Advertisement

ಕನ್ನಡ ಫ‌ಲಕವಿಲ್ಲದಿದ್ದರೆ ಪರವಾನಗಿ ರದ್ದು

12:26 AM Dec 11, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ಉದ್ದಿಮೆ ಹಾಗೂ ವ್ಯಾಪಾರ ಮಳಿಗೆಗಳು ಡಿಸೆಂಬರ್‌ ಅಂತ್ಯದೊಳಗೆ ನಾಮಫ‌ಲಕಗಳಲ್ಲಿ ಶೇ.60ರಷ್ಟು ಕನ್ನಡ ಅಳವಡಿಸದಿದ್ದಲ್ಲಿ ಪರವಾನಗಿ ರದ್ದು ಸೇರಿದಂತೆ ಕ್ರಮ ತೆಗೆದುಕೊಳ್ಳಿ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ನಗರದಾದ್ಯಂತ ಅಳವಡಿಸಲಾಗಿರುವ ಜಾಹೀರಾತು ಫ‌ಲಕಗಳ ಕಬ್ಬಿಣದ ಸಾಧನ ತೆರವು ಮಾಡುವಂತೆ ಹೈಕೋರ್ಟ್‌ ಆದೇಶದ ಬಗ್ಗೆ ಹಾಗೂ ಉದ್ದಿಮೆ, ವ್ಯಾಪಾರ ಮಳಿಗೆಗಳು ಕಡ್ಡಾಯ ಕನ್ನಡ ನಾಮಫ‌ಲಕ ಅಳವಡಿಸಿಕೊಳ್ಳುವ ಸಂಬಂಧ ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಟ್ಟು ನಿಟ್ಟಿನ ನಿರ್ದೇಶನ ನೀಡಿದರು.

ನಾಮಫ‌ಲಕಗಳಲ್ಲಿ ಕನ್ನಡ ಅಳವಡಿಸಿಕೊಳ್ಳುವಂತೆ ನೋಟಿಸ್‌ ನೀಡಿದ ಮೇಲೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಉದ್ದಿಮೆಗಳ ಪರವಾನಗಿಯನ್ನು ರದ್ದುಪಡಿಸಿ ನೋಟೀಸ್‌ ಜಾರಿಗೊಳಿಸಿರುವ ಉದ್ದಿಮೆಗಳ ಮೇಲೆ ತಪಾಸಣೆ ನಡೆಸಿ ಕನ್ನಡ ಭಾಷೆ ನಾಮಫ‌ಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳದಿರುವುದು ಕಂಡು ಬಂದರೆ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದರು.

ತಪಾಸಣೆ ಸಂದರ್ಭದಲ್ಲಿ ಯಾವ ರೀತಿ ನಾಮಫ‌ಲಕ ಅಳಡಿಸಬೇಕು ಎಂಬುದರ ಬಗ್ಗೆಯೂ ಮಾಲೀಕರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮೇಯರ್‌ ಗೌತಮ್‌ಕುಮಾರ್‌, ಪಾಲಿಕೆ ವ್ಯಾಪ್ತಿಯಲ್ಲಿ 48 ಸಾವಿರ ಉದ್ದಿಮೆ, ವ್ಯಾಪಾರ ಮಳಿಗೆಗಳು ಪರವಾನಗಿ ನೀಡಲಾಗಿದೆ. ಆದರೆ, ಬೆಸ್ಕಾಂ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಉದ್ದಿಮೆಗಳಿವೆ ಎಂಬ ಮಾಹಿತಿ ಇದೆ.

ಎಲ್ಲ ಉದ್ದಿಮೆ ಹಾಗೂ ವ್ಯಾಪಾರ ಮಳಿಗೆಗಳಿಗೆ ಉದ್ದಿಮೆ ಪರವಾನಗಿ ನೀಡಿದರೆ ಪಾಲಿಕೆಗೆ ವರಮಾನ ಬರಲಿದೆ. ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ ನಾಮಫ‌ಲಕಗಳಲ್ಲಿ ಕಡ್ಡಾಯವಾಗಿ ಶೇ.60ರಷ್ಟು ಕನ್ನಡ ಅಳವಡಿಸಿಕೊಳ್ಳುವಂತೆ ಉದ್ದಿಮೆಗಳ ಮಾಲೀಕರಿಗೆ ಸೂಚನೆ ನೀಡಲಾಗಿದ್ದು, ನಗರದಲ್ಲಿ ಶೇ.50 ರಿಂದ 60 ರಷ್ಟು ಉದ್ದಿಮೆದಾರರು ತಮ್ಮ ನಾಮಫ‌ಲಕದಲ್ಲಿ ಕನ್ನಡ ಭಾಷೆ ಬಳಕೆ ಮಾಡಿಕೊಂಡಿದ್ದಾರೆ.

Advertisement

ಕನ್ನಡ ನಾಮಫ‌ಲಕ ಅಳವಡಿಕೆಗೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಈವರೆಗೆ ಸುಮಾರು 27 ಸಾವಿರ ಉದ್ದಿಮೆದಾರರಿಗೆ ನೋಟಿಸ್‌ ನೀಡಿದ್ದಾರೆ ಎಂದು ಮಾಹಿತಿ ನೀಡಿದರು. ನಗರಾದ್ಯಂತ ಅಳವಡಿಸಿರುವ ಜಾಹೀರಾತು ಫ‌ಲಕಗಳ ಕಬ್ಬಿಣದ ಸಾಧನಗಳನ್ನು ತೆರವು ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕಾಗಿ ವಲಯದ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದರು.

ನಗರದ ಜಾಹೀರಾತು ಫ‌ಲಕಗಳ ಕಬ್ಬಿಣ ಸಾಧನ ಸಮೇತ ತೆರವುಗೊಳಿಸಬೇಕು. ಈ ಪೈಕಿ ಹೋರ್ಡಿಂಗ್ಸ್‌ ಅಳವಡಿಸುವ ಮಾಲೀಕರಿಗೆ ಈ ಕೂಡಲೆ ತೆರವುಗೊಳಿಸುವಂತೆ ಸೂಚನೆ ನೀಡುವಂತೆ ಅವರು ತೆರವುಗೊಳಿಸದಿದ್ದಲ್ಲಿ ಪಾಲಿಕೆಯಿಂದ ತೆರವುಗೊಳಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪೊಲೀಸ್‌ ರಕ್ಷಣೆ ನೀಡುವಂತೆ ಪೊಲೀಸ್‌ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ಹೋರ್ಡಿಂಗ್ಸ್‌, ಪೋಸ್ಟರ್‌ ಹಾಗೂ ಭಿತ್ತಿಪತ್ರ, ಗೋಡೆಬರಹಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಹೋರ್ಡಿಂಗ್ಸ್‌ಗೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ನ್ಯಾಯಾಲಯದಲಿದ್ದು, ಈ ಪ್ರಕರಣಗಳನ್ನು ಇತ್ಯರ್ಥ ಮಾಡುವಂತೆ ಕಾನೂನು ಕೋಶ ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದರು.

ಆಡಳಿತ ಪಕ್ಷದ ನಾಯಕರಾದ ಮುನೀಂದ್ರ ಕುಮಾರ್‌, ವಿರೋಧ ಪಕ್ಷದ ನಾಯಕರು ಅಬ್ದುಲ್‌ ವಾಜೀದ್‌, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾನಾರಾಯಣ್‌, ಕಾನೂನು ಕೋಶ ವಿಭಾಗದ ಮುಖ್ಯಸ್ಥ ದೇಶಪಾಂಡೆ, ಹಣಕಾಸು ವಿಭಾದ ಜಂಟಿ ಆಯುಕ್ತರಾದ ವೆಂಕಟೇಶ್‌ ಮತ್ತಿತರರು ಹಾಜರಿದ್ದರು.

