Advertisement

ಪೋಲಾಗುವ ಬೀಜಗಳಿಗೆ ಕಾಡಂಚಿನಲ್ಲಿ ಜೀವ! ಎಲ್ಲ ಜಿಲ್ಲೆಗಳಲ್ಲಿ ಹಣ್ಣಿನ ಬೀಜ ಬಿತ್ತಲು ನಿರ್ಧಾರ

01:41 PM May 28, 2023 | Team Udayavani |

ಮಂಗಳೂರು: ಮುಂಗಾರು ಆಗಮನಕ್ಕೆ ಜನತೆ ಎದುರು ನೋಡುತ್ತಿರು ವಂತೆಯೇ ತಿಂದು ಎಸೆಯುವ ಹಣ್ಣಿನ ಬೀಜಗಳಿಗೆ ಜೀವ ತುಂಬಲು ಅರಣ್ಯ ಇಲಾಖೆ ಮುಂದಾಗಿದೆ.

Advertisement

ಸ್ಥಳೀಯವಾಗಿ ಲಭ್ಯವಾಗುವ ಹಣ್ಣುಗಳ ಬೀಜಗಳನ್ನು ಆಯಾ ಪ್ರದೇಶಗಳಲ್ಲಿ ಸಂರಕ್ಷಿಸುವ ಈ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂರಕ್ಷಣಾ ಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಗಳಲ್ಲಿ “ಬಿತ್ತೋತ್ಸವ’ ಆರಂಭಗೊಳ್ಳಲಿದೆ.

ಏನಿದು ಬಿತ್ತೋತ್ಸವ
ಮಳೆಗಾಲಕ್ಕೆ ಮುನ್ನ ಹೇರಳವಾಗಿ ದೊರೆಯುವ ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಕಾಡು ಹಾಗೂ ಕಾಡಿನಂಚು, ಸಾರ್ವಜನಿಕ ಪ್ರದೇಶ ಗಳಲ್ಲಿ ಬಿತ್ತಿ ಪೋಷಿಸುವುದು ಅರಣ್ಯ ಇಲಾಖೆಯ “ಬೀಜ ಬಿತ್ತೋತ್ಸವ’ ಕಾರ್ಯಕ್ರಮ.
ಜೂನ್‌ನಲ್ಲಿ ಮಳೆಗಾಲದೊಂದಿಗೆ ಶಾಲೆಗಳು ಆರಂಭಗೊಳ್ಳಲಿದ್ದು, ಆಗ ತಾಲೂಕು, ಹೋಬಳಿ ಮಟ್ಟದ ಆಯ್ದ ಶಾಲೆಗಳ ಮಕ್ಕಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಂಡು, ಅರಣ್ಯ ಇಲಾಖೆಯಿಂದ ಗುರುತಿಸಲಾದ ಪ್ರದೇಶಗಳಲ್ಲಿ ಸಂಗ್ರಹಿಸಲಾದ ಸ್ಥಳೀಯ ವಿಶೇಷತೆಯ ಬೀಜಗಳನ್ನು ಮಕ್ಕಳಿಂದ ಬಿತ್ತನೆ ಮಾಡಿಸಿ, ಅವರಲ್ಲಿ ಪರಿಸರದ ಬಗ್ಗೆ ಜಾಗೃತಿ, ಕಾಳಜಿ ಬೆಳೆಸುವ ಮಹದುದ್ದೇಶವೂ ಈ ಕಾರ್ಯಕ್ರಮದ ಹಿಂದೆ ಇದೆ.

