Advertisement

ಬಾರೋ ಸಾಧಕರ ಕೇರಿಗೆ :ಕಾಫ್ಕನೂ, ಪುಟ್ಟಿಯ ಗೊಂಬೆಯೂ…

06:54 PM Oct 27, 2020 | Suhan S |

ನಲವತ್ತರ ಹರೆಯದಲ್ಲಿದ್ದ ಜಗತ್ಪ್ರಸಿದ್ಧ ಕಥೆಗಾರ ಕಾಫ್ಕ, ಅದೊಂದು ದಿನ ತನ್ನೂರು ಬರ್ಲಿನ್‌ನ ಬೀದಿಯಲ್ಲಿ ನಡೆದುಹೋಗುತ್ತಿದ್ದಾಗ ಪುಟ್ಟ ಹುಡುಗಿಯೊಬ್ಬಳು ರಸ್ತೆಬದಿಯಲ್ಲಿ ಮಂಕಾಗಿ ಕೂತಿದ್ದುದನ್ನು ಕಂಡ. ಏನಾಯಿತು? ಎಂದು ಅನುನಯದಿಂದ ವಿಚಾರಿಸಿದ.

Advertisement

ಹುಡುಗಿ, ಗೊಂಬೆಯನ್ನು ಕಳೆದುಕೊಂಡೆ  ನೆಂದು ಹೇಳಿ ಸಣ್ಣಗೆ ಅತ್ತಳು. “ಅದಕ್ಕೆಲ್ಲ ಅಳ್ತಾರಾ? ಹುಚ್ಚುಹುಡ್ಗಿ! ಹುಡುಕೋಣಬಾ!’ ಎಂದು ಸಮಾಧಾನಿಸಿ ಕಾಫ್ಕ ಗೊಂಬೆಗಾಗಿ ಅಲ್ಲೆಲ್ಲ ಹುಡುಕಿದ. ಊಹೂಂ, ಪತ್ತೆಯಾಗಲಿಲ್ಲ. ಕತ್ತಲಾಗುತ್ತಿದ್ದುದರಿಂದ ಕಾಫ್ಕ ಆ ಹುಡುಗಿಗೆ, ಮರುದಿನ ಸಂಜೆ ಮತ್ತೆ ಬರೋಣವೆಂದೂ, ಬಂದು ಗೊಂಬೆಗಾಗಿ ಹುಡುಕೋಣ ಎಂದೂ ಸಮಾಧಾನ ಹೇಳಿ ಕಳಿಸಿದ. ಮರುದಿನ, ಮಾತಾಡಿಕೊಂಡಂತೆ, ಅವರಿಬ್ಬರೂ ಮತ್ತೆ ಅಲ್ಲಿ ಸೇರಿದರು. ಮತ್ತೆ ಗೊಂಬೆಗಾಗಿ ಹುಡುಕಿದರು. ಅದು ಸಿಗದೇಹೋದಾಗ ಸುಸ್ತಾಗಿ ನಿಂತ ಹುಡುಗಿಗೆ ಕಾಫ್ಕ ಒಂದು ಪತ್ರ ಕೈಗಿಟ್ಟ. ಅದು ಗೊಂಬೆ ಹುಡುಗಿಗೆ ಬರೆದಿದ್ದ ಪತ್ರ! “ಕ್ಷಮಿಸು ಗೆಳತಿ. ನಾನೀಗ ಪ್ರಪಂಚದ ಪ್ರವಾಸಕ್ಕೆ ಹೊರಟಿದ್ದೇನೆ. ವಾಪಸ್‌ ಬರೋದು ಕೆಲವು ತಿಂಗಳೇ ಆಗಬಹುದು.

ಅಲ್ಲಿಯವರೆಗೆ ನೀನು ನನಗಾಗಿ ಎಲ್ಲೂ ಹುಡುಕ್ಬೇಡ’ ಎಂದು ಗೊಂಬೆ ಬರೆದಿತ್ತು ಅದರಲ್ಲಿ. ಅಲ್ಲಿಂದ ಕಾಫ್ಕ ಮತ್ತು ಹುಡುಗಿಯ ಹೊಸ ಗೆಳೆತನ ಶುರುವಾಯಿತು. ಪ್ರತಿ ಸಲ ಭೇಟಿಯಾದಾಗಲೂ ಕಾಫ್ಕ ಗೊಂಬೆ ಬರೆದ ಕಾಗದಗಳನ್ನು ಹುಡುಗಿಗೆ ಕೊಡುತ್ತಿದ್ದ. ಆ ಕಾಗದಗಳಲ್ಲಿ, ಗೊಂಬೆ ತಾನು ಎಲ್ಲೆಲ್ಲಿ ಹೋದೆ, ಏನೇನು ಮಾಡಿದೆ, ಯಾವ್ಯಾವ ಸ್ಥಳ ನೋಡಿದೆ ಎಂಬುದನ್ನೆಲ್ಲ ತನ್ನದೇ ಭಾಷೆಯಲ್ಲಿ ಬರೆದಿರುತ್ತಿತ್ತು. ಹುಡುಗಿಗೆ ಖುಷಿಕೊಡುವ, ಅವಳನ್ನು ಮನಸಾರೆ ನಗಿಸುವ ಸಂಗತಿಗಳು ಅವುಗಳಲ್ಲಿ ಧಾರಾಳವಾಗಿರುತ್ತಿದ್ದವು.

