್ಲಿ ಅನಿರೀಕ್ಷಿತವಾಗಿ ನಡೆಯುವ ಏನೋ ಒಂದು ಸನ್ನಿವೇಶ ಬಂದೇ ಬರುತ್ತದೆ. ಇದು ಆಘಾತಕಾರಿ ಆಗಿಯೂ , ಅದೃಷ್ಟಕಾರಿಯಾಗಿಯೂ ನಮಗೆ ಎದುರಾಗಬಹುದು. ಒಟ್ಟಿನಲ್ಲಿ ʼಅನಿರೀಕ್ಷಿತʼ ಎನ್ನುವುದು ಎಲ್ಲರ ಜೀವನದಲ್ಲಿ ಎದುರಾಗುವ ಸನ್ನಿವೇಶ.!

Advertisement

ಇಂದು ಟಿವಿ ಜಗತ್ತಿನಲ್ಲಿ ʼಸಿಐಡಿʼಯ (Cid Serial) ಎಸಿಪಿ ಪ್ರದ್ಯುಮನ್ ಎಂದೇ ಖ್ಯಾತರಾಗಿರುವ ಕಲಾವಿದ ಶಿವಾಜಿ ಸತಮ್ (Shivaji Satam) ವೃತ್ತಿ ಬದುಕು ಆರಂಭವಾಗುವುದು ಕೂಡ ಒಂದು ಅನಿರೀಕ್ಷಿತ ಸನ್ನಿವೇಶದ ಮೂಲಕ.

ಹಿಂದಿ ಕಿರುತೆರೆಯಲ್ಲಿ 20 ವರ್ಷ ಪ್ರಸಾರ ಕಂಡ ʼಸಿಐಡಿʼ ಧಾರಾವಾಹಿ 6 ವರ್ಷದ ಬಳಿಕ ಮತ್ತೆ ಶುರುವಾಗಲಿದೆ. 20 ವರ್ಷ ಈ ಧಾರಾವಾಹಿ ನೋಡಿದ ಪ್ರೇಕ್ಷಕರಿಗೆ ಅಭಿಜಿತ್‌, ದಯಾ‌ ಕ್ಯಾರೆಕ್ಟರ್ ಹೇಗೆ ಪರಿಚಯವೋ ಅಷ್ಟೇ ಪರಿಚಯ ಎಸಿಪಿ ಪ್ರದ್ಯುಮನ್‌ ಬೆರಳು ತಿರುಗಿಸಿ ಹೇಳುತ್ತಿದ್ದ “ಕುಚ್ ತೋ ಗಡ್ಬದ್ ಹೈ, ದಯಾ!” ಎನ್ನುವ ಡೈಲಾಗ್.

ಎಸಿಪಿ ಪ್ರದ್ಯುಮನ್‌ ಆಗಿ ʼಸಿಐಡಿʼಯಲ್ಲಿ 20 ವರ್ಷ ನಟಿಸಿರುವ ನಟ ಶಿವಾಜಿ ಸತಮ್ ನಟನೆಗೆ ಬಂದದ್ದು ಹೇಗೆ? ನಟನೆಗೆ ಬರುವ ಮುನ್ನ ಏನಾಗಿದ್ದರು ಎನ್ನುವ ಬಗೆಗಿನ ಅವರ ಜರ್ನಿಯ ಪರಿಚಯ ಇಲ್ಲಿದೆ.

ಮಹಾರಾಷ್ಟ್ರದ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಶಿವಾಜಿ ಸತಮ್ ಅವರಿಗೆ ಶಿಕ್ಷಣ ಮುಗಿದಿ ಬಳಿಕ ತಮ್ಮ ಹಳ್ಳಿಯೊಂದರ ಬ್ಯಾಂಕ್‌ನಲ್ಲಿ ಕ್ಯಾಷಿಯರ್‌ ಆಗಿ ಉದ್ಯೋಗ ಸಿಗುತ್ತದೆ. 9 ರಿಂದ 5 ಗಂಟೆಯವರೆಗಿನ ಕೆಲಸ, ಸರಿಯಾದ ಸಮಯಕ್ಕೆ ಸಂಬಳ, ವಾರದ ರಜೆ.. ಹೀಗೆ ಶಿವಾಜಿ ಯುವಕನಾಗಿದ್ದಾಗಲೇ ಎಲ್ಲವೂ ಅನುಕೂಲವಾದ ಸ್ಥಿತಿಯಿತ್ತು.

