ಬೆಂಗಳೂರು: ಯಾವತ್ತೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಿರುವ ರಾಜಭವನ ಇದೇ ಮೊದಲ ಬಾರಿ 15 ದಿನಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ. ಹೌದು, ರಾಜಭವನವೆಂದರೆ ಅದು ರಾಜ್ಯಪಾಲರು ವಾಸ್ತವ್ಯವಿರುವ ಜಾಗ. ನಿರ್ಬಂಧಿತ ಪ್ರದೇಶವಾಗಿರುವುದರಿಂದ ಸಾರ್ವಜನಿಕರಿಗೆ ಪ್ರವೇಶವಿಲ್ಲ.
ಹೀಗಾಗಿ ಒಳಗೆ ಏನೇನಿದೆ ಎಂಬುದು ಕೆಲವೇ ಮಂದಿ ಬಿಟ್ಟರೆ ಬಹುತೇಕರಿಗೆ ಗೊತ್ತೇ ಇಲ್ಲ. ಹೀಗಾಗಿ ರಾಜಭವನದ ಬಗ್ಗೆ ಜನರಿಗೆ ಒಂದು ಸ್ಮರಣೀಯ ಅನುಭವ ಕಲ್ಪಿಸುವ ಉದ್ದೇಶದಿಂದ ಆ. 16ರಿಂದ ಆ. 31ರವರೆಗೆ ರಾಜಭವನಕ್ಕೆ ಸಾರ್ವಜನಿಕರ ಪ್ರವೇಶ ಕಲ್ಪಿಸಲು ನಿರ್ಧರಿಸಲಾಗಿದೆ.
ಹಾಗೆಂದು ಬೇಕಾಬಿಟ್ಟಿ ಪ್ರವೇಶಕ್ಕೆ ಅವಕಾಶವಿಲ್ಲ. ರಾಜಭವನದ ಭದ್ರತೆ ಮತ್ತು ಘನತೆಗೆ ಚ್ಯುತಿಯಾಗದಂತೆ ಆ. 16ರಿಂದ 31ರವರೆಗೆ ಪ್ರತಿನಿತ್ಯ ಸಂಜೆ 4ರಿಂದ 6.30ರವರೆಗೆ ಮಾತ್ರ ಒಳಗೆ ಪ್ರವೇಶಿಸಿ ರಾಜಭವನ ವೀಕ್ಷಣೆ ಮಾಡಬಹುದು. ರಾತ್ರಿ 7 ಗಂಟೆಯೊಳಗೆ ಅಲ್ಲಿಂದ ವಾಪಸಾಗಬೇಕು.
ಅಷ್ಟೇ ಅಲ್ಲ, ರಾಜಭವನ ಪ್ರವೇಶ ಬಯಸುವವರು ಮೊದಲು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ರಾಜಭವನ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, ರಾಜಭವನ ವೀಕ್ಷಿಸಲು ಬಯಸುವವರು //rajbhavan.kar.nic.in ತೆರಳಿ ನೋಂದಣಿ ಮಾಡಿಕೊಳ್ಳಬೇಕು.
ಕಡೆಯ ದಿನದ ಐದು ದಿನ ಮುನ್ನ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಸಿಗಲಿದೆ ಎಂದು ರಾಜಭವದ ಪ್ರಕಟಣೆ ತಿಳಿಸಿದೆ. ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ರಾಜಭವನ ಹಿಂದೆ ಅವರ ಬೆಂಗಳೂರು ರೆಸಿಡೆನ್ಸಿ ಅಥವಾ ಮೈಸೂರು ರೆಸಿಡೆನ್ಸಿ ಇಲ್ಲವೇ ರೆಸಿಡೆನ್ಸಿ ಎಂದು ಖ್ಯಾತವಾಗಿತ್ತು.
ನಂತರದಲ್ಲಿ ಅದನ್ನು ರಾಜ್ಯಪಾಲರ ಅಧಿಕೃತ ನಿವಾಸ ಎಂದು ನಿರ್ಧರಿಸಲಾಯಿತು. ವಿಧಾನಸೌಧದ ಪಕ್ಕದಲ್ಲೇ ಇದ್ದರೂ ಇದು ನಿರ್ಬಂಧಿತ ಪ್ರದೇಶವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜಭವನದ ಕುರಿತು ಜನ ಸಾಮಾನ್ಯರಿಗೆ ಅವಿಸ್ಮರಣೀಯ ಅನುಭವ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯಪಾಲರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.