Advertisement
ಡಾಕ್ಟರ್ ಲಕ್ಷ್ಮಣ ಕೂಡ ಇದರಿಂದ ಹೊರತಾಗಿಲ್ಲ. ಕಡು ಕಷ್ಟದಿಂದ ಬೆಳೆದುಬಂದ ಈತ ತನ್ನ ಬಾಲ್ಯದ ದಿನಗಳನ್ನು ನೆನಪಿಸಿ ಕೊಂಡು ಆಗಾಗ ಗದ್ಗದನಾಗುವುದುಂಟು. ಬಾಲ್ಯದ ಆದ್ರ ಕ್ಷಣಗಳನ್ನು ಪದ್ಯಗಳಲ್ಲಿ ಕಟ್ಟಿಕೊಡುವುದುಂಟು. ಕೆಲವೊಮ್ಮೆ ಜಿದ್ದಿಗೆ ಬಿದ್ದಂತೆ ಒಂದೇ ದಿನ 3-4 ಪದ್ಯ ಬರೆಯುವುದೂ ಉಂಟು. ಆಗೆಲ್ಲಾ- ಏನು ಡಾಕ್ಟ್ರೇ, ನಿಮಗೀಗ ವೃತ್ತಿಗಿಂತ ಪ್ರವೃತ್ತಿಯಲ್ಲೇ ಚೆನ್ನಾಗಿ ಕಾಸು ಸಿಕ್ತಾ ಇದೆಯಲ್ಲ ಎಂದು ರೇಗಿಸಿದರೆ- ಯಾವುದು ಜಾಸ್ತಿ ಕಾಸು ಕೊಡುತ್ತೋ, ಅದನ್ನೇ ಫುಲ್ ಟೈಮ್ ವೃತ್ತಿ ಮಾಡಿಕೊಳ್ಳೋಣ ಸರ್. ಕವಿ ಮತ್ತು ಡಾಕ್ಟರ್- ಈ ಇಬ್ಬರದೂ ಒಂದೇ ಕೆಲಸ, ಸುಳ್ಳು ಹೇಳುವುದು!- ಎಂದು ನಗುತ್ತಿದ್ದರು.ಇಂಥ ಹಿನ್ನೆಲೆಯ ಮನುಷ್ಯ, ಕಳೆದ ತಿಂಗಳಿಂದ ಮೆಸೇಜ್ ಮಾಡುವುದನ್ನು ನಿಲ್ಲಿಸಿಬಿಟ್ಟಿದ್ದ. ಫೇಸ್ ಬುಕ್‌ನಿಂದಲೂ ಮಾಯವಾಗಿದ್ದ. ಆಕಸ್ಮಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಗೆಳೆಯರ ಸೆಲ್ಫಿಗಳಲ್ಲೂ ಆತ ಇರುತ್ತಿರಲಿಲ್ಲ. ಇದೇನಾಗಿ ಹೋಯಿತು? ಎಲ್ಲರನ್ನೂ ನಗಿಸುತ್ತಿದ್ದ, ಎಲ್ಲರಿಗೂ ಸಮಾಧಾನ ಹೇಳುತ್ತಿದ್ದ, ನಾನಂತೂ ಯಾರನ್ನೂ “”ಮೇಲಕ್ಕೆ” ಕಳಿಸುವುದಿಲ್ಲ- ಆದ್ರೆ ಅದಕ್ಕೂ ಚಾರ್ಜ್ ಮಾಡ್ತೇನೆ ಎಂದು ತಮಾಷೆ ಮಾಡುತ್ತಿದ್ದ ವ್ಯಕ್ತಿ, ಇದ್ದಕ್ಕಿದ್ದಂತೆ ತಾನೇ ಟಿಕೆಟ್ ತಗೊಂಡರಾ ಅನಿಸಿದ್ದೂ ಸುಳ್ಳಲ್ಲ. ಇಂಥ ಸಂದರ್ಭದಲ್ಲಿ, ಆತನ ಬಗ್ಗೆ ಪ್ರೀತಿ, ಹೆಮ್ಮೆ ಪಡುವಂಥ ಸಂಗತಿ ಗೊತ್ತಾಯಿತು. ಈ ಕವಿ ಹೃದಯದ ಮಿತ್ರ, ಕೊರೊನಾ ವಾರಿಯರ್ ಆಗಿ ಸೇವೆ ಮಾಡಲು ಹೋಗಿ ಬಿಟ್ಟಿದ್ದ. ಕೊರೊನಾ ರೋಗಿಗಳನ್ನು ಉಪ ಚರಿಸುವ ಆಸ್ಪತ್ರೆಯ ಒಳಗೆ ಊಟ- ನಿದ್ರೆ ಮರೆತು ಸೇವೆಗೆ ನಿಂತಿದ್ದ. ಸಾವಿನ ಸಮ್ಮುಖ ದಲ್ಲಿ ಅಡ್ಡಾಡುತ್ತ ಆಗಾಗ ಯಮ ರಾಯನಿಗೆ- “ನೀನಾ ನಾನಾ?’ ಎಂದು ಸವಾಲು ಹಾಕುತ್ತಿದ್ದ. ಅಂಥವ, ಕೊರೊನಾದ ಚಕ್ರಸುಳಿಗೆ ಸಿಕ್ಕಿ, ಕಣ್ಣೆದುರೇ ಕಥೆಯಾಗಿ ಹೋದವರ ವಿವರ ಅಕ್ಷರದ ರೂಪದಲ್ಲಿ ಎದುರಿಗಿಟ್ಟ.
***
“”ಅವೆರಡೂ ಎಂಟು ವರ್ಷದ ಅವಳಿ-ಜವಳಿ ಕೂಸುಗಳು. ಶಾಲೆ ಶುರುವಾಗಿದ್ದರೆ ಇಷ್ಟೊತ್ತಿಗೆ ಅರ್ಧ ವಾರ್ಷಿಕ ಪರೀಕ್ಷೆ ಬರೆದು ದಸರೆ ರಜೆಯ ಸಂಭ್ರಮದಲ್ಲಿರುತ್ತಿದ್ದವು. ಆದರೆ ಈಗ ಬದುಕು ಎಸೆದ ಪ್ರಶ್ನೆಗಳಿಗೆ ಉತ್ತರಿಸಲಾಗದೇ ತಡವರಿಸುತ್ತಿವೆ. ಈ ಕಂದಮ್ಮಗಳು ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ನತದೃಷ್ಟ ಹುಡುಗರು. ತಂದೆಯೇ ಇವರಿಗೆ ತಾಯಿ -ತಂದೆ. ಆತನಿಗೆ ಲಗ್ಗೇಜ್ ಆಟೋ ಓಡಿಸುವ ಕೆಲಸ. ಮಕ್ಕಳ ಶಾಲಾ ಯೂನಿಫಾರ್ಮಿನ ಸಾಕ್ಸು ತೊಳೆಯುವುದರಿಂದ ಹಿಡಿದು, ಪಾಠ ಪ್ರವಚನಾದಿಯಾಗಿ ಮಾಡಲು ದೇವರು ಈ ತಂದೆಯನ್ನೇ ಎರಡೆರಡು ಪಾತ್ರ ಮಾಡಿಸಲು ಅನಿವಾರ್ಯವಾಗಿಸಿದವನು. ಮಕ್ಕಳಿಗೆ ಯಾವ ತಿಂಡಿ ಇಷ್ಟ ಎಂದು ಬದುಕು ಕಲಿಸಿದ ರಿಯಾಜಿನಿಂದಲೇ ಈತ ಅನುಭವ ಪಡೆದಿರುವವನು. ಹೀಗಿರುವಾಗ ಒಂದು ದಿನ ಈ ದ್ವಿ -ಪಾತ್ರದ “ಅಪ್ಪ” ತನ್ನ ಲಗ್ಗೇಜು ಗಾಡಿಯಲ್ಲೇ ತನ್ನ ವಯಸ್ಸಾದ ಅಪ್ಪ- ಅವ್ವಳನ್ನು ಕರೆದು ಹಿಂದೆ ಕುಳ್ಳಿರಿಸಿಕೊಂಡು ನಮ್ಮ ಆಸ್ಪತ್ರೆಗೆ ಬಂದಿದ್ದ. ಇಬ್ಬರೂ ಕೆಮ್ಮುತ್ತಿದ್ದರು. ಶೀತಕ್ಕೆ ನಡುಗುತ್ತಿದ್ದರು. ಯಾವುದಕ್ಕೂ ಒಮ್ಮೆ ಕೊರೊನಾ ಚೆಕ್ ಅಪ್ ಆಗಲಿ ಎಂದದ್ದಾಯ್ತು. ಎರಡು ದಿನಗಳ ತರುವಾಯ ಇವರ ತಂದೆಯ ಫಲಿತಾಂಶ ಪಾಸಿಟಿವ್ ಬಂತು. ಆಗ ಅವರನ್ನು ಖಾಸಗಿ ಆಸ್ಪತ್ರೆಗೆ ಸರಕಾರಿ ಕೋಟಾದಲ್ಲಿ ನಾನೇ ದಾಖಲಿಸಿದ್ದೆ. ಇನ್ನೆರಡು ದಿನಗಳ ತರುವಾಯ ಇವರ ತಾಯಿಯ ಫಲಿತಾಂಶವೂ ಪಾಸಿಟಿವ್ ಬಂದಾಗ ಅವರನ್ನೂ ಅಲ್ಲೇ ದಾಖಲಿಸಿದ್ದೆ. ಒಂದು ಮೇಲ್ ವಾರ್ಡು, ಇನ್ನೊಂದು ಫೀಮೇಲ್ ವಾರ್ಡು. ಈ ಕೊರೆಯುವ ಚಳಿಯಲ್ಲಿ ಅಲ್ಲಿಯ ಆಸ್ಪತ್ರೆಯ ಗೀಜರು ಕೆಲಸ ಮಾಡುವುದಿಲ್ಲ.
Related Articles
Advertisement
ಹೀಗಿರುವಾಗ, ಒಂದು ದಿನ ಆ ದ್ವಿ -ಪಾತ್ರದ ಅಪ್ಪನ ಅಪ್ಪ ತೀರಿಹೋಗುತ್ತಾರೆ. ಇವನು ಕಣ್ಣೀರಾಗುತ್ತಾನೆ. ಹತ್ತೇ ಜನ ನೆಂಟರೊಂದಿಗೆ ಅಪ್ಪನ ದಫನ್ ಮಾಡುವಷ್ಟರಲ್ಲಿ ಇವನೂ ಸೇರಿ ಎರಡೂ ಮಕ್ಕಳಿಗೆ ಪಾಸಿಟಿವ್ ಬರುತ್ತದೆ. ಅಪ್ಪನನ್ನು ಮಣ್ಣು ಮಾಡಿಯೇ ಮುಗಿದಿಲ್ಲ, ಆಗಲೇ ಈ ಬಗೆಯ ಕಷ್ಟ. ಇವನ ಮಕ್ಕಳ ಚಿಂತೆ ಇವನಿಗೆ. “ಸರ್, ಈಗ ನಾನು ಏನು ಮಾಡಲಿ?’ ಎಂದು ತನಗೆ ತಿಳಿದ ಭಾಷೆಯಲ್ಲಿ ಮೆಸೇಜ್ ಕಳಿಸುತ್ತಾನೆ. “”ತಂದೆಯ ಅಂತ್ಯಸಂಸ್ಕಾರದ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು, ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ”- ಎಂದು