Advertisement

ಬಾಲ್ಯದಲ್ಲೇ ಮರಾಠಿ ನಾಟಕಗಳನ್ನು ನೋಡುವ ಹವ್ಯಾಸವನ್ನು ಹೊಂದಿದ್ದ ಶಿವಾಜಿಗೆ ತಾನು ಮುಂದೊಂದು ದಿನ ಬ್ಯಾಂಕ್‌ ಉದ್ಯೋಗ ಬಿಟ್ಟು ನಟನಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡುತ್ತೇನೆ ಎನ್ನುವ ಯಾವ ಅರಿವು ಕೂಡ 23ರ ವಯಸ್ಸಿನವರೆಗೆ ಇರಲಿಲ್ಲ.

ಒಂದು ದಿನ ಶಿವಾಜಿ ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಲ್ಲಿ ಸ್ಟೇಜ್‌ ಕಾಂಪಿಟೇಷನ್‌ ವೊಂದನ್ನು ಆಯೋಜನೆ ಮಾಡಲಾಗಿತ್ತು. ಅಂತರ್‌ ಬ್ಯಾಂಕ್‌ಗಳ ಸ್ಪರ್ಧೆಗೆ ಖ್ಯಾತ ಮರಾಠಿ ನಟ, ರಾಮಾಯಣದಲ್ಲಿ ದಶರಥ ರಾಜನ ಪಾತ್ರ ಮಾಡಿದ್ದ ಬಾಲ್ ಧುರಿ ಅವರು ಅತಿಥಿಯಾಗಿ ಭಾಗಿಯಾಗಿದ್ದರು.

ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಶಿವಾಜಿ ನಟನೆಗೆ ಒತ್ತು ಕೊಡುವ ಪಾತ್ರವೊಂದನ್ನು ಮಾಡಿದ್ದರು. ಇದನ್ನು ನೋಡಿ ನಟ ಬಾಲ್‌ ಧುರಿ ಇಂಪ್ರೆಸ್‌ ಆಗಿದ್ದರು. ಆ ಬಳಿಕ ʼಸಂಗೀತ ವರದ್ʼ ಎಂಬ ಮ್ಯೂಸಿಕಲ್‌ ಡ್ರಾಮಾದಲ್ಲಿ ಶಿವಾಜಿ ಅವರಿಗೆ ನಟಿಸುವ ಅವಕಾಶವೊಂದು ಒದಗಿ ಬರುತ್ತದೆ. ಇದೇ ಅವರ ನಟನಾ ಜೀವನಕ್ಕೆ ಸಿಕ್ಕ ಮೊದಲ ವೇದಿಕೆ ಆಗುತ್ತದೆ.

ನಟನಾ ಕ್ಷೇತ್ರಕ್ಕೆ ಎಂಟ್ರಿ; 20 ವರ್ಷ ʼಸಿಐಡಿʼಯಾಗಿ ಮೆರೆದ ಶಿವಾಜಿ.. ಬ್ಯಾಂಕ್‌ನಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದ ಶಿವಾಜಿ ಮರಾಠಿ ರಂಗಭೂಮಿಯಲ್ಲಿ ಕಲಾವಿದನಾಗಿ ಬೆಳೆಯುತ್ತಾರೆ. ಅವರ ಅಭಿನಯಕ್ಕೆ ಅವಕಾಶಗಳು ಹುಡುಕಿಕೊಂಡು ಅವರತ್ತ ಬರಲು ಶುರುವಾಗುತ್ತದೆ. 1980ರಲ್ಲಿದ್ದ ಜನಪ್ರಿಯ ಧಾರಾವಾಹಿ ʼರಿಶ್ತೆ ನಾತೆʼ (Rishte-Naate) ಯಲ್ಲಿ ನಟಿಸುವ ಮೂಲಕ ಕಿರುತೆರೆಗೆ ಅವರು ಕಾಲಿಡುತ್ತಾರೆ.