ಕೊನೆಗೊಂದು ದಿನ ಕಾಫ್ಕ ಒಂದು ಗೊಂಬೆಯೊಡನೆ ಆ ಹುಡುಗಿಯನ್ನು ಭೇಟಿಯಾದ. “ನಿನ್ನ ಗೊಂಬೆ ನೋಡು, ಪ್ರವಾಸ ಮುಗಿಸಿ ವಾಪಸ್‌ ಬಂದಿದೆ’ ಎಂದ. ಹುಡುಗಿ ಗೊಂಬೆಯನ್ನು ನೋಡಿದಳು. “ಇದಲ್ಲ ನನ್‌ ಗೊಂಬೆ. ಅದು ಹೀಗಿರ್ಲಿಲ್ಲ’ ಎನ್ನುತ್ತಾ ಅದನ್ನು ಸ್ವೀಕರಿಸಲು ನಿರಾಕರಿಸಿದಳು. ಕಾಫ್ಕ ಗೊಂಬೆ ಬರೆದಿದ್ದ ಕೊನೆಯ ಪತ್ರವನ್ನು ಕಿಸೆಯಿಂದ ತೆಗೆದು ಅವಳ ಕೈಯಲ್ಲಿಟ್ಟ. “ಜಗತ್ತಿನ ಪ್ರವಾಸ ನನ್ನನ್ನು ಬದಲಾಯಿಸಿದೆ, ಪುಟ್ಟಿ! ಈಗ ನಾನು ಮೊದಲಿನಂತಿಲ್ಲ ನಿಜ. ಆದರೂ ನಾನು ನಿನ್ನ ಹಳೇ ಗೊಂಬೇನೇ’ ಎಂದು ಗೊಂಬೆ ಆ ಪತ್ರದಲ್ಲಿ ಬರೆದಿತ್ತು! ಅದನ್ನು ಓದಿ ಖುಷಿಯಾದ ಹುಡುಗಿ, ಗೊಂಬೆಯನ್ನು ಅವುಚಿ ಹಿಡಿದು ನಗುನಗುತ್ತಾ ಮನೆ ಕಡೆ ಸಾಗಿದಳು.

ಹಲವಾರು ವರ್ಷಗಳ ನಂತರ ಆ ಹುಡುಗಿಗೆ ಆ ಹಳೆಯ ಗೊಂಬೆಯೊಳಗೆ ಒಂದು ಪತ್ರ ಅವಿತಿಟ್ಟುಕೊಂಡದ್ದು ಕಾಣಸಿಕ್ಕಿತು. ಅವಳು ಅದನ್ನು ಎಳೆದುತೆಗೆದು ಬಿಡಿಸಿ ನೋಡಿದರೆ ಅದರಲ್ಲಿ ಕಾಫ್ಕ ನ ಸಹಿಯಿದ್ದ ಪುಟ್ಟ ಚೀಟಿಯಿತ್ತು. ಅದರಲ್ಲಿ ಬರೆದಿತ್ತು: “ನೀನು ಪ್ರೀತಿಸಿದೆಲ್ಲವೂ ಒಂದಿಲ್ಲೊಂದು ದಿನ ಕಳೆದುಹೋಗ ಬಹುದು. ಆದರೆ ಕೊನೆಯಲ್ಲಿ ಪ್ರೀತಿ ಮಾತ್ರ ನಿನ್ನನ್ನು ಒಂದಿಲ್ಲೊಂದುದು ರೀತಿಯಲ್ಲಿ ಮರಳಿ ಸೇರುವುದು’. ಆ ಕ್ಷಣವೇ ಹೊರಟು ಕಾಫ್ಕ ನನ್ನು ಭೇಟಿಯಾಗಿ ಬರೋಣ  ವೆಂದರೆ ಅವನು ಇದ್ದನೇ? 41ರ ಎಳೆಹರೆಯದಲ್ಲೇ ಆ ಪುಣ್ಯಾತ್ಮ ತೀರಿಕೊಂಡಿದ್ದ! ಅಂದ ಹಾಗೆ, ಮೇಲೆ ಹೇಳಿದ ಕತೆ ಫ್ರಾಂಜ್‌ ಕಾಫ್ಕ ನ ಹೆಸರಿನಲ್ಲಿ ಪ್ರಚಲಿತವಿದೆಯೇನೋ ಹೌದು. ಆದರೆ, ಅದು ಆತನ ಜೀವನದಲ್ಲಿ ನಡೆದದ್ದಲ್ಲ! ಆತನ ಕಾಲಾನಂತರ ಹುಟ್ಟಿ ಹರಡಿ ಪ್ರಸಿದ್ಧವಾದ ಈ ದಂತಕಥೆಯ ಜನಕರು ಯಾರೆಂಬುದು ಇಂದಿಗೂ ನಿಗೂಢ!

Advertisement

 

-ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next