Advertisement

ಬದುಕು ಮತ್ತು ಪೆನ್ಸಿಲ್‌

12:30 AM Jan 08, 2019 | |

ಬೆಳದಿಂಗಳಂಥ ಸಂಭ್ರಮದ ಬಾಳು ನಮ್ಮದಾಗಬೇಕು. ಸಂತೋಷ-ಸಮೃದ್ಧಿ ಸಮ ಪ್ರಮಾಣದಲ್ಲಿ ಜೊತೆಗಿರಬೇಕು ಎಂಬುದು ಎಲ್ಲರ ಆಸೆ-ಕನಸು. ಇಂಥದೊಂದು ಸಂಭ್ರಮದ ಬದುಕು ನಮ್ಮದಾಗಬೇಕೆಂದರೆ, ನಾವು ಹೇಗೆ ಬಾಳಬೇಕು, ಯಶಸ್ಸು ಮತ್ತು ನೆಮ್ಮದಿಯ ಕೀಲಿ ಕೈ ಯಾವುದು ಎಂಬುದನ್ನು ಆಪ್ತವಾಗಿ ವಿವರಿಸುವ ಕಥೆಯೊಂದು ಇಲ್ಲಿದೆ. ಓದಿಕೊಳ್ಳಿ…

Advertisement

ಅಜ್ಜಿ ಬರೆಯುತ್ತಿದ್ದ ಪತ್ರವನ್ನೇ ನೋಡುತ್ತ ಕುಳಿತಿದ್ದ ಆ ಪುಟ್ಟ ಬಾಲಕ. ಕೊಂಚ ಹೊತ್ತು ಸುಮ್ಮನಿದ್ದವನು, ಬರೆಯುತ್ತಿದ್ದ ಅಜ್ಜಿಯನ್ನು ಉದ್ದೇಶಿಸಿ, “ಏನು ಬರೆಯುತ್ತಿದ್ದೀಯಾ ಅಜ್ಜಿ? ನಮ್ಮಿಬ್ಬರ ಬಗ್ಗೆ ಬರೆಯುತ್ತಿದ್ದೀಯಾ..’? ಎಂದು ಕೇಳಿದ್ದ. ಅವನತ್ತ ತಿರುಗಿದ ಅಜ್ಜಿ, ಸಣ್ಣಗೆ ಮುಗುಳ್ನಕ್ಕು, “ಹೌದು ಮಗೂ, ನಾನು ಬರೆಯುತ್ತಿರುವುದು ನಿನ್ನ ಬಗ್ಗೆಯೇ. ಆದರೆ ಅಷ್ಟೇನೂ ಮುಖ್ಯವಲ್ಲದ ವಿಷಯ ಬಿಡು. ನಾನು ಬರೆಯುತ್ತಿರುವ ಪತ್ರಕ್ಕಿಂತ, ಬರೆಯಲು ಬಳಸುತ್ತಿರುವ ಈ ಪೆನ್ಸಿಲ್‌ ಇದೆಯಲ್ಲ, ಇದೇ ಬಹಳ ಮಹತ್ವದ್ದು. ಬೆಳೆದು ದೊಡ್ಡವನಾದ ಮೇಲೆ ನೀನೂ ಈ ಪೆನ್ಸಿಲಿನಂತಾಗಬೇಕು’ ಎನ್ನುತ್ತ ಪೆನ್ಸಿಲನ್ನು ಅವನಿಗೆ ತೋರಿದಳು.
ಅಜ್ಜಿಯ ಮಾತುಗಳನ್ನು ಕೇಳಿದ ಬಾಲಕನಿಗೆ ಸಣ್ಣ ಕುತೂಹಲ. ಅಜ್ಜಿಯ ಕೈಲಿದ್ದ ಪೆನ್ಸಿಲನ್ನು ಮತ್ತೂಮ್ಮೆ ದಿಟ್ಟಿಸಿದ. ಯಾವುದೋ ವಿಶೇಷವಾದ ಪೆನ್ಸಿಲ್‌ ಇರಬೇಕು ಎಂದುಕೊಂಡವನಿಗೆ ಅದೊಂದು ತೀರಾ ಸಾಮಾನ್ಯ ಪೆನ್ಸಿಲ್‌ ಎಂದು ಗೊತ್ತಾದಾಗ ಕೊಂಚ ನಿರಾಸೆಯಾಗಿತ್ತು. “ಇದರಲ್ಲಿ ವಿಶೇಷವೇನಿದೆ ಅಜ್ಜಿ? ನಾನು ದಿನನಿತ್ಯ ನೋಡುತ್ತಲೇ ಇರುವ ಅತಿ ಸಾಧಾರಣ ಪೆನ್ಸಿಲ್ಲೇ ಅಲ್ಲವಾ ಇದು?’ ಎಂದು ಕೇಳಿದವನಿಗೆ ಅಜ್ಜಿಯ ಉತ್ತರ ಏನಿರಬಹುದೋ ಎಂದು ತಿಳಿಯುವ ಕಾತುರ. 

