ಬೆಳಗಾವಿ: ಬ್ರಿಟಿಷರನ್ನು ಹಿಮ್ಮೆಟ್ಟಿಸುವಲ್ಲಿ ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಹೋರಾಟ ಪ್ರಮುಖವಾಗಿದೆ. ಇನ್ನೂ ಬ್ರಿಟಿಷ ಸಾಮ್ರಾಜ್ಯದ ವಂಶಾವಳಿ ದೇಶದಲ್ಲಿ ಉಳಿದುಕೊಂಡಿದ್ದು, ಅದನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ವಂಶಾವಳಿಯನ್ನು ಕಿತ್ತು ಹಾಕುವ ಹೋರಾಟ ಮುಂದುವರಿದಿದೆ. ಈ ಹೋರಾಟದ ಮುಂಚೂಣಿಯಲ್ಲಿ ಪ್ರಧಾನಿ ಮೋದಿ ಇದ್ದಾರೆ. ರಾಯಣ್ಣನ ಹೋರಾಟ, ಶೌರ್ಯದ ಗುಣಗಳು ನಮ್ಮ ಮೋದಿ ಅವರಲ್ಲಿ ಕಾಣುತ್ತೇವೆ ಎಂದರು.
ಚನ್ನಮ್ಮ ಹಾಗೂ ರಾಯಣ್ಣ ಹೋರಾಡುವಾಗ ಬ್ರಿಟಿಷ ಮುಕ್ತ ಭಾರತ ಹೇಗೆ ಇತ್ತೋ ಈಗ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕಿದೆ. ತುಷ್ಟೀಕರಣದ ರಾಜಕಾರಣ, ದ್ವೇಷದ ರಾಜಕಾರಣ ಈಗ ನಡೆಯುತ್ತಿದೆ. 60 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಗೆ ಸಾಮಾಜಿಕ ನ್ಯಾಯ ಎಂಬುದು ಗೊತ್ತಿಲ್ಲ. ಸಾಮಾಜಿಕ ನ್ಯಾಯ ಎಂದ ಸಿದ್ದರಾಮಯ್ಯ ಈಗ ಎಲ್ಲಿದ್ದಾರೆ. ಎಸ್‌ಸಿ, ಎಸ್‌ಟಿಗೆ ಮೀಸಲಾತಿ ನೀಡಲಾಗಲಿಲ್ಲ. ಬಿಜೆಪಿ ಸರ್ಕಾರ ಮೀಸಲಾತಿ ಘೋಷಿಸಿದ ಬಳಿಕ
ಮೊಸರಲ್ಲಿ ಕಲ್ಲು ಹುಡುಕಲು ಹೊರಟಿದೆ.
ಅಭಿವೃದ್ಧಿ ಪಥದಲ್ಲಿ ಭಾರತ ಮುನ್ನಡೆದಿದೆ. ಅನೇಕ ಯೋಜನೆಗಳ ಮೂಲಕ ಭಾರತ ಜನಪರವಾದ ಆಡಳಿತ ನಡೆಸುತ್ತಿದೆ. ಜನಪರ, ಜನಕಲ್ಯಾಣ ಸರ್ಕಾರ ರಚಿಸಲು ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಮನೆ-ಮನಗಳಲ್ಲಿ ಬಿಜೆಪಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಮಾತನಾಡಿ, ವಿಜಯ ಸಂಕಲ್ಪ ಯಾತ್ರೆ ಮೂಲಕ ರಾಜ್ಯದ 8 ಸಾವಿರ ಕಿಮೀ ಸಂಚರಿಸಿ 150ಕ್ಕೂ ಹೆಚ್ಚು ರೋಡ್ ಶೋ ನಡೆಸಿ ನಾಲ್ಕು ಕೋಟಿ ಮತದಾರರನ್ನು ಸ್ಪಂದಿಸುವ ಕಾರ್ಯ ಈ ಯಾತ್ರೆ ಮಾಡಲಿದೆ. ಈಗ ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಮನೆ ಮನೆಗಳಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ಈ ಯಾತ್ರೆ ಮುಗಿದಾಗ ಅಭೂತಪೂರ್ವ ಯಶಸ್ಸು ಮೂಲಕ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಅ ಧಿಕಾರಕ್ಕೆ ಬರುತ್ತೇವೆ ಎಂದರು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಸಿದ್ದರಾಮಯ್ಯ ಕೇವಲ ಭರವಸೆ ನೀಡಿ ಜನರಿಗೆ ಮೋಸ ಮಾಡುತ್ತಾರೆ. ಮುಖ್ಯಮಂತ್ರಿ ಕುರ್ಚಿ ಒಂದೇ ಇದ್ದರೂ ಹಲವಾರು ಜನ ಆಕಾಂಕ್ಷಿಗಳಿದ್ದಾರೆ. ಅವರವರಲ್ಲೇ ಕಿತ್ತಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದ ಮೂಲಕ ಅಭಿವೃದ್ಧಿಯ ಸಾಧನೆ ಆಗಿದೆ. ದೇಶ-ರಾಜ್ಯದಲ್ಲಿ ಗಮನಾರ್ಹ ಪರಿವರ್ತನೆ ಆಗಿದೆ ಎಂದರು.
ಸಚಿವರಾದ ಭೈರತಿ ಬಸವರಾಜ, ಸಿ.ಸಿ.ಪಾಟೀಲ, ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಶಿವರಾಮ ಹೆಬ್ಟಾರ, ಶಶಿಕಲಾ ಜೊಲ್ಲೆ, ಸಂಸದೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕರಾದ ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಮಹೇಶ ಕುಮಠಳ್ಳಿ, ಅಭಯ ಪಾಟೀಲ, ಅನಿಲ ಬೆನಕೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಎನ್. ರವಿಕುಮಾರ್, ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿಮಠ, ಅರುಣ ಶಹಾಪುರ, ವಿಠಲ ಹಲಗೇಕರ, ಅರವಿಂದ ಪಾಟೀಲ ಇದ್ದರು.