ಕೆಲ ವರ್ಷಗಳ ಟಿವಿ ಧಾರಾವಾಹಿಗಳಲ್ಲಿ ಗುರುತಿಸಿಕೊಂಡ ಶಿವಾಜಿ 1988ರಲ್ಲಿ ತೆರೆಕಂಡ 1988 ʼಪೆಸ್ಟೊಂಜಿʼ (Pestonjee) ಎನ್ನುವ ಸಿನಿಮಾದಲ್ಲಿ ನಟಿಸುತ್ತಾರೆ. ಆ ಮೂಲಕ ಅವರು ಟಿವಿ ಬಳಿಕ ಹಿರಿತೆರೆಗೂ ಎಂಟ್ರಿ ಆಗುತ್ತಾರೆ.

ಇದಾದ ನಂತರ ಸಾಲು ಸಾಲಾಗಿ ಸಿನಿಮಾಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ʼ100 ಡೇಸ್‌ʼ , ʼಯಶವಂತ್‌ʼ, ʼವಿನಾಶಕ್ʼ, ʼವಜೂದ್ʼ, ʼಬರ್ದಾಷ್ಟ್ʼ, ʼನಾಯಕ್‌ʼ ʼಸೂರ್ಯವಂಶಮ್ʼ, ʼಗುಲಾಮ್ ಇ ಮುಸ್ತಫಾʼ ಸೇರಿದಂತೆ 30ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್‌ನಲ್ಲೂ ತಮ್ಮ ಅಭಿನಯದ ಛಾಪನ್ನು ಮೂಡಿಸುತ್ತಾರೆ.

ನಟಿಸಿರುವ ಸಿನಿಮಾದಲ್ಲಿ ಹೆಚ್ಚಿನವುಗಳಲ್ಲಿ ಅವರು ಪೊಲೀಸ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 1998ರಲ್ಲಿ ಶಿವಾಜಿ ಅವರಿಗೆ ʼಸಿಐಡಿʼ ಎನ್ನುವ ಕ್ರೈಮ್‌ ಧಾರಾವಾಹಿಯಲ್ಲಿ ನಟಿಸುವ ಪಾತ್ರವೊಂದು ಬರುತ್ತದೆ. ಸಿನಿಮಾಗಳಲ್ಲಿ ಪೊಲೀಸ್‌ ಆಗಿ ಮಿಂಚಿದ್ದ ಅವರು ಈ ಪಾತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಡುತ್ತಾರೆ. ನೋಡ ನೋಡುತ್ತಿದ್ದಂತೆಯೇ ವಾರ, ತಿಂಗಳು ದಾಟಿ 20 ವರ್ಷಗಳ ಕಾಲ ʼಸಿಐಡಿʼ ಒಂದು ಜನಪ್ರಿಯ ಕಾರ್ಯಕ್ರಮವಾಗಿ ಟಿವಿ ಲೋಕದಲ್ಲಿ ಮೆರೆಯುತ್ತದೆ ಹಾಗೂ ಬೆಳೆಯುತ್ತದೆ.

ಈ ಕಾರ್ಯಕ್ರಮದಲ್ಲಿಅವರು ಎಸಿಪಿಯ ಪಾತ್ರವನ್ನು ಮಾಡುವ ಮೊದಲು ಹಿರಿಯ ಪೊಲೀಸ್‌ ಅಧಿಕಾರಿಯ ಪಾತ್ರವನ್ನು ಮಾಡುತ್ತಿದ್ದರು. ಆ ಬಳಿಕ ಎಸಿಪಿ ಪ್ರದ್ಯುಮನ್‌ ಆಗಿ ಕಾಣಿಸಿಕೊಂಡರು.