“ಹೌದು ಮರಿ. ಇದು ಸಾಧಾರಣವಾದ ಪೆನ್ಸಿಲ್ಲೇ, ಆದರೆ ಇದರಲ್ಲಿ ಅಡಗಿರುವ ಐದು ಮಹಾನ್‌ ಗುಪ್ತ ತತ್ವಗಳ ಬಗ್ಗೆ ನಿನಗಿನ್ನೂ ತಿಳಿದಿಲ್ಲ. ಅವುಗಳ ಬಗ್ಗೆ ನಾನಿಂದು ತಿಳಿಸುತ್ತೇನೆ. ಬದುಕಿನಲ್ಲಿ ನೀನು ಅವುಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯವಾದರೆ, ಬಹುಶಃ ನಿನ್ನ ಬಾಳಿನಲ್ಲಿ ಅಶಾಂತಿಯ ಸುಳಿವೇ ಇರದು’ ಎಂದಳು ಅಜ್ಜಿ. ಮೊಮ್ಮಗ ಅವಳತ್ತಲೇ ನೋಡುತ್ತಿದ್ದ.

“ಈ ಪೆನ್ಸಿಲ್‌, ಕಾಗದದ ಮೇಲೆ ಅದ್ಭುತ ಕಲ್ಪನೆಗಳನ್ನು ಚಿತ್ರಿಸಬಲ್ಲದು. ಅದ್ಭುತವೆನ್ನಿಸುವ ಕತೆ, ಕವನಗಳ ಲೋಕವನ್ನೇ ಸೃಷ್ಟಿಸಬಹುದು. ಬರೆದ ಅಕ್ಷರಗಳಿಂದ ಯಾರಲ್ಲಿಯೋ ಪ್ರೀತಿ ಹುಟ್ಟಿಸುವ, ಯಾರಿಗೋ ದ್ವೇಷ ಹುಟ್ಟಿಸುವ ಗುಣ ಇದ್ದಕ್ಕಿದೆ. ಆದರೆ, ಬರೆಯುವ ಕೈಗಳ ಮಾರ್ಗದರ್ಶನವಿಲ್ಲದಿದ್ದರೆ ಏನನ್ನು ಮಾಡುವುದೂ ಇದರಿಂದ ಸಾಧ್ಯವಿಲ್ಲ. ಪೆನ್ಸಿಲಿನಿಂದ ನಾವು ಕಲಿಯಬೇಕಾದ ಮೊದಲ ತತ್ವವಿದು. ನಮ್ಮೊಳಗಿನ ಅಂತಃಸತ್ವಕ್ಕೆ ಪ್ರಪಂಚವನ್ನೇ ಬದಲಿಸುವ ಶಕ್ತಿಯಿದೆ. ಆದರೆ ಮಾರ್ಗದರ್ಶಕನ ನೆರವಿಲ್ಲದಿದ್ದರೆ, ಅವನಿಚ್ಛೆ ಇಲ್ಲದಿದ್ದರೆ ಏನೂ ಸಾಧ್ಯವಾಗದು ಎಂಬುದು ನೆನಪಿರಬೇಕು. ಆ ಮಾರ್ಗದರ್ಶಕನನ್ನೇ ನಾವು ದೇವರೆನ್ನುವುದು. ಬದುಕಿನ ಯಾವುದೇ ಹಂತದಲ್ಲಿಯೂ ದೇವರನ್ನು ನಿರ್ಲಕ್ಷಿಸಬಾರದು’ ಎಂದಳು ಅಜ್ಜಿ. ಆ ಪುಟ್ಟ ಬಾಲಕ ಸುಮ್ಮನೇ ಕೂತು ಕೇಳಿಸಿಕೊಳ್ಳುತ್ತಿದ್ದ.

