Advertisement

ಶಾಲಾ ಶಿಕ್ಷಣ ಹೊಸ ಹಾದಿ: ಶಾಲೆಯನ್ನು ಹೊಸತನಕ್ಕೆ ತೆರೆಯೋಣ

01:28 PM Oct 18, 2021 | Team Udayavani |

ಕೋವಿಡ್‌ ಹಿನ್ನೆಲೆಯಲ್ಲಿ ಸರಿಸುಮಾರು ಎರಡು ವರ್ಷಗಳ ಬಳಿಕ ಶಾಲೆಗಳಲ್ಲಿ (ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ) ಅ. 21ರಿಂದ ಪೂರ್ಣಪ್ರಮಾಣದಲ್ಲಿ ಭೌತಿಕ ತರಗತಿಗಳು ನಡೆಯಲಿವೆ. ಸುದೀರ್ಘ‌ ಬಿಡುವಿನ ಬಳಿಕ ಭೌತಿಕ ತರಗತಿಗಳು ಆರಂಭಗೊಳ್ಳುತ್ತಿರುವುದರಿಂದ ಶಿಕ್ಷಕರ ಮುಂದಿರುವ ಸವಾಲುಗಳು, ಇವುಗಳನ್ನು ಎದುರಿಸಲು ಶಿಕ್ಷಕರು ಮಾಡಿಕೊಂಡಿರುವ ಸಿದ್ಧತೆಗಳು, ಮಕ್ಕಳನ್ನು ಭೌತಿಕ ತರಗತಿಗೆ ಮತ್ತೆ ಒಗ್ಗಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಯೋಚನಾಕ್ರಮಗಳು, ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳನ್ನು ಮತ್ತೆ ಶಾಲೆಗಳತ್ತ ಸೆಳೆಯುವ ದಿಸೆಯಲ್ಲಿ ಅವರ ಚಿಂತನೆಗಳು… ಹೀಗೆ ಬದಲಾದ ಸನ್ನಿವೇಶದಲ್ಲಿ ಶಿಕ್ಷಕರು ವಹಿಸಲಿರುವ ಪಾತ್ರದ ಕುರಿತಂತೆ ಲೇಖನ ಸರಣಿ ಇಂದಿನಿಂದ.

Advertisement

ಕೋವಿಡ್‌ನ‌ ದೀರ್ಘ‌ ರಜೆಯ ಅನಂತರ ಮಕ್ಕಳು ಮತ್ತೊಮ್ಮೆ ತರಗತಿಗಳಿಗೆ ಬಂದಿದ್ದಾರೆ. ಹೊಸ ಅನುಭವಗಳು, ಹೊಸ ಸವಾಲುಗಳು ಕಲಿಸಿದ ಪಾಠಗಳನ್ನು ಕಲಿತು ಬಂದಿದ್ದಾರೆ. ಸೀಮೆಗಳಿಲ್ಲದ ಭೌತಿಕ ಮತ್ತು ಭಾವನಾತ್ಮಕ ವಿಶಾಲ ಜಗತ್ತಿನಿಂದ ಬಂದಿದ್ದಾರೆ. ಗೋಡೆಗಳ ನಡುವೆ ಅವರು ಮೊದಲಿನಂತೆ ಹೊಂದಿಕೊಳ್ಳಬಲ್ಲರು. ಆದರೆ ಹಾಗೆ ಹೊಂದಿಕೊಳ್ಳುವುದಷ್ಟೇ ಕಲಿಕೆಯೇ?

ಮನುಷ್ಯನ ಅಗತ್ಯಗಳನ್ನು ಯಂತ್ರಗಳು ಪೂರೈ ಸುವ ಹೊಸ ಬಗೆಯ ಕ್ರಮಗಳು ಹುಟ್ಟಿಕೊಂಡ ಬೆನ್ನಲ್ಲೇ ಕಾರ್ಖಾನೆ ಸಂಸ್ಕೃತಿಗೆ ಕೆಲಸಗಾರ ರನ್ನು ಸಜ್ಜುಗೊಳಿಸುವ ತುರ್ತು ಉಂಟಾಯಿತು. ಇದರಿಂದಾಗಿ ಕೋಣೆಯೊಂದರಲ್ಲಿ ಕೂಡಿ ಹಾಕಿ ಪಾಠ ಮಾಡುವ ಹೊಸ ತರಗತಿಗಳು ಹುಟ್ಟಿಕೊಂಡವು. ಹೀಗೆ ಇಂದಿನ ಫ್ಯಾಕ್ಟರಿ ಮಾದರಿಯ ತರಗತಿಗಳು ಆ ಕಾಲದ ಮಾರುಕಟ್ಟೆಯ ಆವಶ್ಯಕತೆಗಳನ್ನು ಪೂರೈಸುವ ಕಾರಣಕ್ಕಾಗಿ ಹುಟ್ಟಿಕೊಂಡವು. ಅಂಥದ್ದೇ ಚಾರಿತ್ರಿಕ ಅನಿವಾರ್ಯತೆ ಈಗ ಉಂಟಾಗಿದೆ. ಗೋಡೆಗಳನ್ನು ಕದಲಿಸಿ ಕ್ಲಾಸ್‌ ರೂಮನ್ನು ಜಗದಗಲ ವಿಸ್ತರಿಸಬೇಕಾದ ಸಮಯದಲ್ಲಿ ನಾವಿದ್ದೇವೆ.

