ಬೆಂಗಳೂರು: ದೇಶ ವಿಶಾಲವಾಗಿದೆ. ಅಕ್ಕಿ ಬೆಳೆಯುವ ರಾಜ್ಯಗಳೂ ಸಾಕಷ್ಟಿವೆ. ಕೇಂದ್ರ ಸರಕಾರ ಏನು ಮಾಡುತ್ತದೋ ನೋಡೋಣ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ತಮ್ಮ ಕೊಠಡಿ ಪೂಜೆ ನಡೆಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಜನ ಆಶೀರ್ವಾದ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಣಾಳಿಕೆಯಲ್ಲಿ ನಾವು ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇವೆ. 5 ಗ್ಯಾರಂಟಿಗಳ ಜಾರಿಯಲ್ಲಿ ಎರಡು ಮಾತಿಲ್ಲ ಎಂದರು.
ಅನ್ನ ಭಾಗ್ಯ ಯೋಜನೆ ಅನ್ವಯ 10 ಕೆ.ಜಿ. ಅಕ್ಕಿ ಕೊಡುವ ಯೋಜನೆ ಬಗ್ಗೆ ಶುಕ್ರವಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸಭೆಯಲ್ಲಿ ಮುಖ್ಯಮಂತ್ರಿ ಈ ಬಗ್ಗೆ ಸಚಿವರ ಜತೆಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಆ ಬಳಿಕ ಪೂರ್ಣ ಮಾಹಿತಿ ಸಿಗಲಿದೆ ಎಂದರು.
ಹೆಚ್ಚುವರಿ ಅಕ್ಕಿ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗುವುದು. ಏನಿದ್ದರೂ ದೇಶ ವಿಶಾಲವಾಗಿದೆ. ಕಾದು ನೋಡೋಣ ಎಂದರು.