“ಬರೆಯುತ್ತಿರುವ ಪೆನ್ಸಿಲ್‌ ಆಗಾಗ ಮೊನಚು ಕಳೆದುಕೊಂಡು ಬಿಡುತ್ತದೆ. ಆಗ ಬರೆಯುವುದನ್ನು ನಿಲ್ಲಿಸಿ ಅದರ ತುದಿಯನ್ನು ಕೆತ್ತಿ ಮತ್ತೂಮ್ಮೆ ಚೂಪುಗೊಳಿಸಿಕೊಳ್ಳಬೇಕು. ಮತ್ತೆ ತೀಕ್ಷ್ಣವಾಗುತ್ತದೆ ಅದು. ಅದರಿಂದ ಕಲಿಯಬೇಕಾದ ಎರಡನೇ ಪಾಠವಿದು. ಏಕೆಂದರೆ, ಬದುಕಿನಲ್ಲಿ ಎದುರಾಗುವ ಕಷ್ಟಗಳು  ಪೆನ್ಸಿಲ್‌ ಕೆತ್ತುವಿಕೆಯ ಪ್ರಕ್ರಿಯೆಯಂಥದ್ದು. ನೋವು ಕೊಡುತ್ತವೆನ್ನುವುದೇನೋ ನಿಜ. ಆದರೆ ಕಷ್ಟ ಕಳೆದ ಮರುಕ್ಷಣ ಮತ್ತೆ ಚುರುಕಾಗುತ್ತೇವೆ ನಾವು ಎಂಬುದನ್ನು ಮರೆಯಬಾರದು. ಬದುಕಿನ ಕಷ್ಟ ಕಾರ್ಪಣ್ಯಗಳು ತಾತ್ಕಾಲಿಕ ಎಂಬುದನ್ನು ಅರಿತು ಮುನ್ನಡೆಯಬೇಕು’ ಎಂದ ಅಜ್ಜಿಯ ಮಾತಿಗೆ ಸಣ್ಣ ಮುಗುಳ್ನಗು ಅವನ ಮುಖದಲ್ಲಿ.

Advertisement

“ಪೆನ್ಸಿಲಿನಿಂದ ಬರೆದದ್ದು ತಪ್ಪಾದರೆ ತಪ್ಪನ್ನು ರಬ್ಬರಿನಿಂದ ಒರೆಸಿ  ತಿದ್ದಿ ಬರೆಯಬಹುದು ಅಲ್ಲವೇ?… ಅದು ನಾವು ಕಲಿಯಬೇಕಾದ ಮೂರನೇಯ ಅಂಶ. ಬದುಕಿನ ಪಟಲದಿಂದ ಏನನ್ನಾದರೂ ಒರೆಸುವುದು ಅಥವಾ ತಿದ್ದುವುದು ಪ್ರತಿಬಾರಿಯೂ ಕೆಟ್ಟ ಸಂಗತಿಯೇ ಆಗಬೇಕೆಂದೇನಿಲ್ಲ. ತಪ್ಪುಗಳಾದಾಗ ಸಮರ್ಥಿಸಿಕೊಳ್ಳದೇ ನಿರ್ದಾಕ್ಷಿಣ್ಯದಿಂದ ಅವುಗಳನ್ನು ಬದುಕಿನಿಂದ ಒರೆಸಿಬಿಡಬೇಕು. ತಪ್ಪುಗಳನ್ನು ತಿದ್ದಿಕೊಂಡು ಬದುಕಲು ಕಲಿಯಬೇಕು. ಬಾಳಿನ ನ್ಯಾಯಮಾರ್ಗದಲ್ಲಿ ನಡೆಯಲು ಬೇಕಾದ ಬಹುಮುಖ್ಯ ಅಂಶವಿದು’ ಎಂದ ಅಜ್ಜಿ ಕೊಂಚ ಹೊತ್ತು ಸುಮ್ಮನಾದಳು. ಆಸಕ್ತಿಯಿಂದ ಕೇಳುತ್ತಿದ್ದ ಹುಡುಗ, “ನಾಲ್ಕನೆಯದ್ದು ..’? ಎಂದು ಕೇಳಿದ. ಅಜ್ಜಿಯ ಮುಖದಲ್ಲಿ ಮಂದಹಾಸ.  ಹುಡುಗ ತನ್ನ ಮಾತುಗಳನ್ನು ಗಮನವಿಟ್ಟು ಆಲಿಸುತ್ತಿದ್ದಾನೆ ಎಂಬುದಕ್ಕೆ ಆಕೆಗೆ ಸಾಕ್ಷಿ ಸಿಕ್ಕಿತ್ತು. ನಾಲ್ಕನೆಯ ತತ್ವವನ್ನು ಅವಳು ಉತ್ಸಾಹದಿಂದ ವಿವರಿಸತೊಡಗಿದಳು.