ಕೋವಿಡ್‌ ಅನುಭವಗಳೂ ಮಕ್ಕಳಷ್ಟೇ ವಿಭಿನ್ನ. ಅನೇಕ ಮಕ್ಕಳು ಕೋವಿಡ್‌ನ‌ ಸಂದರ್ಭದಲ್ಲಿ ತರಗತಿ ಕಲಿಕೆಗೆ ಪರ್ಯಾಯವಾಗಿ ಆರಂಭಿಸಿದ ಆನ್‌ಲೈನ್‌ ತರಗತಿಗಳು, ವೀಡಿಯೋ ಪಾಠಗಳು ಉಂಟುಮಾಡಿದ ಮನೋದೈಹಿಕ ಶ್ರಮವನ್ನೂ ಅನುಭವಿಸಿ ತೆರೆದ ತರಗತಿಗಳಲ್ಲಿನ ಕಲಿಕೆಗಾಗಿ ಹಾತೊರೆದು ಬಂದಿದ್ದಾರೆ. ಆನ್‌ಲೈನ್‌ ತರಗತಿಗಳು ಹಳ್ಳಿಯ ಮಕ್ಕಳನ್ನು ತಲುಪಿರಲಿಲ್ಲ. ನೆಟ್‌ವರ್ಕ್‌, ಡೇಟಾ ಪ್ಯಾಕ್‌, ಸ್ಮಾರ್ಟ್‌ ಫೋನ್‌ ಇಲ್ಲದಿರುವುದು ಮಕ್ಕಳಲ್ಲೂ ಹೆತ್ತವರಲ್ಲೂ ತಾವು ಕಲಿಕೆಯ ಮಾರ್ಗಗಳಿಂದ ಹೊರತಾಗಿದ್ದೇವೆಂಬ ದುಃಖವನ್ನು ಉಂಟುಮಾಡಿದ್ದರೂ ಅದು ಅವರಿಗೆ ದೊರೆತ ಸೌಕರ್ಯವೇ ಆಗಿತ್ತು. ಏಕೆಂದರೆ ಕಲಿಕೆ ಯೆಂದರೆ ಮಾಹಿತಿ ವರ್ಗಾವಣೆಯಷ್ಟೇ ಅಲ್ಲ, ಕುತೂಹಲ, ಪ್ರಶ್ನೆಗಳು, ತಾರ್ಕಿಕ ಚಿಂತನೆಗಳಿಂದ ಯೋಚನೆಗಳಲ್ಲಾಗುವ ಕ್ವಾಂಟಮ್‌ ಜಿಗಿತಕ್ಕೆ ಬಹು ಆಯಾಮದ ಒಡನಾಟ ಆವಶ್ಯಕ.