ಹೆಬ್ಬಾಳದ ಮೇಲ್ಸೇತುವೆ ಹೋರ್ಡಿಂಗ್ಸ್‌ ಪರಿಶೀಲನೆ: ಇತ್ತೀಚೆಗೆ ಹೆಬ್ಬಾಳದ ಮೇಲ್ಸೇತುವೆ ಬಳಿ ಅಳವಡಿಸಲಾಗಿರುವ ಹೋರ್ಡಿಂಗ್ಸ್‌ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮೇಯರ್‌, ಹೆಬ್ಬಾಳದ ಮೇಲ್ಸೇತುವೆ ಬಳಿ ಅಳವಡಿಸಿರುವ ಹೋರ್ಡಿಂಗ್ಸ್‌ ಬಿಡಿಎ ಜಾಗದಲ್ಲಿದ್ದು, ಬಿಡಿಎ ಪಿಪಿಪಿ ಮಾದರಿಯಲ್ಲಿ ಅಳವಡಿಸಲು ಅನುಮತಿ ನೀಡಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕನ್ನಡ ಬೇಡ ಎನ್ನುವವರು ಸವಲತ್ತು ನಿರೀಕ್ಷಿಸುವುದೂ ಬೇಡ: ಮೇಯರ್‌
ಬೆಂಗಳೂರು: ನಾಮಫ‌ಲಕಗಳಲ್ಲಿ ಶೇ.60 ಕನ್ನಡ ಭಾಷೆ ಬಳಸುವ ಕಿರುಕುಳ ನೀಡಬೇಡಿ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್ಕೆಸಿಸಿಐ) ವ್ಯಂಗ್ಯವಾಡಿರುವ ಹಿನ್ನೆಲೆಯಲ್ಲಿ ಎಫ್ಕೆಸಿಸಿಐಯ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಮೇಯರ್‌ ಎಂ. ಗೌತಮ್‌ಕುಮಾರ್‌ ತಿಳಿಸಿದರು.

ಕನ್ನಡ ನಾಮಫ‌ಲಕ ಅಳವಡಿಸಿಕೊಳ್ಳುವ ವಿಚಾರದಲ್ಲಿ ಕಿರುಕುಳ ನೀಡಬೇಡಿ, ಮೊದಲು ನಿಮ್ಮ ಕೆಲಸ ಮಾಡಿ ಎಂದು ಎಫ್ಕೆಸಿಸಿಐ ಅಧ್ಯಕ್ಷ ಸಿ.ಆರ್‌. ಜನಾರ್ದನ್‌ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಾತನಾಡಿದ ಅವರು, ನಾವು ಯಾವ ಕೆಲಸ ಮಾಡಬೇಕು ಎಂದು ಎಫ್ಕೆಸಿಸಿಐನಿಂದ ಹೇಳಿಸಿಕೊಳ್ಳಬೇಕಾಗಿಲ್ಲ. ಕನ್ನಡ ಭಾಷೆಗೆ ಗೌರವ ನೀಡದೆ ಇರುವ ಎಫ್ಕೆಸಿಸಿಐ ಬಿಬಿಎಂಪಿ ಕಡೆಯಿಂದ ಯಾವುದೇ ರೀತಿ ಸೌವಲತ್ತುಗಳನ್ನು ನಿರೀಕ್ಷಿಸುವುದು ಬೇಡ ಎಂದು ತಿಳಿಸಿದರು.

ರಸ್ತೆ ಗುಂಡಿ ದುರಸ್ತಿಗೂ ಕನ್ನಡ ನಾಮ ಫ‌ಲಕಕ್ಕೂ ಯಾವುದೇ ಸಂಬಂಧವಿಲ್ಲ. ಬಿಬಿಎಂಪಿ ಹೇಗೆ ಯಾವ ಕೆಲಸ ಮಾಡಬೇಕು ಎಂಬುದು ಗೊತ್ತಿದೆ. ಎಫ್ಕೆಸಿಸಿಐ ತನ್ನ ಕೆಲಸ ತಾನು ನಿರ್ವಹಿಸಲಿ. ಕನ್ನಡ ನಾಮಫ‌ಲಕ ಅಳವಡಿಸುವ ವಿಚಾರದಲ್ಲಿ ಎಫ್ಕೆಸಿಸಿಐ ಸಲಹೆ ನೀಡುವುದು ಬೇಕಾಗಿಲ್ಲ.