“ಪೆನ್ಸಿಲ್‌ನ ಮೇಲ್ಮೆ„ ಎಷ್ಟೇ ಸುಂದರವಾಗಿದ್ದರೂ ಒಳಗಿನ ಸೀಸದ ಕಡ್ಡಿ ಸರಿಯಾಗಿರದಿದ್ದರೆ, ಅದಕ್ಕೊಂದು ಬೆಲೆಯಿಲ್ಲ. ಬದುಕೂ ಹಾಗೇ. ನೀನು ಎಷ್ಟೇ ಸುಂದರವಾಗಿದ್ದರೂ ನಿನ್ನಲ್ಲಿ ಒಳ್ಳೆಯ ಗುಣಗಳಿರದಿದ್ದರೆ, ನಿನ್ನದೇ ಆದ ವ್ಯಕ್ತಿತ್ವವಿರದಿದ್ದರೆ ನಿನಗ್ಯಾವ ಬೆಲೆಯೂ ಇಲ್ಲ. ಪೆನ್ಸಿಲಿನಿಂದ ಕಲಿಯಬೇಕಾದ ನಾಲ್ಕನೇ ಮಹತ್ವದ ಗುಣವಿದು’ ಎಂದಳು ಅಜ್ಜಿ. ಐದನೆಯ ತತ್ವವನ್ನು ಕೇಳಲು ಕಾತುರನಾಗಿದ್ದ ಹುಡುಗ.

ಒಮ್ಮೆ ಜೋರಾಗಿ ಉಸಿರೆಳೆದುಕೊಂಡ ಅಜ್ಜಿ, “ಏನನ್ನೇ ಬರೆದರೂ, ಅದನ್ನು ಅಕ್ಷರಗಳ ರೂಪದಲ್ಲಿ ಗುರುತು ಉಳಿಸಿಟ್ಟು ಹೋಗುತ್ತದೆ ಪೆನ್ಸಿಲ…. ಕೆಟ್ಟ¨ªೋ, ಒಳ್ಳೆಯ¨ªೋ ಗುರುತಂತೂ ಉಳಿಸುತ್ತದೆ. ನಾವು ಕಲಿಯಬೇಕಾದ ಐದನೇ ಮತ್ತು ಅತಿಮುಖ್ಯವಾದ ತತ್ವವೆಂದರೆ ಇದೇ. ಬದುಕೆಂಬ ಕಾಗದದಲ್ಲಿ ಏನನ್ನಾದರೂ ಬರೆಯುವ ಮುನ್ನ ಬಹಳ ಎಚ್ಚರಿಕೆಯಿಂದರಬೇಕು. ಸಾಧ್ಯವಾದಷ್ಟು ಒಳ್ಳೆಯದನ್ನು ಮಾತ್ರ ಬರೆಯಲು ಪ್ರಯತ್ನಿಸಬೇಕು. ಕೆಟ್ಟದ್ದು ಬರೆದುಬಿಟ್ಟರೆ ಅದರ ಗುರುತು ಉಳಿದುಹೋಗುತ್ತದೆ’ ಎಂದು ನುಡಿದು ಮಾತು ನಿಲ್ಲಿಸಿದ್ದಳು. ಅವಳ ಮಾತು ಮುಗಿದ ನಂತರ ಕ್ಷಣಕಾಲದ ಮೌನವಿತ್ತು ಅಲ್ಲಿ.

ಅಜ್ಜಿಯ ಕೈಯಿಂದ ಪೆನ್ಸಿಲ್‌ ಇಸಿದುಕೊಂಡ ಬಾಲಕ ಅವಳತ್ತ ನೋಡಿ ಸುಮ್ಮನೇ ನಸುನಕ್ಕ. “ಬೆಳೆದು ದೊಡ್ಡವನಾದ ಮೇಲೆ ನಾನೂ ಸಹ ಈ ಪೆನ್ಸಿಲಿನಂತಾಗುತ್ತೇನೆ ಅಜ್ಜಿ’ ಎನ್ನುತ್ತ ಪೆನ್ಸಿಲನ್ನು ಪ್ರೀತಿಯಿಂದ ಎದೆಗೊತ್ತಿಕೊಂಡ ಅವನು. ಅಜ್ಜಿಯ ಮುಖದಲ್ಲಿ ಮತ್ತದೇ ಮಂದಹಾಸ. ಒಮ್ಮೆ ಹಿತವಾಗಿ ಮೊಮ್ಮಗನ ತಲೆ ನೇವರಿಸಿದಳು ಅವಳು.

ಅನುವಾದ : ಗುರುರಾಜ ಕೊಡ್ಕಣಿ, ಯಲ್ಲಾಪುರ

Advertisement

Udayavani is now on Telegram. Click here to join our channel and stay updated with the latest news.

Next