ನಾಲ್ಕು ದಿನಗಳ ಹಿಂದಷ್ಟೇ ಮುಗಿದುಹೋದ 2020ನೇ ವರ್ಷ ಯಾರಿಗೆ ನೆಮ್ಮದಿ ನೀಡಿತೋ ತಿಳಿಯದು. ಮನೆಮನೆಯಲ್ಲೂ ಒಂದಲ್ಲ ಒಂದು ಬಗೆಯ ಆತಂಕ. ಫೆಬ್ರವರಿಯಲ್ಲಿ ಸಾಹಿತ್ಯ ಸಮ್ಮೇಳನ ಮುಗಿಸಿಕೊಂಡು ಬೆಂಗಳೂರಿಗೆ ಬಂದೆ.ಯಾವುದೋ ಭಯಾನಕ ಆತಂಕಕಾರಿ ವೈರಸ್ ಜಗತ್ತನ್ನೇ ಆಕ್ರಮಿಸುವುದು ಎಂಬ ಗಾಳಿಮಾತು ಅಲ್ಲಿಇಲ್ಲಿ ಸುಳಿಯತೊಡಗಿದಾಗ ಇದು ಬರೀ ಪ್ರಚಾರದಅಬ್ಬರ ಎಂದು ಅನೇಕರಂತೆ ನಾನು ಕೂಡ ಅದನ್ನುಕಡೆಗಣಿಸಿದೆ. ಸಮೂಹ ಮಾಧ್ಯಮದಲ್ಲಿ ಪ್ರವಾಹದ ರೂಪದಲ್ಲಿ ವಾರ್ತೆ ಸಾಕ್ಷಿ ಸಮೇತ ಕಾಣುತ್ತಾಪುಟಪುಟಗಳನ್ನೂ ಆವರಿಸತೊಡಗಿದಾಗ ವಿವರಿಸಲಾಗದ ದಿಗಿಲು ಮನಸ್ಸನ್ನು ಆವರಿಸಿತು.
ದಿನೇದಿನೆ ಸಾವಿನ ಸಂಖ್ಯೆ ಹೆಚ್ಚಾಗತೊಡಗಿತು. ಎಲ್ಲೋ ದೂರದಲ್ಲಿ ಇದ್ದದ್ದು ಇಂಡಿಯಾಕ್ಕೂ ಬಂದಾಯಿತು. ಕಾಳ್ಗಿಚ್ಚಿನಂತೆ ಆವರಿಸಲು ತೊಡಗಿತು. ಬೆಂಗಳೂರಿಗೂ ಬಂತು. ನಮ್ಮ ಏರಿಯಾದಲ್ಲಿ ಏನೂ ತೊಂದರೆಯಿಲ್ಲ ಎಂದು ಧೈರ್ಯ ಪಟ್ಟು ಕೊಂಡಿಯಾಯಿತು. ಬೇರೆ ಬೇರೆ ಭೂಪ್ರದೇಶಗಳಿಗೆ ಕೆಲಸ, ಓದು,ಪ್ರವಾಸ, ಹೊಟ್ಟೆಪಾಡಿನ ವಲಸೆ… ಹೀಗೆ ಬೇರೆ ಬೇರೆ ಕಾರಣಕ್ಕೆ ಚದುರಿಹೋಗಿದ್ದ ಜನ ತಮ್ಮ ತಮ್ಮ ಸ್ವಸ್ಥಳಕ್ಕೆ ಹಿಂದಿರುಗತೊಡಗಿದರು. ವಿದೇಶಗಳ ಜೊತೆಗಿನಸಂಪರ್ಕ ಇದ್ದಕ್ಕಿದ್ದಂತೆ ತುಂಡಾಯಿತು. ವಿಮಾನಗಳುಹಾರಾಟ ನಿಲ್ಲಿಸಿದವು. ರೈಲು, ಬಸ್ಸು ಮೊದಲಾದಸಾರಿಗೆ ವ್ಯವಸ್ಥೆಗಳು ನಿಂತು ಹೋದವು. ಪರಮಾಪ್ತರೂಒಬ್ಬರನ್ನೊಬ್ಬರು ಕಾಣುವಂತಿಲ್ಲ ಎಂಬಂಥವಾತಾವರಣ ಸೃಷ್ಟಿಯಾಯಿತು. ಭಯಸ್ಥರ ಮೂಗು ಬಾಯಿಗೆ ತಡೆ ಕವಚಗಳು ಬಂದವು. ಸದಾ ಗಿಜಿಗುಡುತ್ತಿದ್ದ ಬೆಂಗಳೂರಿನ ಹಾದಿಬೀದಿಗಳು ನಿರ್ಜನವಾದವು. ಕೆಲವರು ಧೈರ್ಯಶಾಲಿಗಳು ಮಾತ್ರ ಯಾವುದಕ್ಕೂಕೇರ್ ಮಾಡದೆ ಅಲ್ಲಿ ಇಲ್ಲಿ ಹೋಗುತ್ತಾ ರಾತ್ರಿಯ ಸ್ನೇಹಕೂಟಗಳನ್ನು, ಪಾನ ಘೋಷ್ಠಿಗಳನ್ನುನಿರಾತಂಕವಾಗಿ ನಡೆಸುತ್ತಿರುವುದು ಗಮನಕ್ಕೆ ಬಂದುನನ್ನಂಥವರು ಬೆಚ್ಚಿ ಬಿದ್ದದ್ದೂ ಆಯಿತು.