ಇದನ್ನೂ ಓದಿ:ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

Advertisement

ಶಿಕ್ಷಕರೆಂದರೆ, ಗಣಿತ, ವಿಜ್ಞಾನ, ಭಾಷೆ ಮತ್ತಿತರ ವಿಷಯಗಳ ಪರಿಣತರಷ್ಟೇ ಅಲ್ಲ. ಮಕ್ಕಳ ಕಲಿಕೆಯ ದಾರಿಯಲ್ಲಿ ಸಹಪಯಣಿಗರೂ ಹೌದು. ದಾರಿಯ ಸುಖ ಮತ್ತು ಕಷ್ಟದ ಅರಿವು ಸಹಪಯಣಿಗರಿಗೆ ಇರುತ್ತದೆ. ಪ್ರತೀ ಮಗುವಿನ ಸಾಮರ್ಥ್ಯಗಳು-ಮಿತಿಗಳು, ಕಷ್ಟ- ಸುಖಗಳು ಅರ್ಥವಾದಾಗಲಷ್ಟೇ ಶಿಕ್ಷಕರು ಸಹಪಯಣಿಗಳಾಗ ಬಲ್ಲರು. ಬಾಯಿಪಾಠ ಮಾಡಿಸುವ, ಪರೀಕ್ಷೆಗೆ ತಯಾರು ಮಾಡುವ, ಶಿಸ್ತಿನ ಹೆಸರಲ್ಲಿ ಎಲ್ಲ ಮಕ್ಕಳನ್ನೂ ಒಂದೇ ರೀತಿ ಯೋಚಿಸುವಂತೆ ಒತ್ತಾಯಿಸುವ, ಇತರರೊಡನೆ ಹೋಲಿಸಿ ಮೂಲಕ ಮಕ್ಕಳನ್ನು ಒಂದೇ ಅಳತೆಗೆ ಸರಿಹೊಂದಿಸುವ ಪ್ರಯತ್ನದಲ್ಲಿ ಮತ್ತೆ ತೆರೆದುಕೊಂಡಿರುವ ಶಾಲೆಯ ಸಾವಯವ ಒಡನಾಟದ ಸಾಧ್ಯತೆ ಗಳನ್ನು ನಿರರ್ಥಕಗೊಳಿಸಬಾರದೆಂಬ ಎಚ್ಚರ ನಮ್ಮ
ಲ್ಲಿರಬೇಕು. ಸೋಲು-ಗೆಲುವುಗಳೆಂಬ ಎರಡೇ ಸಾಧ್ಯತೆಗಳನ್ನು ಎತ್ತಿಹಿಡಿಯುವ ಕೃತಕ ಯೋಚನಾ ಒತ್ತಡಕ್ಕೆಸಿಲುಕದೇ ಇರುವುದೂ ಸವಾಲೇ ಆಗಿದೆ. ಆಲಿಸುವಿಕೆ, ಮಾತನಾಡುವುದು, ಓದು-ಬರೆಹದಂತಹ ಮೂಲ ಭಾಷಾ ಕೌಶಲಗಳು, ಗಣಿತದ ಮೂಲಕ್ರಿಯೆಗಳು, ವೀಕ್ಷಣೆ, ವಿಶ್ಲೇಷಣೆಯಂತಹ ಯೋಚನಾ ಕೌಶಲಗಳ ಸಹಾಯದಿಂದ ಮಗು ಸ್ವತಃ ಜ್ಞಾನಸೃಷ್ಟಿಯಲ್ಲಿ ತೊಡಗಬಲ್ಲದು. ಹಾಗೆ, “ಕಲಿಯಲು’ ಕಲಿಯುವ ತರಗತಿಯನ್ನು ರೂಪಿಸಲು ಕೋವಿಡ್‌ ಕಾಲದ ಪ್ರೇರಣೆಗಳು ವರವಾಗಬಲ್ಲವು.

ಶಿಕ್ಷಕರೆಂದರೆ ಕಲಿಸುವ ಯಂತ್ರವಲ್ಲ ಕೂಡಾ| ಪುಸ್ತಕದ ಪದಗಳನ್ನು, ವ್ಯಾಖ್ಯೆ, ಸೂತ್ರ, ಸಮೀಕರಣ, ನಿಯಮ ಇತ್ಯಾದಿ ಮಾಹಿತಿಗಳನ್ನು ಮಕ್ಕಳ ಮಿದುಳಿಗೆ ತುಂಬಿಸುವುದು ಶಿಕ್ಷಕರ ಕೆಲಸವಲ್ಲ. ಮಗುವು ತನ್ನ ವೀಕ್ಷಣೆಗಳನ್ನು ಚುರುಕು ಗೊಳಿಸುವಲ್ಲಿ, ಯೋಚನೆಗಳನ್ನು ಹರಿತ ಮತ್ತು ಬಹಮುಖಗೊಳಿಸುವಲ್ಲಿ ಜಗತ್ತಿನ ಸೌಂದರ್ಯವನ್ನು ಆಸ್ವಾದಿಸುವ ಮತ್ತು ಮೆಚ್ಚುವಲ್ಲಿ ಶಿಕ್ಷಕರ ಸಹಾಯದ ಆವಶ್ಯಕತೆ ಇದೆ. ಪ್ರತಿಫಲನಾತ್ಮಕ ಚಿಂತನೆಗಳನ್ನು ಮತ್ತು ಸ್ವತಃ ಕಲಿಯುವ ಕೌಶಲಗಳನ್ನು ಮೈಗೂಡಿಸಿಕೊಳ್ಳುವಲ್ಲಿ ಶಿಕ್ಷಕರ ಬೆಂಬಲದ ಅಗತ್ಯವಿದೆ.