ನಾನು ಹೇಳುತ್ತೇನೆ. “”ಸರ್, ಆ ಕೂಸುಗಳು ನನ್ನನ್ನು ಬಿಟ್ಟು ಒಂದು ದಿನವೂ ಮಲಗಿಲ್ಲ ಸರ್…” ಎಂದು ಅವಲತ್ತುಕೊಳ್ಳುತ್ತಾನೆ. ನಾನಿಲ್ಲಿ ಅದೇ ವಯಸ್ಸಿನ ಅಥವಾ ಅದಕ್ಕಿಂತ ಎರಡು ವರ್ಷ ಜಾಸ್ತಿ ವಯಸ್ಸಿನ ನನ್ನ ಮಗನ ನೆನಪಾಗಿ, ಉಕ್ಕುವ ದುಃಖವ ತಡೆದುಕೊಂಡು ಆದೇಶಿಸುತ್ತೇನೆ. “”ಸಾಧ್ಯವಿಲ್ಲ, ನಿಮ್ಮ ಮಕ್ಕಳಿಗೆ ತೀವ್ರ ಜ್ವರ ಇದೆ. ಅವರನ್ನು ಆಸ್ಪತ್ರೆಗೆ ಸೇರಿಸಬೇಕಾದ ಜರೂರತ್ತು ಇದೆ …”
ಈ ಅಪ್ಪ, ಈಚೆಗಷ್ಟೇ ಜೀವ ಕಳೆದುಕೊಂಡ ಅವರಪ್ಪನ ಮಂಚದಿಂದ ತುಸು ದೂರದ ವಾರ್ಡಿನಲ್ಲಿ ತನ್ನ ಕೂಸುಗಳ ಮಲಗಿಸಿ ಮರಳಿ ಮನೆಗೆ ಬರುವಷ್ಟರಲ್ಲಿ ಇವನಿಗೆ ವಿಪರೀತ ಜ್ವರ! ಅವನು ದಿಕ್ಕುತೋಚದೆ ಹೀಗೊಂದು ಮೆಸೇಜ್ ಕಳಿಸುತ್ತಾನೆ- “”ಸರ್, ಹೀಗಾಗಿಬಿಟ್ಟಿದೆ, ಏನು ಮಾಡಲಿ?”.
ಈ ಸಲ ಅವನಿಗೆ ನನ್ನ ಬಳಿ ಉತ್ತರವಿಲ್ಲ. ಆ ಅಪ್ಪ – ಅವನು ಮಧ್ಯ ರಾತ್ರಿ ಕಳುಹಿಸಿದ ಮೆಸೇಜು, ಆ ಮಕ್ಕಳ ಅಮಾಯಕ ಕಣ್ಣುಗಳಲ್ಲಿ ಕಾಣದ ರೋಗದ ಅಪಾಯದ ಕುರಿತು ಯೋಚಿಸುತ್ತ, ಮಲಗಿರುವ ಮಗನ ಮುಖ ನೋಡಿಬಂದು ಮಲಗುತ್ತೇನೆ…***
ಇದು, ವೈದ್ಯರೊಬ್ಬರು ಶುದ್ಧ ಮನುಷ್ಯನಷ್ಟೇ ಆಗಿ, ಒಂದು ಸಂದರ್ಭ ಅರ್ಥ ಮಾಡಿಕೊಂಡ, ಸಾವಿನ ಸಮ್ಮುಖದಲ್ಲಿ ಎಲ್ಲರೂ ಅಸಹಾಯಕರು ಎಂಬುದನ್ನು ಸಂಕೋಚವಿಲ್ಲದೆ ಒಪ್ಪಿಕೊಂಡ ಸನ್ನಿವೇಶದ ಮಾತಾಯಿತು. ಇಂಥವರಿರುವ ನೆಲದಲ್ಲಿಯೇ ಇನ್ನೊಂದು ಬಗೆಯ ಜನರೂ ಇದ್ದಾರೆ ಎಂಬುದಕ್ಕೂ ಈ ಕಾಲ ಸಾಕ್ಷಿಯಾಗುತ್ತಿದೆ. ಅಷ್ಟಕ್ಕೂ ತಿಂಗಳ ಹಿಂದೆ ಏನಾಯಿತೆಂದರೆ-
