ನಮ್ಮದೆಲ್ಲವನ್ನೂ ಇನ್ನೊಬ್ಬರಿಗೋಸ್ಕರ ಸುರಿದಿಟ್ಟು ಖಾಲಿಯಾಗುವದು ತ್ಯಾಗವಲ್ಲ, ದಡ್ಡತನ ಅಂತ ಅರಿವಾಗುವ ಹೊತ್ತಿಗೆ ಬದುಕು ಮುಕ್ಕಾಲು ಭಾಗ ಮುಗಿದಿರುತ್ತದೆ. ತ್ಯಾಗದ ಅತೀ ದೊಡ್ಡ ಸಮಸ್ಯೆ ಎಂದರೆ, ಅದು ನಮ್ಮ ಪ್ರೀತಿಗೆ ಮಾತ್ರ ಎಡತಾಕುತ್ತಿರುವುದು. ಪ್ರತೀ ಹೆಣ್ಣೂ ತ್ಯಾಗದ ಪರಮಾವಧಿಯ ಸಂಕೇತವಾಗಿಬಿಡುತ್ತಾಳೆಕೆಲಮೊಮ್ಮೆ. ಮದುವೆ ಮುಗಿದ ಮೊದಲ ರಾತ್ರಿ ತನ್ನದೆಲ್ಲವನ್ನೂ ಗಂಡನಿಗೆ ಸಮರ್ಪಿಸಿ, ಈ ಬದುಕು ನಿನಗೇ ಮುಡಿಪು, ನನ್ನ ಸರ್ವಸ್ವವನ್ನೂ ನಿನಗಾಗಿ ತ್ಯಾಗ ಮಾಡಲು ಸಿದ್ಧಳಿದ್ದೇನೆ ಎನ್ನುವ ಮೂಲಕ ಆರಂಭದಲ್ಲೇ ಅವನೊಳಗೊಬ್ಬ ಅಹಂಕಾರಿಯನ್ನು ಸೃಷ್ಟಿಸಿಬಿಡುತ್ತಾಳೆ. ಮಗು ಹುಟ್ಟುತ್ತಿದ್ದಂತೆ ಅತಿಯಾದ ಮುದ್ದಿನಿಂದ, ಎಲ್ಲವನ್ನೂ ಸಹಿಸಿಕೊಂಡು, ಅಮ್ಮ ಎಂದರೆ ತ್ಯಾಗದ ಸಂಕೇತ ಎಂಬ ಮಾತಿಗೆ ಉದಾಹರಣೆಯಾಗುತ್ತಾಳೆ.
ತ್ಯಾಗದ ಬದುಕಿನ, ಸಂದರ್ಭಗಳು, ಭಾವಗಳು, ವಿಚಾರಗಳುಕೆಲ ಕಾಲ ನಮಗೊಂದು ಹೆಮ್ಮೆಯನ್ನುಕಟ್ಟಿ ಕೊಡಬಹುದು.ಕಾಲಕ್ರಮೇಣ ಆ ತ್ಯಾಗವೇ ಅಯ್ಯೋ ಅನ್ನಿಸಿ, ನಮ್ಮ ಮೇಲೆ ನಮಗೆಕನಿಕರ ಉಂಟಾಗುವಂತೆ ಮಾಡಿಬಿಡುತ್ತದೆ. ಹೆಚ್ಚಿನ ಹೆಣ್ಣು ಮಕ್ಕಳು, ಗಂಡ, ಮನೆ, ಮಕ್ಕಳು, ಅತ್ತೆ-ಮಾವ, ಅವರ ಹತ್ತಿರದ ಜನರ ಕಾಳಜಿ ಮಾಡುತ್ತಾ, ತಮ್ಮ ಆರೋಗ್ಯದ ಬಗ್ಗೆಕೇರ್ ತಗೊಳ್ಳುವುದನ್ನೇ ಮರೆಯುತ್ತಾರೆ. ತಮ್ಮನ್ನು ಹಿಂಡಿ ಹಿಪ್ಪೆ ಮಾಡುತ್ತಿರುವ ಎದೆನೋವಿಗಿಂತ, ಮಾವನನ್ನುಕಾಡುತ್ತಿರುವ ಕೆಮ್ಮಿನಕುರಿತು ಹೆಚ್ಚು ನಿಗಾ ವಹಿಸುತ್ತಾರೆ. ಎಲ್ಲಿಯೂ ಏನೂ ಲವಲೇಶವೂ ಹೆಚ್ಚುಕಮ್ಮಿ ಆಗದಂತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬೇಕು, ಎಲ್ಲರಿಂದ ಭೇಷ್ ಅನ್ನಿಸಿಕೊಳ್ಳಬೇಕು ಎಂಬ ಆಸೆಯಿಂದ ಇನ್ನಿಲ್ಲದ ಸರ್ಕಸ್ ಮಾಡಿ ಎಲ್ಲವನ್ನೂ ಸಂಭಾಳಿಸುತ್ತಾರೆ.
ಹೀಗೆ ತಮ್ಮ ಬದುಕನ್ನು ಇನ್ನೊಬ್ಬರ ಏಳಿಗೆಯಲ್ಲಿ, ಇನ್ನೊಬ್ಬರ ಸೇವೆಯಲ್ಲಿ, ಖುಷಿಯಲ್ಲಿಕಳೆದುಕೊಳ್ಳುವುದು ಹೆಚ್ಚಿನ ಹೆಣ್ಣುಮಕ್ಕಳಿಗೆ ಖುಷಿ ಕೊಡುತ್ತದೆ ನಿಜ. ನನ್ನಿಂದ ಯಾರಿಗಾದರೂ ಸ್ವಲ್ಪ ಆದರೂ ಸಹಾಯ ಆಗಿದೆಯೇ ವಿನಃ, ಯಾರೊಬ್ಬರಿಗೂ ನಾನು ತೊಂದರೆಕೊಡಲಿಲ್ಲ ಅನ್ನುವ ನೆಮ್ಮದಿ ಮತ್ತು ಸಂತೃಪ್ತಿ ಅವರಿಗೆ ಇರುತ್ತದೆ ಎಂಬುದೂ ನಿಜ. ಆದರೆ, ಇನ್ನೊಬ್ಬರ ಸೇವೆಯಲ್ಲಿಕಳೆದುಹೋಗುವುದೇ ಬದುಕಾಗಬಾರದು. ಕರ್ಪೂರದಂತೆ ಉರಿದುಹೋಗುವುದೇ ಬದುಕಲ್ಲ ಎಂಬುದನ್ನು ಹೆಣ್ಣುಮಕ್ಕಳು ಮೊದಲು ಅರ್ಥ ಮಾಡಿಕೊಳ್ಳಬೇಕು. ಗಂಡ,ಮಕ್ಕಳು, ಅತ್ತೆ- ಮಾವ, ಹೆತ್ತವರು, ಬಂಧುಗಳು… ಇವರನ್ನೆಲ್ಲಾ ನೋಡಿಕೊಳ್ಳುವ ಸಂದರ್ಭದಲ್ಲಿಯೇ, ತನ್ನ ವೈಯಕ್ತಿಕ ಬದುಕಿನಕುರಿತೂ ಯೋಚಿಸಬೇಕು. ಯಾಕೆಂದರೆ, ಒಮ್ಮೆ ಕಳೆದುಹೋದ ಕಾಲ ಮತ್ತು ಆಯಸ್ಸು, ಮತ್ತೆ ಯಾವತ್ತೂ ಸಿಗುವುದಿಲ್ಲ…
-ಸ್ಮಿತಾ ಭಟ್ಟ