Advertisement

ಸುಳ್ಳೇ ಇವರ ಮನೆ ದೇವ್ರಂತೆ!

10:20 AM Feb 26, 2020 | Lakshmi GovindaRaj |

ಈಗಾಗಲೇ ಕನ್ನಡದಲ್ಲಿ “ಚಿ.ತು.ಸಂಘ’ ಹೆಸರಿನ ಸಿನಿಮಾವೊಂದು ಸದ್ದಿಲ್ಲದೆ ಸೆಟ್ಟೇರಿ, ಮುಗಿಸಿರುವುದು ಗೊತ್ತೇ ಇದೆ. ಇತ್ತೀಚೆಗೆ ಚಿತ್ರದ ಹಾಡುಗಳನ್ನೂ ಸಹ ಬಿಡುಗಡೆ ಮಾಡಲಾಗಿದೆ. “ಚಿ.ತು.ಸಂಘ’ ಅಂದಾಕ್ಷಣ ನೆನಪಾಗೋದೇ, “ಅಧ್ಯಕ್ಷ’ ಚಿತ್ರದ ಶರಣ್‌ ಹಾಗು ಚಿಕ್ಕಣ್ಣ. ಆದರೆ, “ಚಿ.ತು.ಸಂಘ’ ಚಿತ್ರದ ಮೂಲಕ ಹೊಸಬರು ಕಮಾಲ್‌ ಮಾಡಲು ಹೊರಟಿದ್ದಾರೆ.  ನಾಲ್ಕು ಜನ ಹುಡುಗರು ಒಬ್ಬ ಹುಡುಗಿಯನ್ನು ಪ್ರೀತಿಸೋಕೆ ಸುಳ್ಳು ಹೇಳುವ ಕಾಯಕ ಮಾಡಿಕೊಂಡಿರುತ್ತಾರೆ.

Advertisement

ಅವರ ಸುಳ್ಳು ವರ್ಕೌಟ್‌ ಆಗುತ್ತೋ, ಇಲ್ಲವೋ ಅನ್ನುವುದನ್ನು ತುಂಬಾನೇ ಹಾಸ್ಯಮಯವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರಕ್ಕೆ “ಸುಳ್ಳೇ ನಮ್ಮನೆ ದೇವ್ರು’ ಎಂಬ ಅಡಿಬರಹವೂ ಇದೆ. ಚಿತ್ರವನ್ನು ಚೇತನ್‌ಕುಮಾರ್‌ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯಷ್ಟೇ ಅಲ್ಲ, ಅವರೇ ಇಲ್ಲಿ ನಾಯಕರಾಗಿಯೂ ಅಭಿನಯಿಸಿದ್ದಾರೆ. ಇನ್ನು, ಅವರ ಗೆಳೆಯರಾಗಿ ಸುರೇಶ್‌ಗೌಡ, ಸುಪ್ರಿ ಯಾದವ್‌, ರಾಘವ್‌ ಇದ್ದಾರೆ. ಬಬಿತಾ, ರತ್ನಚಂದನಾ, ಪೃಥ್ವಿ ಇತರರು ಸಿನಿಮಾದಲ್ಲಿದ್ದಾರೆ.

ರೂಪ ಇಲ್ಲಿ ನಾಯಕಿಯಾಗಿದ್ದಾರೆ. ಅವರಿಲ್ಲಿ ಗಯ್ನಾಳಿ ರೀತಿಯ ಪಾತ್ರ ನಿರ್ವಹಿಸಿದ್ದಾರಂತೆ. ಚಿತ್ರಕ್ಕೆ ರವಿ ಸಂಗೀತ ನೀಡಿದ್ದಾರೆ. ರಣಧೀರ ನಾಯಕ್‌ ಅವರ ಛಾಯಾಗ್ರಹಣವಿದೆ. ಸುರೇಶ್‌ ನಾವಳ್ಳಿ ಸಂಕಲನವಿದೆ. ಬಳ್ಳಾರಿ, ತುಮಕೂರು, ಶಿವಗಂಗೆ ಸೇರಿದಂತೆ ಇತರೆಡೆ ಚಿತ್ರೀಕರಣ ನಡೆಸಲಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿ, “ಪ್ರಸಕ್ತ ಚಿತ್ರರಂಗದಲ್ಲಿ ಸಮಸ್ಯೆ ಹೆಚ್ಚಾಗಿದೆ.

ಸಮಸ್ಯೆ ಪರಿಹಾರ ಆಗದಿದ್ದರೆ, ಭವಿಷ್ಯದಲ್ಲಿ ಚಿತ್ರರಂಗಕ್ಕೆ ಪೆಟ್ಟು ಬೀಳಲಿದೆ. ಸದಭಿರುಚಿಯ ಸಿನಿಮಾಗಳು ಬಿಡುಗಡೆಯಾದರೂ, ಜನರು ಬರುತ್ತಿಲ್ಲ. ಎಲ್ಲರೂ ಟಿವಿ, ಮೊಬೈಲ್‌ ಮೊರೆ ಹೋಗುತ್ತಿದ್ದಾರೆ. ಇದರಿಂದ ಆಚೆ ಬಂದು, ಚಿತ್ರಮಂದಿರದಲ್ಲಿ ಸಿನಿಮಾ ನೋಡುವಂತಾಗಬೇಕು’ ಎಂದರು. ಚಿತ್ರವನ್ನು ನಂದಿಹಳ್ಳಿಯ ಶಿವಣ್ಣ, ಜಿ.ಕೆ.ಲಕ್ಷೀಕಾಂತಯ್ಯ, ಪಾರ್ವತಿ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಚಿತ್ರ ಸೆನ್ಸಾರ್‌ಗೆ ಹೋಗಲು ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next