Advertisement

ಗ್ರಂಥ ಭಂಡಾರವಿದ್ರೂ ವ್ಯವಸ್ಥೆ ಮರೀಚಿಕೆ!

03:38 PM Oct 29, 2019 | Suhan S |

ಹೊಳಲ್ಕೆರೆ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪುಸ್ತಕ ಭಂಡಾರದಮಹತ್ವ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿರುವ ಗ್ರಂಥಾಲಯಗಳು ಕಳೆದ 40 ವರ್ಷಗಳಿಂದ ಅಕ್ಷರ ಜ್ಞಾನ ನೀಡುತ್ತಿವೆ.

Advertisement

1972ರಲ್ಲಿ ಆರಂಭಗೊಂಡ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಸಾಕಷ್ಟು ಸಮಸ್ಯೆಗಳ ಮಧ್ಯೆಯೂ ಜ್ಞಾನ ಪ್ರಸಾರದಲ್ಲಿ ನಿರತವಾಗಿದೆ. ಮೊದಲು ಪಟ್ಟಣ ಪಂಚಾಯತ್‌ ಆವರಣದಲ್ಲಿ ಹಳೆ ಕಟ್ಟಡದಲ್ಲಿ ಗ್ರಂಥಾಲಯವನ್ನು ಆರಂಭಿಸಲಾಯಿತು. ನಂತರ ಕಾಯಂ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಈ ಕಟ್ಟಡ ಶಿಥಿಲಗೊಂಡಿದ್ದರಿಂದ ಶಾಸಕರ ಭವನದಲ್ಲಿ ಒಂದೆರಡು ವರ್ಷ ಕಾರ್ಯನಿರ್ವಹಿಸಿತು. ಬಳಿಕ ಮಹಾತ್ಮ ಗಾಂಧೀಜಿ ವಾಣಿಜ್ಯ ಸಂಕೀರ್ಣದ ಎರಡನೇ ಮಹಡಿಯಲ್ಲಿ ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದೆ.

ಕೂಡಿ ಬಾರದ ಉದ್ಘಾಟನಾ ಭಾಗ್ಯ: 43 ಲಕ್ಷ ರೂ. ವೆಚ್ಚದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿ ಒಂದೆರಡು ವರ್ಷಗಳು ಕಳೆದಿವೆ. ಆದರೆ ಕಳಪೆ ಕಾಮಗಾರಿ ಹಾಗೂ ಅವೈಜ್ಞಾನಿಕ ಮಾದರಿಯಲ್ಲಿ ನಿರ್ಮಿಸಿದ್ದರಿಂದ ಕಟ್ಟಡದೊಳಗೆ ಮಳೆ ನೀರು ನಿಲ್ಲುತ್ತಿವೆ. ಕಿಟಕಿಗಳನ್ನು ಅವೈಜ್ಞಾನಿಕವಾಗಿ ಅಳವಡಿಸಲಾಗಿದೆ. ವಿವಿಧ ಸಮಸ್ಯೆಗಳಿಂದಾಗಿ ಹೊಸ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯವೇ ಕೂಡಿ ಬಂದಿಲ್ಲ. ಈ ಗ್ರಂಥಾಲಯದಲ್ಲಿ ಮೌಲ್ಯಯುತ ಗ್ರಂಥ ಭಂಡಾರವೇ ಇದೆ. ಅದರೆ ಸೂಕ್ತ ಕಟ್ಟಡ ಇದ್ದಲ್ಲದ್ದರಿಂದ ಪುಸ್ತಕಗಳು ಧೂಳು ತಿನ್ನುತ್ತಿವೆ. ಗ್ರಂಥಾಲಯದಲ್ಲಿ 34 ಸಾವಿರ ಪುಸ್ತಕಗಳಿದ್ದು, 2800 ಸದಸ್ಯರಿದ್ದಾರೆ.