ಕಲಿಕೆಯ ಪರಿಸರವನ್ನು ವಿನ್ಯಾಸಗೊಳಿಸುವಲ್ಲಿ ಪರೀಕ್ಷೆಗಳು ಬೀರುವ ಪ್ರಭಾವ ದೊಡ್ಡದು. ನಮ್ಮದು ಪರೀಕ್ಷೆಗಳನ್ನು ತಲೆಯ ಮೇಲೆ ಹೊತ್ತುಕೊಂಡಿರುವ ಸಮಾಜ. ನಮಗೆ ಮೌಲ್ಯಮಾಪನ ಎಂದರೆ ಎಂದರೆ ಲಿಖೀತ ಪರೀಕ್ಷೆ ಮಾತ್ರ. ಅದರಲ್ಲೂ ಬೋರ್ಡ್‌ ಪರೀಕ್ಷೆಗಳು ಮಾತ್ರ ವಿಶ್ವಾಸಾರ್ಹ ಎಂಬುದು ಸಾಮಾನ್ಯ ಗ್ರಹಿಕೆ. ಇಂತಹ ಪರೀಕ್ಷೆಗಳನ್ನು ದಾಟುವ, ಪರೀಕ್ಷೆಗಳನ್ನು ಮಣಿಸುವ, ಪರೀಕ್ಷೆಗಳನ್ನು ಜಯಿಸಿ ವಿಜಯೋತ್ಸಾಹವನ್ನು ಸಂಭ್ರಮಿಸುವ ಪ್ರಯತ್ನದಲ್ಲಿ ಕಲಿಕೆಯು ಸತ್ವ ಕಳೆದುಕೊಳ್ಳುತ್ತಾ ಹೋಗಿ ಬಾಯಿಪಾಠವೇ ಸರ್ವಸ್ವವಾಗಿಬಿಟ್ಟಿದೆ. ನಗರದ ಅನೇಕ ಹೆತ್ತವರ ಮಿದುಳನ್ನು ಟ್ಯೂಷನ್‌ ಗುರುಗಳು, ಆನ್‌ಲೈನ್‌ ದಂಧೆಕೋರರು ಆವರಿಸಿಕೊಂಡಿದ್ದಾರೆ. ಸಮಾಜದ ನಿರೀಕ್ಷೆಗಳೂ ಶಿಕ್ಷಕ -ಶಿಕ್ಷಕಿ ಯರನ್ನೂ ಒತ್ತಡಕ್ಕೆ ಸಿಲುಕಿಸಬಹುದು. ಈ ಒತ್ತಡವನ್ನು ಮಕ್ಕಳಿಗೂ ವರ್ಗಾಯಿಸಿದರೆ ಶತಮಾನದ ಸವಾಲನ್ನು ಎದುರಿಸಿ ಈಗಷ್ಟೇ ಹೊರಬಂದಿರುವ ಮಕ್ಕಳು ಸಹಿಸಲಾರರು. ಈ ಪರಿಸ್ಥಿತಿಯನ್ನು ಬದಲಾಯಿಸಲು ಶಾಲೆಯೇ ವ್ಯವಸ್ಥೆಯನ್ನು ಒತ್ತಾಯಿಸಬೇಕಿದೆ.