ಹಿಂದೆ ಮಾತ್ರವಲ್ಲದೆ ಮರಾಠಿ ಕಿರುತೆರೆ- ಹಿರಿತೆರೆಯಲ್ಲಿ ದೊಡ್ಡ ಹೆಸರು ಮಾಡಿರುವ ಶಿವಾಜಿʼಏಕ್ ಶೂನ್ಯ ಶೂನ್ಯʼ(ಧಾರಾವಾಹಿ), ಹಾಪುಸ್ (ಸಿನಿಮಾ), ದೇ ಢಕ್ಕಾ (ಸಿನಿಮಾ) , ಉತ್ತರಾಯಣ್‌ (ಸಿನಿಮಾ), ʼಏಕ್ ಹೋತಿ ವಾಡಿʼ ಸೇರಿದಂತೆ ಹಲವು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದಲ್ಲದೆ ಇಂಗ್ಲೀಷ್‌ ಭಾಷೆಯಲ್ಲಿ ಬಂದಿರುವ ಭಾರತದ ‘ಇಂಗ್ಲೀಷ್ ಆಗಸ್ಟ್’, ‘ಸ್ಪ್ಲಿಟ್ ವೈಡ್ ಓಪನ್’ ಸಿನಿಮಾಗಳಲ್ಲಿ ಶಿವಾಜಿ ನಟಿಸಿದ್ದಾರೆ. ಈ ಸಿನಿಮಾಗಳನ್ನು ದೇವ್ ಬೆನಗಲ್ ನಿರ್ದೇಶನ ಮಾಡಿದ್ದಾರೆ.

ʼಸಿಐಡಿʼ ನೋಡ ನೋಡುತ್ತಾ ಶಿವಾಜಿ ಅವರನ್ನು ವೀಕ್ಷಕರು ಹೃದಯದಲ್ಲಿ ʼಎಸಿಪಿ ಪ್ರದ್ಯುಮನ್‌ʼ ಆಗಿಯೇ ಪ್ರೀತಿಯ ಸ್ಥಾನ ಕೊಟ್ಟಿದ್ದಾರೆ. ʼಸಿಐಡಿʼ ಬಂದ ಬಳಿಕ ಶಿವಾಜಿ ಅವರ ಕಲಾಸೇವೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಹರಸಿ ಬಂದಿವೆ.

ಕಲಾಶ್ರೀ ಅವಾರ್ಡ್ಸ್‌, ಇಂಡಿಯನ್‌ ಟೆಲಿ ಅವಾರ್ಡ್ಸ್‌, ಗೋಲ್ಡ್‌ ಅವಾರ್ಡ್ಸ್‌ ಸೇರಿದಂತೆ ಹತ್ತಾರು ಬಾರಿ ಅವರು ತಮ್ಮ ನಟನೆಗೆ ಪ್ರಶಸ್ತಿ,ಪುರಸ್ಕಾರ ಪಡೆದುಕೊಂಡಿದ್ದಾರೆ.

ಶಿವಾಜಿ ಅವರ ಕಲಾಸೇವೆಗಾಗಿ ಜೀವಮಾನ ಸಾಧನೆ ಪ್ರಶಸ್ತಿಯಾಗಿ 59ನೇ ಮಹಾರಾಷ್ಟ್ರ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗಿದೆ.

ಸೋನಿ ಟೆಲಿವಿಷನ್‌ನಲ್ಲಿ 21 ಜನವರಿ 1998ರಲ್ಲಿ ಆರಂಭವಾದ ʼಸಿಐಡಿʼ ಸಿರೀಸ್ ಸತತ 20 ವರ್ಷಗಳ ಪ್ರಸಾರದ ಬಳಿಕ 2018ರ ಅಕ್ಟೋಬರ್‌ನಲ್ಲಿ ಮುಕ್ತಾಯ ಕಂಡಿತು. ಇದ್ದಕ್ಕಿದ್ದಂತೆ ಕಾರ್ಯಕ್ರಮ ಮುಕ್ತಾಯವಾದ ಕಾರಣ ಅನೇಕ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಇದೀಗ 6 ವರ್ಷದ ಬಳಿಕ ಶೋ ಮತ್ತೆ ಶುರುವಾಗಲಿದೆ. ಅಭಿಜಿತ್ , ದಯಾ, ಎಸಿಪಿ ಪ್ರದ್ಯುಮನ್ ʼಸಿಐಡಿʼಯಲ್ಲಿ ಮತ್ತೆ ಜತೆಯಾಗಲಿದ್ದಾರೆ.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next