Advertisement

ಪ್ರತ್ಯೇಕತಾವಾದಕ್ಕೆ ಆಸ್ಪದ ಬೇಡ ಖಲಿಸ್ಥಾನಿ ಬೆಂಬಲಿಗರನ್ನು ಮಟ್ಟ ಹಾಕಿ

12:08 AM Mar 27, 2023 | Team Udayavani |

ದಶಕಗಳ ಕಾಲ ಪಂಜಾಬ್‌ನ್ನು ನಲುಗಿಸಿದ್ದ ಖಲಿಸ್ಥಾನಿ ಭಯೋತ್ಪಾದನೆ ದೇಶ ದಲ್ಲಿ ಮತ್ತೆ ಚಿಗುರೊಡೆದಿರುವಂತೆ ಭಾಸವಾಗುತ್ತಿದೆ. ಸಾಮಾಜಿಕ ಸಂಘಟನೆ ಎಂದು ಗುರುತಿಸಿಕೊಂಡಿರುವ “ವಾರಿಸ್‌ ಪಂಜಾಬ್‌ ದೇ’ಯ ಸ್ವಘೋಷಿತ ನಾಯಕ ಅಮೃತ್‌ಪಾಲ್‌ ಸಿಂಗ್‌ನ ಬಂಧನ ಕಾರ್ಯಾಚರಣೆಯ ಪ್ರಹಸನ ಇನ್ನೂ ಮುಂದುವರಿದಿರುವ ನಡುವೆಯೇ ವಿದೇಶಗಳಲ್ಲಿ ಖಲಿಸ್ಥಾನಿ ಪರ ಬೆಂಬಲಿಗರ ದಾಂಧಲೆ, ಪ್ರತಿಭಟನೆ, ಹೋರಾಟ ಎಲ್ಲೆ ಮೀರತೊಡಗಿದೆ. ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್‌, ಅಮೆರಿಕ ಆದಿಯಾಗಿ ವಿಶ್ವದ ಹಲವೆಡೆ ಹಿಂದೂ ದೇಗುಲ, ಭಾರತೀಯ ರಾಯಭಾರ ಕಚೇರಿ, ದೂತಾವಾಸಗಳನ್ನು ಗುರಿಯಾಗಿಸಿ ಖಲಿಸ್ಥಾನಿ ಪರ ಬೆಂಬಲಿಗರು ಪ್ರತಿಭಟನೆಯ ನೆಪದಲ್ಲಿ ದಾಂಧಲೆ, ಹಿಂಸಾಚಾರದಂತಹ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಮತ್ತೆ ಪ್ರತ್ಯೇಕತಾವಾದವನ್ನು ಮುನ್ನೆಲೆಗೆ ತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

Advertisement

ಈ ವರ್ಷದ ಆರಂಭದಿಂದ ಖಲಿಸ್ಥಾನಿ ಬೆಂಬಲಿಗರ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡತೊಡಗಿದೆ. ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸುವ ಮೂಲಕ ಬಾಲ ಬಿಚ್ಚತೊಡಗಿದ ಖಲಿಸ್ಥಾನಿ ಪರ ಬೆಂಬಲಿಗರು ಈಗ ವಿಶ್ವದ ಹಲವೆಡೆ ಅದರಲ್ಲೂ ಬ್ರಿಟನ್‌, ಅಮೆರಿಕದಂತಹ ವಿಶ್ವದ ದಿಗ್ಗಜ ರಾಷ್ಟ್ರಗಳಲ್ಲಿನ ಭಾರತೀಯ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸುವಂತಹ ಕುಕೃತ್ಯಕ್ಕೆ ಪ್ರಯತ್ನಿಸಿರುವುದು ಖಂಡನೀಯ.

ಆಸ್ಟ್ರೇಲಿಯಾದಲ್ಲಿ ಹಿಂದೂ ದೇಗುಲಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸುವ ಮೂಲಕ ಹಿಂದೂಗಳನ್ನು ವಿಭಜಿಸುವ ಪ್ರಯತ್ನವನ್ನು ಖಲಿಸ್ಥಾನಿ ಬೆಂಬಲಿಗರು ನಡೆಸುತ್ತ ಬಂದಿದ್ದರು. ಈಗ ಭಾರತದಲ್ಲಿ ಖಲಿಸ್ಥಾನಿ ಪರ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ನ ಬಂಧನಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ವಿರೋಧಿಸಿ ಬ್ರಿಟನ್‌, ಅಮೆರಿಕದಲ್ಲಿ ಭಾರತೀಯ ರಾಯಭಾರ ಕಚೇರಿ ಮುಂಭಾಗ ಪ್ರತಿಭಟನೆಯ ನೆಪದಲ್ಲಿ ಹಿಂಸಾ ಕೃತ್ಯಗಳನ್ನು ನಡೆಸತೊಡಗಿದ್ದಾರೆ. ವಾರದ ಹಿಂದೆಯಷ್ಟೆ ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್‌ ಕಚೇರಿಯಲ್ಲಿನ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಖಲಿಸ್ಥಾನಿ ಧ್ವಜವನ್ನು ಎತ್ತಿಹಿಡಿದಿದ್ದ ಪುಂಡರು ಭಾರೀ ರಾದ್ಧಾಂತವನ್ನೇ ಸೃಷ್ಟಿಸಿದ್ದರು.