ಕೋವಿಡೋತ್ತರ ಪರಿಸ್ಥಿತಿಗೆ ತಕ್ಕಂತೆ ಕಲಿಕೆಯ ಪರಿಸರವನ್ನು ಮರುರೂಪಿಸುವ ಕಾರ್ಯದಲ್ಲಿ ಅನೇಕ ಶಿಕ್ಷಕಿ-ಶಿಕ್ಷಕರು ತೊಡಗಿದ್ದಾರೆ. ನೂರಾರು, ಸಾವಿರಾರು ದಾರಿಗಳನ್ನು ಪರಿಶೋಧಿಸುತ್ತಾ ಉತ್ತಮವಾದುದನ್ನುಅಳವಡಿಸಿಕೊಳ್ಳುತ್ತಾ ಮತ್ತೆ ತಮ್ಮ ದಾರಿಯನ್ನು ಮೌಲ್ಯ ಮಾಪನಕ್ಕೊಳಪಡಿಸುತ್ತಾ ಹೊಸ ಮಾರ್ಗಗಳನ್ನು ಹುಡುಕಿ ಕೊಂಡಿದ್ದಾರೆ. ವಿಕಾಸವೆನ್ನುವುದು ನಿರಂತರ ಪ್ರಕ್ರಿಯೆ. ಸ್ವೀಕರಣೆ, ಅರ್ಥಮಾಡಿಕೊಳ್ಳುವಿಕೆ ಮತ್ತು ಪ್ರತಿಫಲನಗಳು ಇರುವ ಕಲಿಕೆಯ ಪರಿಸರದಲ್ಲಿ ಮಗು ಚೆನ್ನಾಗಿ ಕಲಿಯಬಲ್ಲದು. ಮಗು ಈಗಾಗಲೇ ಕಲಿತಿರುವ, ಅನುಭವಿಸಿರುವ, ಮೈಗೂಡಿಸಿಕೊಂಡಿರುವ ಸಂಗತಿಗಳನ್ನು ಸಂಬಂಧೀಕರಿಸಿಯೇ ಹೊಸ ಕಲಿಕೆಗೆ ಹೊರಳುವಂತೆ ಮಾಡೋಣ. ಈ ದಾರಿಗೆ ಇತಿಹಾಸ ಕಂಡ ಅತೀ ದೊಡ್ಡ ಸಂಕಷ್ಟವೇ ಆರಂಭ ಬಿಂದುವಾಗಲಿ. ಕೋವಿಡ್‌ ಮಾತ್ರವಲ್ಲ, ಯಾವ ಹಳೆಯ ಕಾಯಿಲೆಗಳೂ ಇನ್ನೂ ನಮ್ಮಿಂದ ದೂರ ಹೋಗಿಲ್ಲ ಎಂಬುದು ನೆನಪಲ್ಲಿರಲಿ. ಕೋಣೆಯೊಳಗೆ ಮಕ್ಕಳು ಚಿನ್ನದ ಪಂಜರದ ಪಕ್ಷಿಗಳಾಗದಿರಲಿ. ಹೊಸತನದ ತಾಜಾ ಅನುಭವಕ್ಕೆ, ಹೊಸ ಗಾಳಿ ತಂಪು ಸುಖಕ್ಕೆ ಶಾಲೆಯು ತೆರೆಯಲಿ!

ಕೋವಿಡ್‌ದಿಂದಾಗಿ ಸಂಪೂರ್ಣ ಗೋಜಲುಮಯವಾದ ಶಿಕ್ಷಣ ಕ್ಷೇತ್ರವೀಗ ಹಳಿಗೆ ಮರಳುವ ಹಂತದಲ್ಲಿದೆ. ಕೋವಿಡ್‌ ವಿರಾಮ ಹತ್ತು ಹಲವು ವಿನೂತನ ಪರ್ಯಾಯ ಕಲಿಕಾ ವಿಧಾನಗಳನ್ನು ಪರಿಚಯಿಸಿಕೊಟ್ಟಿದೆ. ಇದರ ನಡುವೆಯೇ ಇದೀಗ ಕೋವಿಡ್‌ ಬ್ರೇಕ್‌ ಕೊನೆಗೂ ಮುಕ್ತಾಯಗೊಂಡಿದ್ದು ಮಕ್ಕಳು ಬ್ಯಾಗ್‌ಗಳನ್ನು ಬೆನ್ನಿಗೇರಿಸಿಕೊಂಡು ಶಾಲೆಗಳತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ. ಆದರೆ ಈ ಬಾರಿಯ ಶಾಲಾರಂಭ ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಒಂದು ತೆರನಾದ ಹೊಸ ಅನುಭವ. ಪರಿಸ್ಥಿತಿಗೆ ತಕ್ಕಂತೆ ಕಲಿಕೆಯ ಪರಿಸರವನ್ನು ಮರುರೂಪಿಸುವ ಕಾರ್ಯದಲ್ಲಿ ಶಿಕ್ಷಕರು ನಿರತರಾಗಿದ್ದಾರೆ. ಆ ಮೂಲಕ ಹೊಸ ಕಲಿಕೆಗೆ ನಾಂದಿ ಹಾಡಿದ್ದಾರೆ.

– ಉದಯ ಗಾಂವಕಾರ ಶಿಕ್ಷಕರು, ಕುಂದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next