ನಮ್ಮ ಬಡಾವಣೆಗೆ ಕೋವಿಡ್ ಬಂದಿಲ್ಲ ಎನ್ನುತ್ತಾ ಹುಸಿ ನೆಮ್ಮದಿಯನ್ನು ಅಭಿನಯಿಸುತ್ತಿದ್ದೆವಲ್ಲ; ಆಗಲೇ ನಮ್ಮ ಏರಿಯಾದಲ್ಲೂ ಕೋವಿಡ್ ಕೇಸ್ ಗಳು ಕಾಣತೊಡಗಿದವು. ನಮ್ಮ ಮನೆಯ ಹಿಂದಿನ ಬೀದಿಯಲ್ಲೇ ಒಬ್ಬರಿಗೆ ಕೊರೊನಾ ವೈರಸ್ಸು ಅಮರಿಕೊಂಡಿದೆ ಎಂಬ ಸುದ್ದಿ ಬಂದಾಗ ಮನೆಯವರೆಲ್ಲಾ ಬೆಚ್ಚಿಬಿದ್ದೆವು. ಆ ಮನೆಗಿರಲಿ, ಬೀದಿಗೆ ಹೋಗಲೂ ಎಲ್ಲರಿಗೂ ಆತಂಕ. “” ಮೂರನೇ ಕ್ರಾಸ್ ನಲ್ಲಂತೆ! ಆ ಕಡೆಗೆ ಯಾರೂಹೋಗಬೇಡಿ ಎಂಬ ಮೆಸೇಜ್ ಗಳು ಮೊಬೈಲ್‌ನಲ್ಲಿ ಹರಿದಾಡಿದವು. ಮೂರನೇ ಕ್ರಾಸ್ ನಲ್ಲಾ? ಅಲ್ಲಿ ಯಾವ ಮನೆ? ಎಂಬ ಕುತೂಹಲ. “”ಮನೆಯ ಮುಂದೆಎರಡು ತೆಂಗಿನ ಮರ ಇವೆಯಲ್ಲ; ಆ ಮನೆ”ಎಂಬ ಮೆಸೇಜ್ ಬಂತು! ” ಯಾವ ಮನೆಯಮುಂದೆ ಎರಡು ತೆಂಗಿನ ಮರ ಇದ್ದವು?””ಅದೇರೀ , ಮನೆಯ ಮುಂದೆ ಜಾಲರಂಧ್ರ ಇದೆಯಲ್ಲ… ?ಅದೇ… ‘ “”ಅರೆ, ಎಡಕ್ಕೋ, ಬಲಕ್ಕೋ?” “”ಎಡ ಸ್ವಾಮಿ…” “”ಆ ಮನೆಯಲ್ಲಿ ಯಾರಿದ್ದರು?” ” ಯಾರೋ ಒಬ್ಬರು ಬಾಡಿಗೆಗೆಇದ್ದರು. ಆ ವ್ಯಕ್ತಿ 15 ದಿನದಿಂದ ಹೊರಗೆ ಬಂದಿಲ್ಲ. ಯಾರಿಗೂ ಕಂಡೂ ಇಲ್ಲ. ಬಾಗಿಲು ಕಿಟಕಿ ಎಲ್ಲಾ ಮುಚ್ಚಿವೆ. ಹೇಗಿದ್ದಾರೋ ಅವರು…” ಅವರಿಗೆ ಊಟ ಕೊಡುತ್ತಿದ್ದವರು ನಮಗೆ ಪರಿಚಯದವರೇ. ಅವರ ದೂರವಾಣಿ ಸಂಖ್ಯೆ ನಮ್ಮಲ್ಲಿತ್ತು. ತಕ್ಷಣವೇ ಅವರಿಗೆ ಕಾಲ್ ಮಾಡಿದ್ದಾಯಿತು. “”ತೆಂಗಿನ ಮರದ ಮನೆಯವರು ಹೇಗಿದ್ದಾರೆ? ಅದೇ ಕೋವಿಡ್…?” “”ನಾವು ಅವರನ್ನು ಕಂಡಿಲ್ಲ. ಊಟವನ್ನು ಬಾಗಿಲ ಬಳಿ ಇಟ್ಟುಬಂದರೆ, ಯಾವ ಮಾಯದಲ್ಲೋ ಆ ಪುಣ್ಯಾತ್ಮ ಊಟದ ಡಬ್ಬಿಯನ್ನು ತಗೊಂಡಿರುತ್ತಾರೆ. ಬೆಳಗ್ಗೆ ಖಾಲಿ ಡಬ್ಬ ಬಾಗಿಲ ಬಳಿ ಇರುತ್ತದೆ!” ಆನಂತರದಲ್ಲಿ ಈ ಕೋವಿಡ್ ಹೊಂದಿರುವ ವ್ಯಕ್ತಿಯ ಕುರಿತು ಏರಿಯಾದ ಜನ ಅಸಹನವ್ಯಕ್ತಪಡಿಸಿದರು. ಕೊ
