ಹುಬ್ಬಳ್ಳಿ: ಸಿಎಎ, ಎನ್‌ಆರ್‌ಸಿ ಹಾಗೂ ಎನ್ ಆರ್‌ಪಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುವ ಚಳವಳಿ ನಡೆಸಲಾಯಿತು.
ಸೋಮವಾರ ಇಲ್ಲಿನ ಡಾ| ಅಂಬೇಡ್ಕರ್ ವೃತ್ತದಲ್ಲಿರುವ ಅಂಚೆ ಕಚೇರಿ ಮುಂಭಾಗದಲ್ಲಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಧರ್ಮ ಆಧರಿಸಿ ಪೌರತ್ವ ನೀಡುವುದು ಸಂವಿಧಾನ ವಿರೋಧಿಯಾಗಿದೆ. ಉದ್ದೇಶಪೂರ್ವಕವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಮೂಲಕ ಮುಸ್ಲಿಮರನ್ನು ದೂರ ಇಡುವ ಕೆಲಸ ನಡೆಯುತ್ತಿದೆ. ಕೇಂದ್ರ ಸರಕಾರ ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿದ್ದು, ಕೂಡಲೇ ಈ ಕಾಯ್ದೆಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ರಾಜಶೇಖರ ಮೆಣಸಿನಕಾಯಿ ಮಾತನಾಡಿ, ಹಿಂದೂ-ಮುಸ್ಲಿಮರನ್ನು ಇಬ್ಭಾಗ ಮಾಡಿ ರಾಜಕಾರಣ ಮಾಡುವ ಕುತಂತ್ರ ಬುದ್ಧಿಯನ್ನು ಕೇಂದ್ರದ ಎನ್‌ಡಿಎ ಸರಕಾರ ಮಾಡುತ್ತಿದೆ. ಧರ್ಮ ಮುಂದಿಟ್ಟುಕೊಂಡು ಪೌರತ್ವ ನೀಡುತ್ತೇವೆ ಎನ್ನುವುದು ಸಂವಿಧಾನಕ್ಕೆ ಮಾಡಿರುವ ಅಪಚಾರವಾಗಿದೆ.
ಇಂತಹ ಕುತಂತ್ರ ಬುದ್ಧಿಯಿಂದ ದೇಶದ ಹಿಂದು-ಮುಸ್ಲಿಮರ ನಡುವಿನ ಬಾಂಧವ್ಯ ಕದಡಲು ಸಾಧ್ಯವಿಲ್ಲ. ಅಭಿವೃದ್ಧಿ ಯೋಜನೆಗಳನ್ನು ಮುದ್ದಿಟ್ಟುಕೊಂಡು ರಾಜಕಾರಣ ಮಾಡುವುದು ಬಿಟ್ಟು ಭಾವನಾತ್ಮಕ, ಧರ್ಮ ಹಾಗೂ ಜಾತಿ ಆಧಾರದ ಮೇಲೆ ಆಡಳಿತ ಮಾಡುತ್ತಿರುವುದಕ್ಕೆ ದೇಶದ ಜನರ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಹುಡಾ ಮಾಜಿ ಅಧ್ಯಕ್ಷ ಅನ್ವರ್ ಮುಧೋಳ ಮಾತನಾಡಿ, ಧರ್ಮಾಧಾರಿತ ಪೌರತ್ವ ನೀಡುವುದು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸಂವಿಧಾನ ವಿರೋಧಿ ಕಾರ್ಯಕ್ಕೆ ಬಿಜೆಪಿ ಮುಂದಾಗಿದ್ದು, ದೇಶದ ಪವಿತ್ರ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ಧರ್ಮ, ಜಾತಿ ಭೇದ ಮರೆತು ಹೋರಾಟಗಳು ನಡೆಯುತ್ತಿವೆ. ದೇಶದ ಜನಗಿಂತ ಯಾವ ಕಾಯ್ದೆಗಳು ದೊಡ್ಡದಲ್ಲ. ಇಷ್ಟೊಂದು ಹಿಂಸಾತ್ಮಕ ಹೋರಾಟಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ಜನವಿರೋಧಿ ಕಾಯ್ದೆ ತರುತ್ತಿರುವುದು ಜನರ ಕಾಳಜಿಯಿಲ್ಲ ಎಂಬುದು ಸಾಬೀತಾಗಿದೆ ಎಂದದರು. ಕಾಂಗ್ರೆಸ್ ಮುಖಂಡ ಅಶ್ಪಾಕ್ ಕುಮಟಾಕರ ಮಾತನಾಡಿ, ದೇಶದ ಆರ್ಥಿಕ ಹಿಂಜರಿತದಿಂದ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೈಗಾರಿಕೆ ಕ್ಷೇತ್ರ ನೆಲಕಚ್ಚುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರಕಾರ ಗಮನ ಕೊಡದೆ ಇವುಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಈ ಕಾಯ್ದೆ ಮುಂದೆ ತಂದಿದೆ ಎಂದರು.
ಮೌಲಾನಾ ನಿಸ್ಸಾರ ಅಹ್ಮದ್, ಅಲ್ತಾಫ್ ಹಳ್ಳೂರು, ವಿಜಯ ಗುಂಟ್ರಾಳ, ಬಾಬಾಜಾನ್ ಮುಧೋಳ, ತೌಸೀಫ್, ಎಂ.ಎ.ಹಿಂಡಸಗೇರಿ, ಶಹಬಾಜ್ ಅಹ್ಮದ್, ಇನ್ನಿತರರಿದ್ದರು.