58 ವರ್ಷದ ಆರೋಗ್ಯವಂತ ವ್ಯಕ್ತಿಯೊಬ್ಬರಿಗೆ ಇದ್ದಕ್ಕಿದ್ದಂತೆ ಬೆನ್ನು ನೋವು ಕಾಣಿಸಿಕೊಂಡಿತು. ಅವತ್ತಿನವರೆಗೂ ಆತ ಒಂದು ದಿನವೂ ಪೇಷಂಟ್ ಎಂದು ಮಲಗಿದವರಲ್ಲ. ಒಮ್ಮೆ ಆಸ್ಪತ್ರೆಗೆ ಹೋಗಿಬರೋಣ ಅಂದುಕೊಂಡು, ಒಬ್ಬಳೇ ಮಗಳೊಂದಿಗೆ ತಜ್ಞ ವೈದ್ಯರಿದ್ದ ಹೈ ಟೆಕ್ ಆಸ್ಪತ್ರೆಗೆ ಹೋದರು. ಮೊದಲಿಗೆ ಕೊರೊನಾ ಟೆಸ್ಟ್ ಆಯಿತು. ಅದು ನೆಗೆಟಿವ್ ಎಂದು ಗೊತ್ತಾಯಿತು. ನಂತರ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅಡ್ಮಿಟ್ ಆದ ವ್ಯಕ್ತಿಗೆ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ದಾಖಲಿಸಿಕೊಂಡ ವೈದ್ಯರು, 2 ದಿನಗಳ ನಂತರ ಹೇಳಿದರು: “”ಶ್ವಾಸಕೋಶದಲ್ಲಿ ಇನೆ#ಕ್ಷನ್ ಆಗಿದೆ. ಹಾಗಾಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ವೆಂಟಿಲೇಟರ್ ಸಪೋರ್ಟ್‌ಲಿ ಇದ್ದಾರೆ. ಪೂರ್ತಿ ಹುಷಾರಾ ಗುವವರೆಗೆ ಐಸಿಯುನಲ್ಲಿಯೇ ಇರಬೇಕು.”
ಹೀಗೆ ವಾರ ಕಳೆಯಿತು. ಎರಡು ವಾರ ಉರುಳಿತು. ಕಡೆಗೆ ತಿಂಗಳೂ ಆಗಿಹೋಯಿತು. ಚಿಕಿತ್ಸೆ ಮುಗಿಯಲಿಲ್ಲ. ಆ ರೋಗಿಯ ಸ್ಥಿತಿ ಹೇಗಿದೆಯೆಂದು ಆಸ್ಪತ್ರೆಯವರು ವಿವರಿಸುವುದಿಲ್ಲ. ಬಿಲ್ ಮಾತ್ರ, 35 ಲಕ್ಷಕ್ಕೆ ಬಂದು ನಿಂತಿದೆ. ಆ ವ್ಯಕ್ತಿಗೆ ಇರುವಾಕೆ ಒಬ್ಬಳೇ ಮಗಳು. ಅವಳಾದರೂ ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿಂದ ತರಲು ಸಾಧ್ಯ? ಇಷ್ಟು ವರ್ಷದ ಬದುಕಿನಲ್ಲಿ ಯಾರ ಮುಂದೆಯೂ ಕೈ ಒಡ್ಡಿ ಅಭ್ಯಾಸವಿಲ್ಲದ ಆಕೆ ಈಗ ಅನಿವಾರ್ಯ ವಾಗಿ ಕೇಳುತ್ತಿದ್ದಾಳೆ: ಉಳಿತಾಯದ ಹಣ, ಇನ್ಸೂರೆನ್ಸ್, ಸಾಲ… ಎಲ್ಲವನ್ನೂ ಬಳಸಿದ್ದಾಗಿದೆ. ಆದರೂ ದುಡ್ಡು ಸಾಲುತ್ತಿಲ್ಲ. ನನಗೆ ಅಪ್ಪ ಬೇಕು. ಚಿಕಿತ್ಸೆಗೆ ದುಡ್ಡು ಬೇಕು. ದಯವಿಟ್ಟು ಸಹಾಯ ಮಾಡಿ ಅನ್ನುತ್ತಿದ್ದಾಳೆ. “”ಇದು ಕೊರೊನಾ ಕಾಲ ತಂಗವ್ವಾ. ಇದ್ದ ಕೆಲಸ ಹೋಗಿದೆ. ಸಂಪಾದನೆಗೆ ಕಲ್ಲು ಬಿದ್ದಿದೆ. ಮನೆ ಬಾಡಿಗೆ ಕಟ್ಟೋಕೆ ಕಾಸಿಲ್ಲ. ನಿನಗೆಲ್ಲಿಂದ ತರೋದು? ನಮ್ಮನ್ನು ಇದೊಂದು ಸರ್ತಿ ಕ್ಷಮಿಸು. ಯಾರಾದರೂ ಶ್ರೀಮಂತರ ಬಳಿ ಸಹಾಯ ಕೇಳು…” ಅನ್ನುತ್ತಾ ಬಂಧುಗಳು ಕೈಚೆಲ್ಲುತ್ತಿದ್ದಾರೆ. “”ನಂಗೆ ಅಪ್ಪ ಬೇಕೂ…” ಎಂಬ ಒಂದೇ ಆಸೆಯಿಂದ ಈ ಹುಡುಗಿ ಶ್ರೀಮಂತರ ಬಳಿ ನೆರವು ಕೇಳಿದರೆ, ಆ ಜನ- “”ಮೀಟಿಂಗ್ ಲಿ ಇದ್ದೇವೆ” ಎಂದು ಫೋನ್ ಕುಕ್ಕುತ್ತಿದ್ದಾರೆ. ಹೇಗಿದ್ದ ಬದುಕು ಹೀಗಾಗಿ ಹೋಯ್ತು ಅಂದುಕೊಂಡು ಹಿರಿಯ ಜೀವವೊಂದು ಆಸ್ಪತ್ರೆ ಯೊಳಗೆ ಉಸಿರಾಡಲು ಕಷ್ಟಪಡುತ್ತಿದೆ. ಅವರ ಮಗಳು, ಆಸ್ಪತ್ರೆಯ ಹೊರಗೆ ಕೂತು- ಅಪ್ಪಾ, ನಂಗೆ ನೀನು ಬೇಕಪ್ಪಾ… ಅನ್ನುತ್ತಾ ಬಿಕ್ಕಳಿಸುತ್ತಿದ್ದಾಳೆ. ಅವರ ಸಂಕಟ ಇವಳಿಗೆ ಗೊತ್ತಾಗುತ್ತಿಲ್ಲ. ಇವಳ ಬಿಕ್ಕಳಿಕೆ ಅವರನ್ನು ತಲುಪುತ್ತಿಲ್ಲ…. ಕಾಯುವ ದೇವರು ನಮ್ಮ ಜೊತೆಗೇ ಇರುತ್ತಾನೆ ಎಂಬುದು ಹಿರಿಯರ ಮಾತು. ಆ ದೇವರು ಅಳಲನ್ನೂ ಕೇಳಬಾರದೆ? ಕೊರೊನಾ ಎಂಬ ಕೇಡಿಯನ್ನು ಕೊಲ್ಲಬಾರದೆ? – ಎ.ಆರ್.ಮಣಿಕಾಂತ್