ಬೆಂಗಳೂರು: “ನನ್ನ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳು ಪ್ರಚಾರಪ್ರಿಯ ಹಾಗೂ ತಾತ್ಕಾಲಿಕ ಯೋಜನೆಗಳಲ್ಲ. ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಕ್ಷೀರಧಾರೆ, ಪಶುಭಾಗ್ಯ ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇರುವವರೆಗೂ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ..’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ಸವಾಲು ಹಾಕಿದ್ದಾರೆ.
ಮೈತ್ರಿ ಪಕ್ಷದಲ್ಲಿನ ಗೊಂದಲ ಹಾಗೂ ಕುಂದಗೋಳ ಉಪಚುನಾವಣೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಗೆಳೆಯ ಜಿ.ಟಿ. ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ, ಮೈಸೂರಿನಲ್ಲಿ ಜೆಡಿಎಸ್‌ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ, ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ ಕಾರ್ಯಕರ್ತರು. ಜೆಡಿಎಸ್ ವಿರುದ್ಧ ಮಾತನಾಡತೊಡಗಿದ್ದರು. ಮೈತ್ರಿಕೂಟದಲ್ಲಿ ಇಂತಹದನ್ನು ಮಾಡಬಾರದು’ ಎಂದು ವಿವರಣೆ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಬಗ್ಗೆ ವ್ಯಂಗ್ಯವಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನ ಬಂದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿ, ಆ ನಂತರ ಮೂರೇ ದಿನಕ್ಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಷ್ಟಾದರೂ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹಲವು ಬಾರಿ ಹೇಳಿದ್ದಾರೆ. ಈಗೀಗ ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತೇನೆ ಎಂದ ತಕ್ಷಣ ಜನ ನಗಲು ಆರಂಭಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಭೆ ಸಮಾರಂಭಗಳಲ್ಲಿ ಜನರು ನೀವೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಕೂಗುತ್ತಾರೆ. ಆಗ ತಾವೆಲ್ಲ ನಮ್ಮ ಪಕ್ಷಕ್ಕೆ ಬಹುಮತ ನೀಡಿದರೆ, ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದೇನೆ. ಅಭಿಮಾನದಿಂದ ನೀವು ಮುಖ್ಯಮಂತ್ರಿಯಾಗಿ ಎಂದು ಹೇಳುವವರ ಬಾಯಿ ಮುಚ್ಚಿಸಲಾಗುತ್ತದೆಯೇ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಇದ್ದಾರೆ. ಈಗ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಅಪ್ರಸ್ತುತ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕುಂದಗೋಳ ವಿಧಾನಸಭೆ ಉಪ ಚುನಾವಣೆ ಹಾಗೂ ದಿ.ಸಿ.ಎಸ್.ಶಿವಳ್ಳಿ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಶಿವಳ್ಳಿಯವರು ಹಲವು ಬಾರಿ ಶಾಸಕರಾದರೂ ಸ್ವಂತಕ್ಕಾಗಿ ಆಸ್ತಿ ಮಾಡಿಕೊಂಡಿಲ್ಲ. ಹಿಂದೊಮ್ಮೆ ಬೇರೆ ಪಕ್ಷದವರು ಶಿವಳ್ಳಿಯವರಿಗೆ ತಮ್ಮ ಪಕ್ಷಕ್ಕೆ ಸೇರುವಂತೆ 25 ಕೋಟಿ ರೂ. ಹಣ ನೀಡಲು ತಯಾರಾಗಿದ್ದಾಗಲೂ ಶಿವಳ್ಳಿಯವರು ಹಣದ ಆಮಿಷಕ್ಕೆ ಒಳಗಾಗಿ ಪಕ್ಷ ತೊರೆಯಲಿಲ್ಲ. ಇಂಥವರು ಇಂದು ನಮ್ಮೊಂದಿಗೆ ಇರಬೇಕಿತ್ತು.
ಅವರ ಅಗಲಿಕೆ ನಿಜಕ್ಕೂ ಬಹುದೊಡ್ಡ ನಷ್ಟ. ಜನ ಸೇವೆ ಮಾಡುತ್ತಲೇ ದೈವಾದೀನರಾದ ಶಿವಳ್ಳಿಯವರ ಅಗಲಿಕೆ ವ್ಯರ್ಥವಾಗಬಾರದು. ಶಿವಳ್ಳಿಯವರ ಕುಂದಗೋಳ ಕ್ಷೇತ್ರದ ಅಭಿವೃದ್ಧಿ ಕನಸು ಪರಿಪೂರ್ಣಗೊಳ್ಳಬೇಕಾದರೆ ಜನತೆ ಅವರ ಧರ್ಮಪತ್ನಿ ಕುಸುಮಾವತಿ ಅವರಿಗೆ ಮತ ನೀಡಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ.