Advertisement

ಕೇಂದ್ರಕ್ಕೆ ಸರ್ವ ಪಕ್ಷ ನಿಯೋಗ ಕರೆದೊಯ್ಯಲಿ

09:48 AM Aug 25, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರವಾಹಕ್ಕೆ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ಶೀಘ್ರವೇ ಸರ್ವ ಪಕ್ಷಗಳ ನಿಯೋಗ ಕರೆದೊಯ್ಯುವಂತೆ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಿರುವ ಅವರು, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ, ಶಾಸಕ ರಾದ ಗಣೇಶ್‌ ಹುಕ್ಕೇರಿ ಹಾಗೂ ಆನಂದ್‌ ನ್ಯಾಮಗೌಡ ಅವ ರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸುವ ಕುರಿತು ಚರ್ಚಿಸಲು ಒಂದು ವಾರದ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿದರು.

ಮಹಾರಾಷ್ಟ್ರದಲ್ಲಿ ಮಳೆಯಾದರೆ 3.45 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿತ್ತು. ಆದರೆ, ಈ ಬಾರಿ 6 ಲಕ್ಷ ಕ್ಯೂಸೆಕ್‌ ನೀರು ಬಂದಿದೆ. ಹೀಗಾಗಿ ಪ್ರವಾಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಾನವ, ಪ್ರಾಣಿ ಜೀವ ಹಾನಿಯಾಗಿದೆ. ಲಕ್ಷಾಂತರ ಮನೆಗಳು ಬಿದ್ದಿವೆ. ಲಕ್ಷಾಂತರ ಎಕರೆಯಲ್ಲಿ ಬೆಳೆದ ಬೆಳೆ ನಾಶವಾಗಿದೆ. ಸಂತ್ರಸ್ತರು ಮನೆಯಲ್ಲಿರುವ ಆಹಾರ ಧಾನ್ಯ, ಬಟ್ಟೆ, ಪಾತ್ರೆಗಳು, ಮಕ್ಕಳ ಶಾಲಾ ಪುಸ್ತಕ ಎಲ್ಲವನ್ನೂ ಕಳೆದು ಕೊಂಡಿದ್ದಾರೆ. ರಸ್ತೆ ಸೇರಿ ಸರ್ಕಾರದ ಆಸ್ತಿ ಹಾನಿಯಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪ್ರಕಾರವೇ ಸುಮಾರು 40 ಸಾವಿರ ಕೋಟಿ ರೂ. ಆಸ್ತಿ-ಪಾಸ್ತಿ ಹಾನಿಯಾಗಿದೆ. ರಾಜ್ಯ ಸರ್ಕಾರವೇ ಎಲ್ಲದಕ್ಕೂ ಪರಿಹಾರ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರದಿಂದ ಎನ್‌ಡಿಆರ್‌ಎಫ್ ಮೂಲಕ ಹೆಚ್ಚಿನ ಪರಿಹಾರ ಪಡೆಯಬೇಕು. ಕೇಂದ್ರ ಸರ್ಕಾರ ತಕ್ಷಣವೇ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಯಡಿಯೂರಪ್ಪನವರು ತಕ್ಷಣ ಸರ್ವ ಪಕ್ಷಗಳ ನಿಯೋಗವನ್ನು ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಬೇಕು. ಈ ವಿಷಯದಲ್ಲಿ ನಾವು ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ. ಸರ್ಕಾರದ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ ಎಂದರು. ರಾಜ್ಯ ಸರ್ಕಾರ ಸಂತ್ರಸ್ತರಿಗೆ ತಕ್ಷಣ ಸ್ಪಂದಿಸಬೇಕಾದ 10 ಬೇಡಿಕೆಗಳ ಪಟ್ಟಿಯನ್ನು ಇದೇ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಿದರು.

Advertisement

ಪ್ರಮುಖ 10 ಬೇಡಿಕೆಗಳು…
-ಸಂತ್ರಸ್ತರಿಗೆ ಹೊಸ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ.ಬದಲು 10 ಲಕ್ಷ ರೂ.ನೀಡಬೇಕು.

-ಸಂಪೂರ್ಣ ಅಥವಾ ಭಾಗಶಃ ಬಿದ್ದಿರುವ ಮನೆಗಳಲ್ಲದೇ ನೀರಿಗೆ ನೆನೆದು ಬೀಳುವ ಸ್ಥಿತಿಯಲ್ಲಿರುವ, ಶಿಥಿಲಗೊಂಡಿರುವ ವಾಸಯೋಗ್ಯವಲ್ಲದ ಮನೆಗಳಿಗೂ 10 ಲಕ್ಷ ರೂ.ಕೊಡಬೇಕು.

-ಮನೆಗಳು ಹಾಗೂ ನಿವೇಶನಗಳಿಲ್ಲದ ಸಂತ್ರಸ್ತರಿಗೆ 18ಗಿ16 ಅಡಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ, ಕುಡಿಯುವ ನೀರು, ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಸ್ನಾನಗೃಹ ಮತ್ತು ಶೌಚಾಲಯ ನಿರ್ಮಿಸಿಕೊಡಬೇಕು.

-ಸಂತ್ರಸ್ತರ ಬದುಕು ಬೀದಿ ಪಾಲಾಗಿದ್ದು, ಬಟ್ಟೆ, ದವಸಧಾನ್ಯ, ಪಾತ್ರೆಗಳು, ಹೊದಿಕೆ, ಪುಸ್ತಕಗಳು ಎಲ್ಲವೂ ನಾಶವಾಗಿವೆ. ಅವುಗಳನ್ನು ಕೊಳ್ಳಲು ಪ್ರತಿ ಕುಟುಂಬಕ್ಕೂ ಕನಿಷ್ಠ 1 ಲಕ್ಷ ಪರಿಹಾರ ಕೊಡಬೇಕು. ಎಮ್ಮೆ, ಎತ್ತು, ಆಕಳುಗಳಿಗೆ 50 ಸಾವಿರ, ಆಡು, ಮೇಕೆಗಳಿಗೆ 10 ಸಾವಿರ ಪರಿಹಾರ ಕೊಡಬೇಕು.

-ಸಂಪರ್ಕ ರಸ್ತೆಗಳು, ಸೇತುವೆಗಳು, ಚೆಕ್‌ ಡ್ಯಾಂ, ಬಾಂದಾರಗಳು, ಕೆರೆ, ಕಟ್ಟೆಗಳು, ಸಾರ್ವಜನಿಕ ಆಸ್ತಿಗಳು, ಕೃಷಿ, ವಿದ್ಯುತ್‌ ಟಾನ್ಸ್‌ಫಾರ್ಮರ್‌, ಪೈಪ್‌ಲೈನ್‌ ಕಿತ್ತು ಹೋಗಿವೆ. ನೂರು ದಿನಗಳ ಕಾಲ ಮಿತಿಯಲ್ಲಿ ಎಲ್ಲವನ್ನೂ ಸರ್ಕಾರದಿಂದ ಮರುಸ್ಥಾಪಿಸಬೇಕು.

-ಕಬ್ಬು, ತೊಗರಿ ಇತರ ವಾಣಿಜ್ಯ ಬೆಳೆಗಳು ಹಾಳಾಗಿವೆ. ಪ್ರತಿ ಎಕರೆಗೆ 40 ಟನ್‌ ಕಬ್ಬು ಬೆಳೆಯಲಾಗುತ್ತದೆ. ಪ್ರತಿ ಎಕರೆಗೆ 1 ಲಕ್ಷ ರೂ. ಪರಿಹಾರ ನೀಡಬೇಕು.

-ಹೊಲ, ಮನೆ ಹಾನಿಯಿಂದ ನಿರಾಶ್ರಿತರಾಗಿರುವ ಎಲ್ಲರಿಗೂ ನರೇಗಾ ಸೇರಿದಂತೆ ಇತರ ಉದ್ಯೋಗ ಸೃಷ್ಠಿ ಮಾಡಿ, ಮುಂದಿನ ಒಂದು ವರ್ಷ ಕನಿಷ್ಠ ಕೂಲಿ ನೀಡಬೇಕು.

-ಆಲಮಟ್ಟಿ ಅಣೆಕಟ್ಟಿಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ಆದರೆ, ಶೇ. 90ರಷ್ಟು ಜನರು ಹೋಗಿಲ್ಲ. ಅವರಿಗೆ ಹಿಂದೆ 22 ಸಾವಿರ ರೂ.ಪರಿಹಾರ ನೀಡಲಾಗಿದೆ. ಆದರೆ, ಅವರು ಅಲ್ಲಿ ಮನೆ ಕಟ್ಟಿಕೊಂಡಿಲ್ಲ. ಅವರು ಈಗ ಪರಿಹಾರ ನೀಡಿದರೆ ಅವರು ಅಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ. ಸರ್ಕಾರ ಈ ವಿಷಯದಲ್ಲಿ ತಾಂತ್ರಿಕ ಕಾರಣ ಹೇಳದೇ, ರಾಜಕೀಯ ನಿರ್ಣಯ ಕೈಗೊಳ್ಳಬೇಕು.

-22 ಸಾವಿರ ಪರಿಹಾರ ಕೊಟ್ಟಿರುವುದನ್ನು ಪರಿಗಣಿಸದೆ ಈಗ ಅವರಿಗೆ ಪರಿಹಾರ ನೀಡಿದರೆ ನಿಜವಾಗಿ ನ್ಯಾಯ ಒದಗಿಸಿದಂತಾಗುತ್ತದೆ. ಇಲ್ಲದಿದ್ದರೆ ಪರಿಹಾರ ಸಂಪೂರ್ಣ ವಿಫ‌ಲವಾಗುತ್ತದೆ.

-ಯುಕೆಪಿ ಎತ್ತರ 519.06 ಆರ್‌ಎಲ್‌ ವರೆಗೆ ಮುಳುಗಡೆಯಾಗಿರುವ ಪ್ರದೇಶಕ್ಕೆ ಮಾತ್ರ ಪರಿಹಾರ ನೀಡಲಾಗಿದೆ. ಆದರೆ, ಪ್ರವಾಹದಲ್ಲಿ ಅದರ ಮೇಲಿನ ಲಕ್ಷಾಂತರ ಎಕರೆ ಜಮೀನು, ಗ್ರಾಮಗಳು, ತೋಟ ಹಾಳಾಗಿದ್ದು ಈ ಭಾಗವನ್ನೂ ಮುಳುಗಡೆ ಪ್ರದೇಶ ಎಂದು ಪರಿಗಣಿಸಿ ಪರಿಹಾರ ಘೋಷಣೆ ಮಾಡಬೇಕು.

ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಪ್ರತಿಯೊಂದು ಪ್ರಕರಣವನ್ನು ಅಧ್ಯಯನ ಮಾಡಿ ಪರಿಹಾರ ನೀಡಬೇಕು.
-ಸತೀಶ್‌ ಜಾರಕಿಹೊಳಿ, ಮಾಜಿ ಸಚಿವ.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಕಬ್ಬು ಪ್ರಮುಖ ಬೆಳೆಯಾಗಿದೆ. ಕಬ್ಬಿಗೆ ಪ್ರಧಾನ ಮಂತ್ರಿ ಫ‌ಸಲ್‌ ಬಿಮಾ ಯೋಜನೆ ಅಡಿಯಲ್ಲಿ ಪರಿಹಾರ ಸಿಗುವುದಿಲ್ಲ. ಎನ್‌ಡಿಆರ್‌ಎಫ್ ಪ್ರಕಾರ 13 ಸಾವಿರ ರೂ.ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕಬ್ಬಿನ ಬೆಳೆ ನಷ್ಟಕ್ಕೆ ಎಕರೆಗೆ ಕನಿಷ್ಠ 1 ಲಕ್ಷ ರೂ.ನೀಡಬೇಕು.
-ಆನಂದ ನ್ಯಾಮಗೌಡ, ಜಮಖಂಡಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next