ವಲಯ ಮಟ್ಟದಲ್ಲಿ ಕನಿಷ್ಠ
20 ಹೆಕ್ಟೇರ್‌ ಪ್ರದೇಶ ಆಯ್ಕೆ
ಬಿತ್ತೋತ್ಸವಕ್ಕೆ ಅರಣ್ಯ ವಲಯಗಳ ವ್ಯಾಪ್ತಿ ಯಲ್ಲಿ ಕನಿಷ್ಠ 20 ಹೆಕ್ಟೇರ್‌ ಪ್ರದೇಶವನ್ನು ಆಯ್ಕೆ ಮಾಡಿ, ಈ ಪ್ರದೇಶವನ್ನು ಜಾನುವಾರುಗಳಿಂದ ರಕ್ಷಣೆ ಮಾಡುವುದು. ಆಯ್ಕೆ ಮಾಡಲಾದ ಪ್ರದೇಶಗಳು ಹಳೆಯ ನೆಡುತೋಪುಗಳಾಗಿದ್ದರೆ ಅಲ್ಲಿ ನೈಸರ್ಗಿಕ ಪುನರುತ್ಪತ್ತಿ ಕಡಿಮೆ ಇರುವುದನ್ನು ಖಾತರಿಪಡಿಸಿಕೊಳ್ಳುವುದು. ಜೂನ್‌ 15ರ ವರೆಗೆ ಮಳೆಯ ಸ್ವೀಕೃತಿ ಮತ್ತು ಬಿತ್ತನೆ ಮಾಡಬೇಕಾದ ಮಣ್ಣಿನ ತೇವಾಂಶದ ಮಟ್ಟದ ಬಳಕೆಗೆ ಅನುಗುಣವಾಗಿ ಬೀಜ ಬಿತ್ತುವುದು. ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಬಿತ್ತೋತ್ಸವಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಪ್‌ಲೋಡ್‌ ಮಾಡಿ ಕೊಳ್ಳು ವಂತೆ ಅರಣ್ಯ ಇಲಾಖೆಯು ಈಗಾಗಲೇ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಬೀಜ ಬಿತ್ತೋತ್ಸವದ ವೈಶಿಷ್ಟ್ಯಗಳು
-ಬಿತ್ತುವ ಬೀಜಗಳು ಸ್ಥಳೀಯ ಪ್ರಜಾತಿಯ ಮತ್ತು ಸ್ಥಳೀಯವಾಗಿ ಸಂಗ್ರಹಿಸಿದ್ದಾಗಿರಬೇಕು (ಸ್ಥಳೀಯ ಅರಣ್ಯ ಅಥವಾ ಬ್ಲಾಕ್‌ಗಳಿಂದಲೇ ಸಂಗ್ರಹಿಸಲು ಆದ್ಯತೆ)
– ನೈಸರ್ಗಿಕ ಪುನರುತ್ಪಾದನೆ ಮಾದರಿಯಲ್ಲಿ ನೆಡುತೋಪುಗಳ ಆಯ್ಕೆ
– ನಾಲ್ಕಾರು ವರ್ಷಗಳಿಗಿಂತ ಹಳೆಯ ನೆಡುತೋಪುಗಳಲ್ಲಿರುವ ಖಾಲಿ ಸ್ಥಳಗಳು
– ಸಂಘ-ಸಂಸ್ಥೆಗಳು ಆಸಕ್ತಿ ತೋರಿದಲ್ಲಿ ಅಂತಹ ಪ್ರದೇಶಗಳ ಆಯ್ಕೆ
– ಮಳೆ ಕೊರತೆ ಇರುವ ವಿಜಯಪುರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿತ್ತನೆಗೆ ಸೂಕ್ತ ಪ್ರದೇಶಗಳು ಲಭ್ಯ ಇಲ್ಲದಿದ್ದರೆ, ಖಾಸಗಿ ಜಮೀನು ಮಾಲಕರ ಒಪ್ಪಿಗೆ ಪಡೆದು ಕೃಷಿ ಭೂಮಿಯ ಬದುಗಳ ಮೇಲೆ ಬಿತ್ತನೆ ಮಾಡುವುದು.

Advertisement

ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ವಲಯಕ್ಕೆ 10ರಂತೆ ತಲಾ 8 ವಲಯಗಳಲ್ಲಿ ಒಟ್ಟು 160 (80+80) ಶಾಲೆಗಳನ್ನು ಈ ಬಿತ್ತೋತ್ಸವಕ್ಕೆ ಆಯ್ಕೆ ಮಾಡಲಾಗುವುದು. ವಲಯ ಅಧಿಕಾರಿಗಳು ಶಾಲೆ ಆರಂಭವಾದ ಬಳಿಕ ಶಾಲೆಗಳಿಗೆ ಮಾಹಿತಿ ನೀಡಲಿದ್ದಾರೆ. ಇಲಾಖೆಯು ಸ್ಥಳೀಯವಾಗಿ ದೊರೆಯುವ ಹಣ್ಣುಗಳ ಬೀಜಗಳನ್ನು ಸಂಗ್ರಹಿಸುವ ಜತೆಗೆ ಮಕ್ಕಳಿಂದಲೂ ಬೀಜಗಳನ್ನು ಸಂಗ್ರಹಿಸಿ ಬಿತ್ತನೆ ನಡೆಸಲಾಗುತ್ತದೆ.
 - ಡಾ| ದಿನೇಶ್‌ ಕುಮಾರ್‌ ವೈ.ಕೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ, ದ.ಕ.
– ಉದಯ ಎಂ. ನಾಯಕ್‌
ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ, ಜಿಲ್ಲೆ ಉಡುಪಿ

 

Advertisement

Udayavani is now on Telegram. Click here to join our channel and stay updated with the latest news.

Next