ದೃಢ ನಿರ್ಧಾರ ದೊಂದಿಗೆ ನಗರದಲ್ಲಿ ಶೇ.60 ಕನ್ನಡ ಭಾಷೆ ಬಳಕೆಯ ನಾಮಫ‌ಲಕ ಅಳವಡಿಕೆ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ ಎಂದು ಹೇಳಿದರು. ಬಿಬಿಎಂಪಿಗೆ ರಸ್ತೆ ಗುಂಡಿ ಮುಚ್ಚುವುದೊಂದೇ ಕೆಲಸವಲ್ಲ. ಹಲವು ಕೆಲಸ ಮಾಡುತ್ತಿದೆ. ನಮಗೆ ಇನ್ನೊಂದು ಸಂಸ್ಥೆಯಿಂದ ಹೇಳಿಸಿಕೊಂಡು ಕಲಿಯಬೇಕಾದ ಅವಶ್ಯಕತೆ ಇಲ್ಲ.

ಲಾರೆನ್ಸ್‌ ಕುಟುಂಬಕ್ಕೆ ಬಿಬಿಎಂಪಿಯಿಂದ ಪರಿಹಾರ
ಬೆಂಗಳೂರು: ಕೋರಮಂಗಲದ ಸೋನಿ ವರ್ಲ್ಡ್ ಸಿಗ್ನಲ್‌ ಬಳಿ ಇತ್ತೀಚೆಗೆ ಹೈಡ್ರಾಲಿಕ್‌ ಬೋಲ್ಟ್ ಕಳಚಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಲಾರೆನ್ಸ್‌ (44)ಎಂಬವರಿಗೆ ಬಿಬಿಎಂಪಿಯಿಂದ ಪರಿಹಾರ ನೀಡಲಾಗುವುದು ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ತಿಳಿಸಿದರು. ಲಾರೆನ್ಸ್‌ ಅವರ ಕುಟುಂಬದವರು ಬಿಬಿಎಂಪಿಯಿಂದ ಪರಿಹಾರ ನೀಡುವಂತೆ ಮನವಿ ಮಾಡಿದ್ದು, ಸಾಮಾಜಿಕ ಕಳಕಳಿಯಿಂದ ನೆರವು ನೀಡಲಾಗುವುದು.

ಪರಿಹಾರ ಮೊತ್ತದ ಬಗ್ಗೆ ಆಯುಕ್ತರೊಂದಿಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮೇಯರ್‌ ತಿಳಿಸಿದರು. ಮೇಲ್ಸೇತುವೆ ನಿರ್ಮಾಣದ ಗುತ್ತಿಗೆ ಪಡೆದಿರುವ ಸಿಂಪ್ಲೆಕ್‌ ಇನಾ#† ಕಂಪನಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಗುತ್ತಿಗೆ ಸಂಸ್ಥೆಯಿಂದ ಪರಿಹಾರ ಕೊಡಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಗಾಯಗೊಂಡ ಲಾರೆನ್ಸ್‌ ಅವರ ಚಿಕಿತ್ಸಾ ವೆಚ್ಚವನ್ನು ಬಿಬಿಎಂಪಿಯಿಂದ ಭರಿಸಲಾಗುವುದು. ಕಾಮಗಾರಿ ನಡೆಸುವಾಗ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳದ ಹಿನ್ನೆಲೆಯಲ್ಲಿ ಸಿಂಪ್ಲೆಕ್‌ ಇನ್ಫಾ ಕಂಪನಿಗೆ ನೋಟಿಸ್‌ ಜಾರಿ ಮಾಡಲಾಗಿದೆ.
-ಬಿ.ಎಚ್‌. ಅನಿಲ್‌ಕುಮಾರ್‌, ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next