ಹೀಗೆ ಆಟೋ ರಿಕ್ಷಾ ಓಡಿಸುವಾಗ ನನಗೆ ಅಪ್ಪ ನೆನಪಾಗುತ್ತಾರೆ. ಮುಡಿಪು ಬಳಿಯ ಪಜೀರಿನಲ್ಲಿ ನನ್ನ ತವರುಮನೆ. ಅಪ್ಪ ಕೋಚಪ್ಪ ಪೂಜಾರಿ, ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಣ್ಣನಿಗೆ ಸಮನಾಗಿ ನಾನೂ ಜೀವನ ಕೌಶಲವನ್ನು ಕಲಿಯಬೇಕು. ಗಂಡುಮಗನ ಹಾಗೇ ಬೆಳೆಯಬೇಕು ಎಂದು ಹೇಳುತ್ತಿದ್ದರು. ಅಣ್ಣ ವೈರಿಂಗ್ ಮಾಡುವಾಗ ನಾನೂ ಅದೇ ಕೆಲಸವನ್ನು ಮಾಡುತ್ತಿದ್ದೆ. ಆದರೆ, ಅಪ್ಪ ನಮ್ಮನ್ನೆಲ್ಲ ಬಿಟ್ಟು ಬೇಗನೇ ಹೋದರು. 7ನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡುವುದು ಸಾಧ್ಯವಾಯಿತು. ಅಪ್ಪನಿಲ್ಲದೇ ಇದ್ದಾಗ ಹೆಣ್ಣುಮಕ್ಕಳು ಹೊರಗೆ ದುಡಿಯಲು ಹೋಗುವುದು ಬೇಡ ಎಂಬ ಕಾಳಜಿ ಅಮ್ಮನದು. ಆದರೂ ಉದ್ಯೋಗಸ್ಥೆಯಾಗಬೇಕು ಎಂದು ನಾನು ಸೀರೆಗೆ ಗೊಂಡೆ ಹಾಕುವುದು ಕಲಿತೆ. ಇಂಗ್ಲಿಷ್ ಕಲಿತರೆ ಇನ್ಫೋಸಿಸ್‌ನಲ್ಲಿ ಉದ್ಯೋಗ ಸಿಗುತ್ತದೆ ಎಂಬ ಆಸೆಯಿಂದ ಅದನ್ನೂ ಪ್ರಯತ್ನಿಸಿದೆ. ಅಷ್ಟರಲ್ಲಿ ಅಮ್ಮ, ಅಣ್ಣ ನನ್ನನ್ನು ಒಳ್ಳೆಯ ಮನೆಗೆ ಮದುವೆ ಮಾಡಿಕೊಟ್ಟ ಬಳಿಕ ನಾನು ನೆಲ್ಯಾಡಿಗೆ ಬಂದೆ.
ಪತಿ ರಮೇಶ್ ಪೂಜಾರಿ, ಮಗಳು ಅಮೃತಾ, ಪುಟ್ಟ ಮಗು ಧನಂಜಯ್ ಜೊತೆ ಜೀವನ ಸುಲಭವೇನೂ ಆಗಿರಲಿಲ್ಲ. ನಾನೇ ದುಡಿಯುವುದು ಅನಿವಾರ್ಯ ಎಂಬಂತಹ ಪರಿಸ್ಥಿತಿ ನಿರ್ಮಾಣ ಆಯಿತು. ನಾವೇ ಒಂದು ಮನೆ ಮಾಡಿಕೊಳ್ಳಬೇಕಾದಾಗ, ಒಡವೆ ಮಾರಿ ಒಂದಿಷ್ಟು ಜಾಗ ಖರೀದಿಸಿ ಮನೆ ಕಟ್ಟಿಕೊಂಡದ್ದಾಯಿತು. ಆದರೆ, ಖರ್ಚುವೆಚ್ಚಗಳನ್ನು ಸರಿದೂಗಿಸುವುದು ದೊಡ್ಡ ಸವಾಲೇ ಆದಾಗ, ನಾನು ರಿಕ್ಷಾ ಓಡಿಸುತ್ತೇನೆ ಎಂದು ಅವರಲ್ಲಿ ಹೇಳಿದೆ. ಅವರು ಯಾವುದಕ್ಕೂ ಬೇಡ ಎನ್ನುವವರಲ್ಲ. ದುಡಿಮೆ ಮಾಡುವುದಾದರೆ ಪ್ರೋತ್ಸಾಹ ನೀಡುವವರು. ಹಾಗಾಗಿ, ಬ್ಯಾಂಕ್ ಸಾಲಮಾಡಿ ರಿಕ್ಷಾ ಖರೀದಿಸಿದೆವು.
