ಬೆಳ್ತಂಗಡಿ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪೊಲೀಸ್ ಠಾಣೆಗೆ ಹೊಸ ವರ್ಷಕ್ಕೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಪತ್ರವನ್ನು ಕಳ್ಳನೋರ್ವ ಧರ್ಮಸ್ಥಳ ಪೊಲೀಸ್ ಠಾಣೆಗೆ ಒಳಪಟ್ಟ ಅಂಚೆ ಕಚೇರಿಯಿಂದ ಪತ್ರ ರವಾನಿಸಿದ್ದ ಎಂಬ ಮಾಹಿತಿ ಮೇರೆಗೆ ಚೆನ್ನೈ ಪೊಲೀಸರು ಧರ್ಮಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಸಿ ಬಾಂಬ್ ಪತ್ರ ಬರೆದ ಹೊಸಪೇಟೆ ಮೂಲದ ಹನಮಂತ (42)ನನ್ನು ಚೆನ್ನೈ ಪೊಲೀಸರು ಬಂಧಿಸಿದ್ದರು. ಈತ ಕಳೆದ ನವೆಂಬರ್ 11ರಂದು ಭಟ್ಕಳ ಶಹರ ಪೊಲೀಸ್ ಠಾಣೆಗೆ ಬಾಂಬ್ ಬ್ಲಾಸ್ಟ್ ಬೆದರಿಕೆ ಪತ್ರ ಕಳುಹಿಸಿದ್ದ. ಪತ್ರದಲ್ಲಿ ಚೆನ್ನೈ ಬಳಿಕದ ಟಾರ್ಗೆಟ್ ಎಂದು ಬರೆದಿದ್ದದಲ್ಲದೆ ಉರ್ದು ಭಾಷೆಯೂ ಇತ್ತು ಎನ್ನಲಾಗಿದೆ. ಪೊಲೀಸರು ತನಿಖೆ ಆರಂಭಿಸಿದಾಗ ತಮಿಳುನಾಡಿನಲ್ಲೂ ಇದೇ ಮಾದರಿ ಪತ್ರ ಸಂದೇಶ ಬಂದಿರುವುದು ತಿಳಿದುಬಂದಿದೆ.
ಅಂತರ್‌ರಾಜ್ಯ ಕಳ್ಳನಾಗಿರುವ ಈತ ಚೆನ್ನೈನಲ್ಲಿ ಕಳವುಗೈದ ಲ್ಯಾಪ್‌ಟಾಪ್ ಮಾರಾಟ ಮಾಡಿದ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುವ ವೇಳೆ ಈತನ ಬಗ್ಗೆ ಸುಳಿವು ಸಿಕ್ಕಿತ್ತು. ಬಂಧನದ ಬಳಿಕ ವಿಚಾರಣೆ ನಡೆಸಿದಾಗ ಈತ ನ. 29ರಂದು ಧರ್ಮಸ್ಥಳ ಗ್ರಾಮದ ಅಂಚೆ ಬಾಕ್ಸ್‌ನಲ್ಲಿ ತಮಿಳುನಾಡು ಪುಲಿಯಂತೋಪು ಹಾಗೂ ಭಟ್ಕಳ ಪೊಲೀಸರಿಗೆ ಬೆದರಿಕೆ ಪತ್ರ ಹಾಕಿದ್ದ ಎಂದು ತನಿಖೆಯಿಂದ ತಿಳಿದು ಬಂದಂತೆ ಚೆನ್ನೈ ಪೊಲೀಸರು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯವಾಗಿ ಅಂಚೆ ಬಾಕ್ಸ್ ಪರಿಶೀಲನೆ ಸಹಿತ ಸುತ್ತಮುತ್ತ ಸಿಸಿ ಟಿವಿ ಫುಟೇಜ್ ಪರಿಶೀಲನೆ ಮಾಡಿದ್ದಾರೆ. ತನಿಖೆಗೆ ಪೂರಕ ಸಹಕಾರ ನೀಡುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆ ಉಪನಿರೀಕ್ಷಕ ಅನಿಲ್ ಕುಮಾರ್ ತಿಳಿಸಿದ್ದಾರೆ.
ಈತ ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ ಸಹಿತ ಇತರೆಡೆ ಓಡಾಟ ನಡೆಸಿರುವ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.