ಕೋವಿಡ್ ಇರುವಾತ ಮನೆಯಲ್ಲಿ ಇರುವುದು ಅಂದರೇನು? ಇಲ್ಲಿನ ನಿವಾಸಿಗಳ ಗತಿಯೇನು ಎಂದೆಲ್ಲಾ ವಾದಿಸಿ, ಕಾರ್ಪೋರೇಶನ್‌ಗೆ ದೂರು ಕೊಟ್ಟರು. ಕಡೆಗೆ, ಕೋವಿಡ್ ಹೊಂದಿದ್ದಾತನನ್ನು ಕಾರ್ಪೋರೇಶನ್ ನವರು ಆಸ್ಪತ್ರೆಗೆ ಕರೆದೊಯ್ದರು! ನಂತರದ ಕೆಲವೇ ದಿನಗಳಲ್ಲಿ ಕೊರೊನಾ ನಾವಿದ್ದ ಏರಿಯಾಕ್ಕೂ ಬಂದೇ ಬಿಟ್ಟಿತು.ಕೋವಿಡ್ ಗೆ ತುತ್ತಾದವರು ನಮ್ಮ ಪರಿಚಿತರೇ. ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾಯಿತು. ಎರಡು ವಾರದಲ್ಲಿ ಅವರು ತೀರಿಕೊಂಡರು ಎಂಬ ದುರ್ವಾರ್ತೆಯೂ ಬಂತು. ಹಿಂದೆಯೇ- ಸತ್ತಿದ್ದು ಕೋವಿಡ್ ದಿಂದ ಅಲ್ಲವಂತೆ, ಹಾರ್ಟ್ ಸಮಸ್ಯೆಯಿಂದಂತೆ ಎಂಬ ಸಮಾಧಾನದ ಇನ್ನೊಂದು ವಾರ್ತೆಯೂ ಬಂತು! ಅರೆ, ಕೋವಿಡ್ ದಿಂದ ಸತ್ತದ್ದಲ್ಲ, ಹೃದಯ ಒಡೆದು ಹೋಗಿದ್ದರಿಂದ ಸತ್ತದ್ದು ಎಂಬುದು ಸಮಾಧಾನದ ಸುದ್ದಿಯೇ?
***
ಹೊರಗೆ ಯಾರೋ ಬಾಗಿಲು ಬಡಿದಹಾಗಾಯಿತು. ಕಾಲಿಂಗ್ ಬೆಲ್ ಇದೆ. ಅದನ್ನು ಬಳಸದೆ ಬಾಗಿಲನ್ನು ಬಡಿಯುತ್ತಿದ್ದರು! “”ನಿಮಗೆ ವಯಸ್ಸಾಗಿದೆ. ನಾನು ನೋಡುತ್ತೇನೆ ಇರಿ”- ಅನ್ನುತ್ತಾ ಸೊಸೆ ಬಾಗಿಲು ತೆರೆಯಲು ಹೋದಳು. ನನಗೆ ಮನಸ್ಸು ತಡೆಯದು. ಮುಖಗವಸು ಧರಿಸಿ ನಾನೂ ಬಾಗಿಲ ಬಳಿಅವಳ ಹಿಂದೆ ಸ್ವಲ್ಪ ದೂರದಲ್ಲಿ ನಿಂತು ತೆರೆದ ಬಾಗಿಲ ಆಚೆನೋಡಿದರೆ, ಮಾಸ್ಕ್ ಹಾಕಿಕೊಂಡು ನಿಂತಿರುವ ವ್ಯಕ್ತಿ!ಕೊರಿಯರ್ ಎಂದು ಆತ ಹೇಳಿದ್ದು ಸೊಸೆಗೆ ಕೋವಿಡ್ ಎಂದು ಕೇಳಿಸಿ, “”ಯಾರು? ಕೋವಿಡ್ ಆ ?” ಎಂದು ಆಕೆ ಕಂಪಿತ ಸ್ವರದಲ್ಲಿ ಕೇಳಿದಳು.
ಕೋವಿಡ್ ಅಲ್ಲ, ಕೊರಿಯರ್ ನವರು- ಎಂದು ಆ ಕಡೆಯಿಂದ ಉತ್ತರ ಬಂತು. “”ಕೋವಿಡ್, ಕೊರಿಯರ್ ನವರ ವೇಷಾಂತರದಲ್ಲಿ ನಮ್ಮ ಮನೆಯ ಬಾಗಿಲು ಬಡಿದಿದ್ದಾರೆ…? ಹೀಗೊಂದು ಯೋಚನೆ ಬಂದಾಗ, ಎದೆ ಝಲ್ಲೆಂದಿತು. ಬವಳಿ ಬಂದಂತಾಗಿ ನಾನು ಸೋಫಾದಲ್ಲಿ ಕುಕ್ಕರಿಸಿದೆ.
-ಡಾ. ಎಚ್. ಎಸ್.ವೆಂಕಟೇಶ ಮೂರ್ತಿ