ಬಡತನ ಎನ್ನುವುದು ಎಲ್ಲ ಅವಮಾನಗಳನ್ನು ಮೆಟ್ಟಿ ನಿಲ್ಲುವ ಧೈರ್ಯವನ್ನು ಕೊಡುತ್ತದೆ. ಆಟೋರಿಕ್ಷಾ ಓಡಿಸಲು ಶುರು ಮಾಡಿದಾಗ ಸ್ವಲ್ಪ ಮುಜುಗರ ಆಗಿದ್ದು ನಿಜ. ಆದರೆ, ಕೆಲಸವನ್ನು ಮಾಡಲೇಬೇಕಿತ್ತು. ಬ್ಯಾಂಕ್ ಸಾಲ ಕಟ್ಟಿ, ಉಳಿದ ಹಣದಲ್ಲಿ ಮನೆ ನಿರ್ವಹಣೆ ಮಾಡಬೇಕಿತ್ತು. ನೆಲ್ಯಾಡಿಯ ಆಸುಪಾಸಿನ ಹಳ್ಳಿಗಳಿಗೆ ಬಸ್ಸು ವ್ಯವಸ್ಥೆ ಇಲ್ಲದೇ ಇರುವುದರಿಂದ ಆಟೋರಿಕ್ಷಾಕ್ಕೆ ಜನರು ಬರುತ್ತಾರೆ. ಹಗಲು ಹೊತ್ತಿನಲ್ಲಿ ಓಡಾಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಸ್ಟಾಂಡ್‌ನಲ್ಲಿರುವ ಇತರ ಆಟೋರಿಕ್ಷಾದವರು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ.
ಮಹಿಳಾ ಪ್ರಯಾಣಿಕರು ರಾತ್ರಿ ವೇಳೆ ಆಟೋರಿಕ್ಷಾ ಬಾಡಿಗೆಗೆ ಕರೆದರೆ ಆಗೀಗ ಹೋದದ್ದುಂಟು. ಸಂಸಾರ ಸಾಗಿಸುವುದಕ್ಕೆ ಬೇಕಾದಷ್ಟು ದುಡಿಮೆ ಮಾಡುವುದು ಇಷ್ಟರವರೆಗೆ ಸಾಧ್ಯವಾಗಿದೆ. ಇತರ ವೃತ್ತಿಗಳಲ್ಲಿ ಇದ್ದಂತೆಯೇ ಈ ವೃತ್ತಿಯಲ್ಲಿಯೂ ಸವಾಲು ಇದ್ದೇ ಇದೆ. ಮಹಿಳೆ ಎಂಬ ಕಾರಣಕ್ಕೆ ವಿಶೇಷವಾದ ಸವಾಲು ಎಂದು ಹೇಳುವಂಥದ್ದೇನೂ ಇಲ್ಲ. ಒಂದು ವರ್ಷ ಮೂರು ತಿಂಗಳಿಂದ ಈ ಕೆಲಸದಲ್ಲಿದ್ದೇನೆ. ನಡು ರಸ್ತೆಯಲ್ಲಿ ಆಟೋ ರಿಕ್ಷಾ ಹಾಳಾದಾಗ ಸ್ವಲ್ಪ ಆತಂಕವಾಗುತ್ತದೆ.
ಮನೆಯ ಬಳಿ ಸ್ವಲ್ಪ ಜಾಗವನ್ನು ನನ್ನ ಮಾವನವರು ಕೊಟ್ಟಿದ್ದಾರೆ. ಅಡಿಕೆ ಗಿಡಗಳನ್ನು ಹಾಕಿದ್ದೇನೆ. ಅಲ್ಲಿ ನೀರಿನ ವ್ಯವಸ್ಥೆ ಇಲ್ಲ. ನೀರಿನ ವ್ಯವಸ್ಥೆ ಮಾಡಿಕೊಂಡು ಸ್ವಲ್ಪ ಕೃಷಿ ಮಾಡಬೇಕು ಎಂಬ ಆಶೆಯಿದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತ ಇದ್ದೇನೆ. ಸದ್ಯಕ್ಕಂತೂ ಆಟೋರಿಕ್ಷಾವೇ ಬಾಳಿಗೆ ಆಧಾರ.
ಪ್ರೇಮಾ, ನೆಲ್ಯಾಡಿ