ಸಾರ್ವಜನಿಕರು ಗ್ರಂಥಾಲಯಕ್ಕೆ ನೂರಾರು ಸಂಖ್ಯೆಯಲ್ಲಿ ಲಗ್ಗೆ ಇಟ್ಟು ಪುಸ್ತಕ, ಪತ್ರಿಕೆಗಳನ್ನು ಓದುತ್ತಿದ್ದ ಕಾಲವೊಂದಿತ್ತು. ಮಹಾಭಾರತ, ರಾಮಾಯಣ, ಕಥೆ-ಕವನ, ಶಬ್ದಕೋಶ, ಸಾಹಿತ್ಯ, ಆಧ್ಯಾತ್ಮಿಕ, ಸ್ಪರ್ಧಾತ್ಮಕ ಪುಸ್ತಕ, ಕಾದಂಬರಿಗಳು ಹಾಗೂ ಪಠ್ಯಪುಸ್ತಕ ವಾಚನಕ್ಕೆ ಗ್ರಂಥಾಲಯ ಆಸರೆಯಾಗಿತ್ತು. ಆದರೆ ಗ್ರಂಥಾಲಯದ ಕಟ್ಟಡ ಸಮಸ್ಯೆಯಿಂದಾಗಿ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಈಗಿರುವ ಗ್ರಂಥಾಲಯ ಬಸ್‌ ನಿಲ್ದಾಣದ ಎದುರಿನ ವಾಣಿಜ್ಯ ಸಂಕೀಣದ ಎರಡನೇ ಮಹಡಿಯಲ್ಲಿದೆ. ಓದುಗರಿಗೆ ಮಹಡಿ ಹತ್ತಿ ಹೋಗಲು ಸಾಧ್ಯವಾಗುತ್ತಿಲ್ಲ. ವಾಹನಗಳ ವಿಪರೀತ ಶಬ್ದ, ಕುರ್ಚಿ ಹೊರತುಪಡಿಸಿ ಮತ್ತೆ ಯಾವುದೇ ಸೌಲಭ್ಯ ಇಲ್ಲ. ಪುಸ್ತಕಗಳನ್ನು ಕೊಠಡಿಯೊಳಗೆ ಇಟ್ಟು ಕಾಯಬೇಕಾದ ಸ್ಥಿತಿ ಗ್ರಂಥಪಾಲಕರದ್ದಾಗಿದೆ.

ಡಿಜಿಟಲ್‌ ಗ್ರಂಥಾಲಯ ಬೇಕು: ಮೊಬೈಲ್‌, ಇಂಟರ್‌ನೆಟ್‌, ಡಿಜಿಟಲ್‌ ಗ್ರಂಥಾಲಯ ಯುವ ಓದುಗರನ್ನು ಸೆಳೆಯುತ್ತಿವೆ. ಹಾಗಾಗಿ ಡಿಜಿಟಲ್‌ ಹಾಗೂ ಇ-ಗ್ರಂಥಾಲಯದ ಸೌಲಭ್ಯ ಕಲ್ಪಿಸಬೇಕು. ಗ್ರಂಥಾಲಯ ಕಟ್ಟಡವನ್ನು ದುರಸ್ತಿಪಡಿಸಿ ಉದ್ಘಾಟಿಸಬೇಕು ಎಂಬುದು ವಾಚನಾಸಕ್ತರ ಬೇಡಿಕೆ. ಪ್ರತಿನಿತ್ಯ ಬೆಳಿಗ್ಗೆ 8:30 ರಿಂದ 11:30 ಹಾಗೂ ಸಂಜೆ 4 ರಿಂದ 8 ಗಂಟೆವರೆಗೆ ಗ್ರಂಥಾಲಯ ಕಾರ್ಯನಿರ್ವಹಿಸುತ್ತದೆ. ಪ್ರತಿ ಸೋಮವಾರ ಹಾಗೂ ಸರ್ಕಾರಿ ರಜಾ ದಿನದಂದು ಗ್ರಂಥಾಲಯಕ್ಕೆ ರಜೆ ಇದ್ದು, ಗ್ರಂಥಪಾಲಕರಾಗಿ ಸವಿತಾ ಹಾಗೂ ಸಹಾಯಕರಾಗಿ ಅನಂದ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

 

-ಎಸ್‌. ವೇದಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next