ಸ್ಯಾನ್‌ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತವಾಸದಲ್ಲೂ ಇದೇ ತೆರನಾದ ಪ್ರತಿಭಟನೆಯನ್ನು ನಡೆಸಿದ್ದರೆ ಕೆನಡಾದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಯನ್ನು ವಿರೂಪಗೊಳಿಸಲಾಗಿತ್ತು.

ಇವೆಲ್ಲದರ ನಡುವೆ ಶನಿವಾರ ಖಲಿಸ್ಥಾನಿ ಪರ ಬೆಂಬಲಿಗರು ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಿದ್ದು ಅಮೆರಿಕದ ಭದ್ರತ ಪಡೆಗಳ ಸಮಯ ಪ್ರಜ್ಞೆಯಿಂದಾಗಿ ಈ ಪ್ರಯತ್ನ ವಿಫ‌ಲವಾಗಿದೆ. ಇದೇ ಸಂದರ್ಭದಲ್ಲಿ ಘಟನೆಯನ್ನು ವರದಿ ಮಾಡಲು ಹೋಗಿದ್ದ ಭಾರತೀಯ ಮೂಲದ ಹಿರಿಯ ಪತ್ರಕರ್ತ ರೋರ್ವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದೇ ಅಲ್ಲದೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ.

Advertisement

ಈ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಇದರ ಹಿಂದೆ ಬಲುದೊಡ್ಡ ಷಡ್ಯಂತ್ರವಿರುವಂತೆ ಕಾಣುತ್ತಿದೆ. ಪಂಜಾಬ್‌ನಲ್ಲಿ ಪ್ರತ್ಯೇಕತಾವಾದದ ಹೋರಾಟವನ್ನು ಮುನ್ನೆಲೆಗೆ ತರುವ ಪ್ರಯತ್ನದ ಜತೆಜತೆಯಲ್ಲಿ ಇದನ್ನೊಂದು ಅಂತಾರಾಷ್ಟ್ರೀಯ ವಿಷಯವನ್ನಾಗಿಸಿ ಭಾರತದ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ದಶಕಗಳ ಹಿಂದೆಯೇ ಪಂಜಾಬ್‌ನಲ್ಲಿ ಖಲಿಸ್ಥಾನಿಗಳ ಹಿಂಸಾತ್ಮಕ ಹೋರಾಟದ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆದು ಪಂಜಾಬ್‌ನಲ್ಲಿ ಶಾಂತಿಯನ್ನು ಮರುಸ್ಥಾಪಿಸಿದ್ದ ಭಾರತದ ವಿರುದ್ಧ ಈಗ ತೆರೆಮರೆಯಲ್ಲಿ ಖಲಿಸ್ಥಾನಿ ಬೆಂಬಲಿಗರು ಮಸಲತ್ತು ನಡೆಸುತ್ತಿರುವುದು ಸ್ಪಷ್ಟವಾಗಿದೆ. ಖಲಿಸ್ಥಾನಿ ಹೋರಾಟಗಾರರಿಗೆ ಪಾಕಿಸ್ಥಾನದಲ್ಲಿ ಆಶ್ರಯ ಪಡೆದಿರುವ ಉಗ್ರಗಾಮಿ ಸಂಘಟನೆಗಳು ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ವಿಚಾರವೂ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಪುಂಡರ ಜಾಲವನ್ನು ಭೇದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕತಾವಾದ ಮತ್ತು ಮಾನವ ಹಕ್ಕುಗಳನ್ನು ಮುಂದಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಖಲಿಸ್ಥಾನಿಪರ ಬೆಂಬಲಿಗರನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲು ಭಾರತ ಸರಕಾರ ಮುಂದಾಗಬೇಕು. ಭಾರತದ ನೆಲದಲ್ಲಿ ಪ್ರತ್ಯೇಕತಾವಾದ, ಭಯೋತ್ಪಾದನೆ, ವಿಭಜನಕಾರಿ ಮತ್ತು ವಿಚ್ಛಿಧ್ರಕಾರಿ ಶಕ್ತಿಗಳಿಗೆ ನೆಲೆಯೂರಲು ಆಸ್ಪದವೇ ಇಲ್ಲವಾಗಿದ್ದು ಇದಕ್ಕೆ ತಮ್ಮ ನೆಲದಲ್ಲೂ ಅವಕಾಶ ನೀಡದಿರುವಂತೆ ಸ್ಪಷ್ಟ ಮಾತುಗಳಲ್ಲಿ ಜಾಗತಿಕ ಸಮುದಾಯಕ್ಕೆ ಸಂದೇಶ ರವಾನಿಸಬೇಕು. ಜತೆಜತೆಯಲ್ಲಿ ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು ಮತ್ತು ಹಿಂದೂ ದೇಗುಲಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಲ್ಲಿನ ಸರಕಾರಗಳ ಮೇಲೆ ಒತ್ತಡ ಹೇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next